ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ, ಸರ್ಕಾರ ಚುರುಕುಗತಿಯಲ್ಲಿ ಕೆಲಸ ಮಾಡುತ್ತಿದೆ. ಈಗಾಗಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಮೂರು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಹೇಳಲಾಗಿದ್ದು, ಮುಂಬರು ಏಪ್ರಿಲ್ 7 ರಿಂದ 9 ರವರೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಬೆಂಗಳೂರಿಗೆ ಭೇಟಿ ನೀಡಲಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಇನ್ನು ಈ ವಿಮಾನ ನಿಲ್ದಾಣ ಯೋಜನೆಗಾಗಿ ಸರ್ಕಾರ, ಕನಕಪುರ ರಸ್ತೆಯಲ್ಲಿ ಎರಡು ಮತ್ತು ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ಒಂದು ಸ್ಥಳ ಗುರುತಿಸಲಾಗಿದೆ. ಹೀಗಂತ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ನೀಡಿದ್ದಾರೆ. ಅಲ್ಲದೇ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ 1.21 ಕೋಟಿ ರೂ. ಶುಲ್ಕವನ್ನು ಪಾವತಿಸಿದೆ ಎಂದು ತಿಳಿಸಿದ್ದಾರೆ.
ಸದ್ಯ ವಿಮಾನ ನಿಲ್ದಾಣಕ್ಕಾಗಿ ಗುರುತಿಸಲಾಗಿರುವ ಸ್ಥಳಗಳನ್ನು, ಪರಿಶೀಲಿಸುವುದು ಬಾಕಿ ಇದೆ. ಹೀಗಾಗಿ ಮಾರ್ಚ್ 5 ರಂದು ತಮ್ಮ ಇಲಾಖೆಯು ಎಎಐಗೆ ಪತ್ರ ಬರೆದಿದೆ. ಅಲ್ಲದೇ ಎಎಐ ನಿರ್ದೇಶನದಂತೆ ಇಲಾಖೆಯು ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿದೆ ಮತ್ತು ಗುರುತಿಸಲಾದ ಸ್ಥಳಗಳ ಆದಾಯ ನಕ್ಷೆಗಳು, 10 ವರ್ಷಗಳ ಹವಾಮಾನ ವರದಿಗಳು ಮತ್ತು ಸರ್ವೆ ಆಫ್ ಇಂಡಿಯಾದಿಂದ ನಕ್ಷೆಗಳನ್ನು ಪಡೆದುಕೊಂಡಿದೆ ಎನ್ನಲಾಗಿದೆ.
ಇತ್ತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಅಪಾರ ಒತ್ತಡವಿದೆ. ಇನ್ನು ಕೆಂಪೇಗೌಡ ವಿಮಾನ ನಿಲ್ದಾಣದಿಂದ 150 ಕಿ.ಮೀ ವ್ಯಾಪ್ತಿಯಲ್ಲಿ ಎರಡನೇ ವಿಮಾನ ನಿಲ್ದಾಣವನ್ನು ನಿರ್ಮಿಸಬಾರದು ಎಂಬ ಷರತ್ತು 2033 ರ ವೇಳೆಗೆ ಕೊನೆಗೊಳ್ಳುತ್ತದೆ. ಹೀಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು, ಎರಡನೇ ವಿಮಾನ ನಿಲ್ದಾಣದ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಜೊತೆಗೆ ಈ ವಿಮಾನ ನಿಲ್ದಾಣ ಯೋಜನೆಗೆ ಪ್ಲಾನ್ ಮಾಡಿರುವಂತೆ ಎಲ್ಲವೂ ನಡೆದರೆ, 2033 ರ ವೇಳೆಗೆ ಬಳಕೆಗೆ ಸಿದ್ಧವಾಗಬಹುದು ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಜೊತೆಗೆ ಇನ್ನೂ ಒಂದು ಗಮನಿಸಬೇಕಾದ ವಿಚಾರವೇನೆಂದರೆ, ತುಮಕೂರು ಜಿಲ್ಲೆಯ ಶಿರಾ ಬಳಿ ಬಳಿ ವಿಮಾನ ನಿಲ್ದಾಣದ ಪ್ರಸ್ತಾವನೆ ಕಾರ್ಯಸಾಧ್ಯವಲ್ಲ ಎಂದು ಸಚಿವರು ಹೇಳಿದ್ದಾರೆ. ಅಂದರೆ ಪ್ರಸ್ತಾವಿತ ವಿಮಾನ ನಿಲ್ದಾಣವನ್ನು ಶಿರಾದಲ್ಲಿ ನಿರ್ಮಾಣ ಮಾಡಿದರೆ, ಅದು ಶಿವಮೊಗ್ಗ ಮತ್ತು ವಿಜಯಪುರದ ವಿಮಾನ ನಿಲ್ದಾಣಗಳಂತೆಯೇ ಇರುತ್ತದೆ. ಬೆಂಗಳೂರಿನ ಜನರಿಗೆ ಸೇವೆ ಸಲ್ಲಿಸಲು, ವಿಮಾನ ನಿಲ್ದಾಣವು ನಗರಕ್ಕೆ ಹತ್ತಿರದಲ್ಲಿರಬೇಕು. ಆಗ ಮಾತ್ರ ಹೂಡಿಕೆದಾರರು ವಿಮಾನ ನಿಲ್ದಾಣವನ್ನು ನಿರ್ಮಿಸಲು ಆಸಕ್ತಿ ವಹಿಸುತ್ತಾರೆ. ಇದು ಇಲ್ಲದೆ, ಯೋಜನೆ ಕಾರ್ಯಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇವೆ ಆರಂಭವಾದರೆ, ಕೆಂಪೇಗೌಡ ವಿಮಾಣ ನಿಲ್ದಾಣದ ಮೇಲಿನ ಒತ್ತಡ ಕಡಿಮೆಯಾಗಲಿದೆ. ಪ್ರಯಾಣಿಕರಿಗೆ ಸುಲಭವಾಗಲಿದೆ. ಹಾಗೂ ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ. ಪರಿಸರದ ಪರಿಣಾಮ, ಭೂ ಸ್ವಾಧೀನ, ಹೂಡಿಕೆದಾರರ ಆಸಕ್ತಿ ಮತ್ತು ತಂತ್ರಜ್ಞಾನದ ಬಳಕೆ ಮುಂತಾದ ವಿಚಾರಗಳು ಈ ಯೋಜನೆಯ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಲಿವೆ. ನೂತನ ವಿಮಾನ ನಿಲ್ದಾಣ ನಿರ್ಮಾಣದಿಂದ ಬೆಂಗಳೂರು ನಗರದ ವಿಮಾನಯಾನ ವಲಯದ ಒತ್ತಡವನ್ನು ಕಡಿಮೆ ಮಾಡಬಹುದು ಮತ್ತು ಭವಿಷ್ಯದಲ್ಲಿ ಹೆಚ್ಚುವರಿ ವಿಮಾನ ಸಂಚಾರವನ್ನು ನಿರ್ವಹಿಸಲು ನೆರವಾಗಬಹುದು. ಆದರೆ, ಯೋಜನೆ ಸರಿಯಾದ ರೀತಿಯಲ್ಲಿ ಜಾರಿಗೆ ಬಂದರೆ ಮಾತ್ರ ಇದು ಯಶಸ್ವಿಯಾಗಲಿದೆ.
ಕೊಪ್ಪಳದಲ್ಲಿ ಬಾಲ್ಡೋಟಾ ಗ್ರೂಪ್ 54,000 ಕೋಟಿ ರೂ. ವೆಚ್ಚದಲ್ಲಿ ದೊಡ್ಡ ಪ್ರಮಾಣದ ಉಕ್ಕು ಉತ್ಪಾದನಾ ಘಟಕವನ್ನು ಸ್ಥಾಪಿಸಲು ಯೋಜಿಸುತ್ತಿದೆ. ಈ ಬಗ್ಗೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್ ಅವರು, ಪ್ರಸ್ತಾವಿತ ಉಕ್ಕು ಸ್ಥಾವರದಿಂದ ಮಾಲಿನ್ಯ ಉಂಟಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇದರ ವಿರುದ್ಧ ಗವಿಮಠದ ಮುಖ್ಯಸ್ಥರು ಪ್ರತಿಭಟನೆ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಸ್ವತಂತ್ರ ಸಂಸ್ಥೆಯಿಂದ ಅಧ್ಯಯನ ನಡೆಸಲಾಗುವುದು ಮತ್ತು ಅದರ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.


Click it and Unblock the Notifications