ಬೆಂಗಳೂರು ನಗರದ ಬಹು ನಿರೀಕ್ಷಿತ ಮೆಟ್ರೋ ಅಂದ್ರೆ, ಸದ್ಯಕ್ಕೆ ಹಳದಿ ಮಾರ್ಗದ ಮೆಟ್ರೋ (Yellow Line)..ಈ ಯೋಜನೆಯು ಸದ್ಯ ಉದ್ಘಾಟನೆಯ ಹಂತ ತಲುಪಿದೆ. ಆಗಸ್ಟ್‌ನಲ್ಲಿ ಉದ್ಘಾಟನೆಯಾಗುತ್ತಿರುವ ಈ ಮೆಟ್ರೋ ಯೋಜನೆ, ಈಗ ಇನ್ನೂ ಒಂದು ಮಹತ್ವದ ಹಂತ ತಲುಪಿದೆ. ಹೊಸ ಅಪ್ಡೇಟ್ ಏನೆಂದರೆ ಈ ಆರ್‌ವಿ ರಸ್ತೆ - ಬೊಮ್ಮಸಂದ್ರ ಮಾರ್ಗದ ತಾಂತ್ರಿಕ ತಪಾಸಣೆ, ಜುಲೈ 22ರಿಂದ 25ರವರೆಗೆ ನಡೆಯಲಿದೆ ಅನ್ನೋದು. ಈ ಬಗ್ಗೆ BMRCL ಅಧಿಕೃತ ಮೂಲಗಳು ಮಾಹಿತಿ ಹಂಚಿಕೊಂಡಿವೆ.

ಶಾಸನಬದ್ಧ ತಪಾಸಣೆ ಹಂತಗಳು:
CMRS ಕಚೇರಿ ಜುಲೈ 18ರಂದು ಬಿಎಂಆರ್‌ಸಿಎಲ್‌ಗೆ ಕಳುಹಿಸಿದ ಪತ್ರದಲ್ಲಿ, ಜುಲೈ 22ರಿಂದ 24ರವರೆಗೆ ಶಾಸನಬದ್ಧ ತಪಾಸಣೆ ನಡೆಯಲಿದೆ ಮತ್ತು ಜುಲೈ 25ರಂದು ಹೆಚ್ಚುವರಿ ತಪಾಸಣೆಯ ಜೊತೆಗೆ ಕಾರ್ಯಾಚರಣೆ ನಿಯಂತ್ರಣ ಕೇಂದ್ರದ ಪರಿಶೀಲನೆ ನಡೆಯಲಿದೆ ಎಂದು ತಿಳಿಸಲಾಗಿದೆ.
ನಿಯಂತ್ರಣ ಕೇಂದ್ರದ ಸಮಗ್ರ ತಪಾಸಣೆ:
ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (CMRS) ಈ ಅವಧಿಯಲ್ಲಿ ನಿಲ್ದಾಣಗಳು, ಟ್ರ್ಯಾಕ್ ವ್ಯವಸ್ಥೆ, ಸಿಗ್ನಲಿಂಗ್, ಉಪಸಂರಚನೆಗಳು ಮತ್ತು ಕಾರ್ಯಾಚರಣೆ ನಿಯಂತ್ರಣ ಕೇಂದ್ರದ ಸಮಗ್ರ ತಪಾಸಣೆ ನಡೆಸಲಿದ್ದಾರೆ. ಈ 19.15 ಕಿಮೀ ಉದ್ದದ ಎತ್ತರಿತ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಿವೆ. ಮೊದಲಿಗೆ ಡಿಸೆಂಬರ್ 2021ರಲ್ಲಿ ಪೂರ್ಣಗೊಳ್ಳಬೇಕಾಗಿದ್ದರೂ, ಬೋಗಿ ಪೂರೈಕೆಯ ವಿಳಂಬ ಸೇರಿದಂತೆ ಹಲವು ಅಡಚಣೆಗಳಿಂದಾಗಿ ಯೋಜನೆ ವಿಳಂಬಗೊಂಡಿದೆ.
ಪ್ರಧಾನಿ ಉದ್ಘಾಟನೆಗೆ ಸಿದ್ಧತೆ:
ಈ ಮಾರ್ಗವನ್ನು ಆಗಸ್ಟ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸುವ ಸಾಧ್ಯತೆ ಇದ್ದು, ಬಿಎಂಆರ್‌ಸಿಎಲ್ ಈ ಕಾರ್ಯಕ್ರಮಕ್ಕಾಗಿ ಡ್ರೋನ್ ದೃಶ್ಯಗಳು, ಮಾರ್ಗದ ನಕ್ಷೆ ಮತ್ತು ನಿಲ್ದಾಣಗಳ ಮಾಹಿತಿ ಹೊಂದಿರುವ ಸಾಕ್ಷ್ಯಚಿತ್ರವನ್ನು ತಯಾರಿಸುತ್ತಿದೆ. ಹಳದಿ ಮಾರ್ಗದ ಜೊತೆಗೆ, ನಾಗಸಂದ್ರದಿಂದ ಮಾದವರವರೆಗೆ ಹಸಿರು ಮಾರ್ಗದ ವಿಸ್ತರಣೆಯೂ ಈ ಸಮಯದಲ್ಲಿ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.
ಆಗಸ್ಟ್ 12ರೊಳಗೆ ಹೆಬ್ಬಗೋಡಿ ಡಿಪೋಗೆ ಮತ್ತೊಂದು ರೈಲು:
ಬಿಎಂಆರ್‌ಸಿಎಲ್ ಪ್ರಸ್ತುತ ಮೂರು ರೈಲುಗಳನ್ನಷ್ಟೇ ಹೊಂದಿದ್ದು, ನಾಲ್ಕನೇ ರೈಲು ತಿತಾಗಢ್‌ನಿಂದ ಆಗಸ್ಟ್ 12ರೊಳಗೆ ಹೆಬ್ಬಗೋಡಿ ಡಿಪೋಗೆ ತಲುಪಲಿದೆ. ಅಕ್ಟೋಬರ್ 2025ರೊಳಗೆ ನಾಲ್ಕು ಹೆಚ್ಚುವರಿ ರೈಲುಗಳ ನಿರೀಕ್ಷೆಯಿದ್ದು, ನವೆಂಬರ್ ವೇಳೆಗೆ ಏಳು ರೈಲುಗಳನ್ನು ಸೇವೆಗೆ ಬಳಕೆ ಮಾಡಬಹುದು. ಈ ಮೂಲಕ, ಎಲ್ಲಾ ನಿಲ್ದಾಣಗಳಲ್ಲಿ 10 ನಿಮಿಷಗಳ ವ್ಯತ್ಯಯದಲ್ಲಿ ಸಂಚಾರ ಸಾಧ್ಯವಾಗಲಿದೆ.
ಬೋಗಿ ಪೂರೈಕೆ ವಿಳಂಬದ ಹಿನ್ನೆಲೆ:
ವಿಳಂಬದ ಪ್ರಮುಖ ಕಾರಣವಾಗಿ ಬೋಗಿ ಪೂರೈಕೆಯ ಸಮಸ್ಯೆ ಗುರುತಿಸಲಾಗಿದೆ. ಚೀನಾದ CRRC ಸಂಸ್ಥೆ ಪ್ರಾಥಮಿಕ ಪೂರೈಕೆದಾರರಾಗಿದ್ದರೂ, ಮೇಕ್ ಇನ್ ಇಂಡಿಯಾ ನೀತಿ, ಎಫ್‌ಡಿಐ ನಿಯಮಗಳು ಮತ್ತು ಕೋವಿಡ್ ನಿರ್ಬಂಧಗಳಿಂದಾಗಿ ಪೂರೈಕೆ ವಿಳಂಬವಾಯಿತು. ನಂತರ CRRC ಮತ್ತು ಟಿಟಾಗಢ್ ರೈಲು ಸಂಸ್ಥೆಗಳು ಒಟ್ಟಾಗಿ ಬೋಗಿಗಳನ್ನು ತಯಾರಿಸುತ್ತಿವೆ. ಚೀನಾದ ಇಂಜಿನಿಯರ್‌ಗಳಿಗೆ ವೀಸಾ ವಿಳಂಬ, ಜಪಾನ್‌ನ ಪ್ರೊಪಲ್ಷನ್ ವ್ಯವಸ್ಥೆ ತಡವಾಗಿ ಬರುವುದರಿಂದಲೂ ಪರೀಕ್ಷಾ ಪ್ರಕ್ರಿಯೆಯಲ್ಲಿ ವಿಳಂಬ ಉಂಟಾಯಿತು.
ಕೊನೆಗೂ ಬೆಳಕು ಕಾಣುತ್ತಿರುವ ಹಳದಿ ಮಾರ್ಗ:
ಇದರಿಂದಾಗಿ ಹಲವಾರು ವರ್ಷಗಳ ನಿರೀಕ್ಷೆಯ ನಂತರ, ಬೆಂಗಳೂರಿನ ಹಳದಿ ಮಾರ್ಗದ ಮೆಟ್ರೋ ಹಾದಿ ಕೊನೆಗೂ ಜನಸೇವೆಗೆ ಸಿದ್ಧವಾಗುತ್ತಿರುವುದು ನಗರದ ಸಾರಿಗೆ ವ್ಯವಸ್ಥೆಗೆ ಮಹತ್ವದ ಬೆಳವಣಿಗೆ.


Click it and Unblock the Notifications