ಬ್ಯುಸಿನೆಸ್ (Business) ಆರಂಭಿಸಬೇಕು, ಸಕ್ಸಸ್ (Success) ಕಾಣಬೇಕು ಎಂಬುದು ಹಲವರ ಕನಸು. ಆದರೆ ಏನ್ ಮಾಡೋದು ನಷ್ಟದ ಭಯದಿಂದ ಹೆಚ್ಚಿನವರು ಯಾವುದೇ ವ್ಯವಹಾರ ಆರಂಭಿಸದೇ ಹಾಗೇ ಇದ್ದು ಬಿಡುತ್ತಾರೆ. ಆದ್ರೆ ಅತೀ ಸಣ್ಣ ವಯಸಲ್ಲೇ ಬ್ಯುಸಿನೆಸ್ ಆರಂಭಿಸಿ ಯಶಸ್ವಿ ಕಂಡವರು ಹಲವರಿದ್ದಾರೆ. ಇದೀಗ ಅಂಥದ್ದೇ ಕಥೆಯೊಂದನ್ನು ಇಲ್ಲಿ ತಿಳಿಸುತ್ತೇವೆ.

ಬೀದಿ ಬದಿ ಮಾರಾಟದ ಬಗ್ಗೆ ಹೆಚ್ಚಿನವರು ಕೀಳಾಗಿ ನೋಡುತ್ತಾರೆ. ಅಲ್ಲದೇ ಕೆಲವರಂತೂ ಬೀದಿ ಬದಿಯಲ್ಲ ಮಾರಾಟ ಮಾಡುವ ತಿಂಡಿ, ಆಹಾರಗಳನ್ನೂ ತಿನ್ನೋಕು ಹೋಗಲ್ಲ. ಆದ್ರೆ ಇಲ್ಲೊಬ್ಬರು ಬೆಂಗಳೂರಿನಲ್ಲಿ ಬೀದಿಬದಿ ಮೋಮೋ ಮಾರಾಟ ಮಾಡುವ ಮೂಲಕ 31 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.
31 ಲಕ್ಷ ಆದಾಯ ಗಳಿಸುತ್ತಿದ್ದಾರೆ ಮೊಮೊ ವ್ಯಾಪಾರಿ!
ಬೆಂಗಳೂರಿನಲ್ಲಿ ಬೀದಿಬದಿ ಮೊಮೊ ಮಾರಾಟಗಾರರೊಬ್ಬರು ತಿಂಗಳಿಗೆ ₹31 ಲಕ್ಷ ಆದಾಯ ಸಂಪಾದಿಸುವುದಾಗಿ ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಆದಾಯ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ವಿಷಯ ಡಿಜಿಟಲ್ ಕ್ರಿಯೇಟರ್ ಒಬ್ಬರು ಶೇರ್ ಮಾಡಿಕೊಂಡ ವಿಡಿಯೋದಿಂದಾಗಿ ಭಾರೀ ವೈರಲ್ ಆಗಿದೆ. ಅಲ್ಲದೇ ಅದೇ ವಿಡಿಯೋದಲ್ಲಿ ಮೊಮೊ ಸ್ಟಾಲ್‌ನಲ್ಲಿ ಸಹಾಯಕರಾಗಿ ಕೆಲಸ ಮಾಡಿಕೊಂಡಿರುವುದನ್ನು ಸಹ ಹಂಚಿಕೊಂಡಿದ್ದಾರೆ.
ಡಿಜಿಟಲ್ ಕ್ರಿಯೇಟರ್ ಆಗಿರುವ ಕ್ಯಾಸ್ಸಿ ಪರೀರಾ ಎಂಬವರು ಕೆ.ಕೆ. ಮೋಮೋಸ್ ಅಂಡ್ ಸೂಪ್ಸ್ ಸ್ಟಾಲ್‌ನಲ್ಲಿ ಮೊಮೊಗಳನ್ನು ಫ್ರೈ ಮಾಡುವುದು, ಗ್ರಾಹಕರಿಗೆ ಬಡಿಸಲು ಮತ್ತು ನಿರಂತರ ಗ್ರಾಹಕರನ್ನು ನಿಭಾಯಿಸಲು ಸಹಾಯ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಕೇವಲ ಒಂದು ಗಂಟೆಯಲ್ಲಿ 118 ಪ್ಲೇಟ್‌ಗಳು ಮಾರಾಟವಾಗಿವೆ ಎಂದು ಹೇಳಿಕೊಂಡಿರುವ ಡಿಜಿಟಲ್ ಕ್ರಿಯೇಟರ್, ಮಾರಾಟ ಮುಗಿಯುವ ಹೊತ್ತಿಗೆ ಸುಮಾರು 950 ಪ್ಲೇಟ್‌ಗಳು ಮಾರಾಟವಾಗಿದ್ದು, ಒಂದು ಪ್ಲೇಟ್‌ಗೆ ₹110 ರಂತೆ, ದಿನದ ಆದಾಯ ಸುಮಾರು ₹1,00,000 ರೂ.ನಷ್ಟು ತಲುಪಿದೆ ಎನ್ನಲಾಗಿದೆ..
ಇದನ್ನೇ ಅರ್ಥಮಾಡಿಕೊಂಡ ಡಿಜಿಟಲ್ ಕ್ರಿಯೇಟರ್ ಕ್ಯಾಸ್ಸಿ ಪರೀರಾ, ದಿನಕ್ಕೆ ಒಂದು ಲಕ್ಷ ಆದಾಯ ಸಂಪಾದಿಸುವ ಈ ಮೊಮೊ ವ್ಯಾಪಾರಿ, ತಿಂಗಳ ಅಂತ್ಯದಲ್ಲಿ ₹31 ಲಕ್ಷ ಗಳಿಕೆ ಮಾಡುತ್ತಾರೆ ಎಂದು ಹೇಳಿದ್ದಾರೆ. "ಶ್ರದ್ಧೆ ಮತ್ತು ಪರಿಶ್ರಮದಿಂದ ಅವರು ಲಕ್ಷಗಟ್ಟಲೆ ಆದಾಯ ಗಳಿಕೆ ಮಾಡುತ್ತಿದ್ದಾರೆ" ಎಂದು ಪರೀರಾ ವ್ಯಾಪಾರಿಯನ್ನು ಶ್ಲಾಘಿಸಿದ್ದಾರೆ.
ಪೋಸ್ಟ್ ಮಾಡಿದಾಗಿನಿಂದ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಎಂಟು ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಆದರೆ, ಮೊಮೊ ವ್ಯಾಪಾರಿ ಅಥವಾ ಪರೀರಾ ವ್ಯಾಪಾರದ ನಿವ್ವಳ ಲಾಭ ಎಷ್ಟು ಎಂಬುದನ್ನು ಬಹಿರಂಗ ಮಾಡಿಲ್ಲ.. ಕೆಲವರು ಈ ವಿಡಿಯೋ ನೋಡಿ ಮೊಮೊ ವ್ಯಾಪಾರಿಯ ಯಶಸ್ಸಿಗೆ ಶ್ಲಾಘನೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಲೆಕ್ಕಾಚಾರ ಹೇಗೆ ಎಂಬುದನ್ನೂ ಕೆಲವರು ಪ್ರಶ್ನೆ ಮಾಡಿದ್ದಾರೆ.
ಒಬ್ಬ ಬಳಕೆದಾರರು ಈ ವಿಡಿಯೋ ನೋಡಿ, "ಅದು ಸುಳ್ಳು, ಬೀದಿಬದಿಯಲ್ಲಿ ಒಂದು ಪ್ಲೇಟ್ ಮೊಮೊಗೆ ₹110 ಬೆಲೆ ಇರಲು ಸಾಧ್ಯವಿಲ್ಲ ಮತ್ತು 900+ ಪ್ಲೇಟ್‌ಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಸಮಯದ ಮೂಲಕ ವ್ಯಾಪಾರವನ್ನು ಹೋಲಿ ಮಾಡಿದ್ದು, "ಪ್ರತಿ ಗ್ರಾಹಕನಿಗೆ ಒಂದು ನಿಮಿಷ ಕಳೆದರೆ, 900 ಪ್ಲೇಟ್‌ಗಳಿಗೆ 900 ನಿಮಿಷಗಳು ಬೇಕಾಗುತ್ತವೆ. ಅಂದರೆ ವಿರಾಮವಿಲ್ಲದೆ 15 ಗಂಟೆ ವ್ಯಾಪಾರ ಮಾಡುತ್ತಾರಾ?" ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications