ರಾಜ್ಯ ರಾಜಧಾನಿ ಬೆಂಗಳೂರು ಬೆಳವಣಿಗೆಯತ್ತ ಸಾಗುತ್ತಿದೆ. ಅದರಲ್ಲಿಯೂ ವಾಯುವ್ಯ ಕಾರಿಡರ್‍ನ ಅಭಿವೃದ್ಧಿ ಕೇಳೋದೇ ಬೇಡ. ತುಮಕೂರು ರಸ್ತೆ ಪ್ರದೇಶವು ಕೂಡ ಭಾರೀ ವಾಣಿಜ್ಯ ಮತ್ತು ವಸತಿ ವೃದ್ಧಿಯನ್ನು ಕಾಣಲಿರುವ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. ಬೆಂಗಳೂರಿನ ಬೆಳವಣಿಗೆ ಕಣ್ಣು ಕುಕ್ಕುವಂತಿದೆ. ದಿನೇ ದಿನೆ ಕಟ್ಟಡಗಳು ತಲೆಎತ್ತಿ ನಿಲ್ಲುತ್ತಿವೆ. ಹೊಸ ಹೊಸ ಸ್ಟಾರ್ಟ್‌ಅಪ್‌ಗಳಿಗೆ ಬೆಂಗಳೂರು ಹೇಳಿ ಮಾಡಿಸಿದ ಜಾಗದಂತಿದೆ. ಇದೀಗ ಬೆಂಗಳೂರು 2030ರ ವೇಳೆಗೆ ಎಷ್ಟರ ಮಟ್ಟಕ್ಕೆ ಬೆಳೆಯುತ್ತದೆ. ಆಗ ಭೂಮಿ ಬೆಲೆ ಎಷ್ಟಾಗಿರುತ್ತದೆ ಎಂಬುದರ ಕುರಿತು ಬ್ರಿಗೇಡ್ ಗ್ರೂಪ್ ಮತ್ತು ಮೆರಾಕಿ ಅಡ್ವೈಸರಿ ಸಮೀಕ್ಷೆಯೊಂದನ್ನು ನಡೆಸಿ ವರದಿ ತಯಾರಿಸಿದೆ.

ಬ್ರಿಗೇಡ್ ಗ್ರೂಪ್ ಮತ್ತು ಮೆರಾಕಿ ಅಡ್ವೈಸರಿ ನಡೆಸಿದ ಸಮೀಕ್ಷೆಯ ಪ್ರಕಾರ, 2030ರ ವೇಳೆಗೆ ಈ ಭಾಗದಲ್ಲಿ 16 ರಿಂದ 19 ಮಿಲಿಯನ್ ಚದರ ಅಡಿ ವಾಣಿಜ್ಯ ಜಾಗ ಲಭ್ಯವಾಗುವ ನಿರೀಕ್ಷೆ ಇದೆ. ಅಲ್ಲದೇ ಇದರ ಅನುಸಾರವಾಗಿ 5 ರಿಂದ 8 ಮಿಲಿಯನ್ ಚದರ ಅಡಿ ವ್ಯಾಪ್ತಿಯ, ಹೊಸ ಕಚೇರಿ ಜಾಗದ ಮೇಲೂ ಬೇಡಿಕೆ ಗಣನೀಯವಾಗಿ ಹೆಚ್ಚುತ್ತವೆ. ಈ ಬೆಳವಣಿಗೆಯು ಉದ್ಯಮ, ವಾಣಿಜ್ಯ ಮತ್ತು ವಸತಿ ಕ್ಷೇತ್ರಗಳ ಅಭಿವೃದ್ಧಿಗೆ ಹೊಸ ಆಯಾಮವನ್ನು ನೀಡಲಿದೆ.
ಇನ್ನು ಈ ಕಾರಿಡಾರ್ ಪ್ರದೇಶವು ಪೂರ್ವಾಭ್ಯಾಸದಲ್ಲಿ ಬೃಹತ್ ವ್ಯಾಪಾರಿಕ ವಲಯಗಳಾದ ಮಿನಿ-ಸಿಎಬಿಡಿ ಸ್ಥಳಗಳಂತೆ ಬೆಳೆಯುತ್ತಿದೆ. ಈ ಕಾರಣದಿಂದ ಹೊಸ ಉದ್ಯೋಗಾವಕಾಶಗಳು, ಆಧುನಿಕ ಕಚೇರಿ ಸಂಕೀರ್ಣಗಳು ಮತ್ತು ವ್ಯಾಪಾರ ಕೇಂದ್ರಗಳು ಹೊರಹೊಮ್ಮುವ ಸಾಧ್ಯತೆಗಳು ಹೆಚ್ಚಾಗಿವೆ. ಬೆಂಗಳೂರಿನಲ್ಲಿ ವೇಗವಾಗಿ ಬೆಳೆಯುತ್ತಿರುವ ದ್ವಿತೀಯ ವ್ಯಾಪಾರ ಜಿಲ್ಲೆಗಳ ಪೈಕಿ ವಾಯುವ್ಯ ಕಾರಿಡಾರ್ ಪ್ರಮುಖವಾಗಿದ್ದು, ಮುಂದಿನ ವರ್ಷಗಳಲ್ಲಿ ಇಲ್ಲಿನ ಆರ್ಥಿಕ ಬೆಳವಣಿಗೆಯು ಇನ್ನಷ್ಟು ತ್ವರಿತಗೊಳ್ಳಲಿದೆ.
ವಸತಿ ಭೂಮಿಯ ಮೌಲ್ಯ:
ಇನ್ನು 2030ರ ವೇಳೆಗೆ ವಾಯುವ್ಯ ಬೆಂಗಳೂರಿನಲ್ಲಿ ಸುಮಾರು ಹತ್ತು ಸಾವಿರ ಹೊಸ ವಸತಿ ಘಟಕಗಳ ಅಗತ್ಯತೆ ಉಂಟಾಗುತ್ತದೆ. ಹೀಗಾಗಿ ಈ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್‌ಗಳು, ಗೇಟೆಡ್ ಸಮುದಾಯಗಳುಮತ್ತು ಸ್ವತಂತ್ರ ಮನೆಗಳ ಅಭಿವೃದ್ಧಿಗೆ ವೇದಿಕೆ ಸಿದ್ಧವಾಗಲಿದೆ.
ಅಂದಹಾಗೆ ಕಳೆದ ದಶಕದಲ್ಲಿ ಈ ಪ್ರದೇಶಗಳಲ್ಲಿದ್ದ ವಸತಿ ಬಂಡವಾಳದ ಬೆಲೆಗಳು, ಶೇ. 7 ರಷ್ಟು ಹೆಚ್ಚಳವಾಗಿದೆ. ಜೊತೆಗೆ ಭೂಮಿಯ ಮೌಲ್ಯ ಕೂಡ ವರ್ಷಕ್ಕೊಮ್ಮೆ ಶೇ. 10 ರಷ್ಟು ಹೆಚ್ಚಾಗುವ ನಿರೀಕ್ಷೆ ಕಂಡು ಬಂದಿದ್ದು, ಇದು ಭೂಮಿ ಮತ್ತು ಆಸ್ತಿ ಹೂಡಿಕೆದಾರರಿಗೆ ಉಚಿತ ಅವಕಾಶಗಳನ್ನು ನೀಡುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಶ್ರೀಮಂತರು ಆತ್ರ ನೆಲೆಸುವ ತಾಣವಾಗುತ್ತಾ ಎಂಬ ಭೀತಿ ಎದುರಾಗುತ್ತಿದೆ.
ಇನ್ನು ಹೆಬ್ಬಾಳ ಮತ್ತು ಬೆಂಗಳೂರಿನ ಕೇಂದ್ರ ಭಾಗಗಳಿಗೆ ಹೋಲಿಕೆ ಮಾಡಿದರೆ, ತುಮಕೂರು ರಸ್ತೆ ಮತ್ತು ವಾಯುವ್ಯ ಬೆಂಗಳೂರು ವ್ಯಾಪಾರ ಮತ್ತು ವಸತಿ ಹೂಡಿಕೆದಾರರಿಗೆ ಹೆಚ್ಚಿನ ಲಾಭದಾಯಕ ಆಯ್ಕೆಯಾಗಿದೆ. ಹಾಗೆಯೇ ಇಲ್ಲಿನ ಬೆಲೆಗಳು ಹಿತವಾಗಿರುವುದರಿಂದ, ಇಲ್ಲಿ ಉದ್ಯಮಿಗಳಿಗೆ ಹಾಗೂ ಉದ್ಯೋಗಸ್ಥರಿಗೆ ಆಕರ್ಷಕವಾಗಿ ಪರಿಣಮಿಸುತ್ತಿದೆ. ವೆಚ್ಚ-ಪರಿಣಾಮಕಾರಿತ್ವದ ಜೊತೆಗೆ ಮೆಟ್ರೋ ಸಂಪರ್ಕ, ವಿಸ್ತರಿತ ರಸ್ತೆ ಜಾಲ, ತಂತ್ರಜ್ಞಾನ ಉದ್ಯಾನಗಳು ಮತ್ತು ಕೈಗಾರಿಕಾ ವಲಯಗಳ ಬೆಳವಣಿಗೆಯು ಈ ಪ್ರದೇಶದ ಮೌಲ್ಯವನ್ನು ಹೆಚ್ಚಿಸುತ್ತಿದೆ.
ಅಂದಹಾಗೆ ಈ ಪ್ರದೇಶದಲ್ಲಿ ವಾಣಿಜ್ಯ ಮತ್ತು ಕಚೇರಿ ಕ್ಷೇತ್ರಗಳ ಬೇಡಿಕೆ ಹೆಚ್ಚಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಇಲ್ಲಿನ ಸೀಮಿತ ಜಾಗ ಮತ್ತು ಕಡಿಮೆ ಪೂರೈಕೆಯಾಗಿದೆ. ಅಲ್ಲದೇ ಇಲ್ಲಿ ಬೆಂಗಳೂರಿನ ಪ್ರಮುಖ ವ್ಯಾಪಾರಿಕ ಕೇಂದ್ರಗಳು ಈಗಾಗಲೇ ತುಂಬಿಹೋಗಿರುವುದು ಕೂಡ ಒಂದು ಕಾರಣವಾಗಿದೆ. ಅಂದರೆ ನೂತನ ಉದ್ಯಮಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳು ಹೊಸ ವಾಣಿಜ್ಯ ಸ್ಥಳಗಳಿಗೆ ಹುಡುಕಾಟ ನಡೆಸುತ್ತಿವೆ. ವಾಯುವ್ಯ ಬೆಂಗಳೂರು, ಮುಖ್ಯವಾಗಿ ತುಮಕೂರು ರಸ್ತೆ, ಯಲಹಂಕ ಮತ್ತು ನೆಲಮಂಗಲ ಪ್ರದೇಶಗಳು, ವೇಗವಾಗಿ ಹೊಸ ಉದ್ಯೋಗ ಕೇಂದ್ರಗಳಾಗಿ ಬೆಳೆಯುತ್ತಿರುವುದರಿಂದ ಇವು ಇನ್ನಷ್ಟು ಆಕರ್ಷಕ ಮಾರುಕಟ್ಟೆಗಳಾಗಲಿವೆ.
ಒಟ್ಟಿನಲ್ಲಿ ವಾಯುವ್ಯ ಬೆಂಗಳೂರು ದಿನೇದಿನೆ ಪ್ರಗತಿಯತ್ತ ಸಾಗುತ್ತಿದೆ. ಬೆಂಗಳೂರಿನ ಹೊಸ ಆರ್ಥಿಕ ಬೆಳವಣಿಗೆ ಕೇಂದ್ರವಾಗಿ ಹೊರ ಹೊಮ್ಮುತ್ತಿದೆ. ಹಾಗೆಯೇ ಇದು 2030ರ ವೇಳೆಗೆ ವಾಣಿಜ್ಯ ಮತ್ತು ವಸತಿ ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದ ಅಭಿವೃದ್ಧಿ ಕಾಣಲಿದೆ. ಮುಂದಿನ ವರ್ಷಗಳಲ್ಲಿ ಮೆಟ್ರೋ ಸಂಪರ್ಕ, ರಸ್ತೆ ವಿಸ್ತರಣೆ ಮತ್ತು ಹೊಸ ಉದ್ಯಮ ವಲಯಗಳ ಏರಿಕೆ ಈ ಪ್ರದೇಶವನ್ನು ನಗರೀಕರಣದ ಪ್ರಮುಖ ಕೇಂದ್ರೀಕೃತ ಸ್ಥಳವನ್ನಾಗಿ ಪರಿವರ್ತಿಸಲಿದೆ.


Click it and Unblock the Notifications