ಬೆಂಗಳೂರು: ಬೆಂಗಳೂರು ಮೆಟ್ರೋ (Bengaluru Metro), ಜನರ ಅಗತ್ಯ ಸೇವೆಗಳನ್ನು ಪೂರೈಸುವ ಸಾರಿಗೆ ವ್ಯವಸ್ಥೆಯಾಗಿ ಉತ್ತಮ ಸ್ಥಾನ ಪಡೆದುಕೊಂಡಿದೆ. ಈ ಹಿಂದೆ ಗ್ರೀನ್ ಲೈನ್, ಪರ್ಪಲ್ ಲೈನ್ ಮಾತ್ರ ಇದ್ದ ನಮ್ಮ ಮೆಟ್ರೋ, ಈ ವರ್ಷದಲ್ಲಿ ಯೆಲ್ಲೋ ಲೈನ್ ಮೆಟ್ರೋಗೆ ಚಾಲನೆ ನೀಡಿತ್ತು. ಆದರೆ, ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ (Yellow Line Metro) ರೈಲಿನ ಸಂಖ್ಯೆ ಕಡಿಮೆ ಇರುವುದರಿಂದ ಪ್ರತೀ 19 ನಿಮಿಷಗಳಿಗೊಮ್ಮೆ ಸೇವೆ ನೀಡುತ್ತದೆ. ಆದ್ರೆ ಪ್ರಯಾಣಿಕರು ಪೀಕ್ ಅವರ್‌ನಲ್ಲಿ 12 ನಿಮಿಷಗಳವರೆಗೆ ಮೆಟ್ರೋಗಾಗಿ ವರ್ಷಾಂತ್ಯದವರೆಗೂ ಕಾಯಬೇಕಿದೆ. ಪ್ರಸ್ತುತ, ಕೇವಲ ನಾಲ್ಕು ರೈಲುಗಳ ಕಾರ್ಯಾಚರಣೆಯಿಂದಾಗಿ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL), ಯೆಲ್ಲೋ ಲೈನ್‌ನಲ್ಲಿ ಪ್ರತಿ 19 ನಿಮಿಷಗಳಿಗೊಮ್ಮೆ ರೈಲು ಸೇವೆ ನೀಡುತ್ತಿದೆ. ತಾಂತ್ರಿಕ ಸಮಸ್ಯೆಗಳಿಂದಾಗಿ ಕೆಲವೊಮ್ಮೆ ಇದೂ ಕೂಡ ವಿಳಂಬವಾಗುತ್ತದೆ.

ಆಗಸ್ಟ್‌ನಲ್ಲಿ ಆರಂಭ:
ಮೂರು ರೈಲುಗಳೊಂದಿಗೆ ಯೆಲ್ಲೋ ಲೈನ್ ಆಗಸ್ಟ್‌ನಲ್ಲಿ ಕಾರ್ಯಾರಂಭ ಶುರುಮಾಡಿತ್ತು, ಆ ಸಂದರ್ಭದಲ್ಲಿ 19 ಕಿ.ಮೀ. ಮಾರ್ಗದಲ್ಲಿ ಪ್ರತಿ 25 ನಿಮಿಷಗಳಿಗೊಮ್ಮೆ ಸೇವೆ ಒದಗಿಸಲಾಗುತ್ತಿತ್ತು. ಇದೀಗ ಯೆಲ್ಲೋ ಲೈನ್‌ಗೆ ಐದನೇ ಹೊಸ ರೈಲು ತರಲಾಗಿದ್ದು, ಈಗಾಗಲೇ ಪರೀಕ್ಷೆಯ ಹಂತದಲ್ಲಿದ್ದು, ನವೆಂಬರ್ ವೇಳೆಗೆ ಇದು ಕಾರ್ಯಾರಂಭಕ್ಕೆ ಬರಲಿದೆ ಎಂದು ಹೇಳಲಾಗಿದೆ.
"ಯೆಲ್ಲೋ ಲೈನ್‌ನಲ್ಲಿ, ಐದನೇ ರೈಲಿಗೆ ಅಕ್ಟೋಬರ್ 17 ರಂದು ಈ ಲೈನ್‌ನಲ್ಲಿ ಪರೀಕ್ಷಾರ್ಥ ಸಂಚಾರ ಪ್ರಾರಂಭವಾಗಲಿದೆ. ಇನ್ನು ಪರೀಕ್ಷಾರ್ಥ ವೇಳೆ ಹೊಸ ರೈಲು ಟ್ರಾಕ್ಷನ್ ಮತ್ತು ಬ್ರೇಕಿಂಗ್ ಚೆಕಪ್‌ಗಳು, ಸಿಗ್ನಲಿಂಗ್ ಮತ್ತು ಇತರ ಪರೀಕ್ಷೆಗಳನ್ನು ನಡೆಸಲಿದೆ. ನಿಯಮಗಳ ಪ್ರಕಾರ, ರೈಲು ಪ್ರಯಾಣಿಕರ ಸೇವೆಗೆ ಕಾರ್ಯಾರಂಭ ಶುರುವಾಗುವ ಮೊದಲು ಮುಖ್ಯ ಮಾರ್ಗದಲ್ಲಿ 750 ಕಿ.ಮೀ. ಸಂಚಾರ ಪೂರ್ಣಗೊಳಿಸಬೇಕು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವೆಂಬರ್ ಆರಂಭದಲ್ಲಿ ಒಂದು ವೇಳೆ ಐದನೇ ರೈಲು ಕಾರ್ಯಾರಂಭಕ್ಕೆ ಬಂದರೆ, BMRCL ಗೆ ರೈಲುಗಳ ಸಮಯದಲ್ಲಿ ಸುಮಾರು 15 ನಿಮಿಷಗಳಿಗೆ ಇಳಿಸಲು ಸಹಾಯವಾಗಲಿದೆ. ಇನ್ನು ಹೆಚ್ಚಿನ ರೈಲಿನ ಸೇವೆ ಒದಗಿಸುವುದರ ಬಗ್ಗೆ ಮಾತನಾಡಿದ ಅಧಿಕಾರಿಯೊಬ್ಬರು, "ಆರನೇ ರೈಲಿನ ಉತ್ಪಾದನೆ ಕೂಡಾ ಈಗಾಗಲೇ ನಡೆಯುತ್ತಿದೆ. ಚೀನಾದಿಂದ ಬೋಗಿಗಳನ್ನು ರಫ್ತು ಮಾಡಿಕೊಂಡಿದ್ದು, ಆರನೇ ರೈಲು ನವೆಂಬರ್ ಮೊದಲ ವಾರದಲ್ಲಿ ರವಾನೆಯಾಗುವ ನಿರೀಕ್ಷೆಯಿದೆ ಮತ್ತು ಅದನ್ನು ಡಿಸೆಂಬರ್ ವೇಳೆಗೆ ಸೇವೆಗೆ ಸೇರಿಸುವ ಗುರಿ ನಾವು ಹೊಂದಿದ್ದೇವೆ" ಎಂದು ಹೇಳಿದರು.
ಪ್ರಸ್ತುತ, ವಾರಾಂತ್ಯಗಳಲ್ಲಿ 80,000 ಕ್ಕೂ ಹೆಚ್ಚು ಪ್ರಯಾಣಿಕರು ಯೆಲ್ಲೋ ಲೈನ್ ಮಾರ್ಗವನ್ನು ಬಳಸುತ್ತಿದ್ದಾರೆ, ಮತ್ತು ಪ್ರಯಾಣಿಕರು BMRCL ಗೆ ಹೆಚ್ಚುವರಿ ರೈಲುಗಳನ್ನು ಒದಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಯೆಲ್ಲೋ ಲೈನ್‌ಗೆ ಮತ್ತೊಂದು ರೈಲು ಸೇರ್ಪಡೆಯಾಗಲಿದ್ದು, ಆ ನಂತರ ರೈಲು ಸೇವೆ ಸ್ವಲ್ಪ ವೇಗ ಪಡೆದುಕೊಳ್ಳಲಿದೆ. ಇದರಿಂದ ಪ್ರಯಾಣಿಕರಿಗೂ ಬಹಳ ಅನುಕೂಲವಾಗಲಿದ್ದು, ನಿರ್ದಿಷ್ಟ ಸಮಯದಲ್ಲಿ ತಮ್ಮ ಸ್ಥಳವನ್ನು ತಲುಪಬಹುದು.


Click it and Unblock the Notifications