ಮನೆಯಲ್ಲಿರುವ ಒಣ ಕಸ, ಹಸಿ ಕಸಗಳನ್ನು ಬುಟ್ಟಿಯಲ್ಲಿ ಹಾಕಿ ನಂತರ ಕಸದ ಗಾಡಿ ಬಂದಾಗ ಅದಕ್ಕೆ ಹಾಕಬೇಕು. ಈ ಬಗ್ಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA), ಹಿಂದಿನ ಮಹಾನಗರ ಪಾಲಿಕೆ ಹಲವು ಬಾರಿ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಆದ್ರೆ ಎಷ್ಟೇ ಸೂಚನೆ, ಎಚ್ಚರಿಕೆ ನೀಡಿದರೂ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ (Trash) ಎಸೆಯುತ್ತಲೇ ಇದ್ದಾರೆ. ಎಲ್ಲಿ ನೋಡಿದರೂ ಕಸಗಳೇ ಕಾಣುತ್ತಿದೆ. ಇದಕ್ಕೆಲ್ಲಾ ಬ್ರೇಕ್ ಯಾವಾಗ ಎಂದು ಕೇಳುತ್ತಿದ್ದವರಿಗೆ ಇದೀಗ, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ಕಸ ಸುರಿಯುವ ಹಬ್ಬಕ್ಕೆ ಮುಂದಾದ ಜಿಬಿಎ!
ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿಯಲ್ಲಿ (GBA) ಬರುವ ಬೆಂಗಳೂರು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಇದೀಗ ಎಲ್ಲೆಂದರಲ್ಲಿ ಕಸ ಹಾಕುವವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದೆ. ಅದಕ್ಕಾಗಿ "ಕಸ ಸುರಿಯುವ ಹಬ್ಬ" ಎಂಬ ಅಭಿಯಾನವನ್ನು ಶುರು ಮಾಡಿದೆ. ಇದು ಎಲ್ಲೆಂದರಲ್ಲಿ ಕಸ ಬಿಸಾಡುವವರಿಗಾಗಿ ಬುದ್ಧಿ ಕಲಿಸಲು ಶುರು ಮಾಡಿದ ಅಭಿಯಾನವಾಗಿದೆ.
ಮನೆ ಮುಂದೆ ಕಸ, ಸಾವಿರಗಟ್ಟಲೆ ದಂಡ!
ಈಗಾಗಲೇ ಬೆಂಗಳೂರಿನ ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಈ ಅಭಿಯಾನ ಶುರುವಾಗಿದ್ದು, ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದವರ ಮನೆಗಳನ್ನು ಪತ್ತೆ ಹಚ್ಚಿ, ಅವರ ಮನೆ ಮುಂದೆಯೇ ಪಾಲಿಕೆಯ ಗಾಡಿ ಹೋಗಿ ಕಸ ಹಾಕಿದೆ. ಅಷ್ಟೇ ಅಲ್ಲದೇ ದಂಡ ವಿಧಿಸಲಾಗಿದೆ. ಬಳಿಕ ಇನ್ಮುಂದೆ ಸಿಕ್ಕ ಸಿಕ್ಕಲ್ಲಿ ಕಸ ಹಾಕದಂತೆ, ಪಾಲಿಕೆಯಿಂದ ಬರುವ ಗಾಡಿಗಳಿಗೆ ಕಸ ಬೇರ್ಪಡಿಸಿ ಹಾಕಬೇಕೆಂದು ಜಾಗೃತಿ ಮೂಡಿಸಲಾಗಿದೆ. ಇನ್ನು ಕಸ ಬಿಸಾಡಿದವರಿಗೆ 500 ರೂ. ನಿಂದ 2 ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತದೆ ಎನ್ನಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಈಗಾಗಲೇ ಅಧಿಕಾರಿಗಳು ಮನೆ ಮುಂದೆ ಹೋಗಿ ಕಸ ಹಾಕಿ, ದಂಡ ವಿಧಿಸಿರುವ ವಿಡಿಯೋ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೇ ಎಲ್ಲೆಂದರಲ್ಲಿ ಕಸ ಹಾಕುವ ಮುನ್ನ ಯೋಚಿಸಿ ಎಂದು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.ಇನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಕರೀ ಗೌಡ, ಈ ಅಭಿಯಾನದ ಬಗ್ಗೆ ಮಾತನಾಡಿದ್ದು, ಡಿಕೆ ಶಿವಕುಮಾರ್ ಅವರ ಸೂಚನೆಯಂತೆ ಇದೀಗ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಹೊಸ ಅಭಿಯಾ ಕೈಗೊಳ್ಳಲಾಗಿದೆ.
ಈ ಅಭಿಯಾನದ ಪ್ರಕಾರ, ಮಾರ್ಷಲ್‌ಗಳು ಹೋಗಿ ಸಿಕ್ಕ ಸಿಕ್ಕಲ್ಲಿ ಯಾರೆಲ್ಲಾ ಕಸ ಬಿಸಾಡುತ್ತಾರೋ, ಅವರ ವಿಡಿಯೋ ಮಾಡಿದ್ದಾರೆ. ಅಲ್ಲದೇ ಅವರ ಫೋನ್ ನಂಬರ್ ಮತ್ತು ಮನೆಯನ್ನೂ ಟ್ರ್ಯಾಕ್ ಮಾಡಿದ್ದಾರೆ. ಅದೇ ಕಾರಣದಿಂದ ಅವರ ಮನೆಗೆ ಹೋಗಿ ಸರಿಯಾಗಿ ಜಾಗೃತಿ ಮೂಡಿಸಿದ್ದೇವೆ ಎಂದು ಹೇಳಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬಂದ ನಂತರ ಕಸ ಎಸೆಯುವವರ ವಿರುದ್ಧ ತೆಗೆದುಕೊಂಡ ವಿಶೇಷ ಅಭಿಯಾನ ಇದಾಗಿದ್ದು, ಜನರಿಗೆ ಜಾಗೃತಿ ಮೂಡಿಸುವುದರ ಜೊತೆಗೆ, ಎಚ್ಚರಿಕೆಯನ್ನೂ ನೀಡುವಂತಾಗಿದೆ.


Click it and Unblock the Notifications