ಸಿಲಿಕಾನ್ ಸಿಟಿ ಬೆಂಗಳೂರು ಟ್ರಾಫಿಕ್ ಸಿಟಿಯಾಗಿ ಬದಲಾಗಿದೆ. ಎಲ್ಲಿ ನೋಡಿದ್ರೂ ಜನಸಂದಣಿ, ಟ್ರಾಫಿಕ್ ಕಿರಿ ಕಿರಿ, ವಾಹನಗಳ ಶಬ್ದ ಇದರಿಂದಲೇ ತುಂಬಿ ಹೋಗಿದೆ.. ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ರಸ್ತೆಗಳು ಒತ್ತಡಕ್ಕೆ ಒಳಗಾಗುತ್ತಿವೆ. ಇದೇ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತಿರುವ BMRCL ಇದೀಗ ಬೆಂಗಳೂರು ಮೆಟ್ರೋ ಹಂತ-3 ಯೋಜನೆಯನ್ನು ಮುಂದಕ್ಕೆ ತಂದಿದೆ. ಈ ಹಂತದ ಅಡಿಯಲ್ಲಿ ಮೂರು ದೊಡ್ಡ ನಾಗರಿಕ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಲಾಗಿದ್ದು, ಒಟ್ಟಾರೆ ವೆಚ್ಚ 4,000 ಕೋಟಿ ರೂಪಾಯಿಗಿಂತ ಹೆಚ್ಚು ಆಗಿದೆ.

ಈ ಹಂತದ ಮೆಟ್ರೋ ಯೋಜನೆಯ ವಿಶೇಷ ಆಕರ್ಷಣೆ ಎಂದರೆ ಡಬಲ್ ಡೆಕ್ಕರ್ ಕಾರಿಡಾರ್‌ಗಳು. ಒಂದೇ ಮಾರ್ಗದಲ್ಲಿ ಕೆಳಗೆ ರಸ್ತೆ ಸಂಚಾರ, ಮೇಲ್ಭಾಗದಲ್ಲಿ ಮೆಟ್ರೋ ರೈಲು ಸಂಚಾರ ನಡೆಯಲಿದೆ. ಇದರಿಂದ ಜಾಗ ಉಳಿಯುತ್ತದೆ, ಸಂಚಾರವೂ ಸರಾಗವಾಗುತ್ತದೆ. ಗಟ್ಟಿಯಾದ ನಗರ ಪ್ರದೇಶಗಳಲ್ಲಿ ಇದೇ ಅತ್ಯುತ್ತಮ ಪರಿಹಾರ ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿದೆ.
ಪ್ಯಾಕೇಜ್-1 ಅಡಿಯಲ್ಲಿ ಏನಿರುತ್ತೆ?
ಪ್ಯಾಕೇಜ್-1 ಅಡಿಯಲ್ಲಿ ಸುಮಾರು 6.5 ಕಿಲೋಮೀಟರ್ ಎತ್ತರದ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ. ಇದರೊಂದಿಗೆ ನಾಲ್ಕು ಡಬಲ್ ಡೆಕ್ಕರ್ ನಿಲ್ದಾಣಗಳು ಮತ್ತು ರೈಲು-ಕಮ್-ರಸ್ತೆ ಫ್ಲೈಓವರ್ ನಿರ್ಮಿಸಲಾಗುತ್ತದೆ. ಈ ಭಾಗದಲ್ಲಿ ರಸ್ತೆ ಅಗಲೀಕರಣ ಮತ್ತು ಯುಟಿಲಿಟಿ ಶಿಫ್ಟಿಂಗ್ ಕೆಲಸಗಳು ನಡೆಯುವುದರಿಂದ ಪ್ರಾರಂಭದಲ್ಲಿ ಸ್ವಲ್ಪ ಅಡಚಣೆ ಆಗಬಹುದು. ಆದರೆ ಕಾಮಗಾರಿ ಮುಗಿದ ಬಳಿಕ ಸಂಚಾರದ ಚಿತ್ರಣವೇ ಬದಲಾಗಲಿದೆ.
ಪ್ಯಾಕೇಜ್-2 ಅಡಿಯಲ್ಲಿ ಏನಿರುತ್ತೆ?
ಪ್ಯಾಕೇಜ್-2 ನಲ್ಲಿ ಹೊಸ್ಕೆರೆಹಳ್ಳಿ, ದ್ವಾರಕ ನಗರ, ಮೈಸೂರು ರಸ್ತೆ ಮತ್ತು ನಾಗರಭಾವಿ ವೃತ್ತದಂತಹ ಜನಸಂಚಾರ ಹೆಚ್ಚಿರುವ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಸಿಗಲಿದೆ. ಸುಮಾರು 5.4 ಕಿಲೋಮೀಟರ್ ಎತ್ತರದ ಮಾರ್ಗ ಮತ್ತು ನಾಲ್ಕು ಡಬಲ್ ಡೆಕ್ಕರ್ ನಿಲ್ದಾಣಗಳು ಇಲ್ಲಿ ನಿರ್ಮಾಣವಾಗಲಿವೆ. ಈ ಭಾಗದಲ್ಲಿ ಮೆಟ್ರೋ ಆರಂಭವಾದರೆ, ಬಸ್ ಮತ್ತು ಖಾಸಗಿ ವಾಹನಗಳ ಅವಲಂಬನೆ ಕಡಿಮೆಯಾಗುವ ಸಾಧ್ಯತೆ ಇದೆ.
ಪ್ಯಾಕೇಜ್-3 ಅಡಿಯಲ್ಲಿ ಏನಿರುತ್ತೆ?
ಪ್ಯಾಕೇಜ್-3 ಅಡಿಯಲ್ಲಿ ಸುಂಕದಕಟ್ಟೆ ಪ್ರದೇಶಕ್ಕೂ ಮೆಟ್ರೋ ತಲುಪಲಿದೆ. ಇಲ್ಲಿ ಒಂದು ಸಿಂಗಲ್ ಡೆಕ್ಕರ್ ನಿಲ್ದಾಣದ ಜೊತೆಗೆ ಮೂರು ಡಬಲ್ ಡೆಕ್ಕರ್ ನಿಲ್ದಾಣಗಳು ನಿರ್ಮಾಣವಾಗಲಿವೆ. ಮೆಟ್ರೋ ಡಿಪೋ ಪ್ರವೇಶ ಮಾರ್ಗಗಳ ನಿರ್ಮಾಣವೂ ಇದೇ ಪ್ಯಾಕೇಜ್‌ನಲ್ಲಿ ಸೇರಿದೆ. ಇದು ಭವಿಷ್ಯದ ಮೆಟ್ರೋ ವಿಸ್ತರಣೆಗೆ ಸಹಕಾರಿಯಾಗಲಿದೆ.
ಹಂತ-3 ರ ಟೆಂಡರ್ ದಾಖಲೆಗಳು ಫೆಬ್ರವರಿ 25ರವರೆಗೆ ಕೇಂದ್ರ ಸಾರ್ವಜನಿಕ ಸಂಗ್ರಹಣೆ ಪೋರ್ಟಲ್‌ನಲ್ಲಿ ಲಭ್ಯವಿರುತ್ತವೆ. ಫೆಬ್ರವರಿ 27ರಂದು ತಾಂತ್ರಿಕ ಬಿಡ್‌ಗಳು ತೆರೆಯಲ್ಪಡುವುದು, ನಂತರ ಕಾಮಗಾರಿಗಳಿಗೆ ಗ್ರೀನ್ ಸಿಗ್ನಲ್ ಸಿಗಲಿದೆ.
ಒಟ್ಟಿನಲ್ಲಿ, ಬೆಂಗಳೂರು ಮೆಟ್ರೋ ಹಂತ-3 ಯೋಜನೆ ಕೇವಲ ಇನ್ನೊಂದು ಮೆಟ್ರೋ ಲೈನ್ ಅಲ್ಲ. ಇದು ನಗರ ಸಂಚಾರದ ದಿಕ್ಕು ಬದಲಿಸುವ ಯೋಜನೆ. ಸಮಯ ಉಳಿತಾಯ, ಟ್ರಾಫಿಕ್ ಕಡಿತ, ಮಾಲಿನ್ಯ ನಿಯಂತ್ರಣ - ಈ ಎಲ್ಲದಕ್ಕೂ ಇದು ಪರಿಹಾರವಾಗಬಹುದು. ಭವಿಷ್ಯದ ಬೆಂಗಳೂರಿಗೆ ಈ ಮೆಟ್ರೋ ಹಂತ ಬಹಳ ಮುಖ್ಯವಾದ ಹೆಜ್ಜೆ ಎನ್ನಬಹುದು.


Click it and Unblock the Notifications