ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಬೆಂಗಳೂರು ಕೂಡಾ ಒಂದು. ಸದ್ಯ ಬೆಂಗಳೂರು ಉದ್ಯೋಗ ಕಲ್ಪಿಸುವಲ್ಲಿ, ವ್ಯವಹಾರ ಆರಂಭಿಸುವಲ್ಲಿ ಭಾರೀ ಮುಂಚೂಣಿಯಲ್ಲಿದೆ. ಹಲವಾರು ದಾಖಲೆಗಳಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು, ಇದೀಗ ಮತ್ತೊಂದು ಹಿರಿಮೆಗೆ ಪಾತ್ರವಾಗಿದೆ. ಐಡಿಎಫ್‌ಸಿ ಫರ್ಸ್ಟ್ ಪ್ರೈವೇಟ್ ಬ್ಯಾಂಕಿಂಗ್ ಮತ್ತು ಹುರುನ್ ಇಂಡಿಯಾ (IDFC First Private Banking & Hurun India) ಜಂಟಿಯಾಗಿ ಬಿಡುಗಡೆ ಮಾಡಿದ 2025ರ ವರದಿಯ ಪ್ರಕಾರ, ಬೆಂಗಳೂರು ಭಾರತದ ಅಗ್ರ ಸ್ಟಾರ್ಟಪ್ ಹಬ್ (Startup Hub) ಆಗಿ ತನ್ನ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 14 ಕಂಪನಿಗಳ ಇಳಿಕೆಯಾಗಿದ್ದರೂ, ಒಟ್ಟು 52 ಸ್ಟಾರ್ಟಪ್ ಕಂಪನಿಗಳೊಂದಿಗೆ ಬೆಂಗಳೂರು ಈ ಸಾಧನೆ ಮಾಡಿದೆ. ಇದೇ ರೀತಿ, ಭಾರತದಲ್ಲಿ ಅತೀ ಹೆಚ್ಚು ಉದ್ಯಮಿಗಳು ನೆಲೆಸಿರುವ ನಗರವಾಗಿಯೂ ಬೆಂಗಳೂರು ಅಗ್ರಸ್ಥಾನದಲ್ಲಿದೆ.

ಬೆಂಗಳೂರಿಗೆ ಅಗ್ರಸ್ಥಾನ!
ದೇಶದಲ್ಲಿ ಉದ್ಯಮಿಗಳು (Entrepreneurs) ವಾಸಿಸುವ ನಗರಗಳ ಪೈಕಿ ಬೆಂಗಳೂರು 88 ಸಂಸ್ಥಾಪಕರನ್ನು ಹೊಂದಿ ಅಗ್ರಸ್ಥಾನದಲ್ಲಿದೆ. ಈ ಮೂಲಕ ಬೆಂಗಳೂರಿನಲ್ಲೇ ಅತೀ ಹೆಚ್ಚು ಉದ್ಯಮಿಗಳು ಇರುವುದು ವಿಶೇಷ. ಅಷ್ಟೇ ಅಲ್ಲದ ಬಿಲಿಯನ್ ಡಾಲರ್ ಕಂಪನಿಗಳಿಗೆ ಆಸರೆ ಕೊಟ್ಟಿರುವ ನಗರಗಳ ಪಟ್ಟಿಯಲ್ಲೂ ಬೆಂಗಳೂರು ಗುರುತಿಸಿಕೊಂಡಿದೆ. ಇನ್ನು ಈ ಪಟ್ಟಿಯಲ್ಲಿ ಮುಂಬೈ 83 ಸಂಸ್ಥಾಪಕರನ್ನು ಹೊಂದಿದ್ದು, ಎರಡನೇ ಸ್ಥಾನದಲ್ಲಿದೆ. ಅದೇ ರೀತಿ ಗುರ್‌ಗಾಂವ್‌ನಲ್ಲಿ 32 ಸಂಸ್ಥಾಪಕರಿದ್ದು, ದೇಶಾದ್ಯಂತ ಸ್ವತಂತ್ರ ಸಂಸ್ಥಾಪಕರಲ್ಲಿ ಹಂತಹಂತವಾಗಿ ಬದಲಾವಣೆಯಾಗುತ್ತಿರುವ ಪರಿಸ್ಥಿತಿಯನ್ನು ಇಲ್ಲಿ ಕಾಣಬಹುದು..
ಸ್ಟಾರ್ಟಪ್ ಕಂಪನಿಗಳ ವಿಚಾರದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ, ಮುಂಬೈ 41 ಕಂಪನಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮುಂಬೈಯಲ್ಲಿ ಕಳೆದ ವರ್ಷಕ್ಕಿಂತ ಐದು ಕಂಪನಿಗಳ ಏರಿಕೆಯನ್ನು ಕಂಡಿದೆ. ಗುರ್‌ಗಾಂವ್ 36 ಕಂಪನಿಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಇದು ಕೂಡ ಐದು ಕಂಪನಿಗಳ ಹೆಚ್ಚಳವಾಗಿದೆ.
ಬೆಂಗಳೂರು ಮೂಲದ ಪ್ರಮುಖ ಸಂಸ್ಥಾಪಕರಲ್ಲಿ ಸ್ವಿಗ್ಗಿಯ ಶ್ರೀಹರ್ಷ ಮಜೆಟಿ ಮತ್ತು ನಂದನ್ ರೆಡ್ಡಿ ಕೂಡಾ ಸೇರಿದ್ದಾರೆ. ಮುಂಬೈಯಿಂದ ಅವೆನ್ಯೂ ಸೂಪರ್‌ಮಾರ್ಟ್ಸ್‌ನ ರಾಧಾಕಿಶನ್ ದಮಾನಿ ಪ್ರತಿನಿಧಿಸಿದರೆ, ಗುರ್‌ಗಾಂವ್‌ನ ಎಟರ್ನಲ್‌ನ ದೀಪಿಂದರ್ ಗೋಯಲ್ ಗಮನಾರ್ಹ ಹೆಸರುಗಳಾಗಿವೆ.
ಟಾಪ್ 10 ನಗರಗಳ ಪಟ್ಟಿಯಲ್ಲಿ ಚೆನ್ನೈ (15 ಸಂಸ್ಥಾಪಕರು), ಪುಣೆ (13), ಹೈದರಾಬಾದ್ (12), ಕೋಲ್ಕತ್ತಾ (10), ಅಹಮದಾಬಾದ್ (9) ಮತ್ತು ಜೈಪುರ (7) ಸೇರಿವೆ.
ದುಬಾರಿ ಕಂಪನಿಗಳ ಪಟ್ಟಿಯಲ್ಲೂ ಬೆಂಗಳೂರು ಅಗ್ರಸ್ಥಾನ!
ಬೆಂಗಳೂರು 52 ಉದ್ಯಮಗಳೊಂದಿಗೆ ಮುಂಚೂಣಿಯಲ್ಲಿದ್ದರೆ, ನಂತರ ಮುಂಬೈ (41) ಮತ್ತು ಗುರ್‌ಗಾಂವ್ (36) ಇವೆ. ಚೆನ್ನೈ 11 ಕಂಪನಿಗಳು, ನವದೆಹಲಿ 10, ಹೈದರಾಬಾದ್ ಮತ್ತು ಪುಣೆ ತಲಾ 8, ನೋಯ್ಡಾ 7, ಅಹಮದಾಬಾದ್ 5 ಹಾಗೂ ಜೈಪುರ ಮತ್ತು ಕೋಲ್ಕತ್ತಾ ತಲಾ 4 ಕಂಪನಿಗಳನ್ನು ಹೊಂದಿವೆ. ಸದ್ಯ ದೇಶದಲ್ಲಾಗುತ್ತಿರುವ ವ್ಯವಹಾರ ಪ್ರಗತಿಯನ್ನು ಇಲ್ಲಿ ಕಾಣಬಹುದು.
ಒಟ್ಟಾರೆಯಾಗಿ, 2025ರಲ್ಲಿ ಸ್ಟಾರ್ಟಪ್‌ಗಳನ್ನು ಸೃಷ್ಟಿಸಿರುವ ಮತ್ತು ಸಂಸ್ಥಾಪಕರು ನೆಲೆಸಿರುವ ಎರಡೂ ವಿಭಾಗಗಳಲ್ಲಿ ಬೆಂಗಳೂರು ಪ್ರಬಲ ಸ್ಥಾನ ಗಿಟ್ಟಿಕೊಂಡಿದ್ದರೂ, ಮುಂಬೈ ಮತ್ತು ಗುರ್‌ಗಾಂವ್ ಪ್ರಗತಿ ಸಾಧಿಸುತ್ತಿವೆ.


Click it and Unblock the Notifications