ರಾಜ್ಯ ರಾಜಧಾನಿ ಬೆಂಗಳೂರು ನಿವಾಸಿಗಳ ಜೇಬಿಗೆ ಕತ್ತರಿ ಬೀಳುವ ಲಕ್ಷಣಗಳು ಗೋಚರಿಸುತ್ತಿದ್ದು, ಶೀಘ್ರ ನೀರಿನ ದರ ಏರಿಕೆ ಮಾಡುವ ಸುಳಿವನ್ನು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಬಿಟ್ಟಿಕೊಟ್ಟಿದ್ದಾರೆ. ಅಲ್ಲದೇ ಕಳೆದ 11 ವರ್ಷಗಳಿಂದ ನಗರದ ನೀರಿನ ದರ ಏರಿಕೆ ಮಾಡದೇ ಇರುವುದರಿಂದ ಮಂಡಳಿಗೆ ವಾರ್ಷಿಕ ₹1,000 ಕೋಟಿ ನಷ್ಟವಾಗುತ್ತಿದೆ ನೀರಿನ ಶುಲ್ಕವನ್ನು ಹೆಚ್ಚಿಸುವ ಅನಿವಾರ್ಯತೆಯಿದೆ ಎಂದು ಹೇಳಿದ್ದಾರೆ.
ಮಂಗಳವಾರ ಕಾವೇರಿ ಭವನದಲ್ಲಿ ಬಿಬಿಎಂಪಿ, ಬಿಡಿಎ, ಬಿಡಬ್ಲ್ಯುಎಸ್‌ಎಸ್‌ಬಿ, ಬಿಎಂಆರ್‌ಡಿಎ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಕುಮಾರ್, ಎಲ್ಲಾ ಉಚಿತವಾಗಿ ನೀಡಿದರೆ ಸರ್ಕಾರ ನಡೆಯಬೇಕಲ್ವಾ, ಸರ್ಕಾರ ಎಲ್ಲವನ್ನು ಸರಿದೂಗಿಸಿಕೊಂಡು ಹೋಗಬೇಕು. ಇದಲ್ಲದೇ 2014 ರಿಂದ 2024ರ ವರೆಗೆ ಸುಮಾರು 11 ವರ್ಷದಿಂದ ನೀರಿನ ದರ ಹೆಚ್ಚಿಸಿಲ್ಲ. ಬೆಂಗಳೂರು ಜಲಮಂಡಳಿ ವಾರ್ಷಿಕ ಒಂದು ಸಾವಿರ ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ವಿದ್ಯುತ್ ಬಿಲ್ ಹಿಂದೆ 35 ಕೋಟಿ ಇತ್ತು. ಈಗ 75 ಕೋಟಿ ರೂ. ಆಗುತ್ತಿದೆ. ಎಲ್ಲ ವೆಚ್ಚ ಸೇರಿ ಸುಮಾರು 85 ಕೋಟಿ ರೂ.ಗೂ ಹೆಚ್ಚು ವೆಚ್ಚವಾಗುತ್ತಿದೆ. ಹೀಗಾಗಿ ಉದ್ದೇಶಿತ ಹೆಚ್ಚಳದ ಕುರಿತು ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

'ಅಧಿಕಾರಿಗಳು ಸಲ್ಲಿಸಿದ ವರದಿಯನ್ನು ಪರಿಶೀಲಿಸಿ, ಶೀಘ್ರದಲ್ಲಿಯೇ ದರ ಏರಿಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಕ್ರಮ ನೀರಿನ ಸಂಪರ್ಕಗಳನ್ನು ಕ್ರಮಬದ್ಧಗೊಳಿಸಲು ಮತ್ತು ನೀರಿನ ಬಳಕೆಯ ನಿಖರವಾದ ಲೆಕ್ಕಪತ್ರವನ್ನು ಖಚಿತಪಡಿಸಿಕೊಳ್ಳಲು ಹಲವು ಕ್ರಮಗಳನ್ನು ಶೀಘ್ರ ಪರಿಚಯಿಸಲಾಗುವುದು.
ಬೆಂಗಳೂರು ನಗರದ ಜಲ ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಹಣಕಾಸಿನ ತೊಂದರೆಯನ್ನು ಎದುರಿಸುತ್ತಿದ್ದು, ನೀರಿನ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ. ಈ ಸಂಬಂಧ, ಮಂಡಳಿಯ ಅಧಿಕಾರಿಗಳು ಬೆಂಗಳೂರಿನ ಶಾಸಕರನ್ನು ಭೇಟಿ ಮಾಡಿ, ಈ ಸಮಸ್ಯೆಯ ತೀವ್ರತೆಯನ್ನು ತಿಳಿಸಿದ್ದಾರೆ.
ಮಂಡಳಿಯು ದೊಡ್ಡ ಪ್ರಮಾಣದ ಹಣಕಾಸಿನ ನಷ್ಟವನ್ನು ಅನುಭವಿಸುತ್ತಿದ್ದು, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಹೆಚ್ಚಿನ ಸಾಲ ನೀಡಲು ಹಿಂಜರಿಯುತ್ತಿವೆ. ಈ ಹಿನ್ನೆಲೆಯಲ್ಲಿ, ಮಂಡಳಿಯ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಮತ್ತು ಗ್ರಾಹಕರಿಗೆ ನಿರಂತರವಾಗಿ ಸಮರ್ಪಕವಾದ ನೀರು ಸರಬರಾಜು ಮಾಡಲು, ನೀರಿನ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ.
ಈ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ, ಸರ್ಕಾರವು ಎಲ್ಲಾ ಆಯಾಮಗಳನ್ನು ಪರಿಶೀಲಿಸುತ್ತಿದೆ. ಜನಸಾಮಾನ್ಯರ ಆರ್ಥಿಕ ಹೊರೆ ಹೆಚ್ಚಾಗದಂತೆ ನೋಡಿಕೊಳ್ಳುವುದರ ಜೊತೆಗೆ, ಮಂಡಳಿಯು ಸರಾಗವಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ಹಣಕಾಸಿನ ಸಂಪನ್ಮೂಲಗಳನ್ನು ಒದಗಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.
ಸ್ಲಂ ಪ್ರದೇಶಗಳಲ್ಲಿ ವಾಸಿಸುವ ಬಡವರಿಗೂ ಪ್ರತಿ ಲೀಟರ್ ನೀರಿಗೆ ಒಂದು ಪೈಸೆ ದರವನ್ನು ವಿಧಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಇದರ ಮೂಲಕ, ನೀರಿನ ಬಳಕೆಯ ಕುರಿತು ಸಂಪೂರ್ಣ ಮಾಹಿತಿ ಪಡೆಯುವುದು ಮತ್ತು ಅಕ್ರಮ ನೀರಿನ ಬಳಕೆಯನ್ನು ತಡೆಯುವುದು ನಮ್ಮ ಗುರಿಯಾಗಿದೆ.
ಸ್ಲಂ ಪ್ರದೇಶಗಳಲ್ಲಿ ಉಚಿತವಾಗಿ ನೀರು ಪೂರೈಕೆ ಮಾಡುವಾಗ, ಆ ನೀರನ್ನು ಕೆಲವು ವ್ಯಾಪಾರಿಗಳು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವ ದುರ್ವ್ಯವಹಾರ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು, ಎಲ್ಲಾ ನೀರಿನ ಸಂಪರ್ಕಗಳನ್ನು ಸಕ್ರಮಗೊಳಿಸುವ ಕ್ರಮ ಕೈಗೊಳ್ಳಲಾಗುವುದು.
ಬಡವರು ಹೆಚ್ಚಿನ ಹಣವನ್ನು ಪಾವತಿಸಲು ಆಗದಿದ್ದರೂ, ಪ್ರತಿ ಲೀಟರ್‌ಗೆ ಒಂದು ಪೈಸೆ ದರವನ್ನು ನಿಗದಿಪಡಿಸುವ ಮೂಲಕ, ನೀರಿನ ಬಳಕೆಯ ಕುರಿತು ಮಾಹಿತಿ ಪಡೆಯುವುದು ಮತ್ತು ಎಲ್ಲಾ ವರ್ಗದ ಜನರು ನೀರಿನ ಬಳಕೆಯಲ್ಲಿ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸುವುದು ನಮ್ಮ ಉದ್ದೇಶವಾಗಿದೆ.
ಈ ಕುರಿತು ಸಂಬಂಧಿತ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದ್ದು, ಶೀಘ್ರದಲ್ಲೇ ಈ ಕುರಿತು ಸಮಗ್ರ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಈ ವರದಿಯ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
"ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲರನ್ನು ಒಳಗೊಂಡಿರುವ ತೆರಿಗೆ ಪಾವತಿಗೆ ವ್ಯವಸ್ಥೆ ರೂಪಿಸಿರುವ ಮಾದರಿಯಲ್ಲಿ ನೀರಿನ ಸಂಪರ್ಕ, ಬಳಕೆಯಾಗುವ ನೀರಿನ ಬಗ್ಗೆ ನಿಖರ ಮಾಹಿತಿ ಸಿಗಬೇಕು ಎಂದು ಯೋಜನೆ ರೂಪಿಸಲಾಗಿದೆ. ಬಡವರು, ಶ್ರೀಮಂತರು, ವಸತಿ ಸಮುಚ್ಚಯಗಳು ಹೀಗೆ ಪ್ರತಿಯೊಂದು ಲೆಕ್ಕವೂ ಸಿಗಬೇಕು. ಸಾರ್ವಜನಿಕರು ಕೊಂಚವಾದರೂ ಹಣ ಪಾವತಿ ಮಾಡಿ ನೀರಿನ ಸಂಪರ್ಕ ಪಡೆಯಬೇಕು. ಅಕ್ರಮ ಸಂಪರ್ಕ ಪಡೆದಿರುವವರು ಸಕ್ರಮ ಮಾಡಿಕೊಳ್ಳಬೇಕು. ಬಿಡ್ಬ್ಯೂ ಎಸ್ ಎಸ್ ಬಿ ಉಳಿವಿಗೆ ಮತ್ತು ಎಲ್ಲರಿಗೂ ನೀರನ್ನು ಒದಗಿಸಿಕೊಡಲು ನಾವು ತೀರ್ಮಾನ ಮಾಡಬೇಕಿದೆ" ಎಂದು ಮನವಿ ಮಾಡಿದರು.
ವಿದ್ಯುತ್ ಬೆಲೆ ಕಡಿಮೆ ಮಾಡಿದ್ದೇವೆ
ಮೆಟ್ರೋ ಟಿಕೆಟ್ ಬೆಲೆ ಏರಿಕೆ ಬಗ್ಗೆ ಚರ್ಚೆಯಾಗುತ್ತಿದೆ ಜೊತೆಗೆ ನೀರಿನ ಬೆಲೆ ಏರಿಕೆಯಾದರೆ ಜನರಿಗೆ ಹೊರೆಯಾಗುವುದಿಲ್ಲವೇ ಎಂದು ಕೇಳಿದಾಗ, "ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ದರವನ್ನು ಕಡಿಮೆ ಮಾಡಿದೆ. ಬೆಲೆ ಏರಿಕೆಗೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ಇದೆಲ್ಲ ಆಗುತ್ತಿದೆ. ನೌಕರರಿಗೆ ಶೇ. 10 ರಷ್ಟು ಸಂಬಳ ಏರಿಕೆ, ಡಿಎ ಏರಿಕೆ ಮಾಡಲಾಗುತ್ತಿದೆಯಲ್ಲವೇ? ಏನೂ ಇಲ್ಲದೇ ಇನ್ನೆಷ್ಟು ದಿನ ಕಡಿಮೆ ಬೆಲೆಗೆ ನೀಡಲು ಆಗುತ್ತದೆ. ಮಂಡಳಿಯಲ್ಲಿ ನೌಕರರು ಸಂಬಳ ನೀಡಿಲ್ಲ ಎಂದು ಜಗಳ ಮಾಡುತ್ತಿದ್ದಾರೆ" ಎಂದರು.
ಬಿಡ್ಬ್ಯೂಎಸ್ಎಸ್ ಬಿಯಲ್ಲಿಯೂ ಓಟಿಎಸ್(One-Time Settlement ) ವ್ಯವಸ್ಥೆ ತರಲಾಗುವುದೇ ಎಂದು ಕೇಳಿದಾಗ, "ಇದರ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ. ನೀರಿನ ಬಿಲ್ ಬಾಕಿ ಇಟ್ಟುಕೊಂಡಿರುವವರಿಗೆ ಈ ವ್ಯವಸ್ಥೆ ತರಲು ಅಧಿಕಾರಿಗಳಿಗೆ ವರದಿ ನೀಡಿ ಎಂದು ಸೂಚಿಸಿದ್ದೇನೆ" ಎಂದರು.


Click it and Unblock the Notifications