ಬೆಂಗಳೂರು ನಗರದಲ್ಲಿ ದಿನೇದಿನೇ ಹೆಚ್ಚುತ್ತಿರುವ ವಾಹನ ಸಂಚಾರ ಜನರ ದೈನಂದಿನ ಬದುಕಿಗೆ ದೊಡ್ಡ ತೊಂದರೆಯಾಗುತ್ತಿದೆ. ಇದಕ್ಕೆ ಪರಿಣಾಮಕಾರಿ ಪರಿಹಾರವಾಗಿ ಮೆಟ್ರೋ ರೈಲು ಸೇವೆ ಪ್ರಮುಖ ಪಾತ್ರ ವಹಿಸುತ್ತಿದೆ. ಈಗಾಗಲೇ ಹಲವು ಮಾರ್ಗಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಮೆಟ್ರೋ, ನಗರ ಸಂಚಾರವನ್ನು ಸುಗಮಗೊಳಿಸಿದೆ. ಈ ನಡುವೆ ಬಹುಕಾಲದಿಂದ ನಿರೀಕ್ಷೆಯಲ್ಲಿದ್ದ ಪಿಂಕ್ ಲೈನ್ ಮೆಟ್ರೋ ಕುರಿತು ಸಂತಸದ ಸುದ್ದಿ ಲಭಿಸಿದ್ದು, ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಮಾರ್ಗದಲ್ಲಿ ಟ್ರಯಲ್ ರನ್ ಆರಂಭವಾಗಿದೆ. ಈ ಬೆಳವಣಿಗೆ ಈ ಭಾಗದ ಜನರಲ್ಲಿ ಹೊಸ ನಿರೀಕ್ಷೆಯನ್ನು ಮೂಡಿಸಿದೆ.

21.26 ಕಿಲೋಮೀಟರ್ ಉದ್ದದ ಪಿಂಕ್ ಲೈನ್:
ಪಿಂಕ್ ಲೈನ್ ಮೆಟ್ರೋ ಮಾರ್ಗದ ಒಟ್ಟು ಉದ್ದ 21.26 ಕಿಲೋಮೀಟರ್ ಆಗಿದೆ. ಈ ಮಾರ್ಗವನ್ನು ಹಂತ ಹಂತವಾಗಿ ಸಾರ್ವಜನಿಕ ಸೇವೆಗೆ ತೆರೆಯಲು ಯೋಜಿಸಲಾಗಿದೆ. ಮೊದಲ ಹಂತದಲ್ಲಿ 7.5 ಕಿಲೋಮೀಟರ್ ಎಲಿವೇಟೆಡ್ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದೆ. ಈ ಮಾರ್ಗದಲ್ಲಿ ಒಟ್ಟು 9 ಮೆಟ್ರೋ ನಿಲ್ದಾಣಗಳಿದ್ದು, ಈಗಾಗಲೇ ಇಲ್ಲಿ ಪ್ರಯೋಗಾತ್ಮಕ ಸಂಚಾರ ಯಶಸ್ವಿಯಾಗಿ ನಡೆಯುತ್ತಿದೆ. ಇದರಿಂದ ಶೀಘ್ರದಲ್ಲೇ ಸಾರ್ವಜನಿಕ ಸೇವೆ ಆರಂಭವಾಗುವ ನಿರೀಕ್ಷೆ ಬಲವಾಗಿದೆ.
ಮೊದಲ ಹಂತ ಶೀಘ್ರ ಉದ್ಘಾಟನೆ:
ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಮೊದಲ ಹಂತದ ಪಿಂಕ್ ಲೈನ್ ಮೆಟ್ರೋ ಸೇವೆಯನ್ನು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಉದ್ಘಾಟಿಸುವ ನಿರೀಕ್ಷೆ ಇದೆ. ಉಳಿದ 13.76 ಕಿಲೋಮೀಟರ್ ಮಾರ್ಗ ಸಂಪೂರ್ಣ ಅಂಡರ್‌ಗ್ರೌಂಡ್ ಆಗಿದ್ದು, ಸುರಂಗದ ಮೂಲಕ ಮೆಟ್ರೋ ಸಂಚಾರ ನಡೆಸಲಾಗುತ್ತದೆ. ಈ ಭಾಗದ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಈ ವರ್ಷದೊಳಗೆ ಸಂಪೂರ್ಣ ಪಿಂಕ್ ಲೈನ್ ಉದ್ಘಾಟನೆ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.
ಪಿಂಕ್ ಲೈನ್ ಮೂಲಕ ಹೆಚ್ಚುವರಿ ರೈಲು ಸೇವೆ:
ಪಿಂಕ್ ಲೈನ್ ಕಾಳೇನ ಅಗ್ರಹಾರದಿಂದ ನಾಗವಾರವರೆಗೆ ಸಂಪರ್ಕ ಕಲ್ಪಿಸಲಿದೆ. ಮೊದಲ ಹಂತದಲ್ಲಿ ತಾವರೆಕೆರೆವರೆಗೆ ಮೆಟ್ರೋ ಸೇವೆ ಲಭ್ಯವಾಗಲಿದೆ. ಆರಂಭದಲ್ಲಿ ಈ ಮಾರ್ಗದಲ್ಲಿ 16 ಮೆಟ್ರೋ ರೈಲುಗಳು ಸಂಚರಿಸಲಿದ್ದು, ಮುಂದಿನ ದಿನಗಳಲ್ಲಿ ಇನ್ನೂ 7 ರೈಲುಗಳನ್ನು ಸೇರಿಸಲು ಯೋಜಿಸಲಾಗಿದೆ. ಹೀಗಾಗಿ ಒಟ್ಟು 23 ರೈಲುಗಳು ಪಿಂಕ್ ಲೈನ್‌ನಲ್ಲಿ ಸೇವೆ ನೀಡಲಿವೆ. ಇತ್ತೀಚೆಗೆ ಪಿಂಕ್ ಲೈನ್ ಮೆಟ್ರೋ ರೈಲನ್ನು ಕೊತನೂರು ಮೆಟ್ರೋ ಡಿಪೋಗೆ ಹಸ್ತಾಂತರಿಸಲಾಗಿದೆ.
ಪ್ರಮುಖ ಪ್ರದೇಶಗಳಿಗೆ ನೇರ ಸಂಪರ್ಕ:
ಪಿಂಕ್ ಲೈನ್ ಮೆಟ್ರೋ ಮಾರ್ಗವು ಎಂ.ಜಿ. ರೋಡ್, ಶಿವಾಜಿನಗರ, ಟ್ಯಾನರಿ ರಸ್ತೆ ಮತ್ತು ವೆಂಕಟೇಶಪುರದಂತಹ ಪ್ರಮುಖ ಪ್ರದೇಶಗಳ ಮೂಲಕ ಹಾದು ಹೋಗಲಿದೆ. ಇದರಿಂದ ನಗರದ ಕೇಂದ್ರ ಭಾಗದಲ್ಲಿ ಟ್ರಾಫಿಕ್ ಒತ್ತಡ ಕಡಿಮೆಯಾಗುವ ನಿರೀಕ್ಷೆ ಇದೆ. ಪ್ರಮುಖ ಉದ್ಯೋಗ ಮತ್ತು ವ್ಯಾಪಾರ ಪ್ರದೇಶಗಳಿಗೆ ಸುಲಭ ಸಂಪರ್ಕ ಸಿಗುವುದರಿಂದ ಹೆಚ್ಚಿನ ಜನರು ಖಾಸಗಿ ವಾಹನ ಬಿಟ್ಟು ಮೆಟ್ರೋ ಪ್ರಯಾಣವನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.


Click it and Unblock the Notifications