ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿಯೇ ಬೆಂಗಳೂರಿಗೆ ಎರಡನೇ ವಿಮಾಣ ನಿಲ್ದಾಣ ಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಇತ್ತ ತಮಿಳುನಾಡು ಸರ್ಕಾರ ಬೆಂಗಳೂರು ಗಡಿಭಾಗದಲ್ಲಿರುವ ಹೊಸೂರಿನಲ್ಲಿ ವಿಮಾನ ನಿಲ್ದಾಣ ಬೇಕೆಂದು ಪಟ್ಟು ಹಿಡಿಯುತ್ತಿತ್ತು. ಈ ಹಗ್ಗಜಗ್ಗಾಟದ ನಡುವೆ ತಮಿಳುನಾಡಿಗೆ ನಿರಾಸೆ ಸಿಕ್ಕಿತು. ಅಂದರೆ ಹೊಸೂರು ವಿಮಾನ ನಿಲ್ದಾಣ ನಿರ್ಮಾಣ ಸದ್ಯಕ್ಕೆ ಇನ್ನೂ ಕನಸಾಗೇ ಉಳಿದಿದೆ. ಹೀಗಿರುವಾಗಲೇ ಬೆಂಗಳೂರು ಮತ್ತು ಹೊಸೂರು ವಿಮಾಣ ನಿಲ್ದಾಣ ವಿಚಾರದಲ್ಲಿ ದೊಡ್ಡದೊಂದು ತಿರುವು ಕಂಡುಬಂದಿದೆ.

ಹೌದು, ಹೊಸೂರು ವಿಮಾನ ನಿಲ್ದಾಣ ಅಸಾಧ್ಯ ಎಂಬ ಸುಳಿವು ಸಿಕ್ಕ ಬೆನ್ನಲ್ಲೇ, ತಮಿಳು ನಾಡು ಸರ್ಕಾರ ಮರುಪರಿಶೀಲನೆ ಮಾಡುವಂತೆ ಕೇಂದ್ರದ ಮುಂದೆ ಹೋಗಿತ್ತು. ಸದ್ಯ ಈ ಎರಡೂ ವಿಮಾನ ನಿಲ್ದಾಣಗಳ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿದೆ. ಇದೀಗ ಹೊಸ ತಿರುವೇನೆಂದರೆ, ಬೆಂಗಳೂರು ಅಭಿವೃದ್ಧಿ ನೋಡಿ ಕಣ್ಣು ಕುಕ್ಕಿಸಿಕೊಂಡಿದ್ದ ತಮಿಳುನಾಡು ವಿಧಿ ಇಲ್ಲವೆಂಬಂತೆ ಸಪೋರ್ಟ್ ಮಾಡುವ ಹಂತಕ್ಕೆ ಬಂದಂತಾಗಿದೆ. ಅಂದರೆ ತಮಿಳುನಾಡು ಮತ್ತು ಕರ್ನಾಟಕದ ನಡುವೆ ವಿರೋಧಾಭಾಸವಿದ್ದರೂ, ಈಗ ಎರಡೂ ನಗರಗಳ ಬೆಳವಣಿಗೆ ಸಾಧ್ಯವೆಂಬ ಮನೋಭಾವ ತೋರುತ್ತಿದೆ.
ಬೆಂಗಳೂರು ಎರಡನೇ ವಿಮಾನ ನಿಲ್ದಾಣ:
ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಯೋಜನೆ ತಡವಾಗುತ್ತಿದೆ. ಕೇಂದ್ರ ಸರ್ಕಾರವು 2033 ರವರೆಗೆ ನಿರ್ಮಾಣ ಕಾರ್ಯ ಕಷ್ಟ ಎಂದು ತಿಳಿಸಿದೆ. ಕರ್ನಾಟಕ ಸರ್ಕಾರವು ಈ ಯೋಜನೆಗೆ ಒತ್ತಡ ಹಾಕಿ, ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರುವಂತೆ ಪ್ರಯತ್ನಿಸಬೇಕು ಎಂಬ ಅಭಿಪ್ರಾಯ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗಿದೆ.
ತಮಿಳುನಾಡಿನ ಹೊಸೂರಿನ ಲಾಬಿ:
ಸಿ.ಎಸ್. ಲಕ್ಷ್ಮಿಶಾ ಅವರು ತಿಳಿಸಿದ್ದಾರೆ, ತಮಿಳುನಾಡು ಈಗ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಲಾಬಿ ಮುಂದುವರೆಸುತ್ತಿದೆ. ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ, ಕೈಗಾರಿಕಾ ಪ್ರದೇಶಗಳು ಮತ್ತು ವ್ಯಾಪಾರ ಕೇಂದ್ರಗಳಿಗೆ ಸಹಾಯವಾಗುತ್ತದೆ. ಜೊತೆಗೆ, ಬೆಂಗಳೂರು ಬ್ರ್ಯಾಂಡ್ ಬಳಸಿ ಹೊಸೂರು ಅಭಿವೃದ್ಧಿ ಮಾಡಲು ಸಹ ಅವಕಾಶ ಸಿಗುತ್ತದೆ.
ವಾಯುಪ್ರದೇಶ ಸಮಸ್ಯೆಗಳು:
ವಾಯುಪ್ರದೇಶದ ದೃಷ್ಟಿಯಿಂದ ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಸಾಧ್ಯವಿಲ್ಲವೆಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ತಾಂತ್ರಿಕ ಅಸಾಧ್ಯತೆಯ ನಡುವೆಯೂ, ತಮಿಳುನಾಡು ಸರ್ಕಾರ ತನ್ನ ಲಾಬಿಯನ್ನು ಮುಂದುವರಿಸಿದೆ. ಈ ವಿಷಯವು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಕನ್ನಡಿಗರ ಅಭಿಪ್ರಾಯಗಳು:
ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಯೋಜನೆ ಕುರಿತು ಕನ್ನಡಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಹಲವರು ರಾಜ್ಯದ ಮಧ್ಯ ಅಥವಾ ಉತ್ತರ ಭಾಗಗಳಲ್ಲಿ, ಉದಾಹರಣೆಗೆ ಹುಬ್ಬಳ್ಳಿ ಅಥವಾ ದಾವಣಗೆರೆ, ಮೂರನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ವಿಚಾರಕ್ಕೆ ಒತ್ತಾಯಿಸಿದ್ದಾರೆ. ಕರ್ನಾಟಕದಲ್ಲಿ ಬೆಳವಣಿಗೆ ಕೇಂದ್ರಿತವಾಗಿರುವುದರಿಂದ, ಬೆಂಗಳೂರಿನ ಹೊರ ಪ್ರದೇಶಗಳಿಗೂ ಸಮಾನ ಬೆಳವಣಿಗೆ ಅಗತ್ಯವಿದೆ ಎಂದು ಕೆಲವರು ಹೇಳಿದ್ದಾರೆ.
ರಾಜ್ಯದ ಸರ್ವತೋಮುಖ ಬೆಳವಣಿಗೆ:
ರಾಮನಗರ, ಕನಕಪುರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಅಭಿವೃದ್ಧಿ ಕಾಣಿಸಿಕೊಂಡಿದೆ. ಆದರೂ, ರಾಜ್ಯದ ಸಮಗ್ರ ಬೆಳವಣಿಗೆಗಾಗಿ, ಬೆಂಗಳೂರು ಮಾತ್ರವಲ್ಲದೆ ಉತ್ತರ, ಮಧ್ಯ, ದಕ್ಷಿಣ ಕರ್ನಾಟಕಗಳಿಗೂ ಸಮಾನ ಅವಕಾಶ ಸಿಗಬೇಕು ಎಂಬ ಅಭಿಪ್ರಾಯ ಹೆಚ್ಚುತ್ತಿದೆ.
ಹೊಸೂರು ವಿಮಾನ ನಿಲ್ದಾಣ ಮತ್ತು ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಯೋಜನೆಗಳು ಮುಂದಿನ ವರ್ಷಗಳಲ್ಲಿ ರಾಜ್ಯದ ವಾಣಿಜ್ಯ, ಉದ್ಯಮ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಹುಟ್ಟಿಸಬಹುದಾಗಿದೆ. ಬೆಂಗಳೂರು-ಹೊಸೂರು ಅಭಿವೃದ್ಧಿ ಚರ್ಚೆ ಮುಂದಿನ ದಿನಗಳಲ್ಲಿ ಪ್ರಮುಖ ಸುದ್ದಿಯಾಗಲಿದೆ.


Click it and Unblock the Notifications