ಬಿಸಿಲಿನ ತಾಪಮಾನದಿಂದ ನಿಗಿ ನಿಗಿ ಕೆಂಡದಂತಿದ್ದ ಬೆಂಗಳೂರಿನಲ್ಲಿ ವರುಣನ ಕೃಪೆಯಿಂದ ಭೂಮಿ ತಂಪಾಗಿದೆ. ಶನಿವಾರ ಸುರಿದ ಗುಡುಗು ಸಹಿತ ಮಳೆ ಅಬ್ಬರಿಸಿದೆ. ಇದರಿಂದ ಬಿಸಿಯಾಗಿದ್ದ ವಾತಾವರಣ ಈಗ ತಂಪಾಗಿದೆ. ಆದರೆ ನಿನ್ನೆ (ಮಾರ್ಚ್ 22) ಸುರಿದ ಮಳೆಯಿಂದ ಅಷ್ಟೇ ಅವಾಂತರಗಳೂ ಸಂಭವಿಸಿವೆ. ಬೆಂಗಳೂರು ನಾಗರಿಕರಿಗೆ ಮಳೆಯಿಂದ ಕೆಲವು ಸಮಸ್ಯೆಗಳಾಗಿವೆ.

ಹೌದು, ಬೆಂಗಳೂರಿನಲ್ಲಿ ಮಳೆ ಬಂದರೂ ಕಷ್ಟ, ಬರದಿದ್ದರೂ ಕಷ್ಟ ಎಂಬಂತಾಗಿರುತ್ತದೆ. ಮಳೆ ಬರಲಿಲ್ಲ ಅಂದ್ರೆ ಬಿಸಿಲಿನ ಬೇಗೆ ತಡೆಯೋಕಾಗಲ್ಲ. ಮಳೆ ಬಂದರೆ ಎದುರಾಗುವ ಅವಾಂತರಗಳ್ನು ನೋಡೋಕಾಗಲ್ಲ ಎನ್ನುವಂತಾಗಿದೆ. ಹಾಗೆಯೇ ಬೇಸಿಗೆಯ ತಾಪಮಾನದಲ್ಲಿ ಬೆಂಡಾಗಿದ್ದ ಬೆಂಗಳೂರಿನಲ್ಲಿ, ನಿನ್ನೆ ಮಳೆಯೇನೋ ಬಂದಿದೆ. ಆದರೆ ಸಮಸ್ಯೆಗಳ ಸರಮಾಲೆ ಸೃಷ್ಟಿಯಾಗಿದೆ. ಅಂದರೆ ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಮಳೆ ಬಂದರೆ ಟ್ರಾಫಿಕ್ ಜಾಮ್, ಸಂಚಾರಕ್ಕೆ ಅಡ್ಡಿ ಅಡಚಣೆಯಂತಹ ಸಮಸ್ಯೆಗಳು ನಿನ್ನೆ ಮರುಕಳಿಸಿವೆ. ಹಾಗಾದರೆ ನಿನ್ನೆ ಸಂಭವಿಸಿದ ಸಮಸ್ಯೆಗಳೇನು ಎಂದು ನೋಡುವುದಾದರೆ..
1. ಮರ ಬಿದ್ದು ಮೂರು ವರ್ಷದ ಮಗು ಸಾವು:
ನಿನ್ನೆ ಮಳೆಯಷ್ಟೇ ಅಲ್ಲ ರಭಸವಾದ ಗಾಳಿ ಕೂಡ ಬೀಸಿದೆ. ಹೀಗಾಗಿ ಬೆಂಗಳೂರಿನ ಪೂರ್ವ ಪಾರ್ಕ್ ಬಳಿ, ಭೀಕರ ಗಾಳಿಯಿಂದ ಮರವೊದು ಉರುಳಿದ್ದು, ಮೂರು ವರ್ಷದ ಹೆಣ್ಣು ಮಗುವೊಂದು ಸಾವನ್ನಪ್ಪಿದೆ. ತನ್ನ ತಂದೆ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮರಬಿದ್ದ ಪರಿಣಾಮ ಗಾಯಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದರೂ ಜೀವ ಉಳಿದಿಲ್ಲ.
2. ರಸ್ತೆ ಜಲಾವೃತ ಮತ್ತು ಟ್ರಾಫಿಕ್ ಜಾಮ್:
ನಿನ್ನೆ ಸುರಿದ ಭಾರಿ ಮಳೆಯಿಂದ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿತ್ತು. ಈ ಪರಿಣಾಮ ಟ್ರಾಫಿಕ್ ಜಾಮ್ ಸಂಭವಿಸಿತು. ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು. ಬೆಂಗಳೂರು ಹೊರ ವಲಯ ರಸ್ತೆ, ಮಹದೇವಪುರ, ಕೆಆರ್ ಪುರಂ, ಮತ್ತು ವೈಟ್‌ಫೀಲ್ಡ್ ಭಾಗಗಳಲ್ಲಿ ವಾಹನಗಳ ಸಂಚಾರ ಕುಂಠಿತವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ವಿಡಿಯೋಗಳು ಹರಿದಾಡಿದವು.
3. ವಿಮಾನಯಾನಕ್ಕೂ ಅಡಚಣೆ:
ಇನ್ನು ಶನಿವಾರ ಸುರಿದ ಭಾರಿ ಮಳೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೂ ಪರಿಣಾಮ ಬೀರಿತು. ಹಲವಾರು ವಿಮಾನಗಳ ವೇಳಾಪಟ್ಟಿಯೇ ಬದಲಾಗಿದೆ.. ಹವಾಮಾನ ಸಮಸ್ಯೆಗಳಿಂದ 20 ವಿಮಾನಗಳು ಚೆನ್ನೈಗೆ ತಿರುಗಿಸಲ್ಪಟ್ಟಿವೆ. ಈ ಪೈಕಿ ಎರಡು ಅಂತರರಾಷ್ಟ್ರೀಯ ಹಾಗೂ 18 ದೇಶೀಯ, ಚೆನ್ನೈಗೆ ತಿರುಗಿಸಲ್ಪಟ್ಟಿವೆ.
4. ರಾಜಕೀಯ ವಾದವಿವಾದ:
ಇನ್ನು ಈ ಮಳೆಯು ರಾಜಕೀಯದ ಮೇಲೂ ಪರಿಣಾಮ ಬೀರಿದೆ. ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಎಕ್ಸ್ ಖಾತೆಯಲ್ಲಿ ಟೀಕೆ ಮಾಡಿದ್ದಾರೆ. ಒಂದು ಮಳೆ ಬಂದರೆ ಬ್ರ್ಯಾಂಡ್ ಬೆಂಗಳೂರು ಪ್ರವಾಹ ಬೆಂಗಳೂರು ಆಗಿ ಬದಲಾಗುತ್ತದೆ. ಹಾಗೆಯೇ ಟ್ರಾಫಿಕ್ ಸಿಗ್ನಲ್‌ಗಳನ್ನು ಲೈಟ್‌ಹೌಸ್‌ಗಳಾಗಿ ಪರಿವರ್ತಿಸಲು ಸಮಯ ಬಂದಿದೆ ಎಂದು ಕಾಂಗ್ರೆಸ್ ಕಾಲೆಳೆದಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಮಳೆಯಿಂದಾದ ಅವಾಂತರಗಳನ್ನು ನಿಯಂತ್ರಿಸಲು, ಬಿಬಿಎಂಪಿ ಸಿಬ್ಬಂದಿ ಹಾಗೂ ಸಂಚಾರ ಪೊಲೀಸರು ಪಟ್ಟ ಹರಸಾಹಸ ಅಷ್ಟಿಷ್ಟಲ್ಲ. ಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ರಸ್ತೆಗಳಲ್ಲಿ ನೀರು ಹರಿಯುವಂತೆ ವ್ಯವಸ್ಥೆ ಮಾಡಿದರು. ಆದರೆ, ಈ ಮಳೆಯು ಮತ್ತೊಮ್ಮೆ ನಗರ ಮೂಲಸೌಕರ್ಯದ ದುರ್ಬಲತೆಯನ್ನು ಬಹಿರಂಗಪಡಿಸಿದೆ.
ಒಟ್ಟಿನಲ್ಲಿ ಬಿಸಿಲಿನಿಂದ ಕಂಗೆಟ್ಟಿದ ಬೆಂಗಳೂರಿನ ಜನರಿಗೆ ಸ್ವಲ್ಪ ತಂಪಾದ ವಾತಾವರಣ ಸಿಕ್ಕಿದೆ. ಆದರೂ ಒಂದಷ್ಟು ಅವಾಂತರಗಳು ಈ ಮಳೆ ಏಕೆ ಬಂತೋ ಎಂಬ ಮನಸ್ಥಿತಿಯನ್ನು ಕೂಡ ತಂದೊಡ್ಡಿತ್ತು. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಮಳೆ ಬಂದ ಕೂಡಲೇ ಸನ್ನಿವೇಶ ಹದಗೆಡುತ್ತದೆ. ಇದು ಹೊಸ ಬೆಳವಣಿಗೆ ಏನಲ್ಲ. ಈ ಅವ್ಯವಸ್ಥೆ ಕೇವಲ ಹವಾಮಾನದ ಸಮಸ್ಯೆಯಲ್ಲ, ಬದಲಾಗಿ ನಿರ್ವಹಣಾ ವೈಫಲ್ಯವನ್ನೂ ತೋರಿಸುತ್ತದೆ. ಮುಂಬರುವ ದಿನಗಳಲ್ಲಿ ಈ ಸಮಸ್ಯೆಗೆ ನಗರ ಆಡಳಿತ ಸೂಕ್ತ ಪರಿಹಾರ ಒದಗಿಸಬಹುದೇ ಎಂಬುದು ಪ್ರಶ್ನೆಯಾಗಿದೆ.


Click it and Unblock the Notifications