ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರವಾಗುತ್ತಿದ್ದಂತೆ, ಜಾಗತಿಕ ಮಾರುಕಟ್ಟೆ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಕಳೆದೊಂದು ವಾರದಿಂದ ಭಾರತೀಯ ಷೇರು ಮಾರುಕಟ್ಟೆ ರಕ್ತದಂತೆ ಕೆಂಪಾಗಿಬಿಟ್ಟಿದೆ. ಅಂದರೆ ಷೇರು ಮಾರುಕಟ್ಟೆ ನಷ್ಟದ (Stock Market Crash) ಹಾದಿಯಲ್ಲಿದೆ. ಇದೀಗ ವಾರದ ಆರಂಭದಲ್ಲೇ ಅಂದರೆ ಇಂದು (ಮಾರ್ಚ್ 09) ಭಾರತೀಯ ಷೇರು ಮಾರುಕಟ್ಟೆ ದಾಖಲೆ ಮಟ್ಟದಲ್ಲಿ ಕುಸಿತ ಕಂಡಿದೆ. ಈ ಪರಿಣಾಮ ಬೆಂಗಳೂರಿನ (Bengaluru) 50 ವಯಸ್ಸಿನ ಹೂಡಿಕೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕಳೆದ ಕೆಲವು ತಿಂಗಳಿಂದ ಮೃತಪಟ್ಟ ವ್ಯಕ್ತಿ ಷೇರು ಮಾರುಕಟ್ಟೆಯಲ್ಲಿ ಸಕ್ರಿಯರಾಗಿದ್ದರು ಎನ್ನಲಾಗಿದೆ. ಆದ್ರೆ ಇತ್ತೀಚೆಗೆ ಷೇರು ಮಾರುಕಟ್ಟೆ ಭಾರೀ ನಷ್ಟದಲ್ಲಿದ್ದರಿಂದ, ಆ ವ್ಯಕ್ತಿಯೂ ಭಾರೀ ನಷ್ಟಕ್ಕೊಳಗಾಗಿದ್ದರು ಎನ್ನಲಾಗಿದೆ. ಅಲ್ಲದೇ ಅದರ ಜೊತೆಗೆ ವೈಯಕ್ತಿಕ ಸಾಲಗಳು, ಆರ್ಥಿಕ ತೊಂದರೆಗಳನ್ನು ಹೊಂದಿದ್ದರು ಎನ್ನಲಾಗಿದೆ. ಈ ಪರಿಣಾಮ ಮಾನಸಿಕ ಒತ್ತಡಕ್ಕೆ ಒಳಗಾದ 50 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.ಏನಿದು ಘಟನೆ?
ಆರಂಭದಲ್ಲಿ ಹೆಬ್ಬಾಳ ರೈಲ್ವೇ ಹಳಿ ಬಳಿಯಲ್ಲಿ ಸುಮಾರು 40 ರಿಂದ 50 ವಯಸ್ಸಿನ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ ಎಂದು ವರದಿಯಾಗಿತ್ತು. ಆದ್ರೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇದೊಂದು ಆತ್ಮಹತ್ಯೆ ಎಂದು ಬಯಲಾಗಿತ್ತು. ತೀವ್ರ ತನಿಖೆ ಮಾಡಿ ನಂತರ ಇದೀಗ, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ವೆಂಕಟೇಶ್ (50) ಎಂದು ದೃಢಪಟ್ಟಿದೆ. ರೈಲು ಬರುತ್ತಿದ್ದಂತೆ ವೆಂಕಟೇಶ್ ರೈಲ್ವೇ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಘಟನೆ ತಿಳಿಯುತ್ತಿದ್ದಂತೆ ಯಶವಂತಪುರ ಮತ್ತು ಬೈಯಪ್ಪನಹಳ್ಳಿ ರೈಲ್ವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಆತ್ಮಹತ್ಯೆಗೆ ಕಾರಣವೇನು?
ಇನ್ನು ಆತ ಆತ್ಮಹತ್ಯೆ ಮಾಡಿಕೊಳ್ಳಲು ಮುಖ್ಯ ಕಾರಣವೇ ಷೇರು ಮಾರುಕಟ್ಟೆ ಎಂದು ವರದಿಯಾಗಿದೆ. ಮಧ್ಯಪ್ರಾಚ್ಯದ ಸಂಘರ್ಷದಿಂದಾಗಿ ಇತ್ತೀಚೆಗೆ ಷೇರು ಮಾರುಕಟ್ಟೆ ಭಾರೀ ನಷ್ಟದ ಹಾದಿಯಲ್ಲಿದೆ. ಅಲ್ಲದೇ ಮೃತ ವ್ಯಕ್ತಿಯೂ ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ ಅನುಭವಿಸಿದ್ದನು ಎನ್ನಲಾಗಿದೆ. ವೆಂಕಟೇಶ್ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದು, ಇತ್ತೀಚೆಗೆ ಭಾರೀ ನಷ್ಟ ಕಂಡಿದ್ದರು ಎನ್ನಲಾಗಿದೆ. ಅಲ್ಲದೇ ವೈಯಕ್ತಿಕ ಸಾಲಗಳನ್ನೂ ಮಾಡಿದ್ದರು ಎನ್ನಲಾಗಿದೆ. ಸಾಲಗಾರರೂ ಕೂಡಾ ನಿರಂತರ ಕಾಡುತ್ತಿದ್ದರು. ಈ ಎಲ್ಲಾ ಕಾರಣಗಳಿಂದ ವೆಂಕಟೇಶ್ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಅದೇ ಕಾರಣದಿಂದ ಇದೀಗ ವೆಂಕಟೇಶ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸದ್ಯ ಘಟನೆ ತಿಳಿಯುತ್ತಿದ್ದಂತೆ ಬೈಯಪ್ಪನಹಳ್ಳಿ ರೈಲ್ವೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಸದ್ಯ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.
ಷೇರು ಮಾರುಕಟ್ಟೆಯಾಗಲಿ, ಯಾವುದೇ ಹೂಡಿಕೆ ಯೋಜನೆಗಳಿರಲಿ ಸರಿಯಾಗಿ ಅರ್ಥ ಮಾಡಿಕೊಂಡು ಹಣ ಹೂಡಿಕೆ ಮಾಡಬೇಕು. ಅದರಲ್ಲೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮುನ್ನ ಹಣಕಾಸು ತಜ್ಞರ ಸಲಹೆ ಪಡೆದರೆ ಉತ್ತಮ. ಹಣದಾಸೆಯಿಂದ, ಜೀವವನ್ನೇ ಕಳೆದುಕೊಳ್ಳದಿರಿ.


Click it and Unblock the Notifications