ಬೆಂಗಳೂರು ನಮ್ಮ ಮೆಟ್ರೋದ ಹಳದಿ ಮಾರ್ಗ ಶುರು ಆಯ್ತು. ಇನ್ನು ಪಿಂಕ್ ಲೈನ್ ಮೆಟ್ರೋ ಯಾವಾಗ ಎಂದು ಕಾಯುತ್ತಿದ್ದವರಿಗೆ, ಹೊಸ ನ್ಯೂಸ್ ಅದೇನೆಂದರೆ. ಅತಿಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ಗುಲಾಬಿ ಮಾರ್ಗದ ಮೆಟ್ರೋ ಸಂಬಂಧ, ಮಹತ್ವದ ಬೆಳವಣಿಗೆ ನಡೆದಿದೆ. ಈಗ ಈ ಮಾರ್ಗಕ್ಕೆ ಬಳಸಲಿರುವ ಪ್ರೊಟೋಟೈಪ್ ರೈಲು ಡಿಸೆಂಬರ್ 11 ರಂದು ಅನಾವರಣಗೊಳ್ಳುತ್ತಿದೆ. ಹಾಗಾದ್ರೆ ಸಂಚಾರ ಕಾರ್ಯ ಯಾವಾಗ ಶುರು ಅಂತೀರ? ಮುಂದೆ ಓದಿ ಗೊತ್ತಾಗುತ್ತೆ.

ಬೆಂಗಳೂರು ಟ್ರಾಫಿಕ್ ತಗ್ಗಿಸಲು ಸಾಕಷ್ಟು ಪ್ರಯತ್ನಗಳು ನಡೆದಿವೆ. ಅದರ ಭಾಗವಾಗಿ ನಗರದ ಮೆಟ್ರೋ ಸಂಚಾರ ಬಹಳ ಮುಖ್ಯವಾದ ಪಾತ್ರ ವಹಿಸಿದೆ ಅನ್ನಬಹುದು. ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈಗಾಗ್ಲೇ ಜನರಿಗೆ ಮೆಟ್ರೋ ರೈಲು ಮೇಲಿನ ಅವಲಂಬನೆ ಸಹ ತೀವ್ರವಾಗಿ ಏರಿಕೆಯಾಗಿದೆ. ಈ ಹಿನ್ನೆಲೆ ನಗರದಲ್ಲಿ ಹಲವು ಮೆಟ್ರೋ ಮಾರ್ಗಗಳ ವಿಸ್ತರಣೆ ಕೆಲಸ ನಡೆಯುತ್ತಿದೆ. ಇದರ ನಡುವೆಯೇ ಗುಲಾಬಿ ಮಾರ್ಗದ ಮೆಟ್ರೋ ಪ್ರೋಟೋಪೈಪ್ ರೈಲು ಅನಾವರಣಗೊಳ್ತಿರೋದು ನಿಜಕ್ಕೂ ಸಂತಸದ ಸುದ್ದಿ. ಟ್ರಾಫಿಕ್ ಸಮಸ್ಯೆ ಹಾಗೂ ಸಂಚಾರ ಸಮಸ್ಯೆಗೆ ಆದಷ್ಟು ಬೇಗ ತೆರೆ ಬೀಳಲಿದೆ ಅನ್ನೋದು ಈ ಮೂಲಕ ತಿಳಿಯಬಹುದು.
ಈ ಮೆಟ್ರೋ ಎಲ್ಲೆಲ್ಲಿಗೆ?
ಗುಲಾಬಿ ಮಾರ್ಗ ಕಾಳೇನ ಅಗ್ರಹಾರದಿಂದ ನಾಗಾವರದವರೆಗೆ ಸುಮಾರು 21.25 ಕಿಲೋಮೀಟರ್ ದೂರವನ್ನು ಸಂಪರ್ಕಿಸುತ್ತದೆ. ಈ ಯೋಜನೆ 2020ರಲ್ಲೇ ಮುಗಿದು ಸಂಚಾರ ಆರಂಭವಾಗಬೇಕಿತ್ತು. ಆದರೆ ಕಾಮಗಾರಿ ನಿರಂತರವಾಗಿ ತಡವಾಗುತ್ತಲೇ ಬಂದಿದೆ. 2025ರ ಮಾರ್ಚ್‌ನಲ್ಲಿ ರೈಲು ಸಂಚಾರ ಆರಂಭವಾಗಬಹುದು ಎಂದು ನಿರೀಕ್ಷಿಸಿದ್ದರೂ, ಅದೂ ಸಾಧ್ಯವಾಗಲಿಲ್ಲ. ಈಗಿನ ಮಾಹಿತಿ ಪ್ರಕಾರ, ಈ ಸಂಪೂರ್ಣ ಮಾರ್ಗದಲ್ಲಿ ರೈಲು ಸಂಚಾರ 2026ರ ಡಿಸೆಂಬರ್ ನಂತರವೇ ಪ್ರಾರಂಭವಾಗುವ ಸಾಧ್ಯತೆ ಇದೆ.
ಈ ಮಾರ್ಗದಲ್ಲಿ ಎಷ್ಟು ಸ್ಟೇಷನ್, ಅವು ಯಾವುವು?
ಈ ಮಾರ್ಗದಲ್ಲಿ 18 ಸ್ಟೇಷನ್‌ಗಳು ಇರಲಿದ್ದು, ಕೆಲಸ ಆರಂಭವಾಗಿ ಈಗ 8 ವರ್ಷಗಳು ಕಳೆದರೂ ಕಾಮಗಾರಿ ಬಹಳ ನಿಧಾನಗತಿಯಲ್ಲಿ ಸಾಗುತ್ತಿದೆ. ವರ್ಷಕ್ಕೆ ಸರಾಸರಿ 2.5 ಕಿಮೀಗಿಂತ ಹೆಚ್ಚು ನಿರ್ಮಾಣ ನಡೆದಿಲ್ಲ. ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗೆ 7.5 ಕಿಮೀ ಎತ್ತರಿಸಿದ ಮಾರ್ಗ ಇದ್ದು, ಇಲ್ಲಿ ಮೆಟ್ರೋ ಸಂಚಾರ 2026ರ ಮೇ ತಿಂಗಳು ಆರಂಭವಾಗಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಡೇರಿ ಸರ್ಕಲ್‌ನಿಂದ ನಾಗಾವರದವರೆಗೆ ಇರುವ 13 ಕಿಮೀ ಸುರಂಗ ಮಾರ್ಗದಲ್ಲಿ ಇನ್ನೂ ಸಾಕಷ್ಟು ಕೆಲಸ ಬಾಕಿಯಾಗಿದೆ.
ನೀಲಿ ಮಾರ್ಗದ ಮೆಟ್ರೋ ಯಾವಾಗ ಶುರು?
ಇನ್ನು ಬೆಂಗಳೂರಿನ ನೀಲಿ ಮಾರ್ಗದ ಮೇಲೂ ಸರ್ಕಾರ ಹೆಚ್ಚು ಒತ್ತಡ ಹಾಕಿದೆ. ಟ್ರಾಫಿಕ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗಗಳನ್ನು ಬೇಗನೆ ಪೂರ್ಣಗೊಳಿಸಲು ಗುರಿ ನಿಗದಿಪಡಿಸಲಾಗಿದೆ. ಕೆ.ಆರ್.ಪುರದಿಂದ ಸಿಲ್ಕ್ ಬೋರ್ಡ್‌ವರೆಗಿನ ಮಾರ್ಗವನ್ನು 2026ರ ಡಿಸೆಂಬರ್, ಕೆ.ಆರ್.ಪುರದಿಂದ ಹೆಬ್ಬಾಳದವರೆಗೆ 2027ರ ಡಿಸೆಂಬರ್, ಮತ್ತು ಹೆಬ್ಬಾಳದಿಂದ ಕ್ಯಾಂಪೆಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಇರುವ ಮಾರ್ಗವನ್ನು 2027ರ ಜೂನ್ ವೇಳೆಗೆ ಪೂರ್ಣಗೊಳಿಸುವಂತೆ ಗುತ್ತಿಗೆ ಕಂಪನಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.
ಒಟ್ಟಿನಲ್ಲಿ, ನಗರದ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ಮೆಟ್ರೋ ಮುಖ್ಯ ಪರಿಹಾರವಾಗಿದ್ದರೂ, ಕಾಮಗಾರಿಯ ನಿಧಾನಗತಿ ಜನರಿಗೆ ನಿರಾಶೆ ಉಂಟುಮಾಡಿದೆ. ಈಗ ಪ್ರೊಟೋಟೈಪ್ ರೈಲು ಅನಾವರಣದೊಂದಿಗೆ ಕೆಲಸಕ್ಕೆ ಹೊಸ ವೇಗ ಸಿಗಬೇಕು ಎಂಬುದು ಬೆಂಗಳೂರಿನ ಜನರ ನಿರೀಕ್ಷೆ.


Click it and Unblock the Notifications