ಬೆಂಗಳೂರು ನಗರದಲ್ಲಿ ಸಾರಿಗೆ ವ್ಯವಸ್ಥೆ ತೀವ್ರ ಬದಲಾವಣೆಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಡೀಸೆಲ್ ಬೆಲೆ ಗಂಭೀರವಾಗಿ ಹೆಚ್ಚುತ್ತಿರುವುದರಿಂದ, ಖಾಸಗಿ ಹಾಗೂ ಸಾರ್ವಜನಿಕ ಸಾರಿಗೆ ವೆಚ್ಚವೂ ಎಡವಟ್ಟಾಗಿ ಹೆಚ್ಚುತ್ತಿದೆ. ಈ ಬೆಲೆ ಏರಿಕೆಯ ಹೊರೆ ಜನಸಾಮಾನ್ಯರ ಮೇಲೆ ಬೀಳುತ್ತಿದ್ದು, ಬಸ್ ಹಾಗೂ ಮೆಟ್ರೋ ದರಗಳ ಕೂಡಿರುವ ಹೆಚ್ಚಳ, ಮತ್ತು ಬೈಕ್ ಟ್ಯಾಕ್ಸಿಗಳ ಸೇವೆಗಳಿಗೆ ಸರಕಾರ ವಿಧಿಸಿರುವ ನಿರ್ಬಂಧ..ಹೀಗೆ ಈ ಎಲ್ಲದರಿಂದ ಪ್ರಯಾಣದ ಆಯ್ಕೆಗಳು ಕಡಿಮೆಯಾಗುತ್ತಿವೆ. ಈ ಹಿನ್ನಲೆಯಲ್ಲಿ ಕಾರ್‌ಪೂಲಿಂಗ್ ಸಂಸ್ಥೆಗಳು ತಮ್ಮ ಹಾದಿಯನ್ನು ತೆರೆಯಲು ತಯಾರಾಗಿವೆ.

ಹೌದು, ಬೆಂಗಳೂರು ನಗರದ ಸಾರಿಗೆ ವ್ಯವಸ್ಥೆ ಹಲವು ಬದಲಾವಣೆಗಳ ಹಾದಿಯಲ್ಲಿ ಸಾಗುತ್ತಿರುವಾಗ, ಕಾರ್‌ಪೂಲಿಂಗ್ ಸಂಸ್ಥೆಗಳು ತಮ್ಮ ಅಸ್ತಿತ್ವವನ್ನು ವಿಸ್ತರಿಸಲು ಸಜ್ಜಾಗಿವೆ. ಬೈಕ್ ಟ್ಯಾಕ್ಸಿಗಳಿಗೆ ನಿಷೇಧ, ಮೆಟ್ರೋ ಮತ್ತು ಬಸ್ ದರಗಳಲ್ಲಿ ಹೆಚ್ಚಳ, ಹಾಗೂ ಡೀಸೆಲ್ ಬೆಲೆಯ ಏರಿಕೆಯಿಂದ ನಗರದಲ್ಲಿ ಪ್ರಯಾಣದ ವೆಚ್ಚ ಗಗನಕ್ಕೇರಿದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಕಾರ್ ಪೂಲಿಂಗ್ ಸಂಸ್ಥೆಗಳು ಹೊಸ ಹೆಜ್ಜೆ ಇಟ್ಟಿವೆ.
ಇನ್ನು ಏಪ್ರಿಲ್ 2ರಂದು ಕರ್ನಾಟಕ ಹೈಕೋರ್ಟ್, ರ್‍ಯಾಪಿಡೋ, ಓಲಾ ಮತ್ತು ಉಬರ್ ಕಂಪನಿಗಳಿಗೆ ಮಾರ್ಗಸೂಚಿಗಳು ಇಲ್ಲದಿರುವ ಕಾರಣ ಆರು ವಾರಗಳೊಳಗೆ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಲು ಆದೇಶಿಸಿತು. ಅದೇ ಸಂದರ್ಭದಲ್ಲಿ, ರಾಜ್ಯ ಸರ್ಕಾರ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಏಪ್ರಿಲ್ 1ರಿಂದ ಲೀಟರ್‌ಗೆ ₹2ರಷ್ಟು ಹೆಚ್ಚಿಸಿದೆ. ಮೆಟ್ರೋ ದರಗಳಲ್ಲಿ 71% ಮತ್ತು ಬಿಎಂಟಿಸಿ ಬಸ್ ದರಗಳಲ್ಲಿ 15%ರಷ್ಟು ಏರಿಕೆಯಾಗಿದೆ. ಈ ಹಿಂದೆ ಇದ್ದ ವಾಹನ ಆಯ್ಕೆಗಳ ಮೇಲೆ ನಿಯಂತ್ರಣಗಳು ಬಂದಿರುವ ಈ ಹೊತ್ತಿನಲ್ಲಿ, ಕ್ವಿಕ್ ರೈಡ್, ಗೋ ಪೂಲ್. ಕ್ವಿಕ್ ರೀಚ್ ಮತ್ತು ಬ್ಲಾಬ್ಲಾ ಕಾರ್ ಮುಂತಾದ ಕಾರ್ ಪೂಲಿಂಗ್ ಪ್ಲಾಟ್‌ಫಾರ್ಮ್‌ಗಳು ಹೊಸ ಅವಕಾಶಗಳನ್ನು ಕಂಡಿವೆ.
ಕಾರ್‌ಪೂಲಿಂಗ್: ಸ್ಥಳೀಯ-ಆಂತರಾಷ್ಟ್ರೀಯ ಚಟುವಟಿಕೆ:
ಇನ್ನು ಕ್ವಿಕ್ ರೈಡ್ ನಗರದಲ್ಲಿ ದಿನನಿತ್ಯ ಕಚೇರಿಗೆ ಹೋಗುವವರಿಗಾಗಿ ಕಾರ್‌ಪೂಲಿಂಗ್ ಮೇಲೆ ಗಮನಹರಿಸಿದೆ. ಗೋಪೂಲ್ ಮತ್ತು ಕ್ವಿಕ್ ರೀಚ್ ಕಂಪನಿಗಳು ಹಳದಿ ಬೋರ್ಡ್ ಹೊಂದಿರುವ ವಾಣಿಜ್ಯ ವಾಹನಗಳನ್ನು ಬಳಸಿ ಸೇವೆ ನೀಡುತ್ತಿವೆ. ಗೋ ಪೂಲ್ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸೇವೆ ನೀಡುತ್ತಿದ್ದರೆ, ಕ್ವಿಕ್ ರೀಚ್ ನಂದಿ ಬೆಟ್ಟ ಮತ್ತು ಮೈಸೂರು ಮಾರ್ಗಗಳಿಗೆ ಸವಾರಿ ವ್ಯವಸ್ಥೆ ಒದಗಿಸುತ್ತಿದೆ. ಈ ಮಧ್ಯೆ ಪ್ಯಾರಿಸ್ ಮೂಲದ ಬ್ಲಾಬ್ಲಾ ಕಾರ್ ಉದ್ದಕ್ಕೂ ಅಂತರನಗರ ಕಾರ್‌ಪೂಲಿಂಗ್ ಸೇವೆಗಳನ್ನು ವಿಸ್ತರಿಸುತ್ತಿದೆ.
ಅಂದಹಾಗೆ ಮೋಟಾರು ವಾಹನ ಕಾಯಿದೆ ಪ್ರಕಾರ, ಬಿಳಿ ಬೋರ್ಡ್ ವಾಹನಗಳನ್ನು ಖಾಸಗಿ ಪ್ರಯಾಣಕ್ಕೆ ಮಾತ್ರ ಬಳಸಬೇಕು. ಹಳದಿ ಬೋರ್ಡ್ ವಾಹನಗಳನ್ನು ಮಾತ್ರ ಸಾರಿಗೆಗಾಗಿಯೇ ಅನುಮತಿ ಇದೆ. ಇದರಿಂದ, ಹಲವಾರು ಕಾರ್‌ಪೂಲಿಂಗ್ ಸಂಸ್ಥೆಗಳು ಹಳದಿ ಬೋರ್ಡ್ ವಾಹನಗಳ ಬಳಕೆ ಕಡೆಗೆ ತಿರುಗಿವೆ. 2023ರಲ್ಲಿ ರಾಜ್ಯ ಸರ್ಕಾರ ಕಾರ್‌ಪೂಲಿಂಗ್ ನಿಷೇಧವಿಲ್ಲ ಎಂದು ಹೇಳಿದ್ದರೂ ಲಾಭಕ್ಕಾಗಿ ಬಳಸಬಾರದು ಎಂದು ತಿಳಿಸಿತ್ತು. ಆದರೆ, ಸರಿಯಾದ ಮಾರ್ಗಸೂಚಿಗಳ ಅಭಾವದಿಂದ ಸ್ಪಷ್ಟತೆ ಇಲ್ಲದ ಸ್ಥಿತಿ ಮುಂದುವರಿದಿದೆ. ಈ ಸಂದರ್ಭದಲ್ಲಿ ಕ್ವಿಕ್ ರೈಡ್ ಸಂಸ್ಥಾಪಕ ಕೆಎನ್‌ಎಂ ರಾವ್, ಪ್ರಯಾಣದ ವೆಚ್ಚ ಏರಿಕೆಯಿಂದ ಕಾರ್‌ಪೂಲಿಂಗ್‌ಗೆ ಜನರು ಹೆಚ್ಚು ತಿರುಗುವ ಸಾಧ್ಯತೆ ಇದೆ, ಎಂದು ತಿಳಿಸಿದ್ದಾರೆ.
ಇದಿಷ್ಟೇ ಅಲ್ಲ ಕೊವಿಡ್‌ಗೆ ಮೊದಲು ದಿನಕ್ಕೆ 60,000 ಕಾರ್‌ಪೂಲ್‌ಗಳು ನಡೆಯುತ್ತಿದ್ದರೆ, ಈಗ ಅದು 20,000ಕ್ಕೆ ಇಳಿದಿದೆ. 2023ರ ಗೊಂದಲದ ಕಾರಣದಿಂದ ಇಂತಹ ಇಳಿಕೆ ಕಂಡುಬಂದಿದೆ, ಎಂದು ಅವರು ಹೇಳಿದರು. ಅವರು ಸರ್ಕಾರದಿಂದ ಶಾಶ್ವತ ಕಾರ್‌ಪೂಲಿಂಗ್ ಜಾಗೃತಿ ಫಲಕಗಳ ಸ್ಥಾಪನೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕ್ವಿಕ್‌ರೈಡ್ ಕಾರ್ಯ ಹೇಗಿರುತ್ತದೆ:
ಕ್ವಿಕ್‌ರೈಡ್ ತಂತ್ರಜ್ಞಾನದ ಮೂಲಕ ಬಳಕೆದಾರರ ಇಮೇಲ್ ಐಡಿಗಳನ್ನು ದೃಢೀಕರಿಸಿ, ಲಿಂಗ ಮತ್ತು ಉದ್ಯೋಗದ ಆಧಾರದ ಮೇಲೆ ಭದ್ರ ಕಾರ್‌ಪೂಲ್ ಆಯ್ಕೆಯನ್ನು ನೀಡುತ್ತಿದೆ. ಇನ್ನು ಪ್ರತಿ ಕಿ.ಮೀಗೆ ₹4ರಷ್ಟೇ ವ್ಯಯವಾಗುತ್ತಿದ್ದು, ದಿನಕ್ಕೆ 20 ಕಿ.ಮೀ ಪ್ರಯಾಣಿಸುವವರು ಈ ಸೇವೆ ಬಳಸಿದರೆ 80%ರಷ್ಟು ವೆಚ್ಚ ಉಳಿತಾಯ ಸಾಧ್ಯ ಎಂದು ಸಂಸ್ಥೆ ತಿಳಿಸುತ್ತದೆ.
ಗೋಪೂಲ್ ಕಾರ್ಯ ಹೇಗಿರುತ್ತದೆ:
ಗೋ ಪೂಲ್ ಸಂಸ್ಥೆ ವಿಮಾನ ನಿಲ್ದಾಣ ಸೇವೆಗಳ ಕಡೆ ಗಮನಹರಿಸಿದ್ದು, ವಿಮಾನ ನಿಲ್ದಾಣಕ್ಕೆ ಹೋಗುವ ಅಥವಾ ಬರುವ ಪ್ರಯಾಣಿಕರು ಕ್ಯಾಬ್ ಹಂಚಿಕೊಂಡು ಉಳಿತಾಯ ಮಾಡಬಹುದು. "ಪ್ರತಿ ಪ್ರಯಾಣಕ್ಕೆ ಸುಮಾರು ₹750 ಉಳಿತಾಯವಾಗುತ್ತದೆ," ಎಂದು ಸಂಸ್ಥಾಪಕ ಆಕಾಶ್ ಜಾಧವ್ ಹೇಳಿದರು. ಈ ಸಂಸ್ಥೆ 30,000ಕ್ಕೂ ಅಧಿಕ ಬಳಕೆದಾರರನ್ನು ಹೊಂದಿದ್ದು, ಪೂರಕ ಪ್ರಯಾಣದ ಅನುಭವಕ್ಕಾಗಿ ಚಾಲಕರ ಆಯ್ಕೆ, ಸುರಕ್ಷತಾ ವೈಶಿಷ್ಟ್ಯಗಳನ್ನು ಒದಗಿಸುತ್ತಿದೆ.
ಕ್ವಿಕ್ ರೀಚ್:
ಕ್ವಿಕ್ ರೀಚ್ ಬಿರುಸಾಗಿ ವಿಸ್ತಾರಗೊಳ್ಳುತ್ತಿದೆ. ಈ ಬೆಂಗಳೂರು ಮೂಲದ ಸ್ಟಾರ್ಟ್ಅಪ್ 25-350 ಕಿ.ಮೀ ಉದ್ದದ ದೀರ್ಘ ಪ್ರಯಾಣಗಳಿಗೆ ಪೂರ್ವನಿಯೋಜಿತ ಕ್ಯಾಬ್ ಹಂಚಿಕೆ ಮಾಡುತ್ತಿದೆ. ಸಂಸ್ಥಾಪಕ ಶುಭಮ್ ಜೈನ್, "ನಾವು ಅಪ್ಲಿಕೇಶನ್‌ನಲ್ಲಿ ಪ್ರಯಾಣಿಕರ ಪೂರಕ ಅನುಭವವನ್ನೇ ನೇರವಾಗಿ ನಿರ್ವಹಿಸುತ್ತೇವೆ, ಎನ್ನುತ್ತಾರೆ. ಕಳೆದ ವರ್ಷ 15,000 ಸವಾರಿಗಳನ್ನು ಈ ಸಂಸ್ಥೆ ಪೂರೈಸಿದ್ದು, 40 ಲಕ್ಷ ರೂಪಾಯಿ ಉಳಿತಾಯ ಮಾಡಿಸಿದ್ದಾರೆ.
QuickReachನ ವ್ಯತ್ಯಾಸವೆಂದರೆ, ಇಂಧನದ ಬೆಲೆ ಏರಿಕೆಯಿಂದ ಅಸ್ತವ್ಯಸ್ತವಾಗದ ಸ್ಥಿರ ದರವಾಗಿದೆ. ಉದಾಹರಣೆಗೆ, ವಿಮಾನ ನಿಲ್ದಾಣಕ್ಕೆ ಸವಾರಿ ₹1,100-₹1,500 ಬದಲು ₹500-₹550ಕ್ಕೇ ಸಿಗುತ್ತದೆ. ಇದರೊಂದಿಗೆ ಚಾಲಕರ ಆದಾಯವೂ 30-40% ಹೆಚ್ಚಾಗುತ್ತದೆ. ಕಂಪನಿಯು ಲೈವ್ ಟ್ರ್ಯಾಕಿಂಗ್, ಡ್ಯಾಶ್ ಕ್ಯಾಮ್, ಮಹಿಳೆಯರಿಗೆ ವಿಶೇಷ ಕ್ಯಾಬ್‌ಗಳ ವ್ಯವಸ್ಥೆ ಹಾಗೂ ಸುರಕ್ಷಾ ವೈಶಿಷ್ಟ್ಯಗಳೊಂದಿಗೆ ಗ್ರಾಹಕರ ನಂಬಿಕೆಗೆ ಪಾತ್ರವಾಗಿದೆ.
ಬ್ಲಾಬ್ಲಾಕಾರ್:
ಬ್ಲಾಬ್ಲಾಕಾರ್ ಕಂಪನಿ ಅಂತರನಗರ ಪ್ರಯಾಣದ ಕಡೆ ತಿರುಗಿದ್ದು, ಸರಾಸರಿ 250 ಕಿ.ಮೀ ದೂರದ ಪ್ರಯಾಣಗಳು ಹೆಚ್ಚು. 2023-24 ರ ನಡುವೆ ಸಂಸ್ಥೆ ಭಾರತೀಯ ಪ್ರಯಾಣಿಕರ ಸಂಖ್ಯೆಯನ್ನು ದ್ವಿಗುಣಗೊಳಿಸಿದ್ದು, 1 ಕೋಟಿ ಬಳಕೆದಾರರ ಗಡಿಯನ್ನು ದಾಟಿದೆ. ಬೆಂಗಳೂರು ನಗರದೊಳಗೆ ಮಾತ್ರ ಮಿಂಚಿನ ಬೆಳವಣಿಗೆ ಕಂಡಿದ್ದು, ಮಾರ್ಚ್ 2025ರ ವೇಳೆಗೆ ತಿಂಗಳಿಗೆ 70,000 ಪ್ರಯಾಣಿಕರ ಸೇವೆ ನೀಡುತ್ತಿದೆ. ಬ್ಲಾಬ್ಲಾಕಾರ್ ಅಪ್ಲಿಕೇಶನ್ ಗುರುತಿನ ದೃಢೀಕರಣ, ಪರಸ್ಪರ ಮೌಲ್ಯಮಾಪನ ಹಾಗೂ ಮಹಿಳೆಯರಿಗಾಗಿ ಮಾತ್ರ ಎಂಬ ಆಯ್ಕೆಯೊಂದಿಗೆ ಪ್ರಯಾಣವನ್ನು ಹೆಚ್ಚು ಭದ್ರಗೊಳಿಸುತ್ತದೆ. ಲಾಭಕ್ಕಾಗಿ ಚಲಿಸುವ ಕ್ಯಾಬ್ ಸೇವೆಗಿಂತ ಭಿನ್ನವಾಗಿ, ಈ ಪ್ಲಾಟ್‌ಫಾರ್ಮ್ ವೆಚ್ಚ ಹಂಚಿಕೆ ಮಾದರಿಯನ್ನು ಅನುಸರಿಸುತ್ತದೆ. ದರ ನಿಯಂತ್ರಣದ ಮೂಲಕ ಕಾನೂನು ಬದ್ಧತೆ ಉಳಿಸಿಕೊಳ್ಳಲು ತಂತ್ರಜ್ಞಾನವನ್ನು ಬಳಸುತ್ತಿದೆ. ಇವೆಲ್ಲದರ ನಡುವೆಯೂ, ಬೆಂಗಳೂರು ವಾಹನ ಸಾಗಣೆಯ ಪುನರ್ಮೂಳ್ಯಮಾಪನದ ಹಾದಿಯಲ್ಲಿದೆ. ಸಾರ್ವಜನಿಕ ಪ್ರಯಾಣ ವೆಚ್ಚ ಏರಿಕೆಯಿಂದಾಗಿ ಕಾರ್‌ಪೂಲಿಂಗ್ ಮತ್ತಷ್ಟು ಆಕರ್ಷಕ ಆಯ್ಕೆಯಾಗಿ ಹೊರಹೊಮ್ಮುತ್ತಿದೆ.
ಇಂಥ ಕಾರ್‌ಪೂಲಿಂಗ್ ಸೇವೆಗಳು ಡೀಸೆಲ್ ಬೆಲೆ ಏರಿಕೆಯಿಂದ ಬಳಲುತ್ತಿರುವ ನಾಗರಿಕರಿಗೆ ಒಂದಿಷ್ಟು ನವೋದಿತ ಪರಿಹಾರ ನೀಡುತ್ತಿವೆ. ಬಹುಪಾಲು ಜನ ದಿನನಿತ್ಯದ ಕಚೇರಿ ಪ್ರಯಾಣಗಳಲ್ಲಿ ಈ ಸೇವೆಗಳನ್ನು ಆಯ್ಕೆ ಮಾಡುತ್ತಿರುವುದು ಗಮನಾರ್ಹವಾಗಿದೆ. ಈ ಮೂಲಕ, ಸಾರಿಗೆ ವೆಚ್ಚ ತಗ್ಗಿಸುವಷ್ಟೇ ಅಲ್ಲ, ನಗರದಲ್ಲಿ ವಾಹನಗಳ ಒತ್ತಡ ಹಾಗೂ ಪಾರದರ್ಶಕತೆಯನ್ನೂ ನಿರ್ವಹಿಸುವ ಪ್ರಯತ್ನವೂ ಆಗುತ್ತಿದೆ. ಸರ್ಕಾರದಿಂದ ಇನ್ನಷ್ಟು ನಿಖರವಾದ ಮಾರ್ಗದರ್ಶನ ಸಿಕ್ಕಲ್ಲಿ ಈ ಕ್ಷೇತ್ರದಲ್ಲಿನ ಸ್ಪರ್ಧೆಯೂ, ಸೇವೆಯ ಗುಣಮಟ್ಟವೂ ಇನ್ನಷ್ಟು ಸುಧಾರಣೆಯತ್ತ ಸಾಗುವ ನಿರೀಕ್ಷೆಯಿದೆ.


Click it and Unblock the Notifications