ಬೆಂಗಳೂರಿನ ನಮ್ಮ ಮೆಟ್ರೋ ಈಗಾಗಲೇ ಟಿಕೆಟ್ ಬೆಲೆ ಏರಿಸಿ, ಒಳ್ಳೆಯ ಆದಾಯವನ್ನೇ ನೋಡುತ್ತಿದೆ. ಇದರ ಜೊತೆಗೆ ಈಗ ಮತ್ತೊಂದು ಆದಾಯದ ನಿರೀಕ್ಷೆ ಹೊಂದಿದೆ. ಅದೇನೆಂದರೆ ಮೆಟ್ರೋ ಸ್ಟೇಷನ್ ಒಳಗಡೆ ಜಾಹೀರಾತುಗಳನ್ನ ಪ್ರದರ್ಶನ ಮಾಡೋದಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ. ಈ ಸಂಬಂಧ ಅರ್ಹ ಸಂಸ್ಥೆಗಳಿಗೆ ಟೆಂಡರ್‍ನ ಕೂಡ ಆಹ್ವಾನಿಸಿದೆ.
ಅಂದಹಾಗೆ ಮೆಟ್ರೋ ಟಿಕೆಟ್ ದರ ಏರಿಸಿದ ಬಳಿಕ, ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರಬಹುದು. ಹೀಗಾಗಿ ಆದಾಯವನ್ನು ತೂಗಿಸಲು ಈ ಕಾರ್ಯಕ್ಕೆ ಮುಂದಾಗಿದ್ಯಾ ಎಂಬ ಅನುಮಾನವೂ ಎದುರಾಗಿದೆ. ಸದ್ಯ ನೇರಳೆ ಮಾರ್ಗವಾದ ಚೆಲ್ಲಘಟ್ಟದಿಂದ-ವೈಟ್‌ಫೀಲ್ಡ್ ಮತ್ತು ಹಸಿರು ಮಾರ್ಗವಾದ ಮಾದಾವರದಿಂದ-ರೇಷ್ಮೆ ಸಂಸ್ಥೆವರೆಗೂ ಆಯ್ದ ನಿಲ್ದಾಣಗಳಲ್ಲಿ ಜಾಹೀರಾತಿಗಾಗಿ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ.

ಇಂಟರ್‍ಚೇಂಜ್ ನಿಲ್ದಾಣದಲ್ಲಿ ಅಂದರೆ..ಅದಲು ಬದಲಾಗುವ ಮೆಟ್ರೋ ನಿಲ್ದಾಣಗಳಲ್ಲಿ ಆರು ಸಾವಿರ ಚದರ ಮೀಟರ್ ಹಾಗೂ ಉಳಿದ ನಿಲ್ದಾಣದಲ್ಲಿ ಮೂರು ಸಾವುರ ಚದರ ಮೀಟರ್‍ಗೆ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ಆಯ್ದ ನಿಲ್ದಾಣಗಳ ಒಳಭಾಗದಲ್ಲಿ ಲಿಫ್ಟ್‌ಗಳು, ಎಸ್ಕಲೇಟರ್‍ಗಳು, ಮೆಟ್ಟಿಲುಗಳು, ಗೋಡೆ ಸೇರಿದಂತೆ ಆಯ್ದ ಸ್ಥಳಗಳಲ್ಲಿ ಜಾಹೀರಾತು ಪ್ರದರ್ಶನ ಮಾಡಲು ಚಿಂತನೆ ನಡೆಸುತ್ತಿದೆ. ಅಲ್ಲದೇ ಕಾಂಟ್ರಾಕ್ಟ್ ತೆಗೆದುಕೊಂಡ ಸಂಸ್ಥೆಯು ಜಾಹಿರಾತು ಪ್ರದರ್ಶನಕ್ಕೆ ಸೂಕ್ತ ಎನಿಸಿದ ಸ್ಥಳಗಳನ್ನು ಅವರೇ ಗುರುತಿಸಬಹುದಾಗಿದೆ. ಮೂಲಗಳ ಪ್ರಕಾರ ನಿಲ್ದಾಣದ ಒಳಗಡೆ ಜಾಹೀರಾತು ಪ್ರದರ್ಶನ ಮಾಡಲು, BMRCL 30 ಕೋಟಿಯಿಂದ 35 ಕೋಟಿ ರೂ. ಆದಾಯ ನಿರೀಕ್ಷಿಸುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಇನ್ನು ಬಿಎಂಆರ್‍ಸಿಎಲ್ ನಾಲ್ಕು ಪ್ಯಾಕೇಜ್‌ಗಳ ಅಡಿಯಲ್ಲಿ, ದರ ನಿಗದಿ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ. ಅಂದರೆ ಯಾವ್ಯಾವ ಮಾರ್ಗದಲ್ಲಿ ಎಷ್ಟೆಷ್ಟು ನಿಲ್ದಾಣ ಬರುತ್ತದೆ ಎಂಬುದನ್ನು ಆಧರಿಸಿ ಜಾಹೀರಾತು ಪ್ರದರ್ಶನ ಮಾಡಲಿದೆ. ಹಾಗಾದರೆ ಯಾವ್ಯಾವ ಪ್ಯಾಕೇಜ್‌ಗಳಲ್ಲಿ ಎಷ್ಟೆಷ್ಟು ನಿಲ್ದಾಣಗಳು ಬರುತ್ತವೆ ಎಂಬುದನ್ನು ನೋಡುವುದಾದರೆ..
ಮಾರ್ಗ-1: ವೈಟ್‌ಫೀಲ್ಡ್- ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣದವರೆಗೆ ಒಟ್ಟು 22 ನಿಲ್ದಾಣಗಳು
ಮಾರ್ಗ-2: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿಟಿ ರೈಲ್ವೆ- ಚಲ್ಲಘಟ್ಟ ನಿಲ್ದಾಣದವರೆಗೆ 14 ನಿಲ್ದಾಣಗಳು
ಮಾರ್ಗ-3: ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್) - ನಾಗಸಂದ್ರ ಮೆಟ್ರೋ ನಿಲ್ದಾಣದವರೆಗೆ 13 ನಿಲ್ದಾಣಗಳು ಒಟ್ಟು 15 ನಿಲ್ದಾಣಗಳು
ಸಾಮಾಜಿಕ ಕಳಕಳಿಯುಳ್ಳ ಜಾಹಿರಾತಿಗೆ 5% ಸ್ಥಳ ಮೀಸಲು:
ಜಾಹೀರಾತು ಪ್ರದರ್ಶನ ಮಾಡುವ ಪೈಕಿ, ಸಾಮಾಜಿಕ ಕಳಕಳಿಯುಳ್ಳ ಜಾಹಿರಾತುಗಳಿಗೂ ಆದ್ಯತೆ ನೀಡಬೇಕು ಎಂದು ಬಿಎಂಆರ್‍ಸಿಎಲ್ ನಿರ್ಧರಿಸಿದೆ. ಇದರ ಭಾಗವಾಗಿ ಶೇ.5ರಷ್ಟು ಜಾಗವನ್ನು ಮೀಸಲಿಡಲು ಮುಂದಾಗಿದೆ. ಅಲ್ಲದೇ ಸದ್ಯ ಯಾವುದೇ ನಿಲ್ದಾಣದಲ್ಲಿ ಸ್ಕ್ರೀನ್ ಡೋರ್ ಇಲ್ಲದ ಕಾರಣ, ಸ್ಕ್ರೀನ್ ಡೋರ್ ಅಳವಡಿಸಲು ಚಿಂತನೆ ನಡೆಸಿದೆ. ಸ್ಕ್ರೀನ್ ಡೋರ್ ಅಳವಡಿಸಿದ ನಂತರ ಜಾಹಿರಾತು ಅಳವಡಿಕೆಗೆ ಅವಕಾಶ ಸಿಗಲಿದೆ ಎನ್ನಬಹುದಾಗಿದೆ.
ಟಿಕೆಟೇತರ ಆದಾಯಕ್ಕೆ ತಜ್ಞರ ಶಿಫಾರಸು
ಟಿಕೆಟ್ ದರ ಹೆಚ್ಚಳ ಮಾಡಿ, ಪ್ರಯಾಣಿಕರ ಆರ್ಥಿಕ ಹೊರೆಯುಂಟು ಮಾಡುವ ಬದಲಿಗೆ. ಟಿಕೆಟೇತರ ಆದಾಯಕ್ಕೆ ಬಿಎಂಆರ್‌ಸಿಎಲ್ ಹೆಚ್ಚು ಗಮನ ಹರಿಸಬೇಕೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಟಿಕೆಟೇತರ ಆದಾಯ ಹೆಚ್ಚಳ ಮಾಡುವುದರಿಂದ ದರ ಹೆಚ್ಚಳದ ಅಗತ್ಯ ಇರುವುದಿಲ್ಲ. ಇದರಿಂದ ಪ್ರಯಾಣಿಕರಿಗೂ ಅನುಕೂಲವಾಗುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟಿಕೆಟ್ ದರ ಹೊರತುಪಡಿಸಿ ಆದಾಯ ಗಳಿಸಲು ತಜ್ಞರ ಶಿಫಾರಸು
ಇನ್ನು ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದರೆ ಬಹುತೇಕ ಮೆಟ್ರೋ ಪ್ರಯಾಣಿಕರು, ಮೆಟ್ರೋದಿಂದ ದೂರ ಉಳಿಯುತ್ತಾರೆ. ನಮ್ಮ ಮೆಟ್ರೋ ಮಾರ್ಗವನ್ನು ಕಿರಿಕಿರಿ ಇಲ್ಲದೇ ಬೇಗನೇ ತಮ್ಮ ಸ್ಥಳ ತಲುಪಲು ಬಯಸುತ್ತಾರೆ. ಆದರೆ ಮೆಟ್ರೋ ಜೇಬಿಗೆ ಕತ್ತರಿ ಹಾಕುತ್ತದೆ ಎಂದಾದರೆ, ಇದು ಮಧ್ಯಮ ವರ್ಗದವರಿಗೆ ತಟ್ಟುವ ಬಿಸಿಯಾಗಿದೆ. ಕಡಿಮೆ ಆದಾಯವನ್ನೇ ನೋಡುವ ಮದ್ಯಮ ಹಾಗೂ ಬಡ ವರ್ಗದ ಜನರ ಪಾಲಿಗೆ ಮೆಟ್ರೋ, ಐಷಾರಾಮಿ ಪ್ರಯಾಣದಂತೆ ಕಾಣುತ್ತದೆ. ಹೀಗಾಗಿ ಪ್ರಯಾಣಿಕರು ಆರ್ಥಿಕ ಹೊರೆ ಮಾಡಿಕೊಳ್ಳಲು ಬಯಸುವುದಿಲ್ಲ. ಹೀಗಾಗಿ ಟಿಕೆಟೇತರ ಆದಾಯಕ್ಕೆ ಬಿಎಂಆರ್‌ಸಿಎಲ್ ಹೆಚ್ಚು ಗಮನ ಹರಿಸಬೇಕೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಟಿಕೆಟೇತರ ಆದಾಯ ಹೆಚ್ಚಳ ಮಾಡುವುದರಿಂದ ದರ ಹೆಚ್ಚಳದ ಅಗತ್ಯ ಇರುವುದಿಲ್ಲ ಎಂದು ಕೂಡ ತಿಳಿಸಿದ್ದಾರೆ.
ಕೋರ್ಟ್ ಆದೇಶ..ಕುಸಿಯಿತು ಬಿಎಂಆರ್‍ಸಿಎಲ್ ಆದಾಯ
2019ರಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯ (ಹೈಕೋರ್ಟ್) ನೀಡಿದ ಒಂದು ಆದೇಶದಿಂದ, ಬಿಎಂಆರ್‌ಸಿಎಲ್ ಆದಾಯ ಇಳಿಕೆಯಾಯಿತು. ಅಂದರೆ 2019ರಲ್ಲಿ ಜಾಹೀರಾತು ಫಲಕಗಳಿಗೆ ನಿಷೇಧ ಹೈಕೋರ್ಟ್ ಹೇರಿತ್ತು. ಇದಕ್ಕೂ ಮುನ್ನ ಮೆಟ್ರೋ ಕಂಬಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸುವ ಮೂಲಕ, ಮೆಟ್ರೋ ಉತ್ತಮ ಆದಾಯ ನೋಡುತ್ತಿತ್ತು. 2016-17ರಲ್ಲಿ ಸುಮಾರು 8 ಕೋಟಿ ರೂ., 2017-18ರಲ್ಲಿ 8.89 ಕೋಟಿ ರೂ. ಹಾಗೂ 2018-19ರಲ್ಲಿ 3.9 ಕೋಟಿ ರೂ. ಆದಾಯ ಗಳಿಸಿತ್ತು..ಆದರೆ 2019ರ ಹೈಕೋರ್ಟ್ ಆದೇಶದ ಬಳಿಕ ಬಿಎಂಆರ್‍ಸಿಎಲ್ ಆದಾಯ ಇಳಿಮುಖವಾಯಿತು.
ಒಟ್ಟಿನಲ್ಲಿ ಟಿಕೆಟ್ ದರದಲ್ಲಿ ಆದಾಯ ಗಳಿಸುತ್ತಿರುವ ನಮ್ಮ ಮೆಟ್ರೋ ಈಗ, ಜಾಹೀರಾತುಗಳ ಮೊರೆ ಹೋಗಿದೆ. ಉತ್ತಮ ಆದಾಯ ಗಳಿಸಿದ ಮೇಲಾದರೂ ಟಿಕೆಟ್ ದರ ಇಳಿಯುತ್ತಾ ಕಾದು ನೋಡಬೇಕಿದೆ.


Click it and Unblock the Notifications