ಕರ್ನಾಟಕ ರಾಜಧಾನಿ ಬೆಂಗಳೂರಿನ ಹವಾಮಾನ ಸ್ಥಿತಿ ಹೇಗಿದೆ ಅನ್ನೋದು ಗೊತ್ತೇ ಇದೆ. ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಸಿಲಿನ ಬೇಗೆ ಜನರು ಕಂಗೆಟ್ಟು ಹೋಗಿದ್ದಾರೆ. ಮನೆಯಿಂದ ಹೊರಗೆ ಕಾಲಿಡೋಕೂ ಜನ ಚಿಂತಿಸುವಂತಾಗಿದೆ. ಒಂದೆರಡು ಹನಿ ಮಳೆ ನೆಲಕ್ಕೆ ಉದುರಿದರೆ ಸಾಕು ಎಂಬ ನಿರೀಕ್ಷೆಯಲ್ಲಿದ್ದಾರೆ ಜನರು. ನಗರದಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಾಗಿದ್ದು, ಇದರಿಂದಾಗಿ ಜನರು ತೀವ್ರ ಬಿಸಿಯನ್ನು ಅನುಭವಿಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ಬಿಸಿ ಮುಟ್ಟಿಸುತ್ತಿದೆ. ಬೆಂಗಳೂರಿನ ತಾಪಮಾನ.

ಇಂಥ ಹೊತ್ತಲ್ಲಿಯೇ ಭಾರತದ ಹವಾಮಾನ ಇಲಾಖೆಯಿಂದ ಒಂದು ಸಮಾಧಾನಕರ ಸುದ್ದಿ ಸಿಕ್ಕಿದೆ. ಅದೇನೆಂದರೆ ಶನಿವಾರ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ, ತಾಪಮಾನದಲ್ಲಿ ಸ್ವಲ್ಪ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಮಾಹಿತಿ ತಿಳಿಸಿದೆ. ಕರ್ನಾಟಕದ ಉತ್ತರ ಒಳನಾಡಿನಲ್ಲಿ ಬಿಸಿಗಾಳಿ ಬೀಸುವ ಮುನ್ಸೂಚನೆ ನೀಡಿದ ಬಳಿಕವೂ ಮಳೆಯ ನಿರೀಕ್ಷೆ ಎದ್ದು ಕಾಣುತ್ತಿದೆ.
ಇನ್ನು ಬೆಂಗಳೂರು ನಗರದಲ್ಲಿ ಪ್ರಸ್ತುತ ಹವಾಮಾನ ಸ್ಥಿತಿ ಹೇಗಿದೆ ಎಂದರೆ, ಮಾರ್ಚ್ 20 ರಂದು ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ಸಾಮಾನ್ಯಕ್ಕಿಂತ 0.6 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿತ್ತು ಎನ್ನಲಾಗಿದೆ. ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನವು 21.4 ಡಿಗ್ರಿ ಸೆಲ್ಸಿಯಸ್ ಎನ್ನಲಾಗಿದ್ದು, ಇದು ಕೂಡ ಮಟ್ಟಕ್ಕಿಂತ 0.9 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಬೆಳಿಗ್ಗೆಯ ವೇಳೆ ಆರ್ದ್ರತೆಯ ಪ್ರಮಾಣ 71% ಆಗಿದ್ದರೆ, ಸಂಜೆಯ ವೇಳೆಗೆ ಅದು 30%ಗೆ ಇಳಿಕೆಯಾಗಿದೆ. ಈ ವರದಿಯ ಅನುಸಾರ ನೋಡುವುದಾದರೆ, ದಿನಾಂತ್ಯಕ್ಕೆ ಹವಾಮಾನ ಸ್ಥಿತಿ ಹೆಚ್ಚು ಒಣಗಿದೆ ಎಂದು ಹೇಳಬಹುದಾಗಿದೆ. ಅಲ್ಲದೇ ಇದು ಕಳೆದ 24 ಗಂಟೆಗಳ ಅವಧಿಯಲ್ಲಿ ಯಾವುದೇ ಮಳೆಯ ದಾಖಲೆ ಇಲ್ಲ ಎಂದು ಹೇಳಲಾಗುತ್ತಿದೆ.
ಇಷ್ಟೆಲ್ಲ ಭೀಕರ ತಾಪಮಾನದ ನಡುವೆ ಅಗ್ನಿನಕ್ಷತ್ರದ ಪ್ರಭಾವದಿಂದ, ನಗರದಲ್ಲಿ ಮುಂದುವರಿಯುವ ದಿನಗಳಲ್ಲಿ ಹೆಚ್ಚಾಗಿ ಬಿಸಿ ಮತ್ತು ಒಣ ವಾತಾವರಣ ಮುಂದುವರಿಯಲಿದೆ. ಹವಾಮಾನ ಇಲಾಖೆಯ ಪ್ರಕಾರ, ಗರಿಷ್ಠ ತಾಪಮಾನವು 34 ಡಿಗ್ರಿ ಸೆಲ್ಸಿಯಸ್ ನಲ್ಲಿ ಸ್ಥಿರವಾಗುವ ಸಾಧ್ಯತೆ ಇದೆ. ಕನಿಷ್ಠ ತಾಪಮಾನವು 21 ಡಿಗ್ರಿ ಸೆಲ್ಸಿಯಸ್‌ನಿಂದ 22 ಡಿಗ್ರಿ ಸೆಲ್ಸಿಯಸ್ ನಷ್ಟು ಇರಲಿದೆ.
ಇದೆಲ್ಲದರ ನಡುವೆಯೂ ಶನಿವಾರದಂದು ಬೆಂಗಳೂರು ನಗರದಲ್ಲಿ, ಸ್ವಲ್ಪ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಮಳೆಯಾಗುವ ದಿನದ ವಾತಾವರಣ ಮೋಡ ಕವಿದಂತಿರುತ್ತದೆ. ಒಂದು ಅಥವಾ ಎರಡು ಬಾರಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗಬಹುದು. ಇದರಿಂದಾಗಿ, ಕೆಲದಿನಗಳ ಬಿಸಿಯಿಂದ ಜನರಿಗೆ ಸ್ವಲ್ಪ ತಂಪಿನ ಅನುಭವ ದೊರೆಯಬಹುದು.
ಇನ್ನು ಹವಾಮಾನದಿಂದ ಸಾಕಷ್ಟು ಬದಲಾವಣೆಗಳಾಗುತ್ತವೆ. ಈ ಬದಲಾವಣೆಗಳು ಜನಜೀವನದ ಮೇಲೆ ಪ್ರಭಾವ ಬೀರುತ್ತದೆ. ಬಸಿ ಗಾಳಿಯಿಂದ ಬಹಳಷ್ಟು ಮಂದಿಗೆ ಆರೋಗ್ಯದಲ್ಲಿ ಸಮಸ್ಯೆ ಎದುರಾಗಬಹುದು. ಬಿಸಿನೀರು ಸೇವನೆ, ಹಗಲು ಹೊತ್ತಿಗೆ ಹೊರಗೆ ಹೋಗುವುದನ್ನು ತಡೆಯುವುದು, ಲಘು ಬಟ್ಟೆ ಧರಿಸುವುದು ಮುಂತಾದ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಮೂಲಕ ಬಿಸಿಲಿನ ತಾಪಮಾನದಿಂದಾಗುವ ಪರಿಣಾಮಗಳನ್ನು ತಡೆಗಟ್ಟುತ್ತಿದ್ದಾರೆ.
ಹವಾಮಾನ ತಾಪಮಾನ ಹೆಚ್ಚಾಗಿರುವ ಕಾರಣ, ವೃದ್ದರು, ಮಕ್ಕಳು ಹಾಗೂ ಆರೋಗ್ಯ ಸಮಸ್ಯೆ ಹೊಂದಿರುವವರು ಹೆಚ್ಚಿನ ಮುಂಜಾಗ್ರತೆ ವಹಿಸಬೇಕು. ಬಿಸಿಗಾಳಿ ಮತ್ತು ತಾಪಮಾನ ಏರಿಕೆ ಪ್ರಭಾವದಿಂದ ದೇವಸ್ಥಾನ, ಉದ್ಯಾನ, ಮಾಲ್ ಮತ್ತು ಸಂಚಾರ ಸ್ಥಳಗಳಲ್ಲಿ ಹೆಚ್ಚುವರಿ ಜನಸಂದಣಿ ಕಂಡುಬರುತ್ತಿದೆ. ಮಳೆ ಬೀಳುವ ಮುನ್ಸೂಚನೆಯು ಇದಕ್ಕೆ ಸ್ವಲ್ಪ ಪರಿಹಾರ ತರಬಹುದು.
ಹಾಗೆಯೇ ಬಿಸಿಗಾಳಿಯಿಂದ ಜಾಗರೂಕರಾಗಲು ಜನರು ಹೆಚ್ಚಿನ ಪ್ರಮಾಣದ ನೀರು ಸೇವಿಸುವುದು ಉತ್ತಮ. ಅದರಲ್ಲೂ ನೀರಿಗೆ ಸಕ್ಕರೆ ಉಪ್ಪು ಹಾಕಿ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮ. ಜೊತೆಗೆ ಬೇಸಿಗೆಯಲ್ಲಿ ಸೂಕ್ತವಾದ ಬಟ್ಟೆ ಧರಿಸುವುದು, ಆರೋಗ್ಯಕ್ಕೆ ವಿಶೇಷ ಗಮನ ಕೊಡುವುದು ಮುಖ್ಯ. ಮುಂಬರುವ ಮಳೆ ಸ್ವಲ್ಪ ಶೀತಲತೆ ನೀಡಬಹುದು, ಆದರೆ ಅದರಿಂದ ಹೆಚ್ಚಿನ ಬದಲಾವಣೆಗಳ ನಿರೀಕ್ಷೆ ಬೇಡ. ನಗರವಾಸಿಗಳು ಹವಾಮಾನ ಬದಲಾವಣೆಗಳಿಗೆ ಸಿದ್ಧರಾಗಿರಬೇಕು ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.


Click it and Unblock the Notifications