ಬೆಂಗಳೂರು, ಅಕ್ಟೋಬರ್ 05: ಉದ್ಯಾನ ನಗರಿ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆಯೇ?. ನಮ್ಮ ಮೆಟ್ರೋ ಕಾರ್ಯಾಚರಣೆಯನ್ನು ನೋಡಿಕೊಳ್ಳುವ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮೆಟ್ರೋ ಪ್ರಯಾಣದರವನ್ನು ಪರಿಷ್ಕರಣೆ ಮಾಡಲು ಮುಂದಾಗಿದೆ. ಈ ಕುರಿತು ಸಲಹೆ ಮತ್ತು ಸೂಚನೆಗಳನ್ನು ಆಹ್ವಾನಿಸಿದ್ದು, ಜನರು ಅಕ್ಟೋಬರ್ 21ರೊಳಗೆ ಸಲ್ಲಿಕೆ ಮಾಡಬೇಕಿದೆ.
ಈ ಕುರಿತು ಬಿಎಂಆರ್‌ಸಿಎಲ್ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿಯನ್ನು ನೀಡಿದೆ. ಈ ಪ್ರಕಟಣೆ ಮೆಟ್ರೋ ರೈಲು ದರ ನಿಗದಿ ಸಮಿತಿಯು ಮೆಟ್ರೋ ದರಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಲಹೆಗಳನ್ನು ಆಹ್ವಾನಿಸಿದೆ. ನಿಮ್ಮ ಸಹಕಾರ ಸ್ವಾಗತಾರ್ಹ ಎಂದು ಹೇಳಿದೆ. ನಿಮ್ಮ ಸಲಹೆಗಳನ್ನು [email protected] ಗೆ ಇಮೇಲ್ ಮೂಲಕ ಅಥವಾ ಅಂಚೆ ಮೂಲಕವು ಸಲ್ಲಿಸಬಹುದು ಎಂದು ತಿಳಿಸಿದೆ.

ಅಂಚೆ ಮೂಲಕ ಸಲಹೆ/ ಸೂಚನೆ ನೀಡುವವರು ಅಧ್ಯಕ್ಷರು, ಬಿಎಂಆರ್ ಸಿಎಲ್‌ನ 1ನೇ ದರ ನಿಗದಿ ಸಮಿತಿ, 3ನೇ ಮಹಡಿ, ಸಿ-ಬ್ಲಾಕ್, ಬಿಎಂಟಿಸಿ ಸಂಕೀರ್ಣ, ಕೆ. ಹೆಚ್. ರಸ್ತೆ, ಶಾಂತಿನಗರ, ಬೆಂಗಳೂರು- 560027 ವಿಳಾಸಕ್ಕೆ ಸಲ್ಲಿಸಬೇಕು.
ಅಧ್ಯಕ್ಷರು, ಬಿಎಂಆರ್‌ಸಿಎಲ್‌ನ 1ನೇ ದರ ನಿಗದಿ ಸಮಿತಿ ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ನಿಮ್ಮ ಪ್ರತಿಕ್ರಿಯೆ/ ಸಲಹೆಯನ್ನು 21.10.2024 ರೊಳಗೆ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ದರ ಏರಿಕೆ ಆಗಿದ್ದು ಯಾವಾಗ?; ಬೆಂಗಳೂರು ನಗರದಲ್ಲಿ ಕೊನೆಯ ಬಾರಿಗೆ ನಮ್ಮ ಮೆಟ್ರೋ ಪ್ರಯಾಣದರ ಏರಿಕೆಯಾಗಿದ್ದು, 2017ರಲ್ಲಿ. ನಮ್ಮ ಮೆಟ್ರೋ ಯೋಜನೆಯ ಹಂತ-1 ಸಂಪೂರ್ಣ ಕಾರ್ಯಾಚರಣೆ ಆರಂಭವಾದಾಗ ಶೇ 10-15ರಷ್ಟು ದರಗಳನ್ನು ಏರಿಕೆ ಮಾಡಲಾಗಿತ್ತು. ಬಳಿಕ ದರ ಏರಿಕೆ ಮಾಡಿಲ್ಲ. ಆದ ಕಾರಣ ಈಗ ಪ್ರಯಾಣದರ ಹೆಚ್ಚಳಕ್ಕೆ ಚಿಂತನೆ ನಡೆಸಲಾಗುತ್ತಿದೆ.
ಬಿಎಂಆರ್‌ಸಿಎಲ್ ದರ ನಿಗದಿ ಕುರಿತು ಅಂತಿಮ ತೀರ್ಮಾನವನ್ನು ಕೈಗೊಳ್ಳಲು 1ನೇ ದರ ನಿಗದಿ ಸಮಿತಿಯನ್ನು ರಚನೆ ಮಾಡಿದೆ. ಮೆಟ್ರೋ ರೈಲು (ಕಾರ್ಯಾಚರಣೆ & ನಿರ್ವಹಣೆ) ನಿಯಮ, 2002ರ ಸೆಕ್ಷನ್ 33 ಮತ್ತು 34ರ ಅಡಿ ಈ ಸಮಿತಿಯನ್ನು ರಚನೆ ಮಾಡಲಾಗಿದೆ. ಈ ಸಮಿತಿಗೆ ಕಾನೂನು ಪ್ರಕಾರ ಎಲ್ಲಾಅಧಿಕಾರವನ್ನು ನೀಡಲಾಗಿದೆ.
ಪ್ರಯಾಣಿಕರು, ಸಂಘ ಸಂಸ್ಥೆಗಳು, ತಜ್ಞರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಬಿಎಂಆರ್‌ಸಿಎಲ್‌ನ 1ನೇ ದರ ನಿಗದಿ ಸಮಿತಿ ನಮ್ಮ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡುವ ಕುರಿತು ಬಿಎಂಆರ್‌ಸಿಎಲ್‌ಗೆ ಅಂತಿಮ ಶಿಫಾರಸು ಮಾಡಲಿದೆ. ಬಳಿಕ ಬಿಎಂಆರ್‌ಸಿಎಲ್ ಸರ್ಕಾರದ ಒಪ್ಪಿಗೆಯನ್ನು ಪಡೆದು, ದರವನ್ನು ಏರಿಕೆ ಮಾಡಲಿದೆ.
ಈ ಕುರಿತು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾತನಾಡಿದ್ದು, "ಬಿಎಂಆರ್‌ಸಿಎಲ್‌ನ 1ನೇ ದರ ನಿಗದಿ ಸಮಿತಿಗೆ ನಾವು ಮೆಟ್ರೋ ಪ್ರಯಾಣ ದರದ ಏರಿಕೆಯ ಕುರಿತು ಮನವಿ ಸಲ್ಲಿಸಿದ್ದೇವೆ. ನಾವು ನೀಡುವ ಸೇವೆಗೆ ಅನುಗುಣವಾಗಿ ದರ ಏರಿಕೆ ಮಾಡಲಾಗುತ್ತದೆ. ನಾವು ಶೇ 15-25ರಷ್ಟು ದರ ಏರಿಕೆ ನಿರೀಕ್ಷೆಯಲ್ಲಿದ್ದೇವೆ, ಇದು ನಮ್ಮ ಆದಾಯ ಹೆಚ್ಚಳಕ್ಕೂ ಸಹಕಾರಿಯಾಗಲಿದೆ" ಎಂದು ಹೇಳಿದ್ದಾರೆ.
ಪ್ರಸ್ತುತ ನಮ್ಮ ಮೆಟ್ರೋ ಕನಿಷ್ಠ ಪ್ರಯಾಣ ದರ 10 ರೂ. ಮತ್ತು ಗರಿಷ್ಠ ಪ್ರಯಾಣ ದರ 60 ರೂ. ಇದೆ. ಸ್ಮಾರ್ಟ್ ಕಾರ್ಡ್ ಬಳಕೆದಾರರು ಶೇ 5ರಷ್ಟು ರಿಯಾಯಿತಿ ಪಡೆಯುತ್ತಾರೆ, ಅದನ್ನು ಸಹ 2020ರಲ್ಲಿ ಶೇ 15ರಷ್ಟು ಕಡಿಮೆ ಮಾಡಲಾಗಿತ್ತು.
2017ರಲ್ಲಿ ನಮ್ಮ ಮೆಟ್ರೋ ಯೋಜನೆಯ ಹಂತ-1 42 ಕಿ. ಮೀ. ಮೆಟ್ರೋ ರೈಲು ಸಂಚಾರ ಆರಂಭವಾಗಿತ್ತು. ಆಗ ಶೇ 10-15ರಷ್ಟು ಪ್ರಯಾಣ ದರವನ್ನು ಏರಿಕೆ ಮಾಡಲಾಗಿತ್ತು. ಈಗ ಮೆಟ್ರೋ ಜಾಲ 73 ಕಿ. ಮೀ.ಗೆ ವಿಸ್ತರಣೆಯಾಗಿದೆ. ಇದರಲ್ಲಿ ನೇರಳೆ ಮಾರ್ಗದ (ಚಲ್ಲಘಟ್ಟ-ವೈಟ್‌ಫೀಲ್ಡ್ 42.17 ಕಿ. ಮೀ. 37 ನಿಲ್ದಾಣ) ಮತ್ತು ಹಸಿರು ಮಾರ್ಗದ (ನಾಗಸಂದ್ರ-ರೇಷ್ಮೆ ಸಂಸ್ಥೆ 30 ಕಿ. ಮೀ. 29 ನಿಲ್ದಾಣ) ಸೇರಿದೆ.
ಸದ್ಯ ಇರುವ ನಿಯಮಗಳ ಪ್ರಕಾರ ಪ್ರತಿ ಎರಡು ವರ್ಷಕ್ಕೊಮ್ಮೆ ನಮ್ಮ ಮೆಟ್ರೋ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಬೇಕಿದೆ. ಜಾಲ ವಿಸ್ತರಣೆ, ಮೂರು ಬೋಗಿಯಿಂದ 6 ಬೋಗಿ ರೈಲನ್ನು ಮಾಡಿರುವ ಕಾರಣ ನಿರ್ವಹಣೆ ವೆಚ್ಚವೂ ಅಧಿಕವಾಗಿದೆ. ಪಾರ್ಕಿಂಗ್ ಶುಲ್ಕದ ಹಿನ್ನಲೆಯಲ್ಲಿಯೂ ಈಗ ಪ್ರಯಾಣ ದರ ಏರಿಕೆ ಮಾಡಿದರೆ ಜನರ ಆಕ್ರೋಶಕ್ಕೆ ಗುರಿಯಾಗುವ ಸಾಧ್ಯತೆ ಇದೆ.
ಅಕ್ಟೋಬರ್ ಅಂತ್ಯಕ್ಕೆ ಹಸಿರು ಮಾರ್ಗದ ನಾಗಸಂದ್ರ-ಮಾದಾವರ 3 ಕಿ. ಮೀ. ವಿಸ್ತರಿತ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ. ಆಗ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಪ್ರತಿದಿನ 8-9 ಲಕ್ಷ ಆಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. 2024ರ ಡಿಸೆಂಬರ್‌ನಲ್ಲಿ ಆರ್. ವಿ. ರಸ್ತೆ-ಬೊಮ್ಮಸಂದ್ರ 19.15 ಕಿ. ಮೀ. ಹಳದಿ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications