ಜನ ಮರುಳೋ ಜಾತ್ರೆ ಮರುಳೋ ಎಂಬ ಗಾದೆ ಈ ಖಾಸಗಿ ಶಾಲೆಯಲ್ಲಿ ಓದುವ ಮಕ್ಕಳ, ಪೋಷಕರಿಗೆ ಸರಿಯಾಗಿ ಅನ್ವಯಿಸುತ್ತದೆ. ಏಕೆಂದರೆ ಖಾಸಗಿ ಶಾಲೆಯಲ್ಲಿ ಮಕ್ಕಳು ಓದಿದರೆ ಮಾತ್ರ ಉತ್ತಮ ಎಂದು, ದಶಕಗಳಿಂದಲೂ ಮಕ್ಕಳನ್ನು ಖಾಸಗಿ ಶಾಲೆಗಳತ್ತ ಪೋಷಕರೇ ತಳ್ಳುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಶಾಲೆಗಳು ದರ್ಬಾರ್ ನಡೆಸುತ್ತಿವೆ. ಇಡೀ ರಾಜ್ಯದಲ್ಲಿ ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳ ದರ್ಬಾರೇ ಹೆಚ್ಚಾಗಿದೆ. ಅದರಲ್ಲೂ ಬೆಂಗಳೂರಿನಲ್ಲಂತೂ ಕೇಳೋದೇ ಬೇಡ. ಹೆಜ್ಜೆಗೊಂದು ಖಾಸಗಿ ಶಾಲೆಗಳು, ಕಾಲೇಜುಗಳು. ಕಣ್ಣು ಹಾಯಿಸಿದಷ್ಟೂ ಎತ್ತರಕ್ಕೆ ನಿಂತ ಖಾಸಗಿ ಶಾಲೆಗಳು, ತನ್ನ ಹೊರನೋಟದಿಂದಲೇ ಪೋಷಕರನ್ನು ಸೆಳೆಯುತ್ತವೆ. ಅಲ್ಲದೇ ಪೋಷಕರ ಭಾವನೆಗಳನ್ನೇ ಬಂಡವಾಳ ಮಾಡಿಕೊಂಡು ಹಣ ಪೀಕುತ್ತಿವೆ. ರಾಜಧಾನಿ ಬೆಂಗಳೂರು ಅದಕ್ಕೆ ಉತ್ತಮ ಉದಾಹರಣೆಯಾಗಿ ಹೊರ ಹೊಮ್ಮಿದೆ.

ಹೌದು, ರಾಜಧಾನಿ ಬೆಂಗಳೂರಿನಲ್ಲಿ ಖಾಸಗಿ ಶಾಲೆಗಳ ದರ್ಬಾರ್ ಏನು ಕಡಿಮೆಯಿಲ್ಲ. ಖಾಸಗಿ ಶಾಲೆ ಮಕ್ಕಳ ಪೋಷಕರನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಶಾಲೆಗಳು ಶುಲ್ಕದ ನೆಪದಲ್ಲಿ ಬರೆ ಹಾಕುತ್ತಿದ್ದಾರೆ. ನಗರದಲ್ಲಿ ಖಾಸಗಿ ಶಾಲೆಗಳು 10-15% ನಷ್ಟು ಶುಲ್ಕವನ್ನು ಹೆಚ್ಚಿಸುತ್ತಿವೆ. ಜೊತೆಗೆ ಕೆಲವು ಸಂದರ್ಭದಲ್ಲಿ ಶುಲ್ಕವು 30% ನಷ್ಟು ಹೆಚ್ಚಾಗುತ್ತಿದ್ದು, ಇದು ಪೋಷಕರಿಗೆ ಹೊರೆಯಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಶಾಲಿನಿ ಎಂಬ ಪೋಷಕರು, ತಮ್ಮ ಇಬ್ಬರೂ ಮಕ್ಕಳಿಗೆ ಪ್ರತಿ ಒಬ್ಬರಂತೆ ₹10,000 ಶುಲ್ಕ ಹೆಚ್ಚಳವಾದರೆ ನಮಗೆ ತುಂಬಾ ದೊಡ್ಡ ಹೊರೆ ಎಂದು ಅಳಲು ತೋಡಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದಷ್ಟೇ ಪ್ರತಿ ಮಗುವಿಗೂ ₹42,000 ರಿಂದ ₹44,000 ವರೆಗೆ ಶುಲ್ಕ ಪಾವತಿಸುತ್ತಿದ್ದರು. ಆದರೆ ಈಗ ಈ ಮೊತ್ತದ ಪ್ರಮಾಣ ಅಧಿಕವಾಗಿದೆ. ಈಗ ಪ್ರತಿ ಮಗುವಿಗೂ ₹64,000 ರಿಂದ ₹68,000 ದಷ್ಟು ಏರಿಕೆಯಾಗಿದೆ. ಈ ಶುಲ್ಕದ ಏರಿಕೆಯಿಂದ ಕುಟುಂಬ ಸುಧಾರಣೆ ತುಂಬಾ ಕಷ್ಟವಾಗಿದೆ ಎಂದು ಹೇಳಿದ್ದಾರೆ.
ಇನ್ನು ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸಂಘದ ಕಾರ್ಯದರ್ಶಿಯಾದ, ಡಿ. ಶಶಿ ಕುಮಾರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿವರ್ಷ ಕಾರ್ಯಾಚರಣಾ ವೆಚ್ಚಗಳು, ವಿಶೇಷವಾಗಿ ಶಿಕ್ಷಕರ ವೇತನಗಳು, ಹೆಚ್ಚಾಗುತ್ತಿರುವುದರಿಂದ ಶುಲ್ಕ ಹೆಚ್ಚಳ ಸಾಮಾನ್ಯ ಮತ್ತು ನ್ಯಾಯಸಮ್ಮತವಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಶುಲ್ಕದಲ್ಲಿ ಶೇಕಡಾ 30-40ಕ್ಕಿಂತ ಹೆಚ್ಚು ಏರಿಕೆ ಕಂಡುಬಂದಲ್ಲಿ, ಪೋಷಕರು ದೂರು ಸಲ್ಲಿಸಬೇಕು ಎಂದು ಸಹಲೆ ನೀಡಿದ್ದಾರೆ.
ಇನ್ನು 2023ರಲ್ಲಿ ಕರ್ನಾಟಕ ಹೈಕೋರ್ಟ್, ಖಾಸಗಿ ಅನುದಾನರಹಿತ ಶಾಲೆಗಳ ಶುಲ್ಕ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು. ಈ ತೀರ್ಪು ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಸವಾಲನ್ನೇ ತಂದೊಡ್ಡಿತ್ತು. ಈಗ ಈ ತೀರ್ಪಿನ ನಂತರ ಬೆಂಗಳೂರು ಸೇರಿದಂತೆ ಅನೇಕ ಕಡೆ ಇರುವ ಶಾಸಗಿ ಶಾಲೆಗಳು, ಪೋಷಕರಿಗೆ ಶುಲ್ಕದ ಬರೆ ಎಳೆಯುತ್ತಿವೆ. ಶಿಕ್ಷಣ ಇಲಾಖೆ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅನುಮತಿ ಅರ್ಜಿ ಸಲ್ಲಿಸಲು ಯೋಜಿಸಿದೆ.
ಒಟ್ಟಾರೆ ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಳ ತಪ್ಪುತ್ತಿಲ್ಲ. ಪೋಷಕರ ಆದಾಯ ಎಷ್ಟಿದೆಯೋ ಅಷ್ಟೇ ಇದೆ. ಆದರೆ ಮಕ್ಕಳ ಶಾಲಾ ಶುಲ್ಕ ಮಾತ್ರ ಓಡುತ್ತಿರುವ ಕುದುರೆಯಾಗಿದೆ. ಉತ್ತಮ ವಿದ್ಯಾಭ್ಯಾಸ ನೀಡುವ ಹೆಸರಿನಲ್ಲಿ ಖಾಸಗಿ ಶಾಲೆಗಳು ಪೋಷಕರ ಮೇಲೆ ಬರೆ ಎಳೆಯುತ್ತಿವೆ. ಪೋಷಕರಿಗೆ ಮಕ್ಕಳ ವಿದ್ಯಾಭ್ಯಾಸವೇ ಅತಿಹೆಚ್ಚು ಮುಖ್ಯವಾಗಿರುವುದರಿಂದ ಖಾಸಗಿ ಶಾಲೆಗಳ ಕಡೆ ಮುಖ ಮಾಡುತ್ತಾರೆ. ಖಾಸಗಿ ಶಾಲೆಗಳ ಹೊರನೋಟಕ್ಕೆ ಸೆಳೆತಕ್ಕೆ ಒಳಗಾದ ಪೋಷಕರು, ಶುಲ್ಕ ಕಟ್ಟುವ ಹೊತ್ತಿಗೆ ತಲೆ ತಿರುಗಿ ಬೀಳುವಂತಾಗಿರುತ್ತದೆ. ಅಲ್ಲದೇ ಶಾಲೆಯಲ್ಲಿ ನೀಡುವ ಶಿಕ್ಷಣಕ್ಕಿಂತ, ಶಾಲೆಯೊಳಗಿನ ಚಟುವಟಿಕೆಗಳ ನೆಪದಲ್ಲೇ ಖಾಸಗಿ ಶಾಲೆಗಳು ಅತಿಹೆಚ್ಚು ಹಣ ಪೀಕುತ್ತಿವೆ ಎಂದರೆ ತಪ್ಪಾಗಲ್ಲ.


Click it and Unblock the Notifications