Bengaluru Metro: ಬೆಂಗಳೂರಿನ ನಮ್ಮ ಮೆಟ್ರೋ ವ್ಯಾಪ್ತಿ ವಿಸ್ತರಣೆ ಕಾರ್ಯ ಜೋರಾಗ್ತಿದೆ. ಹಳದಿ ಮೆಟ್ರೋ ಲೈನ್ ಇನ್ನೇನು ಕಾರ್ಯಾರಂಭದ ಹೊಸ್ತಿಲಲ್ಲಿದೆ. ಇದರ ಬೆನ್ನಲ್ಲೇ ಪಿಂಕ್ ಲೈನ್ ಮೆಟ್ರೋ ಕೂಡ ಬೆಂಗಳೂರಿಗರಿಗೆ ಸಿಹಿಸುದ್ದಿ ನೀಡೋಕೆ ಬರ್ತಿದೆ. ಅರೆ..ಪಿಂಕ್ ಲೈನ್ ಮೆಟ್ರೋ ಕೂಡ ಇನ್ನೇನು ಸ್ವಲ್ಪ ದಿನದಲ್ಲೇ ಕಾರ್ಯಾರಂಭ ಮಾಡುತ್ತದೆ ಎನ್ನಬಹುದು. ಈ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.

ಹೌದು, ಬೆಂಗಳೂರಿಗರಿಗೆ ಒಂದಾದ ಮೇಲೊಂದು ಖುಷಿಸುದ್ದಿ ಸಿಗುತ್ತಿದೆ. ಯಮ ಟ್ರಾಫಿಕ್‌ಗೆ ಬೈ ಬೈ ಹೇಳೋ ಸಮಯ ಸಮೀಪದಲ್ಲೇ ಇದೆ. ಏಕೆಂದರೆ ಬೆಂಗಳೂರಿನ ಪಿಂಕ್ ಲೈನ್ ಮೆಟ್ರೋ ಮಹತ್ವದ ಹಂತ ತಲುಪಿದೆ. BMRCL ಗುರಿಯಾಗಿ ಇರಿಸಿಕೊಂಡಿರುವ ನಮ್ಮ ಮೆಟ್ರೋ ಮಾರ್ಗದ, ಪ್ರಾರಂಭಿಕ ಪರೀಕ್ಷೆಗಳು ಈಗ ಆರಂಭಗೊಂಡಿವೆ. ಇನ್ನು ಕೆಲವೇ ದಿನಗಳಲ್ಲಿ ಪ್ರಯಾಣಿಕರಿಗೆ ಈ ಹೊಸ ಮೆಟ್ರೋ ಅನುಭವ ಸಿಗಲಿದೆ ಎನ್ನಬಹುದು.
ಜಯದೇವ ನಿಲ್ದಾಣದಲ್ಲಿ 'ಥರ್ಡ್ ರೈಲ್' ಪರೀಕ್ಷೆ:
ಪಿಂಕ್ ಮಾರ್ಗದ ಪ್ರಾರಂಭಿಕ ಹಂತದಲ್ಲಿ ಜಯದೇವ ಮೆಟ್ರೋ ನಿಲ್ದಾಣದಲ್ಲಿ 'ಥರ್ಡ್ ರೈಲ್' ಶಕ್ತಿಯ ಪರೀಕ್ಷೆ ಯಶಸ್ವಿಯಾಗಿ ನಡೆಯುತ್ತಿದೆ. ನಿಲ್ದಾಣದಲ್ಲಿಇದು ರೈಲು ಸಂಚಾರಕ್ಕೆ ವಿದ್ಯುತ್ ಸರಬರಾಜು ಮಾಡುವ ಪ್ರಮುಖ ತಂತ್ರಜ್ಞಾನವಾಗಿದ್ದು, ಬಿಎಂಆರ್‌ಸಿಎಲ್ ಈ ಮಾರ್ಗದಲ್ಲಿ ಎತ್ತರಿಸಿದ ಹಂತದ ಪ್ರಯೋಗಗಳನ್ನು ಆರಂಭಿಸಿದೆ. ತಾವರೆಕೆರೆ ಹಾಗೂ ಜಯದೇವ ನಿಲ್ದಾಣಗಳ ನಡುವೆ ಈ ಟೆಸ್ಟ್ ನಡೆಯುತ್ತಿದ್ದು, ಮುಂದಿನ ಹಂತಗಳಲ್ಲಿ ಸಿಗ್ನಲಿಂಗ್, ಕಮ್ಯುನಿಕೇಶನ್, ಲೋಡ್ ಮತ್ತು ಸುರಕ್ಷತಾ ಪರೀಕ್ಷೆಗಳು ನಡೆಯಲಿವೆ.
ರೈಲು ಸಂಚಾರ ಯಾವಾಗ?
ಪ್ರತೀ ಹಂತದಲ್ಲಿ ಸಂಪೂರ್ಣ ಪರೀಕ್ಷೆಗಳನ್ನು ಮುಗಿಸಿದ ನಂತರ ಕೇಂದ್ರ ರೈಲ್ವೆ ಸುರಕ್ಷತಾ ಆಯೋಗದಿಂದ (CMRS) ದೃಢೀಕರಣ ಲಭಿಸಿದಾಗ ಮಾತ್ರ ರೈಲು ಸಂಚಾರಕ್ಕೆ ಚಾಲನೆ ನೀಡಲಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ 3-4 ತಿಂಗಳು ಬೇಕಾಗಬಹುದು.
ಮಾರ್ಗದ ಉದ್ದ ಹಾಗೂ ನಿಲ್ದಾಣಗಳ ವಿವರ:
ಗುಲಾಬಿ ಮಾರ್ಗದ ಒಟ್ಟು ಉದ್ದ ಸುಮಾರು 21.26 ಕಿಲೋಮೀಟರ್ ಆಗಿದ್ದು, ಇದನ್ನು ಎರಡು ಹಂತಗಳಲ್ಲಿ ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ
ಪಿಂಕ್ ಲೈನ್..ಮೊದಲ ಹಂತ:
ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ 7.5 ಕಿಮೀ ಉದ್ದ
ಒಟ್ಟು 6 ನಿಲ್ದಾಣಗಳು: ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ, ತಾವರೆಕೆರೆ
ಪಿಂಕ್ ಲೈನ್..ಎರಡನೇ ಹಂತ:
ಡೈರಿ ಸರ್ಕಲ್‌ನಿಂದ ನಾಗವಾರವರೆಗೆ 13.76 ಕಿಮೀ ಉದ್ದ
12 ನಿಲ್ದಾಣಗಳು, ಬಹುತೇಕ ಭೂಗತವಾಗಿವೆ
ಈ ಮಾರ್ಗದ ಸಿವಿಲ್ ಕಾಮಗಾರಿ ಮೊದಲ ಹಂತದಲ್ಲಿ ಸಂಪೂರ್ಣ ಮುಕ್ತಾಯವಾಗಿದ್ದು, ಭೂಗತ ಮಾರ್ಗದಲ್ಲಿ ಶೇಕಡಾ 90% ಕಾಮಗಾರಿ ಪೂರ್ಣವಾಗಿದೆ.
ಇಂಟರ್‌ಚೇಂಜ್ ನಿಲ್ದಾಣಗಳ ಮೂಲಕ ಸಂಚಾರ:
ಈ ಮಾರ್ಗದಲ್ಲಿ 6 ಪ್ರಮುಖ ಇಂಟರ್‌ಚೇಂಜ್ ನಿಲ್ದಾಣಗಳು ಇದ್ದು, ಇವು ನಗರದ ಇತರ ಮೆಟ್ರೋ ಮಾರ್ಗಗಳನ್ನು ಸಂಪರ್ಕಿಸುತ್ತವೆ:
- ನಾಗವಾರ - ನೀಲಿ ಮಾರ್ಗ: ವಿಮಾನ ನಿಲ್ದಾಣದ ಸಂಪರ್ಕ
- ಮಹಾತ್ಮಾ ಗಾಂಧಿ ರಸ್ತೆ - ನೇರಳೆ ಮಾರ್ಗ: ವೈಟ್‌ಫೀಲ್ಡ್ ಸಂಪರ್ಕ
- ಡೈರಿ ಸರ್ಕಲ್ - ಕೆಂಪು ಮಾರ್ಗ: ಹೆಬ್ಬಾಳ-ಸರ್ಜಾಪುರ (ಪ್ರಸ್ತಾವಿತ)
- ಜಯದೇವ ನಿಲ್ದಾಣ - ಹಳದಿ ಮಾರ್ಗ: ಬೊಮ್ಮಸಂದ್ರ ಸಂಪರ್ಕ
- ಜೆ.ಪಿ. ನಗರ 4ನೇ ಹಂತ - ಕಿತ್ತಳೆ ಮಾರ್ಗ: ಕೆಂಪಾಪುರ ಸಂಪರ್ಕ
- ಕಾಳೇನ ಅಗ್ರಹಾರ - ತಾತ್ಕಾಲಿಕ ಅಂತಿಮ ನಿಲ್ದಾಣ
ಇವುಗಳ ಮೂಲಕ ನಗರದೆಲ್ಲೆಡೆ ಸಂಪರ್ಕ ಸುಗಮವಾಗಲಿದೆ.
ರೈಲು ಬೋಗಿಗಳ ಕೊರತೆ:
ಬಿಎಂಆರ್‌ಸಿಎಲ್ ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಹಳದಿ ಹಾಗೂ ನೇರಳೆ ಮಾರ್ಗಗಳಿಗೆ ಸಹ ಪೂರಕ ಬೋಗಿಗಳ ಕೊರತೆಯನ್ನು ಅನುಭವಿಸುತ್ತಿದ್ದು, ಗುಲಾಬಿ ಮಾರ್ಗಕ್ಕೂ ಇದೇ ಸಮಸ್ಯೆ ಎದುರಾಗುತ್ತಿದೆ. ಬಿಇಎಂಎಲ್ (BEML) ಜೊತೆ 138 ಬೋಗಿಗಳ (23 ರೈಲುಗಳು) ನಿರ್ಮಾಣ ಮತ್ತು 15 ವರ್ಷದ ನಿರ್ವಹಣೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಒಂದು ಬೋಗಿಗೆ ಸರಾಸರಿ ₹9.99 ಕೋಟಿ ವೆಚ್ಚ ನಿರ್ಧರಿಸಲಾಗಿದೆ.
ಸೇವೆಯ ಆರಂಭ ಯಾವಾಗ?
ಬಿಎಂಆರ್‌ಸಿಎಲ್ ಪ್ರಕಾರ, 2026ರ ಮಧ್ಯದಲ್ಲಿ ಮೊದಲ ಹಂತದ ಎತ್ತರಿಸಿದ ಮಾರ್ಗದಲ್ಲಿ ರೈಲು ಸಂಚಾರ ಪ್ರಾರಂಭಿಸುವ ಗುರಿಯಿದೆ. ಆದರೆ ರೈಲು ಬೋಗಿಗಳ ಪೂರ್ಣ ಪೂರೈಕೆ ಹಾಗೂ ಪರೀಕ್ಷಾ ಹಂತಗಳ ಯಶಸ್ಸು ಈ ಗುರಿಯನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಿವೆ.
ಗುಲಾಬಿ ಮಾರ್ಗದ ಪೂರ್ಣಾಂಗ ಕಾರ್ಯಾಚರಣೆ ಬೆಂಗಳೂರಿನ ಮೆಟ್ರೋ ಜಾಲಕ್ಕೆ ಹೊಸ ಉಸಿರಾಡಿಸುವ ಶಕ್ತಿ ನೀಡಲಿದೆ. ಹೆಚ್ಚುವರಿ ನಿಲ್ದಾಣಗಳು, ಜಾಲವಂತ ಸಂಪರ್ಕ ವ್ಯವಸ್ಥೆ, ಮತ್ತು ತಾಂತ್ರಿಕ ಸುಧಾರಣೆಯೊಂದಿಗೆ ಈ ಮಾರ್ಗವು ನಗರ ಸಾರಿಗೆ ಸಮಸ್ಯೆಗಳಿಗೆ ಬಹುಮಾನ್ಯ ಪರಿಹಾರವಾಗಿ ಮಾರ್ಪಡಲಿದೆ. ಬೋಗಿಗಳ ಪೂರೈಕೆ ಸಮಯಕ್ಕೆ ನಡೆಯುವುದಾದರೆ, ಈ ಮಾರ್ಗವನ್ನು ಜನಪ್ರಿಯ ಸಾರಿಗೆ ಆಯ್ಕೆಯಾಗಿ ರೂಪಿಸಬಹುದಾಗಿದೆ.


Click it and Unblock the Notifications