ಬೆಂಗಳೂರಿನ ಅಭಿವೃದ್ಧಿ ಕಣ್ಣು ಕುಕ್ಕುವಂತಿದೆ. ಈಗಾಗಲೇ ವಿಶ್ವ ಮಟ್ಟದಲ್ಲಿಯೂ ತನ್ನ ಪ್ರಸಿದ್ಧಿಯನ್ನ ತೋರಿಸಿರುವ ಐಟಿ ಸಿಟಿ ಬೆಂಗಳೂರು ವರ್ಷದಿಂದ ವರ್ಷಕ್ಕೆ, ತನ್ನ ಸ್ಥಾನವನ್ನು ಹೆಚ್ಚಿಸಿಕೊಳ್ಳುತ್ತಿದೆ. ಭಾರತದ ಟಾಪ್ ನಗರಗಳಲ್ಲಿ ಒಂದಾಗಿರುವ ಬೆಂಗಳೂರು, ತನ್ನ ಮುಡಿಗೆ ಮತ್ತೊಂದು ಕಿರೀಟ ಏರಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಅಂದರೆ 2027ರ ವೇಳೆಗೆ ಭಾರತದಲ್ಲಿ ಮೊದಲ ಬಾರಿ ಮೀಸಲಾದ ಸ್ಟಾರ್ಟ್‌ಅಪ್ ಮತ್ತು ತಂತ್ರಜ್ಞಾನ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಸಿದ್ಧವಾಗುತ್ತಿದೆ. ಈ ಮಹತ್ವವಾದ ಯೋಜನೆಯನ್ನು ಬೈಯಪ್ಪನಹಳ್ಳಿಯ NGEF ಕ್ಯಾಂಪಸ್‌ನ ಮರುಉದ್ದೇಶಿತ ಸ್ವಿಚ್ ಗೇರ್ ಫ್ಯಾಕ್ಟರಿ ಶೆಡ್‌ನಲ್ಲಿ ನಡೆಯಲಿದೆ. ಈ ಸ್ಥಳ 12,000 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ.

ಇನ್ನು ವಸ್ತುಸಂಗ್ರಹಾಲಯವನ್ನು ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಮತ್ತು ಎಸ್ ಅಂಡ್ ಟಿ ಇಲಾಖೆ ಹಾಗೂ ಅನ್‌ಬಾಕ್ಸಿಂಗ್‌ಬಿಎಲ್‌ಆರ್ ನಡುವಿನ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಅಡಿಯಲ್ಲಿ ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರಾಥಮಿಕ ಹಂತದ ಉದ್ಘಾಟನೆಯ ಒಂದು ವರ್ಷದ ನಂತರ, ಎರಡನೇ ಹಂತವನ್ನು ಪ್ರಾರಂಭಿಸಲು ಯೋಜಿಸಲಾಗಿದೆ.
ಅಂದಹಾಗೆ ಈ ವಸ್ತು ಸಂಗ್ರಹಾಲಯವು ಭಾರತದ ವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯತೆಯ ಸಾಧನೆಗಳನ್ನು ಪ್ರದರ್ಶನ ಮಾಡುವ ಒಂದು ಪ್ರಮುಖ ಕೇಂದ್ರವಾಗಿದೆ. ಈ ಒಂದು ಕೇಂದ್ರವು ಯಾವ ಮಟ್ಟಕ್ಕೆ ತಲುಪಲಿದೆ ಎಂದರೆ, ನಾಲ್ಕರಿಂದ ಐದು ದಶಕಗಳ (40-50 ವರ್ಷಗಳ) ತಂತ್ರಜ್ಞಾನ ಅಭಿವೃದ್ಧಿಯನ್ನು ವಿವರಿಸುವಷ್ಟು ದೊಡ್ಡದಾಗಿದೆ. ಮತ್ತು ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಸ್ಟಾರ್ಟ್‌ಅಪ್‌ಗಳ ಕೊಡುಗೆಗಳನ್ನು ಹಿಗ್ಗಿಸಿ ತೋರಿಸುತ್ತದೆ.
ಅಂದಹಾಗೆ ವಸ್ತು ಸಂಗ್ರಹಾಲಯವು ಹಿಂದಿನ ಸಾಧನೆಗಳನ್ನು ದಾಖಲಿಸುವುದರ ಜೊತೆಗೆ, ತನ್ನ ಮುಂದಿನ ತಂತ್ರಜ್ಞಾನಗಳ ಬಗ್ಗೆ ಒಳನೋಟವನ್ನು ಕೂಡ ನೀಡುತ್ತದೆ. ಅಲ್ಲದೇ ಇದರ ವಿನ್ಯಾಸಕ್ಕಾಗಿ ಶೀಘ್ರದಲ್ಲೇ ಜಾಗತಿ ಮಟ್ಟದ ವಿನಂತಿ ಕೂಡ ಬಿಡುಗಡೆಯಾಗುವ ನಿರೀಕ್ಷೆಯಿದೆ. ಯೋಜನೆಗೆ ಸುಮಾರು 100 ಕೋಟಿ ರೂ. ಬಜೆಟ್ ನಿಗದಿಯಾಗಿದೆ. ಹಾಗೂ ಇದನ್ನು ಸುಮಾರು ಮೂರು ವರ್ಷಗಳಿಂದ ರೂಪಿಸಲಾಗುತ್ತಿದೆ.
ವಸ್ತುಸಂಗ್ರಹಾಲಯವನ್ನು ಹೆಚ್ಚು ಸಂವಾದಾತ್ಮಕವಾಗಿರಲು ವಿನ್ಯಾಸಗೊಳಿಸಲಾಗಿದ್ದು, ಅಲ್ಲಿ ಸಾಂಪ್ರದಾಯಿಕ ಪ್ರದರ್ಶನಗಳ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಅನುಭವಿಸಲು ಅವಕಾಶವಿದೆ. ಭಾರತದ ಸ್ಟಾರ್ಟ್‌ಅಪ್‌ಗಳು ಮತ್ತು ಕಂಪನಿಗಳು ಈ ಸ್ಥಳದಲ್ಲಿ ತಮ್ಮ ಪ್ರಯೋಗಗಳನ್ನು ನಡೆಸಬಹುದು ಮತ್ತು ತಮ್ಮ ತಂತ್ರಜ್ಞಾನವನ್ನು ತೋರಿಸಬಹುದು.
ಯೋಜನೆಯ ಮಾರ್ಗದರ್ಶನಕ್ಕಾಗಿ ಪ್ರಮುಖ ಉದ್ಯಮ ನಾಯಕರ ಮಂಡಳಿ ರಚಿಸಲಾಗಿದೆ. ಈ ಮಂಡಳಿಯಲ್ಲಿ ಪ್ರಕಾಶ್ ಅಧ್ಯಕ್ಷತೆಯಲ್ಲಿ ಬಯೋಕಾನ್‌ನ ಕಿರಣ್ ಮಜುಂದಾರ್-ಶಾ, ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನ ಹರಿ ಮಾರಾರ್, ಕ್ವೆಸ್ ಕಾರ್ಪ್‌ನ ಅಜಿತ್ ಅಬ್ರಹಾಂ ಐಸಾಕ್, ಮರ್ಸಿಡಿಸ್-ಬೆನ್ಜ್ ಆರ್ & ಡಿ ಯ ಮನು ರಾಮಚಂದ್ರ ಸಾಲೆ, ಸ್ಟ್ರಾಂಡ್ ಲೈಫ್ ಸೈನ್ಸಸ್‌ನ ವಿಜಯ್ ಚಂದ್ರು ಮತ್ತು ಮೈಂಡ್‌ಟ್ರೀಯ ಕೃಷ್ಣಕುಮಾರ್ ನಟರಾಜನ್ ಪ್ರಮುಖರಾಗಿ ಭಾಗವಹಿಸಿದ್ದಾರೆ. ಐಟಿ ಮತ್ತು ಬಿಟಿ ಕಾರ್ಯದರ್ಶಿ ಮಂಜುಳಾ ಎನ್ ಮತ್ತು ಐಎಎಸ್ ಅಧಿಕಾರಿ ರಾಹುಲ್ ಶರಣಪ್ಪ ಸಂಕೌರ್ ಸೇರಿದಂತೆ ಹಿರಿಯ ಸರ್ಕಾರಿ ಅಧಿಕಾರಿಗಳು ಸಹ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ಈ ವಸ್ತುಸಂಗ್ರಹಾಲಯ 11,000 ಚದರ ಮೀಟರ್ ವಿಸ್ತೀರ್ಣದ ಡೀಪ್-ಟೆಕ್ ಇನ್ಕ್ಯುಬೇಟರ್ "ಇನ್ನೋವರ್ಸ್" ಪಕ್ಕದಲ್ಲಿ ನೆಲೆಸಲಿದೆ. ಈ ಪ್ರಗತಿ ಮೂಲಕ ಬೆಂಗಳೂರು ಭಾರತದ ನಾವೀನ್ಯತೆ ರಾಜಧಾನಿಯಾಗಿ ತನ್ನ ಖ್ಯಾತಿಯನ್ನು ಮತ್ತಷ್ಟು ಬಲಪಡಿಸುವುದಕ್ಕೆ ನೆರವಾಗಲಿದೆ.


Click it and Unblock the Notifications