ರಾಜಧಾನಿ ಬೆಂಗಳೂರಿನಲ್ಲಿ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜನಸಂಖ್ಯೆ ಹೆಚ್ಚಾದಂತೆಲ್ಲ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಅದಷ್ಟೇ ಅಲ್ಲ ಸಾರಿಗೆ ವ್ಯವಸ್ಥೆ ಎಷ್ಟೇ ಇದ್ರೂ ಸಾಕಾಗುವುದಿಲ್ಲ ಎನ್ನಲಾಗ್ತಿದೆ. ಮೆಟ್ರೋ ವ್ಯವಸ್ಥೆ ಕೂಡ ಎಷ್ಟೇ ಹೆಚ್ಚಾಗಿದ್ರೂ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾದ ಹಿನ್ನೆಲೆ, ಎಲ್ಲವೂ ಕೊರತೆ ಎಂಬಂತೆ ಭಾಸವಾಗುತ್ತಿದೆ. ಈ ರೀತಿಯ ಸಮಸ್ಯೆಗೆ ಪರಿಹಾರ ನೀಡಲು BMRCL ಹೊಸ ಪ್ರಯೋಗಕ್ಕೆ ಮುಂದಾಗಿದೆ. ಅದೇನೆಂದರೆ..ಮೆಟ್ರೋ ಲೈಟ್.

ಹೌದು, ಮೆಟ್ರೋ ಲೈಟ್ ಎಂದರೆ..ಮೆಟ್ರೋ ಲಘು ರೈಲು ವ್ಯವಸ್ಥೆ..ಇದು ಸಂಚಾರಿ ದಟ್ಟಣೆ ಕಡಿಮೆ ಇರುವ ಪ್ರದೇಶಗಳಿಗೆ ಮಾತ್ರ ಹೆಚ್ಚು ಸೂಕ್ತವಾಗಿದೆ. ಇದು ಕಡಿಮೆ ವೆಚ್ಚದಲ್ಲಿ ನಗರದ ಸುತ್ತಲೂ ಉತ್ತಮ ರೈಲು ಸಂಪರ್ಕ ಒದಗಿಸುವ ಉದ್ದೇಶ ಹೊಂದಿದೆ. ಈ ಮೆಟ್ರೋ ಲೈಟ್‌ನ ಬೃಹತ್ ಮೆಟ್ರೋ ರೈಲು ವ್ಯವಸ್ಥೆಗೆ ಪರ್ಯಾಯವಾಗಿ ಬಳಸಲಾಗುತ್ತಿಲ್ಲ. ಬದಲಾಗಿ ಅದು ಸಣ್ಣ ಪ್ರಮಾಣದ ಮತ್ತು ಕಡಿಮೆ ಜನಸಂಖ್ಯೆಯ ಪ್ರದೇಶಗಳಿಗೆ ಅನುಕೂಲವಾಗುವಂತಹ ಸ್ವತಂತ್ರ ವ್ಯವಸ್ಥೆಯಾಗಿರಲಿದೆ. ಭಾರತ ಸರ್ಕಾರ 2019ರಲ್ಲಿ ಈ ರೀತಿಯ ಲಘು ರೈಲು ಯೋಜನೆಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಅದರ ಪ್ರಕಾರ ನಗರಗಳು ತಾವು ಬಯಸುವ ಸ್ಥಳೀಯ ಉದ್ದೇಶಗಳಿಗೆ ತಕ್ಕಂತೆ ಯೋಜನೆ ರೂಪಿಸಬಹುದಾಗಿದೆ.
ಇನ್ನು ಬೆಂಗಳೂರು ನಗರದಲ್ಲಿ ಪ್ರಸ್ತಾವಿತ ಮೆಟ್ರೋಲೈಟ್ ಯೋಜನೆಯು ಮೂರು ಪ್ರಮುಖ ಮಾರ್ಗಗಳನ್ನು ಒಳಗೊಂಡಿದೆ. ಈ ಎಲ್ಲಾ ಮಾರ್ಗಗಳು ರಸ್ತೆ ಮಟ್ಟದ ಹಳಿ ಹೊಂದಿರುವ ಲಘು ರೈಲು ಮಾರ್ಗಗಳಾಗಿರುತ್ತವೆ. ಇದರಲ್ಲಿ ಮೊದಲನೆಯ ಮಾರ್ಗವೆಂದರೆ ಹೆಬ್ಬಾಳದಿಂದ, ಎ.ಪಿ ನಗರದವರೆಗೆ ಇರುವ 30 ಕಿಲೋಮೀಟರ್ ಉದ್ದದ ಕಿತ್ತಳೆ ಬಣ್ಣದ ಮಾರ್ಗ. ಇದು ಒಟ್ಟಾರೆ ಔಟರ್ ರಿಂಗ್ ರೋಡ್ ಪಶ್ಚಿಮ ಂಆಗ್ವನ್ನು ಸಮರ್ಪಕವಾಗಿ ಸಂಪರ್ಕಿಸಲು ಸಹಕಾರಿಯಾಗಲಿದೆ.
ಮತ್ತೊಂದು, ಅಂದರೆ ಎರಡನೆಯದಾಗಿ ಮಾಗಡಿ ರಸ್ತೆ ಟೋಲ್‌ಗೇಟ್‌ನಿಂದ ಕಡಬಗೆರೆ ವರೆಗೆ ಹೋಗುವ 14 ಕಿಲೋಮೀಟರ್ ಉದ್ದದ ಇನ್ನೊಂದು ಮಾರ್ಗವಿದೆ. ಈ ಮಾರ್ಗಗಳು ಐಟಿ ಉದ್ಯಮದ ಕೇಂದ್ರವಾದ ವೈಟ್‌ಫೀಲ್ಡ್‌ನಿಂದ, ದೊಮ್ಮಲೂರಿನವರೆಗೆ ಸಂಚರಿಸುವ 16 ಕಿಲೋಮೀಟರ್ ಉದ್ದದ ಮತ್ತೊಂದು ಮಾರ್ಗವನ್ನು ಯೋಜಿಸಲಾಗಿದೆ. ಈ ಎಲ್ಲಾ ಮಾರ್ಗಗಳ ಡೀಟೆಲ್ ಪ್ರಾಜೆಕ್ಟ್ ರಿಪೋರ್ಟ್ ಸಿದ್ಧಪಡಿಸುವ ಕೆಲಸ ನಡೆಯುತ್ತಿದ್ದು, ಇದಕ್ಕೆ ಅನುಮೋದನೆಗಳು ಸಿಕ್ಕ ಬಳಿಕ ನಿರ್ಮಾಣ ಕಾರ್ಯ ಶುರುವಾಗುವ ನಿರೀಕ್ಷೆ ಹೊರ ಹೊಮ್ಮಿದೆ.
ಇನ್ನು ಈ ಮೆಟ್ರೋ ಲೈಟ್‌ಗಳು ತಾಂತ್ರಿಕವಾಗಿ ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿವೆ. ಇವು ಸ್ಟ್ಯಾಂಡರ್ಡ್ ಗೇಜ್ ಹಳಿ..ಅಂದರೆ ಸುಮಾರು 1435 ಮಿಮೀ ಹಳಿಯ ಮೇಲೆ ಸಂಚರಿಸುತ್ತವೆ. ಈ ಪ್ರತಿ ರೈಲು ಮೂರು ಕೋಚ್‌ಗಳನ್ನು ಹೊಂದಿರುತ್ತದೆ. ಈ ಮೆಟ್ರೋ ಲೈಟ್ ರೈಲುಗಳಲ್ಲಿ ಗರಿಷ್ಠ ಎಂದರೂ 425 ಪ್ರಯಾಣಿಕರನ್ನು ಒಮ್ಮೆಗೆ ಸಾಗಿಸಲು ಸಾಧ್ಯವಾಗುತ್ತದೆ. ಇನ್ನು ಸಾಮಾನ್ಯವಾಗಿ ಈ ರೈಲುಗಳು ಗಂಟೆಗೆ 35 ಕಿಲೋಮೀಟರ್ ವೇಗದಲ್ಲಿ ಚಲಿಸುವ ಶಕ್ತಿ ಹೊಂದಿವೆ. ಇದರ ಗರಿಷ್ಠ ವೇಗ ಎಂದರೆ 60 ಕಿಲೋಮೀಟರ್ ಆಗಿರಬಹುದು.
ಅಂದಹಾಗೆ ಇವು ರಸ್ತೆ ಮಟ್ಟದಲ್ಲೇ ಸಂಚರಿಸುವ ರೈಲುಗಳಾಗಿವೆ. ಎಲಿವೇಟೆಡ್ ಅಥವಾ ಅಂಡರ್ ಗ್ರೌಂಡ್ ಹಳಿಗಳ ಅಗತ್ಯ ಇದಕ್ಕಿಲ್ಲ. ಇದರಿಂದ ನಿರ್ಮಾಣದ ವೆಚ್ಚ ಕೂಡ ಕಡಿಮೆಯಾಗುತ್ತದೆ. ಇದು ತಂತ್ರಜ್ಞಾನ ಬಳಕೆಗೂ ಇದನ್ನು ನವೀನಗೊಳಿಸಲಾಗಿದ್ದು, ಕ್ಯೂಆರ್ ಕೋಡ್ ಸ್ಕ್ಯಾನಿಂಗ್, ಎನ್‌ಎಫ್‌ಸಿ ಪಾವತಿಗಳು ಮತ್ತು ಸ್ವಯಂಚಾಲಿತ ಶುಲ್ಕ ಸಂಗ್ರಹ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತದೆ. ಈ ವ್ಯವಸ್ಥೆ ಈಗಾಗಲೇ ಅಸ್ತಿತ್ವದಲ್ಲಿರುವ ನಂಟುಗಳೊಂದಿಗೆ ಏಕೀಕರಣಗೊಂಡಿರುವುದರಿಂದ, ಪ್ರಯಾಣಿಕರು ಸುಲಭವಾಗಿ ಸೇವೆ ಪಡೆಯಬಹುದು.
ಕೇವಲ ಮೂರು ಮಾರ್ಗಗಳಷ್ಟೇ ಅಲ್ಲ. ಅದರ ಹೊರತಾಗಿಯೂ ಇನ್ನೊಂದು ಭವಿಷ್ಯಕಾಲೀನ ಮಹತ್ವದ ಮೆಟ್ರೋ ಲೈಟ್ ಮಾರ್ಗದ ಬಗ್ಗೆಯೂ ಅಧ್ಯಯನ ಮಾಡಲಾಗುತ್ತಿದೆ. ಇದು ಹೊಸಕೋಟೆಯಿಂದ ಹೆಬ್ಬಾಳದ ಮಾರ್ಗವಾಗಿ, ಸರ್ಜಾಪುರ ರಸ್ತೆವರೆಗೆ ವ್ಯಾಪಿಸುತ್ತಿದೆ. ಅಂದರೆ ಇದು 52 ಕಿಲೋಮೀಟರ್ ಉದ್ದದ ಮಾರ್ಗವಾಗಿದ್ದು, ಬೆಂಗಳೂರಿನ ಹೊರವಲಯವನ್ನು ಒಳನಾಡು ಭಾಗಗಳಿಗೆ ಸಂಪರ್ಕಿಸಲು ಸಹಕಾರಿಯಾಗುತ್ತದೆ. ಮಾರ್ಗದ ಪ್ರಾಥಮಿಕ ಸಂಶೋಧನೆಯು ಪ್ರಾರಂಭವಾಗಿದ್ದು, ಮುಂದಿನ ಹಂತಗಳಲ್ಲಿ ಇದಕ್ಕೆ ಸಂಬಂಧಿಸಿದ ಡಿಪಿಆರ್ ತಯಾರಿಸಲಾಗುವುದು. ಇದರಿಂದಾಗಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಲಘು ರೈಲು ಸಂಪರ್ಕ ಕಲ್ಪಿಸಲು ಸಾಧ್ಯವಾಗಲಿದೆ.
ಇನ್ನು ಈ ಮೆಟ್ರೋ ಲೈಟ್ ಯೋಜನೆಯು, ಈ ವರೆಗೆ ಪ್ರಸ್ತಾವಿತ ಹಂತದಲ್ಲಿದೆ. ಇದರಿಂದ ಯಾವುದೇ ಮಾರ್ಗಗಳ ನಿರ್ಮಾಣ ಆರಂಭಾಗಿಲ್ಲ. ಡಿಪಿಆರ್ ಪ್ರಕ್ರಿಯೆ ಪೂರ್ತಿಯಾದ ಬಳಿಕ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅನುಮೋದನೆಗಳು ದೊರಕಬೇಕಿದೆ. ಅದಾದ ನಂತರವೇ ಕಾಮಗಾರಿ ಕೂಡ ಆರಂಭವಾಗುತ್ತದೆ. ಅಂದಹಾಗೆ ಎಲ್ಲವೂ ಅಂದುಕೊಂಡಂತೆ ನಡೆದರೆ, 2025ರ ವೇಳೆಗೆ ನಿರ್ಮಾಣ ಕಾರ್ಯ ಆರಂಭಿಸಿ, 2027ರ ವೇಳೆಗೆ ಮೊದಲ ಮೆಟ್ರೋಲೈಟ್ ರೈಲು ಸಂಚರಿಸಬಹುದು ಎಂಬ ನಿರೀಕ್ಷೆಯಿದೆ.
ಒಟ್ಟಿನಲ್ಲಿ ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಲಘು ರೈಲು ವ್ಯವಸ್ಥೆಯ ಅಗತ್ಯ ಎಷ್ಟು ಹೆಚ್ಚಿದೆಯೆಂದರೆ, ಪ್ರತಿದಿನ ಪ್ರಯಾಣಿಸುವ ಜನರಿಗೆ ಹೆಚ್ಚಿನ ಸಹಾಯವಾಗಲಿದೆ. ಸಂಚಾರದ ಸಮಯದ ದುಡಿಮೆಯನ್ನು ಕಡಿಮೆ ಮಾಡುವುದು, ವಾಹನದ ಬಳಕೆಯ ಅವಲಂಬನೆಯನ್ನು ತಗ್ಗಿಸುವುದು, ಪರಿಸರ ಮಾಲಿನ್ಯವನ್ನು ನಿಯಂತ್ರಿಸುವುದು ಮತ್ತು ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಹತ್ತಿರತೆಗೆ ದಾರಿ ಕಲ್ಪಿಸುವಂತಹ ಸಾಕಷ್ಟು ಪ್ರಯೋಜನಗಳನ್ನು ಈ ಯೋಜನೆಯಿಂದ ನಿರೀಕ್ಷಿಸಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಯೋಜನೆಯ ಪೂರ್ಣ ಅನುಷ್ಠಾನವಾದರೆ, ಬೆಂಗಳೂರಿಗರಿಗೆ ಇದು ಬಹುದೊಡ್ಡ ಉಪಕಾರಿಯಾಗಲಿದೆ ಎಂಬುದು ಸ್ಪಷ್ಟವಾಗುತ್ತದೆ.


Click it and Unblock the Notifications