ಬೆಂಗಳೂರು ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಡಿಸೆಂಬರ್ 31ರಂದು ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಬೆಂಗಳೂರು ನಗರ ಪೊಲೀಸರು ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ. ಈ ಮಾರ್ಗಸೂಚಿಗಳ ಪ್ರಕಾರ, ಹೊಸ ವರ್ಷದ ಆಚರಣೆಯಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಗರದಾದ್ಯಂತ ನಡೆಯುವ ಹೋಟೆಲ್, ಪಬ್, ಕ್ಲಬ್, ಬಾರ್, ರೆಸ್ಟೋರೆಂಟ್ ಹಾಗೂ ಇತರ ಕಾರ್ಯಕ್ರಮ ಸ್ಥಳಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಹಾಗೂ ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸುವುದು ಈ ಕ್ರಮಗಳ ಮುಖ್ಯ ಉದ್ದೇಶವಾಗಿದೆ.

ಹೊಸ ವರ್ಷದ ಕಾರ್ಯಕ್ರಮಗಳನ್ನು ಆಯೋಜಿಸುವವರು ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಮುಂಚಿತವಾಗಿ ಪಡೆಯಬೇಕು ಮತ್ತು ನಿಗದಿತ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ. ಧ್ವನಿವರ್ಧಕಗಳನ್ನು ಬಳಸಲು ಕಡ್ಡಾಯ ಅನುಮತಿ ಅಗತ್ಯವಿದ್ದು, ಶಬ್ದ ಮಟ್ಟವು ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳಿಗೆ ಅನುಗುಣವಾಗಿರಬೇಕು. ಜನದಟ್ಟಣೆ ಉಂಟಾಗದಂತೆ, ಸ್ಥಳಕ್ಕೆ ಅನುಮೋದಿತ ಸಾಮರ್ಥ್ಯದೊಳಗೆ ಮಾತ್ರ ಟಿಕೆಟ್ ಮತ್ತು ಪಾಸ್‌ಗಳನ್ನು ನೀಡಲು ಸೂಚಿಸಲಾಗಿದೆ.
ನೆಲಮಾಳಿಗೆ, ಪಾರ್ಕಿಂಗ್ ಪ್ರದೇಶ ಮತ್ತು ಟೆರೇಸ್‌ಗಳಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಅನುಮತಿ ಇಲ್ಲ. ಸಾರ್ವಜನಿಕರಿಗೆ ಗೋಚರಿಸುವ ಎಲ್‌ಇಡಿ ಪರದೆಗಳು ಮತ್ತು ಧ್ವನಿವರ್ಧಕ ವ್ಯವಸ್ಥೆಗಳನ್ನು ನಿಷೇಧಿಸಲಾಗಿದೆ. ಪರದೆಗಳನ್ನು ಕೇವಲ ಆವರಣದ ಒಳಗಡೆ ಮಾತ್ರ ಬಳಸಲು ಅವಕಾಶವಿದೆ. ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಸಂದರ್ಶಕರ ತಪಾಸಣೆ, ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಮತ್ತು ಅಗ್ನಿ ಸುರಕ್ಷತಾ ವ್ಯವಸ್ಥೆಗಳನ್ನು ಕಡ್ಡಾಯಗೊಳಿಸಲಾಗಿದೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಕನಿಷ್ಠ 30 ದಿನಗಳವರೆಗೆ ಸಂಗ್ರಹಿಸಬೇಕು ಮತ್ತು ರಸ್ತೆ ಎದುರುಗಡೆಯ ಕ್ಯಾಮೆರಾಗಳನ್ನು ಸಾಧ್ಯವಾದಲ್ಲಿ ಪೊಲೀಸ್ ಕಮಾಂಡ್ ಸೆಂಟರ್‌ಗೆ ಸಂಪರ್ಕಿಸಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸುವ ಸೆಲೆಬ್ರಿಟಿ, ಕಲಾವಿದರು, ಡಿಜೆಗಳ ವಿವರಗಳನ್ನು ಮುಂಚಿತವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ಭದ್ರತಾ ಸಿಬ್ಬಂದಿ ಮತ್ತು ಬೌನ್ಸರ್‌ಗಳನ್ನು ಕೇವಲ ನೋಂದಾಯಿತ ಏಜೆನ್ಸಿಗಳ ಮೂಲಕವೇ ನೇಮಕ ಮಾಡಬೇಕು.
ಹೊಸ ವರ್ಷದ ಆಚರಣೆಯ ವೇಳೆ ಯಾವುದೇ ಮಾರ್ಗಸೂಚಿ ಉಲ್ಲಂಘನೆ ಅಥವಾ ಕಾನೂನುಬಾಹಿರ ಚಟುವಟಿಕೆ ಕಂಡುಬಂದರೆ ಆಯೋಜಕರು ಮತ್ತು ಆಸ್ತಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. "ಧೂಮಪಾನ ಬೇಡ" ಮತ್ತು "ಮಾದಕ ದ್ರವ್ಯ ಬೇಡ" ಎಂಬ ಸೂಚನಾ ಫಲಕಗಳನ್ನು ಪಬ್ ಮತ್ತು ಕಾರ್ಯಕ್ರಮ ಸ್ಥಳಗಳಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಬೇಕು. ಮಾದಕ ದ್ರವ್ಯಗಳ ಸೇವನೆ, ಮಾರಾಟ ಅಥವಾ ಸಂಗ್ರಹಕ್ಕೆ ಸಂಪೂರ್ಣ ನಿಷೇಧವಿದೆ.
ಸಾರ್ವಜನಿಕ ರಸ್ತೆಗಳಲ್ಲಿ ವಾಹನ ನಿಲುಗಡೆ ಮಾಡಲು ಅವಕಾಶ ಇರುವುದಿಲ್ಲ. ಆಯೋಜಕರು ತಮ್ಮ ಆವರಣದೊಳಗೆ ಸಾಕಷ್ಟು ಪಾರ್ಕಿಂಗ್ ವ್ಯವಸ್ಥೆ ಒದಗಿಸಬೇಕು ಮತ್ತು ಅತಿಥಿಗಳಿಗೆ ಸರಿಯಾದ ಪ್ರವೇಶ ಹಾಗೂ ನಿರ್ಗಮನ ಮಾಹಿತಿ ನೀಡಬೇಕು. ಕಾರ್ಯಕ್ರಮದ ವೇಳೆ ಸ್ಥಳೀಯ ಪೊಲೀಸರು ನೀಡುವ ಎಲ್ಲಾ ಸೂಚನೆಗಳನ್ನು ಯಾವುದೇ ವಿನಾಯಿತಿ ಇಲ್ಲದೆ ಪಾಲಿಸಬೇಕು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.


Click it and Unblock the Notifications