ಬೆಂಗಳೂರು ಹವಾಮಾನ ಇತ್ತೀಚೆಗೆ ದಿನೇ ದಿನೇ ದೊಡ್ಡ ಬದಲಾವಣೆಗೆ ಸಾಕ್ಷಿಯಾಗ್ತಿದೆ. ಒಮ್ಮೆ ತೀವ್ರ ಚಳಿ ಇದ್ದರೆ, ಮತ್ತೊಂದು ದಿನ ತೀವ್ರ ಒಣಹವೆ. ಹೀಗೆ ಹವಾಮಾನದಲ್ಲಿ ಆಗಾಗ ಬದಲಾವಣೆ ಕಾಣುತ್ತಿದೆ. ಕಳೆದ ಕೆಲವು ದಿನಗಳಲ್ಲಿನ ವಾತಾವರಣದಲ್ಲಿ ಸಾಕಷ್ಟು ಚಳಿ ಪ್ರಮಾಣವನ್ನು ಗಮನಿಸಿದ್ದೇವೆ. ಒಮ್ಮೊಮ್ಮೆ ತಾಪಮಾನವು 13 ಅಥವಾ 14 ಡಿಗ್ರಿವರೆಗೆ ಇಳಿಯುತ್ತದೆ. ಆದರೆ ಮಧ್ಯಾಹ್ನ ವೇಳೆಗೆ ತಾಪಮಾನವು 30 ಡಿಗ್ರಿಗೂ ಮೇಲಾಗುತ್ತದೆ. ಈ ಹವಾಮಾನ ಬದಲಾವಣೆಯು ಕೇವಲ ವಾತಾವರಣದ ಮೇಲೆ ಪರಿಣಾಮ ಬೀಳ್ತಿಲ್ಲ. ಬದಲಾಗಿ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.

ಹೌದು, ಹವಾಮಾನ ಬದಲಾವಣೆಯಿಂದ ಇತ್ತೀಚೆಗೆ ಶೀತ, ಕೆಮ್ಮು, ಜ್ವರದಂತಹ ರೋಗಗಳು ಜನರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಿವೆ. ಈ ಬಗ್ಗೆ ವೈದ್ಯರು ಕೂಡ ಕಳವಳ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಆಸ್ತಮಾ, ಬ್ರಾಂಕೈಟಿಸ್ ಅಥವಾ ಸಿಒಪಿಡಿ ಇರುವವರಿಗೆ ಸಮಸ್ಯೆ ಹೆಚ್ಚು ಕಾಣಿಸುತ್ತಿದೆ. ಬೆಳಗಿನ ಚಳಿ ಮತ್ತು ಮಧ್ಯಾಹ್ನದ ಬಿಸಿಲು ದೇಹಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿದಾಗ ಸೋಂಕುಗಳು ಸುಲಭವಾಗಿ ಹಿಡಿಯುತ್ತವೆ.
ಇನ್ನು ಕಡಿಮೆ ಆದ್ರತೆ ಮತ್ತು ಒಣಗಾಳಿ ಮೂಗು ಮತ್ತು ಗಂಟಲಿನ ಒಳಭಾಗವನ್ನು ಒಣಗಿಸುತ್ತದೆ. ಇದರಿಂದ ಸೋಂಕುಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎನ್ನಲಾಗಿದೆ. ಮಕ್ಕಳು ಮತ್ತು ವಯೋವೃದ್ಧರು ಹೆಚ್ಚು ಜಾಗ್ರತೆ ವಹಿಸಬೇಕು. ಮಧುಮೇಹ, ರಕ್ತದೊತ್ತಡ ಅಥವಾ ಶ್ವಾಸಕೋಶದ ಸಮಸ್ಯೆ ಇರುವವರು ತಾಪಮಾನ ಬದಲಾವಣೆಗೆ ಬೇಗ ಪ್ರಭಾವಿತರಾಗುತ್ತಾರೆ. ಪ್ರತಿದಿನ ಹೊರಗೆ ಕೆಲಸಕ್ಕೆ ಹೋಗುವವರು ಮಾಲಿನ್ಯ ಮತ್ತು ಬದಲಾದ ಹವಾಮಾನದಿಂದ ಆರೋಗ್ಯ ಸಮಸ್ಯೆ ಅನುಭವಿಸಬಹುದು.
ಚಳಿ ಸಮಯದಲ್ಲಿ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದರಿಂದ ರಕ್ತದೊತ್ತಡ ಹೆಚ್ಚಾಗಬಹುದು. ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ದೌರ್ಬಲ್ಯ ಮತ್ತು ತಲೆತಿರುಗುವಿಕೆ ಉಂಟಾಗಬಹುದು. ಕೆಲವರಿಗೆ ಚರ್ಮದ ಅಲರ್ಜಿ ಅಥವಾ ಸೋಂಕುಗಳೂ ಕಾಣಿಸಬಹುದು. ಈ ರೀತಿಯ ಲಕ್ಷಣಗಳು ನಾಲ್ಕು ರಿಂದ ಆರು ವಾರಗಳವರೆಗೆ ಮುಂದುವರಿಯುವ ಸಾಧ್ಯತೆ ಇದೆ.
ಈ ಸಮಯದಲ್ಲಿ ಗಮನಿಸಬೇಕಾದ ಮುಖ್ಯ ಲಕ್ಷಣಗಳು ಎಂದರೆ ಶೀತ, ಕೆಮ್ಮು, ಗಂಟಲು ನೋವು, ದೌರ್ಬಲ್ಯ, ತಲೆತಿರುಗುವಿಕೆ ಮತ್ತು ಉಸಿರಾಟದ ತೊಂದರೆ. ಇವು ಮುಂದುವರಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಸ್ವಯಂ ಔಷಧಿ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.
ಆರೋಗ್ಯ ಕಾಪಾಡಿಕೊಳ್ಳಲು ಸರಳ ಕ್ರಮಗಳನ್ನು ಅನುಸರಿಸಬೇಕು. ಸಾಕಷ್ಟು ನೀರು ಮತ್ತು ದ್ರವಗಳನ್ನು ಕುಡಿಯಬೇಕು. ಬೆಳಿಗ್ಗೆ ಮತ್ತು ಸಂಜೆ ಚಳಿಯಲ್ಲಿ ಪದರ ಪದರವಾಗಿ ಬಟ್ಟೆ ಧರಿಸಿ, ಮಧ್ಯಾಹ್ನ ಹಗುರವಾದ ಬಟ್ಟೆಗಳನ್ನು ಬಳಸಬೇಕು. ತೀವ್ರ ಬಿಸಿಲಿಗೆ ಹೆಚ್ಚು ಹೊತ್ತು ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು. ಹವಾನಿಯಂತ್ರಿತ ಕೊಠಡಿಯಿಂದ ನೇರವಾಗಿ ಬಿಸಿಯಾದ ಹೊರಗೆ ಹೋಗುವುದನ್ನು ತಪ್ಪಿಸುವುದು ಒಳಿತು. ಉತ್ತಮ ನೈರ್ಮಲ್ಯ ಪಾಲಿಸಬೇಕು. ದಿನವೂ ಕನಿಷ್ಠ ಒಂದು ಹಣ್ಣು ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಬೇಕು.
ಹವಾಮಾನ ಬದಲಾವಣೆ ಸಹಜವಾದದ್ದು. ಆದರೆ ಜಾಗ್ರತೆ ಮತ್ತು ಆರೋಗ್ಯಕರ ಜೀವನಶೈಲಿ ಮೂಲಕ ನಾವು ನಮ್ಮನ್ನು ರಕ್ಷಿಸಿಕೊಳ್ಳಬಹುದು. ಸರಿಯಾದ ಆರೈಕೆ ಮತ್ತು ಸಮಯಕ್ಕೆ ಚಿಕಿತ್ಸೆ ಪಡೆದುಕೊಂಡರೆ ಈ ಸಮಸ್ಯೆಗಳನ್ನು ನಿಯಂತ್ರಿಸಬಹುದು.


Click it and Unblock the Notifications