ಬೆಂಗಳೂರಿನಲ್ಲಿ ಬಾಡಿಗೆ ಮನೆಗಳು ಕೂಡ ದುಬಾರಿ..ಐಟಿ ಉದ್ಯಮಿಗಳು ಸುಸ್ತು..ಸಂಬಳ ಸಾಕಾಗಲ್ಲ ಎಂದು ಕಳವಳ..!

ರಾಜಧಾನಿ ಬೆಂಗಳೂರಿನ ಬದುಕು ಅಂದುಕೊಂಡಷ್ಟು ಸುಲಭವಾಗಿಲ್ಲ. ಎಲ್ಲರಿಗೂ ತಿಳಿದಿರುವ ಹಾಗೆ ಅಭಿವೃದ್ಧಿಯತ್ತ ಸಾಗುತ್ತಿರುವ ಬೆಂಗಳೂರು, ದುಬಾರಿ ಸಿಟಿ ಆಗ್ತಿದೆ. ಇಲ್ಲಿ ಒಂದು ವಸ್ತು ಕೊಳ್ಳುವುದಕ್ಕೂ ಮುನ್ನ ಸಾಕಷ್ಟು ಬಾರಿ ಯೋಚನೆ ಮಾಡಬೇಕಾಗುತ್ತದೆ. ಇನ್ನು ಲಕ್ಷ ಲಕ್ಷ ಸಂಬಳ ತೆಗೆದುಕೊಳ್ಳುವವರಿಗೂ ಕೂಡ ಸಾವಿರಾರು ಕಮಿಟ್‌ಮೆಂಟ್ಸ್. ಅದರಲ್ಲೂ ಈಗೀಗ ಪಾರ್ಕಿಂಗ್ ಶುಲ್ಕ, ತ್ಯಾಜ್ಯ ನಿರ್ವಹಣೆ ಶುಲ್ಕ, ಹಾಲಿನ ದರ ಏರಿಕೆ ಹೀಗೆ ಸಾಕಷ್ಟು ಬೆಲೆ ಏರಿಕೆಗಳ ನಡುವೆ ಬದುಕುವುದೆಂದರೆ ಅದು ದೊಡ್ಡ ಸವಾಲೇ..ಇದೆಲ್ಲ ಬಾಡಿಗೆ ಮನೆಗಳಲ್ಲಿರುವವರ ಮೇಲೆ ಹೆಚ್ಚು ಪರಿಣಾಮ ಬೀಳುವುದಂತೂ ಸತ್ಯ. ಈ ಬಗ್ಗೆ ವ್ಯಕ್ತಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಬಾಡಿಗೆ ಮನೆಗಳು ಕೂಡ ದುಬಾರಿ..!

ಹೌದು, ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವವರೊಬ್ಬರು, ಬಾಡಿಗೆ ಹೆಚ್ಚಳದ ಬಗ್ಗೆ ತಳಮಳ ವ್ಯಕ್ತಪಡಿಸಿದ್ದಾರೆ. ಅವರು ಹೇಳಿರುವುದೇನೆಂದರೆ, 7.5% ವೇತನ ಹೆಚ್ಚಳ ಸಿಕ್ಕಿದ್ದರೆ, ಮನೆಯ ಮಾಲೀಕರು 10% ಬಾಡಿಗೆ ಹೆಚ್ಚಿಸಿದ್ದಾರೆ. ಇದರಿಂದ ಜೀವನದ ಖರ್ಚು ಹೆಚ್ಚು ಸಂಕೀರ್ಣವಾಗುತ್ತಿದೆ ಎಂಬುದನ್ನು ತಿಳಿಸಿದ್ದಾರೆ.

ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ತರಾವರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಅದರಲ್ಲೂ ಬೆಂಗಳೂರಿನ ಐಟಿ ಉದ್ಯೋಗಿಗಳು ತಮ್ಮ ಆದಾಯದ ದೊಡ್ಡ ಭಾಗವನ್ನೇ, ಬಾಡಿಗೆ ಮತ್ತು ತೆರಿಗೆಗಳಿಗೆ ನೀಡುತ್ತಿರುವುದನ್ನು ಅಸಮಾಧಾನಕರವಾಗಿ ವ್ಯಕ್ತಪಡಿಸಿದ್ದಾರೆ, ಈಗ ಕಂಪನಿಯನ್ನೂ, ಮನೆ ಮಾಲೀಕರನ್ನೂ ಬದಲಾಯಿಸುವ ಸಮಯ ಬಂದಿದೆ ಎಂಬ ಕಾಮೆಂಟ್‌ಗಳು ವ್ಯಕ್ತವಾಗುತ್ತಿವೆ. ಮತ್ತೊಬ್ಬರು ಬೆಂಗಳೂರು ಮತ್ತು ಹೈದರಾಬಾದ್‌ನ ಐಟಿ ಉದ್ಯೋಗಿಗಳ ಸ್ಥಿತಿ ಇದೇ. ನಮ್ಮ ವೇತನದ ಅರ್ಧ ಭಾಗ ಬಾಡಿಗೆಗೆ, ಉಳಿದದು ತೆರಿಗೆಗೆ ಹೋಗುತ್ತಿದೆ ಎಂದಿದ್ದಾರೆ.

ಇನ್ನೂ ಕೆಲವರು ಹೇಳಿರುವುದೇನೆಂದರೆ, ಈ ಸಿಟಿ ಜೀವನ ಯಾಕೆ ಸ್ವಾಮಿ. ಹಳ್ಳಿಗಳಿಗೆ ಹೋಗಿ ಜೀವನ ಮಾಡಿ ಎಂಬಂತಹ ಸಲಹೆ ನೀಡಿದ್ದಾರೆ. ಒಂದಷ್ಟು ಜನರು ಟೆಕ್ ನಗರಗಳಲ್ಲಿ ವಸತಿ ವೆಚ್ಚ ಹೆಚ್ಚಿದಂತಿರುವುದರಿಂದ ಸ್ವತಂತ್ರ ಕೆಲಸ ಮಾಡುವ ಬಗ್ಗೆ ಯೋಚಿಸುವುದು ಉತ್ತಮ ಎಂದು ಹೇಳುತ್ತಿದ್ದಾರೆ. ಅಲ್ಲದೇ ಇತ್ತೀಚೆಗೆ ಜಾರಿಯಾದ ಶುಲ್ಕಗಳು ಬೆಲೆ ಏರಿಕೆಯ ಬಗ್ಗೆ ಜನರು ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಈ ಹೆಚ್ಚುತ್ತಿರುವ ಬೆಲೆಗಳ ನಡುವೆ ಬದುಕು ಹೇಗೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಅಂದಹಾಗೆ ಏಪ್ರಿಲ್ 1ರಿಂದ ಬೆಂಗಳೂರು ನಗರದಲ್ಲಿ ಹೊಸರೀತಿಯ ಶುಲ್ಕಗಳು, ಜೇಬಿಗೆ ಕತ್ತರಿ ಹಾಕುತ್ತಿರುವ ಸುದ್ದಿ ಗೊತ್ತೇ ಇದೆ. ತ್ಯಾಜ್ಯ ಬಳಕೆದಾರರ ಶುಲ್ಕ ವಿಧಿಸಲಾಗಿದೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಈ ಶುಲ್ಕವನ್ನು ಪ್ರಸ್ತಾಪಿಸಿದ್ದು, ರಾಜ್ಯ ಸರ್ಕಾರದಿಂದ ಅನುಮೋದನೆ ದೊರೆತಿದೆ. ಇದರಿಂದ ನಗರದ ತ್ಯಾಜ್ಯ ಸಂಗ್ರಹಣಾ ಮತ್ತು ವಿಲೇವಾರಿ ಸೇವೆಗಳನ್ನು ಸುಧಾರಿಸುವ ಉದ್ದೇಶ ಹೊಂದಲಾಗಿದೆ. ಈ ತ್ಯಾಜ್ಯ ಜಿರ್ವಹಣೆ ಶುಲ್ಕವನ್ನು ಆಸ್ತಿ ತೆರಿಗೆ ಬಿಲ್ಲಿನಲ್ಲಿ ಸೇರಿಸಲಾಗುವುದು ಎನ್ನಲಾಗಿದೆ. ಹಾಗೆಯೇ ಆಸ್ತಿಯ ಗಾತ್ರದ ಆಧಾರದ ಮೇಲೆ ತ್ಯಾಜ್ಯ ನಿರ್ವಹಣೆ ಶುಲ್ಕ ವಿಧಿಸಲಾಗುತ್ತದೆ ಎನ್ನಲಾಗಿದೆ. ಅಂದರೆ ಈಗಾಗಲೇ ಎಲ್ಲರಿಗೂ ತಿಳಿದಿದೆ. 600 ಚದರ ಅಡಿಗಿಂತ ಕಡಿಮೆ ಇರುವ ಮನೆಗಳಿಗೆ ತಿಂಗಳಿಗೆ ₹10 ನಷ್ಟು ಶುಲ್ಕವಿದ್ದು, 4,000 ಚದರ ಅಡಿಗಿಂತ ಹೆಚ್ಚಿನ ಆಸ್ತಿಗಳಿಗೆ ₹400 ಶುಲ್ಕ ವಿಧಿಸಲಾಗಿರುವ ಬಗ್ಗೆ ಈಗಾಗಲೇ ಎಲ್ಲರಿಗೂ ಮಾಹಿತಿ ಇದೆ. ಇದರಿಂದ ಪ್ರತಿ ವರ್ಷ ಸರ್ಕಾರಕ್ಕೆ ₹600 ಕೋಟಿ ಆದಾಯ ಲಭಿಸುವ ನಿರೀಕ್ಷೆಯಿದೆ. ಸರ್ಕಾರದ ಆದಾಯ ಗುರಿ ಪೂರ್ಣ ಮಾಡುವ ಉದ್ದೇಶದಲ್ಲಿ ಈ ರೀತಿ ಬೆಲೆಗಳ ಬರೆ ಎಳೆಯುತ್ತಿರುವುದು ಎಷ್ಟು ಸರಿ ಎಂಬ ಮಾಹಿತಿ ಕೇಳಿ ಬರುತ್ತಿದೆ.

ಅಂದರೆ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುತ್ತಿರುವ ಸರ್ಕಾರದಲ್ಲಿ, ಒಂದಷ್ಟು ಉಚಿತ ಯೋಜನೆಗಳನ್ನು ಘೋಷಿಸಲಾಗಿದೆ. ಅವುಗಳಿಗೆ ತಗಲುವ ಖರ್ಚು ಹೆಚ್ಚಾಗಿದ್ದು, ಇನ್ನಷ್ಟು ಕೊರತೆ ಬರುತ್ತಿದೆ. ಜೊತೆಗೆ ಬೇರೆ ಯೋಜನೆಗಳಿಗೆ ಅನುಮೋದನೆ ನೀಡಲು ಸರಿಯಾದ ಅನುದಾನವಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ. ಹೀಗಾಗಿಯೇ ಈ ರೀತಿಯ ಶುಲ್ಕದ ಬರೆ, ಬೆಲೆ ಏರಿಕೆಯ ಬರೆ ಎಳೆಯಲಾಗುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಆದರೂ ಒಂದಷ್ಟು ಜನರು ಹೇಳುವುದೇನೆಂದರೆ, ತೆರಿಗೆಯ ಪಾರದರ್ಶಕತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಈ ಶುಲ್ಕವು ನಗರ ಸ್ವಚ್ಛತೆ ಹೆಚ್ಚಿಸಲು ಅಗತ್ಯ ಎಂದು ಹೇಳುತ್ತಿದ್ದರೂ, ನಿವಾಸಿಗಳು ಈ ಹಣವನ್ನು ಸರಿಯಾದ ರೀತಿಯಲ್ಲಿ ಬಳಸಲಾಗುತ್ತದೆಯೇ ಎಂಬ ಪ್ರಶ್ನೆ ಎತ್ತಿದ್ದಾರೆ.

ಇನ್ನೂ ಕೆಲವರು ಹೇಳುವುದೇನೆಂದರೆ, ಈಗಾಗಲೇ ನಾವು ತೆರಿಗೆಗಳನ್ನು ಪಾವತಿಸುತ್ತಿದ್ದೇವೆ. ಈ ಹೊಸ ತೆರಿಗೆಯಿಂದ ನಮ್ಮ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಹೆಚ್ಚಾಗುತ್ತದೆ ಎಂದು ಕಿಡಿ ಕಾರಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ಬೆಂಗಳೂರಿನ ವಾಸ್ತವ್ಯ ದುಬಾರಿಯಾಗುತ್ತಿರುವುದರಿಂದ ಬಹುತೇಕ ಯುವ ಉದ್ಯೋಗಿಗಳು ಬೆಂಗಳೂರನ್ನು ಬಿಟ್ಟು ಹಳ್ಳಿಗಳಿಗೆ ಅಥವಾ ಕಡಿಮೆ ದುಬಾರಿ ನಗರಗಳಿಗೆ ಸ್ಥಳಾಂತರಗೊಳ್ಳಲು ಯೋಚಿಸುತ್ತಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+