ಬೆಂಗಳೂರು ಜನರಿಗೆ ಹೊಸ ತ್ಯಾಜ್ಯ ವಿಲೇವಾರಿ ಶುಲ್ಕದ ಬರೆ ಜೊತೆಗೆ, ಮತ್ತೊಂದು ಬರೆ ಬೀಳಲಿದೆ. ಅಂದರೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 2014 ರ ನಂತರ ಮೊದಲ ಬಾರಿಗೆ ನೀರಿನ ದರವನ್ನು ಪರಿಷ್ಕರಿಸಲು ನಿರ್ಧರಿಸಿದೆ. ಇದರಿಂದ ಹೇಗೇ ಆದರೂ ಬೆಂಗಳೂರು ನಗರ ನಿವಾಸಿಗಳ ಜೇಬಿಗೆ ಕತ್ತರಿ ಬೀಳಲಿದೆ.

ಹೌದು, ಬೇಸಿಗೆ ಅಂದಮೇಲೆ ಬೆಂಗಳೂರಿನ ತಾಪಮಾನ ಹೆಚ್ಚಾಗಿರುತ್ತದೆ. ಬಿಸಿಲ ಬೇಗೆಯಲ್ಲಿರು ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿಯೇ ಕಾಡುತ್ತದೆ. ಏಕೆಂದರೆ ಬೇಸಿಗೆಯಲ್ಲಿ ಬೆಂಗಳೂರು ಜನರು ಅತಿಹೆಚ್ಚು ನೀರು ಬಳಕೆ ಮಾಡುತ್ತಾರೆ. ಇದನ್ನೇ ಗಮನದಲ್ಲಿಟ್ಟುಕೊಂಡಿರುವ, ಬಿಡಬ್ಲ್ಯೂಎಸ್‌ಎಸ್‌ಬಿ ಈಗ ನೀರಿನ ದರವನ್ನು ಪರಿಷ್ಕರಿಸಲು ನಿರ್ಧರಿಸಿದೆ.ಇದರಿಂದಾಗಿ, ನಗರದಲ್ಲಿ ನೀರಿನ ಬಳಕೆದಾರರು ಪೈಪ್ ನೀರಿಗಾಗಿ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಈ ದರ ಹೆಚ್ಚಳವು ಪ್ರಾರಂಭದಲ್ಲಿ ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ನಿಗದಿಯಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದು, ಲೀಟರ್‌ಗೆ ಒಂದು ಪೈಸೆ ಹೆಚ್ಚಳ ಆಗಲಿದೆ ಎಂದು ತಿಳಿಸಿದ್ದಾರೆ.
ಹಳೆದ ಹಲವು ವರ್ಷಗಳಿಂದ BWSSB ನೀರಿನ ದರ ಹೆಚ್ಚಳದ ಬಗ್ಗೆ ಪ್ರಸ್ತಾಪಿಸುತ್ತಾ ಬರುತ್ತಿದೆ. ಆದರೆ ಸರ್ಕಾರ ಇದನ್ನು ಅನುಮೋದಿಸಿರಲಿಲ್ಲ. ಆದರೆ, ನಗರದಲ್ಲಿ ಜನಸಂಖ್ಯೆಯ ಹೆಚ್ಚಳ, ನೀರಿನ ಮೂಲ ಸಂಪತ್ತಿನ ನಿರ್ವಹಣೆ, ಮತ್ತು ನೀರಿನ ಪೂರೈಕೆಗೆ ಬರುವ ಹೆಚ್ಚುವರಿ ವೆಚ್ಚವನ್ನು ಸಮರ್ಥವಾಗಿ ಸಮರ್ಥಿಸಲು ದರ ಹೆಚ್ಚಳ ಅನಿವಾರ್ಯವೆಂದು BWSSB ಪರಿಗಣಿಸಿದೆ.
ಇನ್ನು ಮೊದಲಿನ ದರಕ್ಕೆ ಹೋಲಿಸಿದರೆ ಈಗ ಪರಿಷ್ಕರಿಸುವ ದರ ಕಡಿಮೆ ಇರುತ್ತದೆ ಎನ್ನಲಾಗಿದೆ. ಅಂದರೆ ಇದಕ್ಕೂ ಮುಂಚೆ BWSSB ಪ್ರತಿ ಲೀಟರ್ ನೀರಿಗೆ 7 ರಿಂದ 8 ಪೈಸೆ ಹೆಚ್ಚಳ ಮಾಡುವ ಪ್ರಸ್ತಾಪವನ್ನು ತಂದಿತ್ತು. ಆದರೆ, ಜನತೆಯ ಆಕ್ರೋಶ ಮತ್ತು ಹಲವಾರು ಚರ್ಚೆಗಳ ಬಳಿಕ, ಸರ್ಕಾರ ಪ್ರತಿ ಲೀಟರ್‌ಗೆ ಕೇವಲ 1 ಪೈಸೆ ಹೆಚ್ಚಳ ಮಾಡಲು ಒಪ್ಪಿಕೊಂಡಿದೆ.
ಸದ್ಯ BWSSB ದರ ಪರಿಷ್ಕರಣೆ ಕುರಿತು ಬಿಬಿಎಂಪಿ ಬಜೆಟ್‌ನಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ. ಬೆಂಗಳೂರು ಶಾಸಕರೊಂದಿಗೆ ಸಮಾಲೋಚನೆ ನಡೆಸಿದ ನಂತರ ಪರಿಷ್ಕೃತ ದರವನ್ನು ಅಧಿಕೃತವಾಗಿ ಘೋಷಿಸುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಇನ್ನು ಪರಿಷ್ಕರಿಸಿದ ಈ ಹೊಸ ನೀರಿನ ದರ ಹೆಚ್ಚಳವು 2025ರಿಂದ ಅನ್ವಯವಾಗುವ ಸಾಧ್ಯತೆ ಇದೆ.
ಅಂದಹಾಗೆ ಬೆಂಗಳೂರು ನಗರ ಬೇಸಿಗೆ ತಿಂಗಳಲ್ಲಿ ಅತಿಹೆಚ್ಚು ನೀರಿನ ಕೊರತೆಯನ್ನು ಎದುರಿಸುತ್ತಿದೆ. ಇದರಿಂದಾಗಿ, BWSSB ಹೊಸ ನೀರಿನ ಮೂಲಗಳನ್ನು ಅನ್ವೇಷಿಸಲು ಮತ್ತು ಪೂರೈಕೆಯಲ್ಲಿ ಸುಧಾರಣೆ ತರಲು ನೀರಿನ ದರ ಪರಿಷ್ಕರಣೆ ಅಗತ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ BWSSB ಹೇಳುವ ಪ್ರಕಾರ, ದರ ಹೆಚ್ಚಳದಿಂದ ನೀರಿನ ಗುಣಮಟ್ಟ ಸುಧಾರಣೆಗೆ ಸಹಾಯವಾಗಬಹುದು ಎನ್ನಲಾಗುತ್ತಿದೆ.
ಇನ್ನು ಇದರಿಂದ ಒಬ್ಬ ಸಾಮಾನ್ಯ ಬಳಕೆದಾರನಿಗೆ ತಿಂಗಳಿಗೆ ₹400 ರಿಂದ ₹500 ಹೆಚ್ಚಾಗಬಹುದು. ಇದರಿಂದ ಜನಸಾಮಾನ್ಯರು ಕೆಂಡಾಮಂಡಲವಾಗಿದ್ದಾರೆ. ಈಗಾಗಲೇ ಹೆಚ್ಚುತ್ತಿರುವ ದಿನನಿತ್ಯದ ವೆಚ್ಚಗಳಿಂದ ಕಂಗೆಟ್ಟಿದ್ದಾರೆ. ಇಂತಹ ದರ ಏರಿಕೆಯಿಂದ ಮಧ್ಯಮವರ್ಗದ ಜನರಿಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಬಹುದು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಬೆಂಗಳೂರು ನಗರ ಪ್ರತಿ ವರ್ಷ ನೀರಿನ ಕೊರತೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, BWSSB ದರ ಹೆಚ್ಚಳದ ಮೂಲಕ ನೀರಿನ ವ್ಯವಸ್ಥೆಯನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ. ಆದರೆ, ಈ ಪರಿಷ್ಕರಣೆ ಸಾಮಾನ್ಯ ಜನರ ಮೇಲೆ ಆರ್ಥಿಕ ಹೊರೆ ತಂದೊಡ್ಡಬಹುದು. ಮುಂದೆ, ಸರ್ಕಾರ ಮತ್ತು BWSSB ಈ ಬೆಳವಣಿಗೆಯನ್ನು ಹೇಗೆ ನಿರ್ವಹಿಸುತ್ತವೆ ಎಂಬುದನ್ನು ಗಮನಿಸಬೇಕು.
ಈಗಾಗಲೇ ಆಸ್ತಿ ತೆರಿಗೆ ಹೆಚ್ಚಳದ ನಿರ್ಧಾರದಿಂದ ಸಾರ್ವಜನಿಕರು ಆರ್ಥಿಕ ಹೊರೆ ಅನುಭವಿಸುತ್ತಿರುವ ಬೆನ್ನಲ್ಲೇ, ಕರ್ನಾಟಕ ಸರ್ಕಾರ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನೀರಿನ ದರವನ್ನೂ ಹೆಚ್ಚಿಸಲು ಮುಂದಾಗಿದೆ. ಇದು ನಗರದಲ್ಲಿ ಈಗಾಗಲೇ ಎದುರಾಗುತ್ತಿರುವ ನೀರಿನ ಕೊರತೆ, ಇಂಧನ ವೆಚ್ಚ, ಮತ್ತು ದಿನನಿತ್ಯದ ಬದುಕಿನ ಖರ್ಚುಗಳ ನಡುವೆ ನಾಗರಿಕರಿಗೆ ಇನ್ನಷ್ಟು ಆರ್ಥಿಕ ಒತ್ತಡವನ್ನು ಉಂಟುಮಾಡಲಿದೆ.


Click it and Unblock the Notifications