ಇನ್ನೇನು ಒಂದು ವಾರ ಬಾಕಿ ಇದೆ. 2025 ಕಳೆದು 2026ನೇ ವರ್ಷ ಆಗಮನವಾಗಲಿದೆ. ಈ ಮಧ್ಯೆ ಹೊಸ ವರ್ಷದ ಆಗಮನಕ್ಕಾಗಿ ಬೆಂಗಳೂರು ಸಜ್ಜಾಗಿ ನಿಂತಿದೆ. ಪಾರ್ಟಿ ಹಾಟ್‌ಸ್ಪಾಟ್‌ಗಳು (Party Hotspot), ಮಾಲ್‌ಗಳು (Mall), ರೆಸಾರ್ಟ್‌ಗಳು ಈಗಾಗಲೇ ತುಂಬಿ ತುಳುಕುತ್ತಿದೆ. ಅದರಲ್ಲೂ ಕ್ರಿಸ್‌ಮಸ್ ಹಬ್ಬಕ್ಕೆ ರಜೆ ತೆಗೆದುಕೊಂಡವರು ಇನ್ನು ಬರೋದು ಮಾತ್ರ ಹೊಸ ವರ್ಷದ (New Year) ನಂತರವೇ. ಆದರೆ ಇದೀಗ ಬೆಂಗಳೂರಿನಲ್ಲಿ ಹೊಸ ವರ್ಷ ಆಚರಣೆಗೆ ಕಠಿಣ ನಿಯಮ ಜಾರಿ ಮಾಡಲಾಗಿದೆ.

ಹೊಸ ವರ್ಷದ ಆಚರಣೆ ವೇಳೆ ಯಾವುದೇ ದುರಂತ ನಡೆಯದಂತೆ ಮತ್ತು ಅಕ್ರಮ ಚಟುವಟಿಕೆಗಳು ನಡೆಯದಂತೆ ಇದೀಗ ಬೆಂಗಳೂರು ಪೊಲೀಸರು ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಅಲ್ಲದೇ ಇದನ್ನು ಉಲ್ಲಂಘನೆ ಮಾಡುವವರಿಗೆ ಖಡಕ್ ವಾರ್ನಿಂಗ್ ಅನ್ನೂ ನೀಡಿದ್ದಾರೆ.
ಬೆಂಗಳೂರು ಕಮಿಷನರ್ ಖಡಕ್ ವಾರ್ನಿಂಗ್!
ಹೊಸ ವರ್ಷಕ್ಕೆ ಈಗಾಗಲೇ ಖಾಕಿ ಪಡೆ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಂಡಿದೆ. ಇದೀಗ ಬೆಂಗಳೂರು ಕಮಿಷನರ್ ಸೀಮಂತ್ ಕುಮಾರ್ ಅವರು ಬುಲೆಟ್ ಬೈಕ್‌ನಲ್ಲಿ ಬೆಂಗಳೂರು ನಗರದಲ್ಲಿ ಸಿಟಿ ರೌಂಡ್ಸ್ ನಡೆಸಿದ್ದಾರೆ. ಈ ವೇಳೆ ಹೊಸ ವರ್ಷದ ಜಾಗೃತಿ ಕ್ರಮದ ಬಗ್ಗೆ ಪರಿಶೀಲನೆ ನಡೆಸಿದರು ಎನ್ನಲಾಗಿದೆ.
ಇನ್ನು ಸಿಟಿ ರೌಂಡ್ಸ್ ಬಳಿಕ ಮಾತನಾಡಿದ ಕಮಿಷನರ್ ಸೀಮಂತ್ ಕುಮಾರ್, ಇವತ್ತು ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಹೀಗೆ ಹಲವು ಮುಖ್ಯ ಪಾರ್ಟಿ ಸ್ಥಳಗಳನ್ನು ಪರಿಶೀಲನೆ ನಡೆಸಿದ್ದೇವೆ. ಎಲ್ಲಾ L & O ಹಾಗೀ ಟ್ರಾಫಿಕ್ ಅಧಿಕಾರಿಗಳು ಸಹ ಉಪಸ್ಥಿತರಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ 2-3 ವಾರದಿಂದ ಪೂರ್ವಸಿದ್ಧತೆ ನಡೆಸುತ್ತಲೇ ಇದ್ದಾರೆ ಎಂದಿದ್ದಾರೆ.
ಟ್ರಾಫಿಕ್ ಕಂಟ್ರೋಲ್ ಗ್ಯಾರಂಟಿ
ಇನ್ನು ಈ ವರ್ಷದಲ್ಲಿ ಜನದಟ್ಟಣೆ ಮತ್ತು ಟ್ರಾಫಿಕ್ ಸಮಸ್ಯೆಗೆ ಬಂದೋಬಸ್ತ್ ನಿಗಾವಹಿಸಲಾಗುತ್ತಿದೆ. ಅದರಲ್ಲೂ ಚರ್ಚ್ ಸ್ಟ್ರೀಟ್‌ನಲ್ಲಿ ವಿಶೇಷ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಲಕ್ಷಾಂತರ ಜನ ಸೇರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ ಆಚರಣೆ ವೇಳೆ ಅನುಚಿತವಾಗಿ, ನಿಯಮ ಉಲ್ಲಂಘಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
15 ಲಕ್ಷದಲ್ಲಿ ಭರ್ಜರಿ ಸಿದ್ಧತೆ
ಇದೀಗ ಬೆಂಗಳೂರಿನ ಹಲವು ಸೆಲೆಬ್ರೇಷನ್ ಸ್ಪಾಟ್‌ಗಳು ಹೊಸ ವರ್ಷದ ಆಚರಣೆಗೆ ಸಜ್ಜಾಗಿದೆ. ಅದರಲ್ಲೂ ಎಂ.ಜಿ ರೋಡ್, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರೋಡ್‌ನಲ್ಲಿ ಹೊಸ ವರ್ಷದ ಕಳೆ ಈಗಾಗಲ ಹುಟ್ಟಿಕೊಂಡಿದೆ. ವಾರದ ಮೊದಲೇ ಕಲರ್‌ಫುಲ್ ಲೈಟಿಂಗ್ಸ್, ಡೆಕೊರೇಷನ್ಸ್‌ಗಳನ್ನು ಮಾಡಲಾಗಿದೆ. ಅಲ್ಲದೇ ಲೈಟಿಂಗ್ಸ್‌ಗಾಗಿ 15 ಲಕ್ಷಕ್ಕೂ ಅಧಿಕ ಖರ್ಚು ಮಾಡಲಾಗುತ್ತಿದೆ ಎನ್ನಲಾಗಿದೆ.
ಬ್ರಿಗೇಡ್ ರೋಡ್ ಶಾಪ್ಸ್ ಅಸೋಸಿಯೇಷನ್‌ನಿಂದ ಪ್ಲಾನ್!
ಹೊಸ ವರ್ಷದ ಆಚರಣೆ ವೇಳೆ ಕ್ರಮ ಕೈಗೊಳ್ಳಲು ಇದೀಗ ಬ್ರಿಗೇಡ್ ರೋಡ್ ಶಾಪ್ಸ್ ಅಸೋಸಿಯೇಷನ್ ಕೂಡ ಸಜ್ಜಾಗಿದೆ. ಆ ಪ್ರಕಾರ, ಡಿಸೆಂಬರ್ 31 ರಂದು ರಾತ್ರಿ 7 ಗಂಟೆಗೆ ಬ್ರಿಗೇಡ್ ರೋಡ್ 2 ಬದಿ ಬಂದ್ ಇರಲಿದೆ ಎಂದು ಸೂಚನೆ ನೀಡಿದೆ.


Click it and Unblock the Notifications