ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ನಮ್ಮ ಮೆಟ್ರೋ ಪ್ರಮುಖ ಪಾತ್ರ ವಹಿಸಿದೆ. ಸದ್ಯ ನಮ್ಮ ಮೆಟ್ರೋ ಸೇವೆಯನ್ನು ಪ್ರತಿ ದಿನ ಸುಮಾರು 8 ಲಕ್ಷ ಮಂದಿ ಬಳಸಿಕೊಳ್ಳುತ್ತಿದ್ದಾರೆ. ಇದೀಗ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ( BMRCL) ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕ್ ಕೊಡಲು ಮುಂದಾಗಿದೆ ಎಂದು ವರದಿಯಾಗಿದೆ. ಹೆಚ್ಚುತ್ತಿರುವ ಕಾರ್ಯಾಚರಣೆ ವೆಚ್ಚ ಸೇರಿದಂತೆ ಹಲವು ವೆಚ್ಚಗಳು ಹೆಚ್ಚಾಗಿರುವ ಕಾರಣ ಟಿಕೆಟ್ ದರ ಹೆಚ್ಚಳಕ್ಕೆ ಬಿಎಂಆರ್ ಸಿಎಲ್ ಮುಂದಾಗಿದೆ ಎಂದು ಹೇಳಲಾಗಿದೆ.
ಪ್ರಯಾಣಿಕರು ಬೆಲೆ ಏರಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು, ಶೀಘ್ರದಲ್ಲೇ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಕ್ಟೋಬರ್ 3 ರಿಂದ ಅಕ್ಟೋಬರ್ 28ರ ನಡುವೆ 25 ದಿನಗಳ ಕಾಲ ಬಿಎಂಆರ್ ಸಿಎಲ್‌ನ ನಿಗದಿ ಸಮಿತಿಯು ಪ್ರಸ್ತಾವಿತ ದರ ಪರಿಷ್ಕರಣೆ ಕುರಿತು ಸಾರ್ವಜನಿಕ ಪ್ರತಿಕ್ರಿಯೆಯನ್ನು ಸಂಗ್ರಹಿಸಿದೆ. ಸಾರ್ವಜನಿಕರು ಪ್ರಯಾಣ ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.

ಪ್ರಸ್ತುತ ನಮ್ಮ ಮೆಟ್ರೋ ಪ್ರಯಾಣ ದರ ಕನಿಷ್ಠ 10 ರೂಪಾಯಿಗಳಿಂದ ಗರಿಷ್ಠ 60 ರೂಪಾಯಿಗಳಷ್ಟಿದೆ. ಆದರೆ ಈಗ ಪ್ರಸ್ತಾವನೆ ಮಾಡಿರುವ ಪ್ರಕಾರ ದರಗಳು 20 ಪ್ರತಿಶತ ಹೆಚ್ಚಾಗಬಹುದು ಎಂದು ಹೇಳಲಾಗಿದೆ. ಒಂದು ವೇಳೆ 20 ಪ್ರತಿಶತ ಹೆಚ್ಚಾದರೆ ಕನಿಷ್ಠ ದರ 15 ರೂಪಾಯಿಗಳಿಂದ ಗರಿಷ್ಠ ಪ್ರಯಾಣದರ 75 ರೂಪಾಯಿಗೆ ಏರಿಕೆಯಾಗಲಿದೆ.
ಆಗಸ್ಟ್ ತಿಂಗಳಿನಲ್ಲೇ ಬಿಎಂಆರ್ ಸಿಎಲ್ ಪ್ರಯಾಣ ದರ ಹೆಚ್ಚಳಕ್ಕೆ ಚಿಂತನೆ ಮಾಡಿತ್ತಾದರೂ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಪ್ರಸ್ತಾವನೆ ಕೈಬಿಟ್ಟಿತ್ತು. ಬಳಿಕ ಅಕ್ಟೋಬರ್ ತಿಂಗಳಿನಲ್ಲಿ ಮತ್ತೊಮ್ಮೆ ಬೆಲೆ ಏರಿಕೆ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಮಾಡಿದ್ದು, ಈಗ ಬೆಲೆ ಏರಿಕೆ ಅನಿವಾರ್ಯ ಎನ್ನಲಾಗಿದೆ.
ಅಧಿಕಾರಿಗಳ ವಾದವೇನು?
ಬಿಎಂಆರ್ ಸಿಎಲ್ ಮೆಟ್ರೋ ಜಾಲದಲ್ಲಿ ಚಾಲನೆ ಮತ್ತು ನಿರ್ವಹಣೆಯಲ್ಲಿ ವೆಚ್ಚಗಳು ದಿನಕಳೆದಂತೆ ಹೆಚ್ಚುತ್ತಿದ್ದು, ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಹೇಳಲಾಗಿದೆ. ಬಿಎಂಆರ್ ಸಿಎಲ್ ನಷ್ಟವನ್ನು ತಪ್ಪಿಸಿಕೊಳ್ಳಲು, ಕಾರ್ಯಾಚರಣೆ ಸುಸ್ಥಿರವಾಗಿಡಲು ಪ್ರಯಾಣ ದರ ಹೆಚ್ಚಳ ಮಾಡಬೇಕು ಎಂದು ಅಧಿಕಾರಿಗಳು ವಾದಿಸಿದ್ದಾರೆ ಎಂದು ವರದಿ ತಿಳಿಸಿದೆ.
ಪ್ರಸ್ತಾವಿತ ಬೆಲೆ ಏರಿಕೆಗೆ ಅನುಮೋದನೆ ದೊರಕಿದರೆ ಹೊಸ ಪ್ರಯಾಣ ದರ ಜಾರಿಗೆ ಬರುವ ಸಾಧ್ಯತೆ ಇದೆ. ಇದರಿಂದ ದೈನಂದಿನ ಪ್ರಯಾಣಿಕರಿಗೆ ಹೆಚ್ಚಿನ ಹೊರೆಯಾಗುವ ಸಾಧ್ಯತೆ ಇದೆ. ಲಕ್ಷಾಂತರ ಜನ ಮೆಟ್ರೋ ಸಂಚಾರವನ್ನು ಅವಲಂಬಿಸಿದ್ದು, ಬೆಲೆ ಏರಿಕೆ ಸಹಜವಾಗಿಯೇ ಅಸಮಾಧಾನಕ್ಕೆ ಕಾರಣವಾಗಿದೆ.
ನಾಗಸಂದ್ರ-ಮಾದಾವರ ನಡುವೆ ಮೆಟ್ರೋ ಸಂಚಾರ
ಹಸಿರು ಮಾರ್ಗದ ನಾಗಸಂದ್ರ-ಮಾದಾವರ ನಡುವಿನ ಮೆಟ್ರೋ ಸಂಚಾರ ನವೆಂಬರ್ 7ರಿಂದ ಆರಂಭವಾಗಲಿದೆ. 7 ವರ್ಷಗಳ ಕಾಮಗಾರಿ ಬಳಿಕ ನಾಗಸಂದ್ರ - ಮಾದಾವರ ನಡುವಿನ ಮೆಟ್ರೋ ಕಾಮಗಾರಿ ಮುಕ್ತಾಯವಾಗಿತ್ತು. ಕಳೆದ ಒಂದು ತಿಂಗಳ ಹಿಂದೆ ವಾಣಿಜ್ಯ ಕಾರ್ಯಾಚರಣೆಗೆ ಅನುಮೋದನೆ ಸಿಕ್ಕಿದ್ದರೂ ತಡವಾಗಿ ಮೆಟ್ರೋ ಸಂಚಾರ ಆರಂಭಿಸಲಾಗುತ್ತಿದೆ.


Click it and Unblock the Notifications