ಬೆಂಗಳೂರಿನಲ್ಲಿ ವಂಚನೆ ಮಾಡುವವರು ಹೇಗೆಲ್ಲಾ ಮಾಡ್ತಾರೆ ಅಂದ್ರೆ, ನೀವು ಬುದ್ದಿವಂತರಾಗಿದ್ರೆ ಮಾತ್ರ ಅಂಥವರಿಗೆ ಪಾಠ ಕಲಿಸೋಕಾಗೋದು. ಅದಕ್ಕೆ ಉದಾಹರಣೆ ಎಂದ್ರೆ ಬೆಂಗಳೂರಿನ ಈ ಬಾಡಿಗೆದಾರ ಮಾಡಿದ ಕೆಲಸ. ಹೌದು, ಆತ ಅಪಾರ್ಟ್‌ಮೆಂಟ್‌ಗೆ ಅಂತಾ ಕೊಟ್ಟಿದ್ದ ಭದ್ರತಾ ಠೇವಣಿಯನ್ನು , ಅಪಾರ್ಟ್ಮೆಂಟ್ ಮಾಲೀಕರ ಸಂಘ ನಿರಾಕರಿಸಿತ್ತು. ಆದ್ರೀಗ ಅವರಿಗೆ ತಕ್ಕ ಶಾಸ್ತಿ ಮಾಡಲಾಗಿದೆ. ಗ್ರಾಹಕ ಆಯೋಗದ ಮೊರೆ ಹೋದ ವ್ಯಕ್ತಿಗೆ ನ್ಯಾಯ ಸಿಕ್ಕಿದೆ. ಈ ಪ್ರಕರಣವು ಅನ್ಯಾಯದ ವ್ಯಾಪಾರ ಪದ್ಧತಿಗಳು ಹಾಗೂ ಸೇವೆಯ ಕೊರತೆ ಕುರಿತು ದೃಢವಾದ ಸಂದೇಶ ನೀಡಿದೆ.

ಹೌದು, 52 ವರ್ಷದ ಗೌತಮ್ ಬಸು ಎಂಬವರು ನಂದಿದುರ್ಗ ರಸ್ತೆಯ ಬೆನ್ಸನ್ ಟೌನ್ ಪ್ರದೇಶದಲ್ಲಿರುವ, ನೀಲಾದ್ರಿ ಮಹಲ್ ಅಪಾರ್ಟ್‌ಮೆಂಟ್-IIನಲ್ಲಿ ಕಳೆದ ಮೂರು ವರ್ಷಗಳಿಂದ ಬಾಡಿಗೆಯಲ್ಲಿದ್ರು. ಆದ್ರೆ ಆಗಸ್ಟ್ 2024ರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಅಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಯ್ತು. ಆ ಹೊಸ ನಿಯಮಗಳ ಪ್ರಕಾರ ಅಪಾರ್ಟ್‌ಮೆಂಟ್‌ನಿಂದ ಹೊರಹೋಗುವ ಬಾಡಿಗೆದಾರರಿಂದ 5,000 ರೂ. ಭದ್ರತಾ ಠೇವಣಿಯನ್ನು ಕಡ್ಡಾಯವಾಗಿ ಸಂಗ್ರಹಿಸಲು ನಿರ್ಧಾರ ಮಾಡಲಾಗಿತ್ತು. ಈ ಮೊತ್ತವನ್ನು ಹಾನಿಗೆಂದು ಹೊಂದಿಸಿ ಉಳಿದ ಹಣವನ್ನು ಮರುಪಾವತಿಸುವುದಾಗಿ ಹೇಳಲಾಗಿತ್ತು.
ಅದರಂತೆ ಬಾಡಿಗೆ ಮನೆಯಿಂದ ಹೊರ ಹೋಗುವಾಗ ಗೌತಮ್ ಬಸು ಅವರು ಅಕ್ಟೋಬರ್ 24 ರಂದು ಈ ಠೇವಣಿಯನ್ನು ಪಾವತಿಸಿ ರಶೀದಿಯನ್ನು ಪಡೆದರು. ಕೆಲವೇ ದಿನಗಳಲ್ಲಿ, ಅಕ್ಟೋಬರ್ 29ರಂದು ಸಂಘವು ಎನ್‌ಒಸಿ ನೀಡಿದ್ದು, ಅವರ ಫ್ಲಾಟ್ ನಿಂದ ಯಾವುದೇ ಬಾಕಿ ಇಲ್ಲ ಎಂದು ದೃಢಪಡಿಸಿತು. ಲಾಜಿಸ್ಟಿಕ್ಸ್ ತಂಡದ ಸಮ್ಮುಖದಲ್ಲಿ ಸ್ಥಳಾಂತರವೂ ನಡೆಯಿತು. ಅಕ್ಟೋಬರ್ ಅಂತ್ಯದ ವೇಳೆಗೆ ಗೌತಮ್ ಬಸು ಅವರು ತಮ್ಮ 5,000 ರೂ. ಮರುಪಾವತಿಸಬೇಕು ಎಂಬ ಇಮೇಲ್‌ನ, ಅಪಾರ್ಟ್‌ಮೆಂಟ್ ಮಾಲೀಕರ ಸಂಘಕ್ಕೆ ಕಳುಹಿಸಿದರು. ಜೊತೆಗೆ ಅವರು ನೋಂದಾಯಿತ ಅಂಚೆ ಮೂಲಕ ಪತ್ರವನ್ನೂ ಕಳುಹಿಸಿದರು. ಆದರೆ ಈ ಪತ್ರವನ್ನು ಅಪಾರ್ಟ್‌ಮೆಂಟ್ ಮಾಲೀಕರ ಸಂಘ ನಿರಾಕರಿಸಿದ ಕಾರಣ ಅದು ವಾಪಸ್ ಬಂದಿತು. ಆಗ ಸಂಘದ ಖಜಾಂಚಿ ಪರವಾಗಿ ಬಂದ ಫೋನ್ ಕಾಲ್‌ನಲ್ಲಿ, ಠೇವಣಿಯನ್ನು ಮರುಪಾವತಿಸಲು ಇಚ್ಛೆ ಇಲ್ಲ ಎಂಬುದನ್ನು ಅವರಿಂದ ತಿಳಿಸಲಾಯಿತು.
ಕಾನೂನು ನೋಟಿಸ್‌ಗೂ ಪ್ರತಿಕ್ರಿಯೆ ಇಲ್ಲ:
ಈ ಅನ್ಯಾಯದ ವಿರುದ್ಧವಾಗಿ ಬಸು ಅವರು ನವೆಂಬರ್ 4, 2024ರಂದು, ಗೌತಮ್ ಬಸು ಅವರು ಕಾನೂನು ನೋಟಿಸ್ ಕಳುಹಿಸಿದರು. ಆದರೆ ಅದನ್ನೂ ಸಂಘದವರು ಸ್ವೀಕರಿಸಲು ನಿರಾಕರಿಸಿದರು. ಕೊನೆಗೆ ಇದರಿಂದ ಬೇಸತ್ತ ಗೌತಮ್ ಬಸು ಅವರು ನವೆಂಬರ್ 29ರಂದು ಅವರು ಬೆಂಗಳೂರಿನ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಮೆಟ್ಟಿಲೇರಿದರು. ಅವರು ಸಲ್ಲಿಸಿದ ದೂರಿನಲ್ಲಿ ತಾನು ಅನ್ಯಾಯಕ್ಕೆ ಒಳಗಾಗಿದ್ದೇನೆ, ಮತ್ತು ಠೇವಣಿಯನ್ನು ಮರುಪಾವತಿಸುವ ಭರವಸೆ ನೀಡಲಾಗಿದ್ದು ಅದು ತಪ್ಪು ನಿರ್ದೇಶನೆಗೆ ಕಾರಣವಾಯಿತು ಎಂದು ಸ್ಪಷ್ಟಪಡಿಸಿದರು.
ಏಕಪಕ್ಷೀಯ ವಿಚಾರಣೆ ಮತ್ತು ಆಯೋಗದ ತೀರ್ಮಾನ:
ದೂರು ದಾಖಲಾದ ಬಳಿಕವೂ ಸಂಘದ ಪದಾಧಿಕಾರಿಗಳು, ಖಜಾಂಚಿ ಮತ್ತು ಅಧ್ಯಕ್ಷರು ಆಯೋಗದ ಮುಂದೆ ಹಾಜರಾಗಲೇ ಇಲ್ಲ. ಹೀಗಾಗಿ ವಿಚಾರಣೆ ಏಕಪಕ್ಷೀಯವಾಗಿ ಮುಂದುವರಿಯಿತು. ದಾಖಲೆಗಳನ್ನು ಪರಿಶೀಲಿಸಿದ ಆಯೋಗ, ಈ ಭದ್ರತಾ ಠೇವಣಿ ಮರುಪಾವತಿಸಬಹುದಾದದ್ದು ಎಂದು ಸಂಘದ ನೋಟಿಸ್‌ಗಳಲ್ಲೇ ಉಲ್ಲೇಖಿಸಲಾಗಿದೆಯೆಂದು ಗಮನಿಸಿತು. ಬಸು ಅವರು ಎಲ್ಲಾ ನಿಯಮಗಳನ್ನು ಪಾಲಿಸಿ, ಯಾವುದೇ ಹಾನಿಯಿಲ್ಲದ ಸ್ಥಿತಿಯಲ್ಲಿ ಫ್ಲಾಟ್‌ವನ್ನು ಖಾಲಿ ಮಾಡಿದ್ದರು. ಆದರೂ ಠೇವಣಿ ಮೊತ್ತವನ್ನು ಮರುಪಾವತಿಸದ ಈ ಕೃತ್ಯವು ಆಯೋಗದ ಪ್ರಕಾರ ಸ್ಪಷ್ಟವಾದ ಸೇವಾ ಕೊರತೆ ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಯಾಗಿದೆ.
ಬಸು ಅವರು 5 ಲಕ್ಷ ರೂ.ಗಳ ಮಾನಸಿಕ ಹಾನಿ ಪರಿಹಾರ, 1 ಲಕ್ಷ ರೂ.ಗಳ ಶಕ್ತಿ ಮತ್ತು ಸಮಯದ ನಷ್ಟ, ಮತ್ತು 25,000 ರೂ.ಗಳ ಕಾನೂನು ವೆಚ್ಚ ಸೇರಿದಂತೆ ಒಟ್ಟಾರೆ ಭಾರೀ ಪರಿಹಾರವನ್ನು ಬೇಡಿಕೆ ನೀಡಿದ್ದರು. ಆದರೆ ಆಯೋಗ ಈ ಬೇಡಿಕೆಯನ್ನು ಅತಿಯಾದದಾಗಿ ಪರಿಗಣಿಸಿ ನಿರಾಕರಿಸಿತು. ಅಂತಿಮವಾಗಿ, ಆಯೋಗವು ನವೆಂಬರ್ 2022ರಿಂದ 8% ಬಡ್ಡಿಯೊಂದಿಗೆ 5,000 ರೂ.ಗಳನ್ನು ಬಸು ಅವರಿಗೆ ಮರುಪಾವತಿಸಬೇಕು ಹಾಗೂ ಸೇವಾ ಕೊರತೆ ಮತ್ತು ಮಾನಸಿಕ ಹಾನಿಗೆ 10,000 ರೂ.ಗಳನ್ನು ನೀಡಬೇಕು ಎಂದು ಸಂಘಕ್ಕೆ ಆದೇಶಿಸಿತು.
ಈ ಪ್ರಕರಣವು ಅಪಾರ್ಟ್‌ಮೆಂಟ್ ಮಾಲೀಕರ ಸಂಘಗಳು ಬಾಡಿಗೆದಾರರ ವಿರುದ್ಧ ಅನ್ಯಾಯದ ಕ್ರಮ ಕೈಗೊಂಡರೆ ತಕ್ಷಣವೇ ಕ್ರಮ ಕೈಗೊಳ್ಳಬಹುದಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಗ್ರಾಹಕ ಆಯೋಗಗಳು ಸಾಮಾನ್ಯ ನಾಗರಿಕನ ಹಕ್ಕುಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಬಾಡಿಗೆದಾರರು ತಮ್ಮ ಹಕ್ಕುಗಳನ್ನು ಅರಿತರೆ, ಸಂಘಗಳ ಧೋರಣೆಯಲ್ಲೂ ಪರಿವರ್ತನೆ ತರಲು ಸಾಧ್ಯವಿದೆ.


Click it and Unblock the Notifications