ಬೆಂಗಳೂರು ಮೆಟ್ರೋ ಹಳದಿ ಮಾರ್ಗದ ಆರ್‌ವಿ ರಸ್ತೆ, ಬೊಮ್ಮಸಂದ್ರ ಆಗಸ್ಟ್‌ನಲ್ಲಿ ಮೆಟ್ರೋ ಕಾರ್ಯಾಚರಣೆ ಆರಂಭವಾಗುವ ನಿರೀಕ್ಷೆಯಿದೆ. ಈ ಭಾಗದಲ್ಲಿ ಪ್ರಸ್ತುತ ಸುರಕ್ಷತಾ ತಪಾಸಣೆಗಳು ನಡೆಯುತ್ತಿದ್ದು, ಈ ಮಾರ್ಗದ ಆರಂಭದತ್ತ ಹೆಜ್ಜೆಗಳು ವೇಗವಾಗಿ ನಡೆಯುತ್ತಿವೆ. ಮಂಗಳವಾರದಿಂದಲೇ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ (CMRS) ತಂಡವು ಮೋಟಾರ್ ಟ್ರಾಲಿ ಮೂಲಕ ಹಳಿ ಮೇಲಿನ ಪರಿಶೀಲನೆ ಕಾರ್ಯ ಆರಂಭಿಸಿದೆ.

ಭಾರತದ ಮೊದಲ ಚಾಲಕರಹಿತ ಸಿಬಿಟಿಸಿ ತಂತ್ರಜ್ಞಾನ:
18.8 ಕಿಲೋಮೀಟರ್ ಉದ್ದದ ಈ ಹಳದಿ ಮಾರ್ಗವು ಎಲೆಕ್ಟ್ರಾನಿಕ್ ಸಿಟಿ ಐಟಿ ಹಬ್‌ನ್ನು ದಕ್ಷಿಣ ಬೆಂಗಳೂರು ಭಾಗಗಳೊಂದಿಗೆ ನೇರವಾಗಿ ಸಂಪರ್ಕಿಸುತ್ತದೆ. ಈ ಮಾರ್ಗದಲ್ಲಿ ಸಿಬಿಟಿಸಿ (CBTC - Communication Based Train Control) ಎಂಬ ವಿಶ್ವದ ಹೊಸ ತಂತ್ರಜ್ಞಾನವನ್ನು ನಮ್ಮ ಮೆಟ್ರೋ ಬಳಸುತ್ತಿದ್ದು, ಇದು ಭಾರತದಲ್ಲಿ ಮೆಟ್ರೋ ಜಾಲದಲ್ಲಿ ಮೊದಲ ಬಾರಿ ಪ್ರಯೋಗವಾಗುತ್ತಿರುವುದು.
ಈ ಸುಧಾರಿತ ವ್ಯವಸ್ಥೆಯಿಂದ ರೈಲಿನ ಗತಿಮಾನದ ನಿಯಂತ್ರಣ, ಟ್ರ್ಯಾಕ್‌ನ ತಿರುವುಗಳು, ನಿಲ್ದಾಣಗಳ ನಿಖರ ನಿಲುಗಡೆಗಳು, ಮತ್ತು ಸಿಗ್ನಲ್ ವ್ಯವಸ್ಥೆಯ ಕಾರ್ಯಕ್ಷಮತೆ ಮತ್ತಷ್ಟು ಸುಧಾರಣೆಯಾಗುತ್ತದೆ. ಇದರಿಂದಾಗಿ ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ಸಮಯಪಾಲನೆಯ ಸೇವೆ ದೊರೆಯುವ ನಿರೀಕ್ಷೆಯಿದೆ.
16 ನಿಲ್ದಾಣಗಳ ಮಾರ್ಗ, ಹಸಿರು ಮಾರ್ಗದೊಂದಿಗೆ ಸಂಪರ್ಕ:
ಈ ಹಳದಿ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಿವೆ. ವಿಶೇಷವೆಂದರೆ, ಆರ್‌ವಿ ರಸ್ತೆಯಲ್ಲಿನ ನಿಲ್ದಾಣದಲ್ಲಿ ಹಸಿರು ಮಾರ್ಗದೊಂದಿಗೆ ಸಂಪರ್ಕ (ಇಂಟರ್‌ಚೇಂಜ್) ಸೌಲಭ್ಯ ದೊರೆಯುತ್ತದೆ. ಇದರಿಂದ ದಕ್ಷಿಣ ಬೆಂಗಳೂರು ಹಾಗೂ ನಗರ ಕೇಂದ್ರದ ನಡುವೆ ಪ್ರಯಾಣ ಸುಲಭವಾಗಲಿದ್ದು, ನಿತ್ಯ ಪ್ರಯಾಣಿಕರ ಅನುಭವವನ್ನು ಸುಧಾರಿಸುತ್ತದೆ.
ಆಗಸ್ಟ್‌ನಲ್ಲಿ ಲೋಡ್ ಟೆಸ್ಟ್ ಮತ್ತು ಸಿಗ್ನಲ್ ಪರೀಕ್ಷೆಗಳು:
ವಾಣಿಜ್ಯ ಚಾಲನೆಗೆ ಅಗತ್ಯವಿರುವ ನಾಲ್ಕನೇ ಮೆಟ್ರೋ ರೈಲು ಆಗಸ್ಟ್ ಮೊದಲ ವಾರದಲ್ಲಿ ಆಗಮಿಸುವ ನಿರೀಕ್ಷೆಯಿದೆ. ಅದನ್ನಪ್ಪಿ ಲೋಡ್ ಪರೀಕ್ಷೆ (Load Test), ಸಿಗ್ನಲ್ ಪ್ರಯೋಗಗಳು ಮತ್ತು ಇತರೆ ಅಂತಿಮ ತಪಾಸಣೆಗಳನ್ನು ಬಿಎಂಟಿಸಿ ಅಧಿಕಾರಿಗಳು ಶೀಘ್ರದಲ್ಲೇ ನಡೆಸಲಿದ್ದಾರೆ.
ಈ ಪರೀಕ್ಷೆಗಳಲ್ಲಿ ಎಲ್ಲವೂ ಯಶಸ್ವಿಯಾಗಿ ಪೂರ್ಣಗೊಂಡರೆ, ಆಗಸ್ಟ್‌ನ ಮೂರನೇ ವಾರದ ಹೊತ್ತಿಗೆ ಹಳದಿ ಮಾರ್ಗದ ಮೆಟ್ರೋ ಸೇವೆ ಸಾರ್ವಜನಿಕ ಬಳಕೆಗೆ ಲಭ್ಯವಾಗುವ ಸಾಧ್ಯತೆ ಇದೆ. ಪ್ರಾರಂಭದಲ್ಲಿ ರೈಲುಗಳು ಸುಮಾರು 25 ನಿಮಿಷಗಳ ವಿರಾಮದಲ್ಲಿ ಸಂಚಾರ ಮಾಡಲಿದ್ದು, ಹಂತ ಹಂತವಾಗಿ ಹೆಚ್ಚು ಸಂಚಾರ ಸಂಖ್ಯೆ ಏರಿಸಲಾಗುವುದು.
ಎಲೆಕ್ಟ್ರಾನಿಕ್ ಸಿಟಿಯಂತಹ ಉದ್ಯಮ ಕ್ಷೇತ್ರಕ್ಕೆ ನೇರ ಮೆಟ್ರೋ ಸಂಪರ್ಕ ಸಿಗುತ್ತಿರುವುದು ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಬಹುಮುಖ್ಯ ಹೆಜ್ಜೆಯಾಗಿದೆ. ಈ ಹಳದಿ ಮಾರ್ಗದ ಆರಂಭದಿಂದಾಗಿ ದೈನಂದಿನ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಲಿದ್ದು, ಸಾವಿರಾರು ಐಟಿ ಉದ್ಯೋಗಿಗಳಿಗೆ ಸಮಯಬದ್ಧ ಮತ್ತು ಆರಾಮದಾಯಕ ಸಂಚಾರದ ಅನುಭವ ಸಿಗಲಿದೆ.


Click it and Unblock the Notifications