ಬೆಂಗಳೂರಿನ ಮೂಲಸೌಕರ್ಯ ಪರಿಸ್ಥಿತಿಯು ಅತ್ಯಂತ ಸವಾಲಿನದ್ದಾಗಿದೆ. ಮೇಲಿರುವ ಭಗವಂತ ಕೆಳಗೆ ಇಳಿದು ಬಂದರೂ ಎರಡು, ಅಥವಾ ಮೂರು ವರ್ಷಗಳಲ್ಲಿ ಬೆಂಗಳೂರನ್ನು ಬದಲಾಯಿಸಲು ಆಗುವುದಿಲ್ಲ. ಬೆಂಗಳೂರಿನ ರಸ್ತೆಗಳು ಭವಿಷ್ಯದಲ್ಲಿಯೂ ಉತ್ತಮವಾಗಿರಬೇಕು. ಆ ರೀತಿಯಾಗಿ ನಾವುಗಳು ಯೋಜನೆ ರೂಪಿಸಬೇಕು. ರಸ್ತೆ, ಪಾದಚಾರಿ ಮಾರ್ಗ, ಹಸಿರು ವಲಯ ಸೇರಿದಂತೆ ಎಲ್ಲಾ ಕಡೆಯೂ ಶಿಸ್ತು ಹಾಗೂ ಏಕರೂಪತೆ ಸಾಧಿಸಬೇಕು. ಇಲ್ಲದಿದ್ದರೇ ಬೆಂಗಳೂರಿಗೆ ನಾವುಗಳು ಮೋಸ ಮಾಡಿದಂತೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲ್ ಆಯೋಜಿಸಿದ "ನಮ್ಮ ರಸ್ತೆ - ವಿನ್ಯಾಸ ಕಾರ್ಯಾಗಾರ" ಉದ್ಘಾಟನೆ ಮತ್ತು ಸಂಚಾರ ಪ್ರಯೋಗಾಲಯಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ತ್ವರಿತ ನಗರೀಕರಣದಿಂದಾಗಿ ಬೆಂಗಳೂರು ಎದುರಿಸುತ್ತಿರುವ ಅಪಾರ ಸವಾಲುಗಳನ್ನುಒಪ್ಪಿಕೊಂಡ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೈವಿಕ ಹಸ್ತಕ್ಷೇಪ ಕೂಡ ತಕ್ಷಣದ ಬದಲಾವಣೆಯನ್ನು ತರಲು ಸಾಧ್ಯವಿಲ್ಲ. ನಾವು ಯೋಜನೆಗಳ ರೂಪುರೇಷೆಗಳನ್ನು ಸರಿಯಾಗಿ ಮಾಡಿ, ಅನುಷ್ಠಾನಕ್ಕೆ ತಂದರೆ ಮಾತ್ರ ಇದು ಸಾಧ್ಯವಾಗುತ್ತದೆ. ರಕ್ಷಣೆ, ಗುಣಮಟ್ಟ ಮತ್ತು ಏಕರೂಪತೆ ಕಾಪಾಡುವುದು ನಮ್ಮ ಗುರಿ" ಎಂದು ಸ್ಪಷ್ಟಪಡಿಸಿದರು.

ಇಲ್ಲಿನ ಪರಿಸ್ಥಿತಿ ಅತ್ಯಂತ ಸವಾಲಿನದ್ದಾಗಿದೆ. ನಾವು ಸರಿಯಾಗಿ ಯೋಜಿಸಬೇಕು ಮತ್ತು ಯೋಜನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬೇಕು. ಭವಿಷ್ಯಕ್ಕಾಗಿ ಉತ್ತಮ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನಗರದ ಎಲ್ಲಾ ರಸ್ತೆಗಳ, ಪಾದಚಾರಿ ಮಾರ್ಗಗಳ ವಿನ್ಯಾಸ ಏಕರೂಪತೆಯಿಂದ ಕೂಡಿರಬೇಕು ಎನ್ನುವುದು ನಮ್ಮ ಉದ್ದೇಶ. ರಸ್ತೆ ಬದಿ ಕಂಬಗಳ ಬಣ್ಣವೂ ಸಹ ಮೊದಲೇ ನಿರ್ಧಾರ ಮಾಡಲಾಗುವುದು. ನಗರದ ಅನೇಕ ಕಡೆ ಬೇರೆ, ಬೇರೆ ವಿನ್ಯಾಸ ಬಸ್ ನಿಲ್ದಾಣಗಳಿವೆ ಅವುಗಳನ್ನು ಸಹ ಒಂದೇ ಮಾದರಿಯಲ್ಲಿ ನಿರ್ಮಾಣ ಮಾಡಬೇಕು. ಈ ಬಗ್ಗೆ ಈ ಕಾರ್ಯಾಗಾರದಲ್ಲಿ ಚರ್ಚೆ ಮಾಡಲಾಗುವುದು. ಈ ಕೈಪಿಡಿ ಮೂಲಕ ಅನೇಕ ಸಲಹೆ, ಸೂಚನೆಗಳನ್ನು ನಾವು ಪಡೆಯಬಹುದು. ರಸ್ತೆಬದಿ ಸಸಿಗಳನ್ನು ಎಲ್ಲಿ ನೆಡಬೇಕು, ಕಂಬಗಳು ಎಲ್ಲಿರಬೇಕು, ಮುಖ್ಯರಸ್ತೆ ಹೇಗಿರಬೇಕು, ವಾರ್ಡ್ ರಸ್ತೆಗಳು ಹೇಗಿರಬೇಕು, ಪಾದಚಾರಿ ಮಾರ್ಗಗಳನ್ನು ಹೇಗೆ ನಿರ್ಮಾಣ ಮಾಡಬೇಕು, ಜೊತೆಗೆ ರಸ್ತೆಯಲ್ಲಿ ಸಂಚಾರ ಮಾಡುವಾಗ, ನಡೆಯುವಾಗ ಹೇಗೆ ಶಿಸ್ತನ್ನು ಪಾಲಿಸಬೇಕು, ಬಸ್ ನಿಲ್ಧಾಣಗಳ ವಿನ್ಯಾಸ, ಮೆಟ್ರೋ ಪಿಲ್ಲರ್ ಗಳು, ವೃತ್ತಗಳ ಸೌಂದರ್ಯೀಕರಣದ ಬಗ್ಗೆ ಹೊಸ ಆಲೋಚನೆಗಳನ್ನು ಇಲ್ಲಿ ನೋಡಬಹುದು" ಎಂದು ಹೇಳಿದರು.
ಬೆಂಗಳೂರಿನ ಜನಸಂಖ್ಯೆಯು 70 ಲಕ್ಷದಿಂದ 1.4 ಕೋಟಿಗೆ ದ್ವಿಗುಣಗೊಂಡಿದೆ, ಇದು ಮೂಲಸೌಕರ್ಯಗಳ ಮೇಲಿನ ಒತ್ತಡವನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಹೊಸ ಯೋಜನೆಗಳು, ಬೆಂಗಳೂರಿನ ರೂಪುರೇಷೆಗಳ ಬಗ್ಗೆ, ಪ್ರತಿ ನಾಗರೀಕನ ಆಸ್ತಿ ರಕ್ಷಣೆ ಕುರಿತು ಹೊಸ ನೀತಿಗಳನ್ನು ತರಲಾಗಿದ್ದು ಅದನ್ನು ಫೆಬ್ರವರಿ ತಿಂಗಳ ಕೊನೆಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಬಹಿರಂಗಗೊಳಿಸಲಾಗುವುದು. ಇನ್ನು ಬೆಂಗಳೂರಿನಲ್ಲಿ ಸುಮಾರು 1,700 ಕಿಮೀ ವಿಸ್ತೀರ್ಣಕ್ಕೆ ವೈಟ್ ಟಾಪಿಂಗ್ ಹಾಕಲಾಗುತ್ತಿದೆ. ಮುಂದಿನ 30 ವರ್ಷ ಇದು ಬಾಳಿಕೆ ಬರುತ್ತದೆ. ರಾಜಕಾಲುವೆ ಪಕ್ಕದಲ್ಲಿ ಹೊಸ ರಸ್ತೆಗಳ ನಿರ್ಮಾಣ. ಮೇಲ್ಸೇತುವೆ ಸೇರಿದಂತೆ ಅನೇಕ ನೂತನ ಯೋಜನೆಗಳು ಸರ್ಕಾರದ ಮುಂದಿವೆ ಎಂದು ಹೇಳಿದರು.
ಸುರಂಗರಸ್ತೆಯ ನಿರ್ಮಾಣಕ್ಕೆ ಹಲವಾರು ಸವಾಲುಗಳಿವೆ. ಇನ್ನೂ ಟೆಂಡರ್ ಕರೆಯಲು ಸಾಧ್ಯವಾಗಿಲ್ಲ. ಏಕೆಂದರೆ ಭೂಮಿಯ ಸ್ವಾಧೀನ, ಹಣಕಾಸು, ತಾಂತ್ರಿಕ ಅಂಶಗಳಿವೆ. ನೂತನ ಮೆಟ್ರೋ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಅನ್ನು ಕಾರ್ಯಗತಗೊಳಿಸಲಾಗಿದೆ. ಈ ಹಿಂದೆ ಮೆಟ್ರೋ ಮಾರ್ಗವಿರುವ ಕಡೆ ಡಬಲ್ ಡೆಕ್ಕರ್ ಸಾಧ್ಯವಾಗಿಲ್ಲ
ಹೊರಗಡೆ ಇರುವ ಕೇಬಲ್ ವಯರ್ ಗಳನ್ನು ಕತ್ತರಿಸಲು ಸೂಚನೆ
"ಹೊರಗಡೆ ಇರುವ ಎಲ್ಲಾ ಕೇಬಲ್ ವಯರ್ ಗಳನ್ನು ಕಿತ್ತು ಹಾಕಬೇಕು. ಇವುಗಳನ್ನು ಭೂಗತವಾಗಿ ಹಾಕುವಂತಹ ವ್ಯವಸ್ಥೆ ಮಾಡಬೇಕು ಎಂದು ಬಿಬಿಎಂಪಿಗೆ ಸೂಚನೆ ನೀಡಿದ್ದೇನೆ. ಇಷ್ಟು ದಿನ ಕಾದೆವು ಏನಾದರೂ ಬದಲಿ ವ್ಯವಸ್ಥೆ ಮಾಡಿಕೊಳ್ಳುತ್ತಾರೆ ಎಂದು, ಇದಾಗದ ಕಾರಣ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಎಲ್ಲಾ ಕೇಬಲ್ ಗಳನ್ನು ಕತ್ತರಿಸಿದರೆ ಅವರೇ ದಾರಿಗೆ ಬರುತ್ತಾರೆ" ಎಂದು ಹೇಳಿದರು.


Click it and Unblock the Notifications