ಇಂದು ಬೆಂಗಳೂರಿನ ಹಲವಾರು ಭಾಗಗಳಲ್ಲಿ ಕಾವೇರಿ ನೀರು ಸರಬರಾಜು 24 ಗಂಟೆಗಳ ಕಾಲ ಸ್ಥಗಿತಗೊಳ್ಳಲಿದೆ. ಈ ತಾತ್ಕಾಲಿಕ ನೀರು ಕಡಿತದಿಂದ ಲಕ್ಷಾಂತರ ಜನರು ಪ್ರಭಾವಿತರಾಗುವ ಸಾಧ್ಯತೆ ಇದೆ. ಪೂರ್ವ ಮತ್ತು ದಕ್ಷಿಣ ಬೆಂಗಳೂರಿನ ಹಲವು ಪ್ರಮುಖ ಪ್ರದೇಶಗಳಲ್ಲಿ ನೀರು ಸರಬರಾಜು ಸಂಪೂರ್ಣವಾಗಿ ನಿಲ್ಲಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನೀರು ಸರಬರಾಜು ಸ್ಥಗಿತಗೊಳಿಸುವಿಕೆಯ ಕಾರಣ ಕಾವೇರಿ ಹಂತ 5 ಯೋಜನೆಯಡಿ ನಡೆಯುತ್ತಿರುವ ಪ್ರಮುಖ ಕಾಮಗಾರಿ. ಗೊಟ್ಟಿಗೆರೆ ಸಮತೋಲನ ಜಲಾಶಯದ ಬಳಿ ವಿದ್ಯುತ್ಕಾಂತೀಯ ಹರಿವು ಮಾಪಕಗಳನ್ನು ಅಳವಡಿಸುವ ಕೆಲಸ ನಡೆಯುತ್ತಿದೆ. ಈ ಹೊಸ ಮೀಟರ್ಗಳು ನೀರಿನ ಹರಿವು ಎಷ್ಟು ನಡೆಯುತ್ತಿದೆ ಎಂಬುದನ್ನು ನಿಖರವಾಗಿ ಅಳೆಯಲು ಸಹಾಯ ಮಾಡುತ್ತದೆ. ಇದರಿಂದ ಭವಿಷ್ಯದಲ್ಲಿ ಸೋರಿಕೆಗಳನ್ನು ಕಡಿಮೆ ಮಾಡಬಹುದು ಮತ್ತು ನೀರು ವಿತರಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.
ಅಂದಹಾಗೆ ಪೂರ್ವ ಬೆಂಗಳೂರಿನ ವೈಟ್ಫೀಲ್ಡ್, ನೆಲ್ಲೂರಹಳ್ಳಿ, ಸಿದ್ದಾಪುರ, ನಾಗೊಂಡನಹಳ್ಳಿ, ರಾಮಗೊಂಡನಹಳ್ಳಿ, ಚನ್ನಸಂದ್ರ, ಹೂಡಿ, ಗರುಡಾಚಾರ್ ಪಾಳ್ಯ, ದೊಡ್ಡನೆಕುಂದಿ ಮತ್ತು ಮುನೇಕೊಳಲು ಪ್ರದೇಶಗಳಲ್ಲಿ 24 ಗಂಟೆಗಳ ಕಾಲ ನೀರು ಸರಬರಾಜು ಇರೋದಿಲ್ಲ. ಇತ್ತ ದಕ್ಷಿಣ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್, ಪೂರ್ಣಪ್ರಜ್ಞ ಲೇಔಟ್, ಬನಶಂಕರಿ, ಕಲ್ಲಹಳ್ಳಿ, ಅಂಜನಾಪುರ, ಗೊಟ್ಟಿಗೆರೆ, ಬೇಗೂರು, ಕೋಡಿಚಿಕ್ಕನಹಳ್ಳಿ, ಕುಡ್ಲು, ಕಾಡುಗೋಡಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲೂ ನೀರು ಕಡಿತವಾಗಲಿದ್ದು ಜನಸಾಮಾನ್ಯರಿಗೆ ತೊಂದರೆ ಕಟ್ಟಿಟ್ಟ ಬುತ್ತಿಯಾಗಲಿದೆ.
ಇನ್ನು ಈ ಭಾಗಗಳಲ್ಲಿನ ಅಪಾರ್ಟ್ಮೆಂಟ್ಗಳು ಮತ್ತು ಗೇಟೆಡ್ ಸಮುದಾಯಗಳು ಸಂಗ್ರಹಿಸಿದ ನೀರು ಅಥವಾ ಖಾಸಗಿ ಟ್ಯಾಂಕರ್ಗಳ ಮೇಲೆ ಅವಲಂಬಿಸಬೇಕಾಗಬಹುದು. ಈಗಾಗಲೇ ನೀರಿನ ಕೊರತೆಯಿಂದ ಬಳಲುತ್ತಿರುವ ಹಲವಾರು ನಿವಾಸಿಗಳಿಗೆ ಇದು ತಾತ್ಕಾಲಿಕ ತೊಂದರೆ ಉಂಟುಮಾಡಬಹುದು.
ಹೀಗಾಗಿ ನಿವಾಸಿಗಳು ಮುಂಚಿತವಾಗಿ ಕುಡಿಯುವ ನೀರು ಮತ್ತು ದೈನಂದಿನ ಬಳಕೆಗೆ ಬೇಕಾದಷ್ಟು ನೀರನ್ನು ಸಂಗ್ರಹಿಸಿಕೊಳ್ಳಬೇಕು ಎಂದು ಮಂಡಳಿ ಸಲಹೆ ನೀಡಿದೆ. ನೀರನ್ನು ಜಾಗ್ರತೆಯಿಂದ ಬಳಸಬೇಕು. ವಾಹನ ತೊಳೆಯುವುದು ಅಥವಾ ಅನಗತ್ಯ ನೀರಿನ ಬಳಕೆಯನ್ನು ತಪ್ಪಿಸುವುದು ಉತ್ತಮ. ನಿವಾಸಿ ಕಲ್ಯಾಣ ಸಂಘಗಳು ಪರಸ್ಪರ ಸಹಕಾರದೊಂದಿಗೆ ತುರ್ತು ವ್ಯವಸ್ಥೆ ಮಾಡಿಕೊಳ್ಳಬಹುದು.
ಕಾಮಗಾರಿ ಪೂರ್ಣಗೊಂಡ ನಂತರ ನೀರು ಸರಬರಾಜು ಹಂತ ಹಂತವಾಗಿ ಪುನರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೂರುಗಳು ಅಥವಾ ತುರ್ತು ಟ್ಯಾಂಕರ್ ಅಗತ್ಯವಿದ್ದರೆ ಸಹಾಯವಾಣಿ ಸಂಖ್ಯೆ 1916 ಅನ್ನು ಸಂಪರ್ಕಿಸಬಹುದು.
ಈ ತಾತ್ಕಾಲಿಕ ನೀರು ಕಡಿತವು ಮುಂದಿನ ದಿನಗಳಲ್ಲಿ ಉತ್ತಮ ನೀರು ವಿತರಣೆ ಮತ್ತು ದೀರ್ಘಕಾಲೀನ ಸುಧಾರಣೆಗೆ ಸಹಾಯಕವಾಗಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.


Click it and Unblock the Notifications