ಬೆಂಗಳೂರಿನಲ್ಲಿ ಸಾರಿಗೆ ದಟ್ಟನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಭಾರಿ ದಟ್ಟಣೆ ನಡುವೆ ಸುಗಮವಾದ ಪ್ರಯಾಣ ಅಸಾಧ್ಯವಾಗಿ ಹೋಗಿದೆ. ಅದಕ್ಕೆಂತಲೇ ನಮ್ಮ ಮೆಟ್ರೋ ಕಾರ್ಯ ನಿರ್ವಹಿಸುತ್ತಿದ್ದರೂ ಕೂಡ, ಟ್ರಾಫಿಕ್ ಜಾಮ್ ಕಿರಿ ಕಿರಿ ಮಾತ್ರ ತಪ್ಪುತ್ತಿಲ್ಲ. ಹೀಗಾಗಿಯೇ ಇನ್ನೊಂದು ಯೋಜನೆ ಬೆಂಗಳೂರಿಗರಿಗೆ ಕಾದು ಕುಳಿದಿದೆ. ಅದೇ ಬೆಂಗಳೂರು ಉಪನಗರ ರೈಲು ಯೋಜನೆ..

ಹೌದು, ಬೆಂಗಳೂರು ಸಬ್ ಅರ್ಬನ್ ರೈಲ್ವೇ ಪ್ರಾಜೆಕ್ಟ್ ಪ್ರಯಾಣಿಕರಿಗೆ ಸುಗಮ ಪ್ರಯಾಣ ಒದಗಿಸಲೆಂದೇ ಬರುತ್ತಿದೆ. ಈ ಯೋಜನೆಯ ಇನ್ನೊಂದು ವಿಶೇಷತೆ ಏನು ಗೊತ್ತಾ? ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ ಲಿಮಿಟೆಡ್ (K-RIDE) ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ಅವರು ಹೇಳಿರುವ ಪ್ರಕಾರ, ಈ ಯೋಜನೆ ಪೂರ್ಣಗೊಂಡರೆ ದಿನನಿತ್ಯ ಸುಮಾರು 19 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಅಷ್ಟೇ ಅಲ್ಲ. ಇದರಿಂದ ನಗರ ರಸ್ತೆಗಳ ಮೇಲೆ ಬರುವ ಭಾರವು ಕಡಿಮೆ ಆಗಿ, ಸುಮಾರು 40,000 ಬಸ್‌ಗಳನ್ನು ಕಡಿಮೆ ಮಾಡುವ ಪರಿಣಾಮ ಉಂಟಾಗುತ್ತದೆ.
ಎಷ್ಟು ಕಿ.ಮೀ ಯೋಜನೆ?
ಇನ್ನು ಯೋಜನೆಯಡಿ ಬರುತ್ತಿರುವ ಉಪನಗರ ರೈಲು 148 ಕಿ.ಮೀ ಉದ್ದ ಹೊಂದಿದೆ. ಹಾಗೂ 57 ನಿಲ್ದಾಣಗಳನ್ನ ಒಳಗೊಂಡಿದೆ. ಅಲ್ಲದೇ ಯೋಜನೆಯನ್ನು 'ಸಂಪಿಗೆ', 'ಮಲ್ಲಿಗೆ', 'ಪಾರಿಜಾತ' ಮತ್ತು 'ಕನಕ' ಎಂಬ ನಾಲ್ಕು ಕಾರಿಡಾರ್‌ಗಳಲ್ಲಿ ಒಟ್ಟಾಗಿ 'ಸಂಪರ್ಕ' ಎಂಬ ಬ್ರಾಂಡ್‌ನಡಿ ರೂಪಿಸಲಾಗಿದೆ. 24 ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದುಹಾಕಿ, ಟ್ರಾಫಿಕ್ ನಿರ್ವಹಣೆಯನ್ನು ಸುಗಮಗೊಳಿಸಲಾಗುತ್ತದೆ.
ಯೋಜನೆಯ ಪ್ರಮುಖ ಲಕ್ಷಣ:
ಇನ್ನು ಈ ಯೋಜನೆಯ ಪ್ರಮುಖ ಲಕ್ಷಣ ಏನೆಂದರೆ ಮೆಟ್ರೋ, ರೈಲು ಮತ್ತು ಬಸ್ ಸೇವೆಗಳನ್ನ ಸಮನ್ವಯವಾಗಿ ಕಾರ್ಯನಿರ್ವಹಿಸೋದು. ಅಂದರೆ ಈ ಉಪನಗರ ರೈಲು ಜಾಲವು 17 ಮೆಟ್ರೋ ನಿಲ್ದಾಣಗಳು, 22 ರೈಲು ನಿಲ್ದಾಣಗಳು ಮತ್ತು ಪ್ರಮುಖ ಬಸ್ ಡಿಪೋಗಳೊಂದಿಗೆ ಸಂಪರ್ಕ ಸಾಧಿಸುತ್ತದೆ. ಎಲ್ಲಾ ನಿಲ್ದಾಣಗಳನ್ನು ಸಾರ್ವಜನಿಕರಿಗೆ ಸುಲಭ ಪ್ರವೇಶಸಾಧ್ಯತೆಯೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ಸೌರ ಫಲಕಗಳು, ನೀರು ಸಂಗ್ರಹಣೆ ವ್ಯವಸ್ಥೆಗಳು ಮತ್ತು ಪರಿಸರ ಸ್ನೇಹಿ ಕಟ್ಟಡ ತಂತ್ರಗಳು ಅನ್ವಯಿಸಲ್ಪಟ್ಟಿವೆ. ಈ ಮೂಲಕ ವರ್ಷಕ್ಕೆ 10 ಮಿಲಿಯನ್ ಟನ್ ಕಾರ್ಬನ್ ಡೈಆಕ್ಸೈಡ್ ಉಳಿತಾಯ ಮತ್ತು 22 ಮಿಲಿಯನ್ ಲೀಟರ್ ನೀರು ಸಂರಕ್ಷಿಸುವ ಗುರಿ ಹೊಂದಿದೆ.
ಇನ್ನು ಯಶವಂತಪುರ ಇಂಟರ್‌ಚೇಂಜ್ ಈ ಯೋಜನೆಯ ಪ್ರಮುಖ ಭಾಗವಾಗಿದೆ. ಇಲ್ಲಿ ಉಪನಗರ ರೈಲು, ಮೆಟ್ರೋ ಮತ್ತು ರೈಲು ಸೇವೆಗಳು ಒಂದೇ ಸ್ಥಳದಲ್ಲಿ ಸಮನ್ವಯಗೊಳ್ಳುತ್ತವೆ. ಐದು ಅಂತಸ್ತಿನ ನಿಲ್ದಾಣದಲ್ಲಿ ಎರಡು ನೆಲಮಾಳಿಗೆಯ ಪಾರ್ಕಿಂಗ್ ಹಂತಗಳು ಮತ್ತು ಜೋಡಿಸಲಾದ ಕಾರಿಡಾರ್‌ಗಳ ಮೂಲಕ ಪ್ರಯಾಣಿಕರಿಗೆ ಸುಗಮ ಪ್ರವೇಶ ದೊರೆಯುತ್ತದೆ. ಎರಡು ಉಪನಗರ ಕಾರಿಡಾರ್‌ಗಳು ಒಂದರ ಮೇಲೊಂದು ಚಲಿಸುವ ವಿನ್ಯಾಸವು ನಗರದಲ್ಲಿ ಮೊದಲ ಬಾರಿಗೆ ಅನುಷ್ಠಾನಗೊಳ್ಳುತ್ತಿದೆ.
ದಟ್ಟ ಪ್ರದೇಶಗಳಲ್ಲಿ, ಸಾಂಪ್ರದಾಯಿಕ ಫ್ಲೈಓವರ್‌ಗಳು ಸಾಧ್ಯವಾಗದಿದ್ದಾಗ, K-RIDE ನವೀನ ತಂತ್ರಜ್ಞಾನ ಬಳಸಿ ರೈಲು ಹಳಿಗಳನ್ನು ಎತ್ತರಿಸುವ ಮೂಲಕ ಸಂಚಾರದ ಅಡಚಣೆ ಇಲ್ಲದೆ ಯೋಜನೆಯನ್ನು ಮುಂದುವರಿಸುತ್ತಿದೆ.
ಈ ಯೋಜನೆಯು ನಗರಿಕರರಿಗೆ ತಡೆರಹಿತ, ಸುಗಮ, ಸುರಕ್ಷಿತ ಮತ್ತು ಪರಿಸರ ಸ್ನೇಹಿ ಪ್ರಯಾಣದ ಅವಕಾಶ ನೀಡುತ್ತದೆ. 2027 ರ ವೇಳೆಗೆ ಎಲ್ಲಾ ಕಾರಿಡಾರ್‌ಗಳು ಪೂರ್ಣಗೊಂಡರೆ, ಪ್ರತಿದಿನ 19 ಲಕ್ಷ ಪ್ರಯಾಣಿಕರನ್ನು ಸಾಗಿಸಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇಂತಹ ಉಪನಗರ ರೈಲು ಜಾಲವು ಬೆಂಗಳೂರು ನಗರದ ಸಾರಿಗೆ ವ್ಯವಸ್ಥೆಯನ್ನು ಕ್ರಾಂತಿಕಾರಿ ರೂಪದಲ್ಲಿ ಸುಧಾರಿಸುತ್ತದೆ, ದಟ್ಟಣೆ ಕಡಿಮೆ ಮಾಡುತ್ತದೆ, ಮತ್ತು ಪರಿಸರ ಸ್ನೇಹಿ, ಸುಧಾರಿತ ಸಾರ್ವಜನಿಕ ಸಾರಿಗೆಗೆ ದಾರಿ ಮಾಡುತ್ತದೆ.


Click it and Unblock the Notifications