ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕನಸಿನ ಯೋಜನೆಯಾಗಿರುವ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಮೆಚ್ಯುರಿಟಿಯಾಗಿರುವ ಫಲಾನುಭವಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಫಲಾನುಭವಿಗಳಿಗೆ ಪ್ರೋತ್ಸಾಹಧನ ಮಂಜೂರಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹೇಳಿದೆ.
ಲಿಂಗಾನುಪಾತ ಸರಿದೂಗಿಸಲು, ಹೆಣ್ಣು ಭ್ರೂಣ ಹತ್ಯೆ ಹಾಗೂ ಬಾಲ್ಯ ವಿವಾಹ ಪದ್ಧತಿ ತಡೆಯಲು ಮತ್ತು ಹೆಣ್ಣು ಮಗುವಿನ ಶಿಕ್ಷಣ, ಆರೋಗ್ಯ ಮಟ್ಟ ಉತ್ತಮಪಡಿಸಿ ಸರ್ವಾಂಗೀಣ ಅಭಿವೃದ್ಧಿಗಾಗಿ 18 ವರ್ಷಗಳ ಹಿಂದೆ ಯಡಿಯೂರ ನೇತೃತ್ವದ ರಾಜ್ಯ ಸರಕಾರ ಜಾರಿಗೊಳಿಸಿದ್ದ ಯೋಜನೆ ಇದಾಗಿದೆ. ಬಿಪಿಎಲ್ ಕುಟುಂಬದಲ್ಲಿ ಜನಿಸಿದ ಎರಡು ಹೆಣ್ಣು ಮಕ್ಕಳಿಗೆ ಈ ಯೋಜನೆಯಡಿ ಸೌಲಭ್ಯ ಕಲ್ಪಿಸಲಾಗಿತ್ತು.

ಭಾಗ್ಯಲಕ್ಷ್ಮಿ ಬಾಂಡ್ ಜಾರಿಯಾಗಿ 18 ವರ್ಷ ಕಳೆದರೂ ಫಲಾನುಭವಿಗಳ ಖಾತೆಗೆ ಮಾತ್ರ 1 ಲಕ್ಷ ರೂ. ಜಮೆಯಾಗಿರಲಿಲ್ಲ. ಹೀಗಾಗಿ ಈಗಿನ ರಾಜ್ಯಸರ್ಕಾರದ ವಿರುದ್ದ ಅಪಸ್ವರ ಕೇಳಿಬಂದಿತ್ತು. ರಾಜ್ಯ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಭಾಗ್ಯಲಕ್ಷ್ಮಿ ಯೋಜನೆ 2006 ರಲ್ಲಿ ಪ್ರಾರಂಭಿಸಲಾಯಿತು. ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ಯೋಜನೆಯ ನೋಡಲ್ ಇಲಾಖೆಯಾಗಿದೆ. ಹೆಣ್ಣು ಮಗುವಿನ ಜನನವನ್ನು ಉತ್ತೇಜಿಸುವುದು ಮತ್ತು ಹೆಣ್ಣು ಭ್ರೂಣ ಹತ್ಯೆಯನ್ನು ಕಡಿಮೆ ಮಾಡುವುದು ಈ ಯೋಜನೆಯನ್ನು ಪ್ರಾರಂಭಿಸುವ ಹಿಂದಿನ ಮುಖ್ಯ ಉದ್ದೇಶವಾಗಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇದ್ದು, ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಬರಿದಾಗಿರುವ ಆರೋಪ ಕೇಳಿಬರುತ್ತಿರುವ ನಡುವೆಯೇ ಭಾಗ್ಯಲಕ್ಷ್ಮಿ ಬಾಂಡ್ ಫಲಾನುಭವಿಗಳಿಗೂ ಹಣ ನೀಡಿರಲಿಲ್ಲ. ಯೋಜನೆ ಜಾರಿಯಾದ ವರ್ಷದಲ್ಲಿ ನೋಂದಾಯಿಸಿದವರ ಪೈಕಿ ಏಪ್ರಿಲ್, ಮೇ, ಜೂನ್‌ನಲ್ಲಿ 18 ವರ್ಷ ಪೂರ್ಣಗೊಂಡ ಹೆಣ್ಣು ಮಕ್ಕಳು ಈಗ ಹಣ ಪಡೆಯಲು ಅರ್ಹರಾಗಿದ್ದರು.
ಇದೀಗ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದ್ದು, ಫಲಾನುಭವಿ ಮಕ್ಕಳಿಗೆ 18 ವರ್ಷ ಪೂರ್ಣಗೊಂಡಿರುವುದರಿಂದ ಎಲ್ ಐಸಿಯಿಂದ ಪರಿಪಕ್ವ ಮೊತ್ತ ಮಂಜೂರಾಗಿದೆ. ಈ ಹೆಣ್ಣು ಮಕ್ಕಳಿಗೆ ಒಂದು ಲಕ್ಷ ರೂ. ಸಿಗಲಿದೆ. ರಾಜ್ಯದಲ್ಲಿ ಒಟ್ಟು 34.50 ಲಕ್ಷ ಭಾಗ್ಯಲಕ್ಷ್ಮೀ ಫಲಾನುಭವಿ ಹೆಣ್ಣುಮಕ್ಕಳಿದ್ದಾರೆ.
ಏನಿದು ಯೋಜನೆ?
ಬಾಲಕಿಯರ ಹೆಸರಿನಲ್ಲಿ ಜೀವ ವಿಮಾ ನಿಗಮ (ಎಲ್‌ಐಸಿ)ದಲ್ಲಿ ನಿಶ್ಚಿತ ಠೇವಣಿ ಇಟ್ಟು ಮಗುವಿಗೆ 18 ವರ್ಷ ಪೂರ್ಣಗೊಂಡ ನಂತರ ಬಡ್ಡಿ ಸಹಿತ ಹಣ ನೀಡುವ ಗುರಿ ಈ ಯೋಜನೆಯದ್ದಾಗಿದೆ.ಪ್ರಾರಂಭದಲ್ಲಿ ಭಾಗ್ಯಲಕ್ಷ್ಮೀ ಯೋಜನೆಯನ್ನು ಎಲ್‌ಐಸಿ ನಿರ್ವಹಿಸಿದ್ದು, 2020 ರಿಂದ ಇತ್ತೀಚೆಗೆ ಠೇವಣಿ ಮೊತ್ತವನ್ನು ಅಂಚೆ ಇಲಾಖೆಗೆ ವರ್ಗಾಯಿಸಲಾಗಿದೆ. ಆಯಾ ತಿಂಗಳು 18 ವರ್ಷ ಪೂರ್ಣಗೊಳ್ಳುವ ಅರ್ಹ ಫಲಾನುಭವಿಗಳಿಗೆ ಹಣ ವಿತರಿಸುವ ಕಾರ್ಯ ಮುಂಬರುವ ಪ್ರತಿ ತಿಂಗಳೂ ನಡೆಯಲಿದ್ದು, ಇದಕ್ಕಾಗಿ ಫಲಾನುಭವಿಗಳಿಂದ ಅಗತ್ಯ ದಾಖಲೆ ಪಡೆಯಲಾಗುತ್ತಿದೆ. ಭಾಗ್ಯಲಕ್ಷ್ಮಿ ಯೋಜನೆಯನ್ನು 2020 ರ ಏ.1 ರಿಂದ ಸುಕನ್ಯಾ ಸಮದ್ಧಿ ಯೋಜನೆಯಡಿ ವಿಲೀನಗೊಳಿಸಲಾಗಿದ್ದು, ನಾನಾ ಬದಲಾವಣೆ ಮಾಡಲಾಗಿದೆ.
ಮೆಚ್ಯೂರಿಟಿ ಮೊತ್ತವನ್ನು ಕ್ಲೈಮ್ ಮಾಡುವುದು ಹೇಗೆ?
ಯುವತಿ 18 ವರ್ಷ ವಯಸ್ಸನ್ನು ಪೂರೈಸಿರಬೇಕು.
ಹುಡುಗಿಯ ಕನಿಷ್ಠ ವಿದ್ಯಾರ್ಹತೆ 8ನೇ ತರಗತಿಯಾಗಿರಬೇಕು.
ಹಕ್ಕು ಪಡೆಯುವ ಸಮಯದಲ್ಲಿ ಹುಡುಗಿ ಮದುವೆಯಾಗಿರಬಾರದು.
ಇದರೊಂದಿಗೆ ಕರ್ನಾಟಕ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ 2 ಹೆಣ್ಣು ಮಕ್ಕಳಿಗೆ ಮಾತ್ರ ಆರ್ಥಿಕ ನೆರವು ನೀಡಲಾಗುವುದು.
ಎಲ್ಐಸಿ ಈ ಯೋಜನೆಯ ಹಣ ಕೀಪರ್ ಆಗಿದೆ. ಎಲ್ಲಾ ಮೆಚ್ಯೂರಿಟಿ ಕ್ಲೈಮ್ ಅನ್ನು ಎಲ್ಐಸಿ ಇತ್ಯರ್ಥಗೊಳಿಸುತ್ತದೆ. ಹೆಣ್ಣು ಫಲಾನುಭವಿಯು ತನ್ನ ಭಾಗ್ಯಲಕ್ಷ್ಮಿ ಯೋಜನೆಯ ಮೆಚುರಿಟಿ ಮೊತ್ತವನ್ನು ಪಡೆಯಲು ಎಲ್‌ಐಸಿ ನಲ್ಲಿ ಅರ್ಜಿ ಸಲ್ಲಿಸಬಹುದು. ಅಥವಾ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು.


Click it and Unblock the Notifications