ಬೆಂಗಳೂರು, ಅಕ್ಟೋಬರ್ 28: ವಾಯುಭಾರ ಕುಸಿತದ ಪರಿಣಾಮ ಎರಡು ವಾರಗಳ ಕಾಲ ಬೆಂಗಳೂರು ನಗರದಲ್ಲಿ ಸುರಿದ ಮಳೆ ಭಾರೀ ಅವಾಂತರಕ್ಕೆ ಕಾರಣವಾಗಿದೆ. ಅಲ್ಲದೇ ಬೆಂಗಳೂರು ನಗರದ ರಸ್ತೆಗಳಲ್ಲಿ ನೀರು ತುಂಬಿಕೊಂಡು ಜನರು ಬೈಕ್, ಕಾರುಗಳನ್ನು ಬಿಟ್ಟು ಬಸ್, ನಮ್ಮ ಮೆಟ್ರೋ ಏರಿದ್ದರು. ಇದರಿಂದಾಗಿ ಬಸ್, ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ ಮೆಟ್ರೋ ಆದಾಯದಲ್ಲಿಯೂ ಏರಿಕೆಯಾಗಿದೆ.
ಕಳೆದ ವರ್ಷದ ಅಕ್ಟೋಬರ್ ಮತ್ತು ಈ ವರ್ಷದ ಅಕ್ಟೋಬರ್ ತಿಂಗಳ ನಮ್ಮ ಮೆಟ್ರೋ ಆದಾಯವನ್ನು ನೋಡಿದಾಗ ಮಳೆಯ ಕಾರಣ ಜನರು ಹೆಚ್ಚಾಗಿ ನಮ್ಮ ಮೆಟ್ರೋ ಬಳಕೆ ಮಾಡಿರುವುದು ತಿಳಿದುಬರುತ್ತಿದೆ. ಆದರೆ ಈಗ ಮೂರು ದಿನದಿಂದ ನಗರದಲ್ಲಿ ಮಳೆ ಕಡಿಮೆಯಾಗಿದ್ದು, ಜನರು ಮತ್ತೆ ಖಾಸಗಿ ವಾಹನಗಳ ಮೊರೆ ಹೋಗಿದ್ದಾರೆ.

ಅಂಕಿ ಸಂಖ್ಯೆಗಳ ಮಾಹಿತಿಯಂತೆ 2023ರ ಅಕ್ಟೋಬರ್ ತಿಂಗಳ 23 ದಿನದಲ್ಲಿ ನಮ್ಮ ಮೆಟ್ರೋಗೆ 39.12 ಕೋಟಿ ರೂ. ಆದಾಯ ಬಂದಿತ್ತು. ಈ ವರ್ಷ ಇದೇ ಅವಧಿಯಲ್ಲಿ 48.35 ಕೋಟಿ ರೂ. ಆದಾಯ ಬಂದಿದೆ. ಸುಮಾರು 9.22 ಕೋಟಿ ರೂ. ಆದಾಯ ಹೆಚ್ಚಾಗಿದೆ.
ಕಳೆದ ವರ್ಷ ಅಕ್ಟೋಬರ್ 1 ರಿಂದ 24ರ ತನಕ 1.25 ಕೋಟಿ ಜನರು ನಮ್ಮ ಮೆಟ್ರೋದಲ್ಲಿ ಸಂಚಾರವನ್ನು ನಡೆಸಿದ್ದರು. 2024ರಲ್ಲಿ 1.85 ಕೋಟಿ ಜನರು ಸಂಚಾರ ನಡೆಸಿದ್ದಾರೆ. ಹೆಚ್ಚಿನ ಜನರು ಮೆಜೆಸ್ಟಿಕ್‌ನಿಂದ ಬೇರೆ ಬೇರೆ ಕಡೆಗೆ ಸಂಚಾರ ನಡೆಸಿದ್ದಾರೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ಈ ವರ್ಷ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಹೊಸ ಹೊಸ ದಾಖಲೆಗಳನ್ನು ಮಾಡುತ್ತಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರತಿ ದಿನ ನಮ್ಮ ಮೆಟ್ರೋದಲ್ಲಿ ಸಂಚಾರ ನಡೆಸುವ ಜನರ ಸಂಖ್ಯೆ ಏರಿಕೆಯಾಗಿ ಹೊಸ ದಾಖಲೆ ಬರೆದಿತ್ತು. ಬಿಎಂಆರ್‌ಸಿಎಲ್ ಪ್ರಕಾರ ಆಗಸ್ಟ್ 14ರಂದು ಒಂದೇ ದಿನ ನಮ್ಮ ಮೆಟ್ರೋದಲ್ಲಿ 9.17 ಲಕ್ಷ ಜನರು ಸಂಚಾರವನ್ನು ನಡೆಸಿದ್ದರು. ಅದರಕ್ಕೂ ಹಿಂದಿನ ವಾರ 8 ಲಕ್ಷ ಜನರು ಸಂಚರಿಸಿದ್ದರು.
ಆಗಸ್ಟ್ 14ರಂದು ನೇರಳೆ ಮಾರ್ಗದಲ್ಲಿ 4,43,343 ಜನರು, ಹಸಿರು ಮಾರ್ಗದಲ್ಲಿ 3,01,775 ಜನರು ಸೇರಿ 9,17,365 ಜನರು ಸಂಚಾರವನ್ನು ನಡೆಸಿದ್ದರು. ಇಂಟರ್ ಚೇಂಜ್ ನಿಲ್ದಾಣದ ಮೂಲಕ 1,72,247 ಜನರು ಸಂಚಾರವನ್ನು ನಡೆಸಿದ್ದರು.
ನೇರಳೆ ಮಾರ್ಗದ ವಿಸ್ತರಣೆ, ಮಳೆಗಾಲ, ಬೆಂಗಳೂರು ನಗರದ ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಹೆಚ್ಚು ಹೆಚ್ಚು ಜನರು ನಮ್ಮ ಮೆಟ್ರೋವನ್ನು ಬಳಕೆ ಮಾಡುತ್ತಿದ್ದಾರೆ. ಅಲ್ಲದೇ ಬಿಎಂಟಿಸಿ ಸಹ ಮೆಟ್ರೋ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಫೀಡರ್ ಬಸ್ ಸೇವೆಯನ್ನು ನೀಡುತ್ತಿದ್ದು, ಅವುಗಳು ಜನರಿಗೆ ಸಹಕಾರಿಯಾಗಿವೆ.
ಈಗಾಗಲೇ ಬಿಎಂಆರ್‌ಸಿಎಲ್ ನಾಗಸಂದ್ರ-ಮಾದವರ ನಡುವೆ ನಮ್ಮ ಮಟ್ರೋ ಸೇವೆ ಆರಂಭಿಸಲು ತಯಾರಿ ನಡೆಸಿದೆ. ಕರ್ನಾಟಕ ಸರ್ಕಾರ ಉದ್ಘಾಟನೆ ದಿನಾಂಕ ನಿಗದಿ ಮಾಡಿದರೆ ಮೆಟ್ರೋ ಸೇವೆ ಆರಂಭವಾಗಲಿದೆ. ಆಗ ಹಸಿರು ಮಾರ್ಗದಲ್ಲಿ ಮೂರು ನಿಲ್ದಾಣಗಳು ಸೇವೆಗೆ ಸೇರಲಿದ್ದು, ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರು ನಗರದ ನಮ್ಮ ಮೆಟ್ರೋದ ಬಹು ನಿರೀಕ್ಷಿತ ಮಾರ್ಗ ಆರ್. ವಿ. ರಸ್ತೆ-ಬೊಮ್ಮಸಂದ್ರ (ಹಳದಿ ಮಾರ್ಗ). ಡಿಸೆಂಬರ್ ಅಂತ್ಯ ಅಥವ 2025ರ ಜನವರಿಯಲ್ಲಿ ಈ ಮಾರ್ಗ ಉದ್ಘಾಟನೆಯಾಗುವ ನಿರೀಕ್ಷೆ ಇದೆ. ಇದರಿಂದಾಗಿ ನಮ್ಮ ಮೆಟ್ರೋ ಪ್ರತಿದಿನದ ಪ್ರಯಾಣಿಕರ ಸಂಖ್ಯೆ 10 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ. ಈ ಮಾರ್ಗ ಉದ್ಘಾಟನೆಯಾದರೆ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.


Click it and Unblock the Notifications