ರಾಜಧಾನಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಮೇಲೆ, ಪ್ರಯಾಣಿಕರ ಒತ್ತಡ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಬೆಂಗಳೂರಿಗೆ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Second Ariport) ಬೇಕೇ ಬೇಕು ಬಿಡಿ. ಅದೆಷ್ಟು ಪ್ರಯಾಣಿಕರು, ಅದೆಷ್ಟು ಜನದಟ್ಟಣೆ, ಅದೆಷ್ಟು ಟ್ರಾಫಿಕ್..ಅಬ್ಬಬ್ಬಾ, ಹೆಚ್ಚುತ್ತಿರೋ ಜನಸಂಖ್ಯೆ ನೋಡಿದ್ರೆ ತಲೆ ತಿರುಗುತ್ತೆ. ಇರೋ ಒಂದು ಏರ್‌ಪೋರ್ಟ್ ಮೇಲೆ ಅದೆಷ್ಟು ಒತ್ತಡ ಅಂತೀರಾ. ಇದನ್ನೆಲ್ಲ ಗಮನಸಿರುವ ಸರ್ಕಾರ ಶತಾಯಗತಾಯ ಬೆಂಗಳೂರಿಗೆ ಎರಡನೇ ಏರ್ಪೋರ್ಟ್ ತರಬೇಕು ಎಂದು ಸಾಕಷ್ಟು ರೀತಿಯಲ್ಲಿ ಸರ್ಕಸ್ ಮಾಡುತ್ತಿದೆ. ಸ್ಥಳ ಗುರುತಿಸುವಿಕೆ, ವೆಚ್ಚ ಪರಿಶೀಲನೆ ಹೀಗೆ ಒಂದಾದ ಮೇಲೊಂದು ರೀತಿಯ ಕೆಲಸಗಳು ನಡೀತಿವೆ. ಇದರ ನಡುವೆ ಬೆಂಗಳೂರು ಎರಡನೇ ಏರ್ಪೋರ್ಟ್ ಯಾವ ಪ್ರದೇಶದಲ್ಲಿ ಆಗಬಹುದು ಎಂಬ ಅನುಮಾನಕ್ಕೂ ತೆರೆ ಬಿದ್ದಂತಾಗಿದೆ. ಇದರಿಂದ ಏರ್ಪೋರ್ಟ್ ಯೋಜನೆಗೆ ಮತ್ತಷ್ಟು ಪುಷ್ಠಿ ಸಿಕ್ಕಿದ್ದು, ನಮ್ಮ ಬೆಂಗಳೂರಲ್ಲಿ ಎರಡನೇ ಏರ್ಪೋರ್ಟ್ ಬರೋದು ಫಿಕ್ಸ್ ಅನ್ನೋ ಭರವಸೆಯನ್ನೂ ಹೆಚ್ಚಿಸಿದೆ.

ಹೌದು, ಬೆಂಗಳೂರಿಗೆ ಎರಡನೇ ಏರ್ಪೋರ್ಟ್ ಬೇಕೇ ಬೇಕು. ಈ ಬಗ್ಗೆ ಜನರಿಗೆ ಕೂಡ ಸಾಕಷ್ಟು ನೀರೀಕ್ಷೆ ಇದೆ. ಯಾಕಂದ್ರೆ ಬೆಂಗಳೂರಿಗೆ ಮತ್ತೊಂದು ಅಂತಾರಾಷ್ಟ್ರೀಯ ಏರ್ಪೋರ್ಟ್ ಬಂದರೆ, ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ. ಆದಾಯಕ್ಕೂ ಮತ್ತೊಂದು ಮೂಲ ಸಿಗುತ್ತದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿವೇಶನದ ಬೆಲೆ ಹೆಚ್ಚಾಗುತ್ತದೆ. ಇದೆಲ್ಲದರ ಕಾರಣದಿಂದ ಭಾರತದಲ್ಲಿ, ಬೆಂಗಳೂರು ಮತ್ತೊಂದು ಹಂತಕ್ಕೆ ಸಾಗುತ್ತದೆ. ಹೀಗೆ ಹಲವು ಕಾರಣಗಳಿಂದ ಬೆಂಗಳೂರಿಗೆ ಎರಡನೇ ಏರ್ಪೋರ್ಟ್ ಬೇಕಾಗಿದೆ. ಹಾಗಾದ್ರೆ ಯಾವ ಪ್ರದೇಶದಲ್ಲಿ ಬೆಂಗಳೂರು ಎರಡನೇ ಏರ್ಪೋರ್ಟ್ (Bengaluru Second Ariport) ಬರಬಹುದು ಅಂತೀರಾ.
ಸದ್ಯ ಸಿಕ್ಕಿರುವ ಮಾಹಿತಿಗಳ ಪ್ರಕಾರ ಬೆಂಗಳೂರು ದಕ್ಷಿಣ ಭಾಗದತ್ತ ಏರ್ಪೋರ್ಟ್ ನಿರ್ಮಿಸುವ ಬಗ್ಗೆ ಆಸಕ್ತಿ ಹೆಚ್ಚಾದಂತೆ ಕಾಣ್ತಿದೆ. ಇದರ ಬಗ್ಗೆ ಚರ್ಚೆಗಳು ಕೂಡ ತೀವ್ರವಾಗಿವೆ. ಸ್ಥಳ ಗುರುತಿಸುವ ಕಾರ್ಯದಲ್ಲಿ ಈ ಹಿಂದೆ ಬೆಂಗಳೂರು ಸುತ್ತ ಮುತ್ತ ವಿವಿಧ ಜಾಗಗಳನ್ನ ಗುರುತಿಸಲಾಗಿತ್ತು. ಅವುಗಳ ಪೈಕಿ ಮೂರು ಸ್ಥಳಗಳನ್ನು ಸರ್ಕಾರ ಶಾರ್ಟ್‌ಲಿಸ್ಟ್ ಮಾಡಿತ್ತು. ಈ ಶಾರ್ಟ್‌ಲಿಸ್ಟ್ ಆಗಿದ್ದ ಪೈಕಿ ಒಂದು ಸ್ಥಳವಂತೂ ಫೈನಲ್ ಮಾಡಲು ಮುಂದಾಗಿದೆ. ಮುಂದಿನ ವಾರದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು. ಹಾಗಾದ್ರೆ ಬೆಂಗಳೂರು ದಕ್ಷಿಣ ಭಾಗದಲ್ಲಿ ಯಾವ ಸ್ಥಳ ಆಯ್ಕೆಯಾಗಬಹುದು ಎಂಬ ಪ್ರಶ್ನೆ ಮೂಡಿದ್ಯಾ? ಇನ್ನು ಮುಂದೆ ಓದಿ.
ಬೆಂಗಳೂರು ದಕ್ಷಿಣ ಭಾಗದಲ್ಲಿ ಎರಡನೇ ಏರ್ಪೋರ್ಟ್ ಅಂದ್ರೆ, ಬಹುತೇಕ ಎಲ್ಲರಿಗೂ ಗೊತ್ತಿರುತ್ತೆ ಯಾವ ಜಾಗ ಅಂತ. ಒಂದು ಕನಕಪುರ ರಸ್ತೆಯ ಸೋಮನಹಳ್ಳಿ ಅಥವಾ ಚೂಡನಹಳ್ಳಿ ಭಾಗದಲ್ಲಿ ಏರ್ಪೋರ್ಟ್ ತಲೆ ಎತ್ತಬಹುದು ಅಂತ. ಹಾಗೆಯೇ ಊಹೆ ಸುಳ್ಳಾಗದಂತೆ ಈಗ ಮುನ್ನೆಲೆಗೆ ಬಂದಿರೋ ಹೆಸರು ಕೂಡ ಇವುಗಳೇ ಆಗಿವೆ. ಇತ್ತ ಬೆಂಗಳೂರು ಪಶ್ಚಿಮ ಭಾಗದಲ್ಲಿ..ಅಂದ್ರೆ ಏರ್ಪೋರ್ಟ್ ಗುರುತಿಸಿದ ಸುಮಾರು 30-40 ಕಿಮೀ ದೂರದಲ್ಲಿ ಏಷ್ಯಾದ ಅತಿ ಎತ್ತರದ ಸ್ಕೈಡೆಕ್ ನಿರ್ಮಿಸೋ ಪ್ಲಾನ್ ಕೂಡ ಮಾಡಲಾಗಿದೆ. ಈ ಸ್ಕೈಡೆಕ್ ಸುಮಾರು 250 ಮೀಟರ್ ಎತ್ತರದ್ದಾಗಿರುತ್ತೆ. ಅಲ್ಲದೇ ಇದು ವಿಮಾನಗಳ ಚಲನೆಗೆ ಅಡಚಣೆ ಉಂಟು ಮಾಡೋ ಸಾಧ್ಯತೆ ಹೆಚ್ಚಾಗಿರುವುದರಿಂದ, ಈ ಭಾಗದಲ್ಲಿ ಏರಡನೇ ಏರ್ಪೋರ್ಟ್ ನಿರ್ಮಿಸೋದು ಅನುಮಾನ. ಆದರೂ ಇದನ್ನ ಖಚಿತವಾಗಿ ಹೇಳೋಕಾಗಲ್ಲ. ಈ ಬಗ್ಗೆ ಏನೇ ಮಾಹಿತಿ ಬೇಕಿದ್ರೂ ಮುಂದಿನ ದಿನಗಳಲ್ಲಿ ಸ್ಪಷ್ಟತೆಗಾಗಿ ಕಾಯಬೇಕಿದೆ ಅಷ್ಟೇ.
ಇದೆಲ್ಲದರ ನಡುವೆ ಹೊಸ ವಿಮಾನ ನಿಲ್ದಾಣಕ್ಕೆ ಸೋಮನಹಳ್ಳಿ ಸ್ಥಳ ಅಂತಿಮವಾಗುತ್ತಾ? ಈ ಪ್ರಶ್ನೆಯೇ ಈಗ ಕಾಡುತ್ತಿರೋ ಯಕ್ಷ ಪ್ರಶ್ನೆ. ಯಾಕಂದ್ರೆ ಇತ್ತೀಚೆಗೆ ವಿಧಾನಸೌಧದಲ್ಲಿ ನಡೆದಿದ್ದ ಸಭೆಯಲ್ಲಿ ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಕನಿಷ್ಠ ಆರು ಸಂಭಾವ್ಯ ಸ್ಥಳಗಳನ್ನು ಗುರುತಿಸಿದ್ದರ ಬಗ್ಗೆ ಪ್ರಸ್ತಾಪ ಮಾಡಿದ್ರು. ಇದರ ಪೈಕಿ ಕನಕಪುರ ರಸ್ತೆಯ ಸೋಮನಹಳ್ಳಿ ಗ್ರಾಮದಲ್ಲಿ ಸೂಕ್ತ ಜಾಗ ಇದೆ ಎಂಬ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅಲ್ಲದೇ ಈ ಸ್ಥಳ ಕೆಂಪೇಗೌಡ ಏರ್ಪೋರ್ಟ್‌ನಿಂದ 70 ಕಿಮೀ ದೂರದಲ್ಲಿದೆ. ಒಂದು ವೇಳೆ ಈ ಪ್ರದೇಶದಲ್ಲಿ ಏರ್ಪೋರ್ಟ್ ನಿರ್ಮಾಣವಾದರೆ ಬೆಂಗಳೂರು ದಕ್ಷಿಣದಿಂದ ಹಿಡಿದು, ಮೈಸೂರು ರಸ್ತೆ ಜಿಲ್ಲೆಗಳಿಗೆ ಹೆಚ್ಚು ಅನುಕೂಲ ಆಗಬಹುದು ಎಂಬ ಭರವಸೆಯೂ ಮೂಡಿದೆ. ಅಲ್ಲದೇ ಇಲ್ಲಿ ವ್ಯವಹಾರಗಳೂ ಕೂಡ ವೃದ್ಧಿಯಾಗಲಿವೆ.
ಇನ್ನೂ ಗಮನದಲ್ಲಿ ಇಡಬೇಕಾದ ಒಂದು ವಿಚಾರ ಏನಂದ್ರೆ, ಸದ್ಯ ಎರಡನೇ ಏರ್ಪೋರ್ಟ್‌ಗೆ ಕನಕಪುರ ರಸ್ತೆಯ ಸೋಮನಹಳ್ಳಿ ಇನ್ನೂ ಫೈನಲ್ ಆಗಿಲ್ಲ. ಏರ್ಪೋರ್ಟ್‌ಗಾಗಿ ಸ್ಥಳ ಫೈನಲ್ ಆಗುವವರೆಗೂ ಶಾರ್ಟ್‌ಲಿಸ್ಟ್ ಸ್ಥಳವಾದ ದಾಬಸ್‌ಪೇಟೆ, ನೆಲಮಂಗಲ, ಬಿಡದಿ ಮತ್ತು ಹಾರೋಹಳ್ಳಿ ಸೇರಿದಂತೆ ಇನ್ನಿತರ ಸ್ಥಳಗಳು ಹಾಗೆಯೇ ಪಟ್ಟಿಯಲ್ಲಿರಲಿವೆ. ಈ ಯೋಜನೆ ಮೇಲೆ ರಾಜಕೀಯ ಹಿತಾಸಕ್ತಿಗಳ ಪ್ರಭಾವ ಕೂಡ ಉಂಟಾಗಲ್ಲ ಎಂದು, ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ಅವರೇ ಹೇಳಿದ್ದಾರೆ. ಸದ್ಯ ಈ ಯೋಜನೆಗೆ ಸ್ಥಳ ಅಂತಿಮಗೊಳಿಸಿಲ್ಲ. ಹಾಗೆಯೇ ಸರ್ಕಾರಕ್ಕೆ ಕಾರ್ಯಸಾಧ್ಯತಾ ವರದಿ ಸಲ್ಲಿಸಬೇಕಿದ್ದು, ಮುಂದಿನ ದಿನಗಳಲ್ಲಿ ಸ್ಥಳ ಅಂತಿಮಗೊಳ್ಳುವ ಸಾಧ್ಯತೆ ಇದೆ. ಅದೇ ರೀತಿ ಬೆಂಗಳೂರು ಎರಡನೇ ಏರ್ಪೋರ್ಟ್ ಕೂಡ ಕೆಂಪೇಗೌಡ ವಿಮಾನ ನಿಲ್ದಾಣದ ಮೇಲಿರುವ ಒತ್ತಡವನ್ನು ಕಡಿಮೆ ಮಾಡಲಿದೆ.


Click it and Unblock the Notifications