ಸಿನಿ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ! ಸಿನಿಮಾ ಟಿಕೆಟ್‌ಗೆ ಏರಕರೂಪ ದರ (200 ರೂ.) ಆದೇಶ ಬಂದ್ಮೇಲೂ ಕೂಡ ನೀವು ಹೆಚ್ಚುವರಿ ಹಣ ನೀಡಿದ್ದೀರಾ? ಏಕರೂಪ ದರ ಬಂದ್ಮೇಲೂ ಹೆಚ್ಚುವರಿ ಹಣ ಪಾವತಿಸಬೇಕು ಅನ್ನೋ ಭಯ ಇದ್ಯಾ? ಆ ಭಯ ಬಿಟ್ಟುಬಿಡಿ! ಯಾಕಂದ್ರೆ ನೀವು ಹೆಚ್ಚುವರಿ ಹಣ ಪಾವತಿಸಿದ್ರೆ ಹಣ ಕಳೆದುಕೊಳ್ಳೋ ಚಿಂತೆ ಇಲ್ಲ. ಅಂದರೆ ರಾಜ್ಯದ ಮಲ್ಟಿಪ್ಲೆಕ್ಸಗಳಲ್ಲಿ ಟಿಕೆಟ್ ಬೆಲೆ ಹೆಚ್ಚಳದ ವಿರುದ್ಧ ತೀರ್ಪು ಬಂದರೆ, ಚಿತ್ರದ ಟಿಕೆಟ್ ಬೆಲೆ 200 ರೂಪಾಯಿಗೆ ಮಿತಿಯಾಗಿದ್ದು, ಹೆಚ್ಚು ಹಣ ಪಾವತಿಸಿದ ಗ್ರಾಹಕರು ಹಿಂತಿರುಗ ಹಣವನ್ನು ಪಡೆಯಲು ಹಕ್ಕು ಹೊಂದಿದ್ದಾರೆ.

ಹೌದು, ರಾಜ್ಯ ಸರ್ಕಾರವು ಸಿನಿಮಾಗೆ ಟಿಕೆಟ್ ಬೆಲೆ 200 ರೂಪಾಯಿಗೆ ಸೀಮಿತಗೊಳಿಸುವ ತೀರ್ಮಾನವನ್ನು ಮಾಡಿಕೊಂಡಿತ್ತು. ಆದರೆ, ಮಲ್ಟಿಪ್ಲೆಕ್ಸ್‌ಗಳು ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಕಾನೂನು ಸವಾಲು ಹಾಕಿದ್ದರು. ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ದ ಮಲ್ಟಿಪ್ಲೆಕ್ಸ ಅಸೋಸಿಯೇಷನ್ ಆಫ್ ಇಂಡಿಯಾ ಪ್ರಕರಣದಲ್ಲಿ, ಹೈಕೋರ್ಟ್ ಮಲ್ಟಿಪ್ಲೆಕ್ಸ್‌ಗಳ ಅರ್ಜಿಯನ್ನು ನಿರಾಕರಿಸಿದೆ.
ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (DIPR) ನೀಡಿದ ಅಧಿಕೃತ ಪ್ರಕಟಣೆಯ ಪ್ರಕಾರ, ಸೆಪ್ಟೆಂಬರ್ 30ರಂದು ನೀಡಿದ ಮಧ್ಯಂತರ ಆದೇಶದಲ್ಲಿ ಹೈಕೋರ್ಟ್ ಮಲ್ಟಿಪ್ಲೆಕ್ಸ್‌ಗಳಿಗೆ ಟಿಕೆಟ್ ಮಾರಾಟದ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಲು ಸೂಚನೆ ನೀಡಿದೆ. ಪ್ರತಿ ಟಿಕೆಟ್ ಮಾರಾಟದ ಸಂಪೂರ್ಣ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಲು ಅವರು ಬದ್ಧರಾಗಬೇಕು. ಈ ದಾಖಲೆಗಳಲ್ಲಿ ಮಾರಾಟದ ದಿನಾಂಕ, ಸಮಯ, ಆನ್‌ಲೈನ್ ಅಥವಾ ಕೌಂಟರ್‌ನಲ್ಲಿ ಮಾಡಿದ ಬುಕ್ಕಿಂಗ್, ಪಾವತಿ ವಿಧಾನ (ನಗದು, ಕ್ರೆಡಿಟ್/ಡೆಬಿಟ್ ಕಾರ್ಡ್, ಯುಪಿಐ, ನೆಟ್ ಬ್ಯಾಂಕಿಂಗ್) ಮತ್ತು ಸಂಗ್ರಹಿಸಿದ ನಿಖರ ಮೊತ್ತದ ವಿವರಗಳು ಸೇರಿರಬೇಕು.
ನಗದು ಪಾವತಿಗೆ ಸಂಬಂಧಿಸಿದಂತೆ, ಮಲ್ಟಿಪ್ಲೆಕ್ಸ್ಗಳು ಡಿಜಿಟಲ್ ಪತ್ತೆಹಚ್ಚಬಹುದಾದ ರಸೀದಿಗಳನ್ನು ನೀಡಬೇಕು. ಜೊತೆಗೆ, ದೈನಂದಿನ ನಗದು ರಿಜಿಸ್ಟರ್‌ಗಳನ್ನು ಟಿಕೆಟ್ ವ್ಯವಸ್ಥಾಪಕರು ಸಹಿ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಬೆಂಗಳೂರು ನಗರದಲ್ಲಿ, ವಾರಾಂತ್ಯದಲ್ಲಿ ಅಥವಾ ಪ್ರಮುಖ ಸಿನಿಮಾಗಳ ಬಿಡುಗಡೆಯ ಸಮಯದಲ್ಲಿ ಟಿಕೆಟ್ ಬೆಲೆ 400-500 ರೂಪಾಯಿಗಳಿಗೆ ಏರಬೇಕಾದ ಸಂದರ್ಭಗಳು ಇರುತ್ತವೆ. ಈ ಬೆಲೆ ಏರಿಕೆ ಸಾರ್ವಜನಿಕರಲ್ಲಿ ಅಸಮಾಧಾನವನ್ನು ಹುಟ್ಟುಹಾಕಿದ್ದು, ಹೈಕೋರ್ಟ್ ಆದೇಶವು ಇದನ್ನು ನಿಯಂತ್ರಿಸಲು ಮಹತ್ವ ಹೊಂದಿದೆ.
ಹೈಕೋರ್ಟ್ ನಿರ್ಧಾರ ಪ್ರಕಾರ, ಅಂತಿಮ ತೀರ್ಪು ಹೊರಡುವವರೆಗೆ ಟಿಕೆಟ್ ಬೆಲೆ 200 ರೂಪಾಯಿಗೆ ಮಿತಿಯಾಗಿರುತ್ತದೆ. ಮಲ್ಟಿಪ್ಲೆಕ್ಸ್ಗಳು ಈ ನಿಯಮ ಉಲ್ಲಂಘಿಸಿದರೆ, ಅವರು ಸಂಗ್ರಹಿಸಿದ ಹೆಚ್ಚುವರಿ ಹಣವನ್ನು ಗ್ರಾಹಕರಿಗೆ ಹಿಂತಿರುಗಿಸಬೇಕು. ಈ ಮರುಪಾವತಿ ಗ್ರಾಹಕರ ಮೂಲ ಪಾವತಿ ವಿಧಾನದಲ್ಲಿ ಮಾತ್ರ ಪ್ರಕ್ರಿಯೆಗೊಳ್ಳಲಿದೆ. ಉದಾಹರಣೆಗೆ, ಯುಪಿಐ ಮೂಲಕ ಟಿಕೆಟ್ ಬುಕ್ ಮಾಡಿದರೆ, ಮರುಪಾವತಿಯನ್ನು ಯುಪಿಐ ಮೂಲಕ ಮಾಡಬೇಕು.
ನ್ಯಾಯಾಲಯ ಮಲ್ಟಿಪ್ಲೆಕ್ಸ ಅಸೋಸಿಯೇಶನ್‌ಗೆ 45 ದಿನಗಳೊಳಗೆ ಮರುಪಾವತಿ ಪ್ರಕ್ರಿಯೆಯ ಯೋಜನೆಯನ್ನು ಪರವಾನಗಿ ಪ್ರಾಧಿಕಾರಕ್ಕೆ ಸಲ್ಲಿಸಲು ಸೂಚಿಸಿದೆ. ಅಧಿಕಾರಿಗಳ ಪರಿಶೀಲನೆಯ ನಂತರ, ಈ ಯೋಜನೆಯನ್ನು ಅಂತಿಮ ಅನುಮೋದನೆಗಾಗಿ ಹೈಕೋರ್ಟ್‌ಗೆ ಸಲ್ಲಿಸಬೇಕು.
ಈ ಆದೇಶವು ಚಲನಚಿತ್ರ ವೀಕ್ಷಕರಿಗೆ ನ್ಯಾಯ ಮತ್ತು ಪಾರದರ್ಶಕತೆಯನ್ನು ಒದಗಿಸುತ್ತಿದ್ದು, ಅಕ್ರಮವಾಗಿ ಹೆಚ್ಚಾದ ಟಿಕೆಟ್ ಬೆಲೆಗಳಿಂದ ಉಂಟಾಗುವ ತೊಂದರೆಗಳನ್ನು ಕಡಿಮೆ ಮಾಡಲಿದೆ. ಸಾರ್ವಜನಿಕರು ಈಗ ಹೆಚ್ಚಿನ ಹಣ ಪಾವತಿಸದೇ, ಟಿಕೆಟ್ ಅನ್ನು ನ್ಯಾಯಸಮ್ಮತ ಬೆಲೆಗೆ ಖರೀದಿಸುವ ಅವಕಾಶ ಪಡೆದಿದ್ದಾರೆ. ಹೈಕೋರ್ಟ್ ನೀಡಿದ ಈ ನಿರ್ಧಾರವು ಸಿನಿಮಾ ವೀಕ್ಷಕರ ಹಿತಕ್ಕಾಗಿ ಮತ್ತು ಮಲ್ಟಿಪ್ಲೆಕ್ಸ್ ಉದ್ಯಮದಲ್ಲಿ ಪಾರದರ್ಶಕತೆಯನ್ನು ಉತ್ತೇಜಿಸಲು ಮಹತ್ವದ್ದಾಗಿದೆ.


Click it and Unblock the Notifications