ಸಾಮಾನ್ಯವಾಗಿ ಪ್ರತೀ ವರ್ಷ ಕರ್ನಾಟಕ ಪೊಲೀಸ್ ಇಲಾಖೆ ಟ್ರಾಫಿಕ್ ಫೈನ್ ಡಿಸ್ಕೌಂಡ್, ಇತರ ಯಾವುದಾದರೂ ದಂಡಗಳಲ್ಲಿ ವಿನಾಯಿತಿ, ನಿಯಮಗಳಲ್ಲಿ ವಿನಾಯಿತಿಯನ್ನು ನೀಡುತ್ತದೆ. ಆದ್ರೆ ಇದೀಗ ಬೆಂಗಳೂರು ನಿವಾಸಿಗಳಿಗಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಿಹಿಸುದ್ದಿಯೊಂದನ್ನು ಕೊಟ್ಟಿದೆ. ಅದೇನೆಂದರೆ ಬಾಕಿ ಉಳಿಸಿರುವ ನೀರಿನ ಬಿಲ್ ಅನ್ನು ಕ್ಲಿಯರ್ ಮಾಡುವ ಉದ್ದೇಶದಿಂದ ಬಿಡಬ್ಲ್ಯೂಎಸ್‌ಎಸ್‌ಬಿ (BWSSB) ಒನ್ ಟೈಮ್ ಸೆಟಲ್‌ಮೆಂಟ್ (OTS) ಯೋಜನೆಯೊಂದನ್ನು ಜಾರಿಗೆ ತಂದಿದೆ.

ಹೌದು, ಇದೀಗ ಬೆಂಗಳೂರು ನೀರು ಸರಬರಾಜು ಮಂಡಳಿ ಬೆಂಗಳೂರು ನಿವಾಸಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಯೋಜನೆಯನ್ನು ಜಾರಿಗೆ ತಂದಿದೆ.
ಬೆಂಗಳೂರು ನಿವಾಸಿಗಳಿಗೆ ಗುಡ್ ನ್ಯೂಸ್!
ರಾಜ್ಯ ಸಚಿವ ಸಂಪುಟ ಅನುಮೋದಿಸಿರುವ ಈ ಯೋಜನೆ, ಕೇವಲ ಅಸಲು ಮಾತ್ರ ಪಾವತಿಸುವ ಮೂಲಕ ಗ್ರಾಹಕರಿಗೆ ಬಡ್ಡಿ ಮತ್ತು ದಂಡದ ಸಂಪೂರ್ಣ ಮೊತ್ತವನ್ನು ಮನ್ನಾ ಮಾಡಲಿದೆ. ಜನವರಿ 2026 ರಿಂದ ಮಾರ್ಚ್ 2026 ರವರೆಗೆ ಜಾರಿಯಲ್ಲಿರುವ ಈ ಯೋಜನೆ ₹700 ಕೋಟಿಗೂ ಹೆಚ್ಚು ಬಾಕಿ ಇರುವ ನೀರಿನ ಬಿಲ್ ಅನ್ನು ಕ್ಲಿಯರ್ ಮಾಡುವ ಗುರಿಯನ್ನು ಹೊಂದಿದೆ.
ಈ ಮೂಲಕ ಬೆಂಗಳೂರಿನ ನಿವಾಸಿಗಳು ನೀರಿನ ಬಿಲ್‌ನ ಅಸಲು ಮೊತ್ತವನ್ನು ಏಕಕಾಲದಲ್ಲಿ ಪಾವತಿಸಿದರೆ ಬಡ್ಡಿ ಮತ್ತು ದಂಡ ಸಂಪೂರ್ಣವಾಗಿ ಮನ್ನಾ ಆಗಲಿದೆ. ಈ ಬಗ್ಗೆ ಸ್ವತಃ ರಾಜ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ಎಕ್ಸ್ ಪೇಜ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಒಂದು ಯೋಜನೆ, ಕೋಟಿ ಆದಾಯ!
ವರದಿ ಪ್ರಕಾರ, ಬೆಂಗಳೂರು ನಗರದಲ್ಲಿ ಪ್ರಸ್ತುತ ₹701 ಕೋಟಿ ನೀರಿನ ಬಿಲ್ ಬಾಕಿ ಉಳಿದಿದೆ. ಅಸಲು, ಬಡ್ಡಿ, ದಂಡ ಎಲ್ಲಾ ಸೇರಿ ಈ ಮೊತ್ತವಾಗಿದ್ದು, ಇದರಲ್ಲಿ ₹262 ಕೋಟಿ ವರ್ಷಗಳಿಂದ ಸಂಗ್ರಹವಾದ ಬಡ್ಡಿ ಮತ್ತು ದಂಡವಾಗಿದೆ. ಆದರೆ ಬಡ್ಡಿ ಮತ್ತು ದಂಡದಿಂದಾಗಿ ಬಿಲ್ ಪಾವತಿಸಲು ಹಿಂದೇಟು ಹಾಕುತ್ತಿದ್ದ ಗ್ರಾಹಕರಿಗೆ ಈ ಒನ್ ಟೈಂ ಸೆಟಲ್‌ಮೆಂಟ್ ಯೋಜನೆಯಿಂದ ಬಿಗ್ ರಿಲೀಫ್ ಸಿಗಲಿದೆ.
ಪಾವತಿ ಮಾಡುವುದು ಹೇಗೆ?
ಇನ್ನು BWSSB ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ಈ ಕುರಿತು ಮಾತನಾಡಿ, ಓಟಿಎಸ್ ಯೋಜನೆ ಸಂಪೂರ್ಣ ಪಾರದರ್ಶಕ ಮತ್ತು ಡಿಜಿಟಲ್‌ಮಯವಾಗಿದೆ ಎಂದು ಹೇಳಿದ್ದಾರೆ. ಇದು ಭ್ರಷ್ಟಾಚಾರ ತಡೆಯಲು ಮತ್ತು ಬಡ್ಡಿ ಮನ್ನಾವು ಬ್ಯಾಕೆಂಡ್ ಸಾಫ್ಟ್‌ವೇರ್ ಮೂಲಕ ಸ್ವಯಂಚಾಲಿತವಾಗಿ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ. ಗ್ರಾಹಕರು ಅಧಿಕೃತ BWSSB ವೆಬ್‌ಸೈಟ್ ಅಥವಾ ಹೊಸ ಮೊಬೈಲ್ ಅಪ್ಲಿಕೇಶನ್ ಮೂಲಕ ತಮ್ಮ ಬಾಕಿ ಉಳಿದ ನೀರಿನ ಬಿಲ್ ಪಾವತಿಸಬಹುದು.
ಸದ್ಯ ಬೆಂಗಳೂರು ಎದುರಿಸುತ್ತಿರುವ ಹಲವು ಸಮಸ್ಯೆಗಳಲ್ಲಿ ನೀರಿನ ಬಿಲ್ ಪಾವತಿ ಕೂಡಾ ಒಂದು. ಬೆಂಗಳೂರಿನಲ್ಲಿರುವಂತಹ ಸಾಕಷ್ಟು ಮನೆಗಳು ಈಗಾಗಲೇ ನೀರಿನ ಬಿಲ್ ಪಾವತಿಸಿದೆ ಸುಮ್ಮನೆ ಕುಳಿತಿದೆ. ಇದರಿಂದ ಜಲಮಂಡಳಿಯೂ ಆದಾಯದಲ್ಲಿ ನಷ್ಟ ಅನುಭವಿಸುತ್ತಿದೆ. ಆದ್ರೆ ಇದೀಗ ಈ ಆದಾಯವನ್ನು ಸರಿದೂಗಿಸುವ ನಿಟ್ಟಿನಲ್ಲಿ ಪಾಲಿಕೆ ಒನ್ ಟೈಮ್ ಸೆಟಲ್‌ಮೆಂಟ್ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ ನಾಗರಿಕರು ಕೂಡ ದೊಡ್ಡ ಹೊರೆಯಿಂದ ಪಾರಾಗಲಿದ್ದಾರೆ.


Click it and Unblock the Notifications