ಬೆಂಗಳೂರು, ಏಪ್ರಿಲ್ 10: ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿರುವ ಪ್ರತಿಯೊಬ್ಬರಿಗೂ ಭುವನ್ ಬಾಮ್ ಅವರು ಹೆಸರು ಹೇಳಿದರೆ ತಕ್ಷಣಕ್ಕೆ ಗೊತ್ತಾಗಬಹುದು. ಭುವನ್ ಬಾಮ್ ಅವರು ಕಲಾವಿದರು. ಇತ್ತೀಚೆಗೆ ಅವರು ಗಾಯಕ ಹಾಗೂ ಗೀತರಚನೆಕಾರರಾಗಿ ಗುರುತಿಸಲ್ಪಟ್ಟಿದ್ದರೂ ಅವರು ತಮ್ಮ ಯೂಟ್ಯೂಬ್ ಚಾನೆಲ್ ಬಿಬಿ ಕಿ ವೈನ್ಸ್ ಮೂಲಕ ತಮ್ಮನ್ನು ಬಹಳ ಎತ್ತರಕ್ಕೆ ಜನಪ್ರಿಯತೆಗೊಳಿಸಿದ್ದಾರೆ.
ಅವರು ತಮ್ಮ ಕಂಟೆಂಟ್‌ಗಳನ್ನು ಎಲ್ಲ ಪಾತ್ರಗಳನ್ನು ತಾವೇ ನಿರ್ವಹಿಸುತ್ತಾರೆ. 26.4 ಮಿಲಿಯನ್‌ನಷ್ಟು ಚಂದಾದಾರರೊಂದಿಗೆ ಭುವನ್ ಪ್ರಸ್ತುತ ಭಾರತದ ಶ್ರೀಮಂತ ಯೂಟ್ಯೂಬರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಗುಜರಾತ್‌ನ ವಡೋದರದ ಮಧ್ಯಮ ಕುಟುಂಬದಲ್ಲಿ ಜನಿಸಿರುವ ಭುವನ್‌ಗೆ ಗಾಯಕನಾಗಬೇಕೆಂಬ ಕನಸು ಬಾಲ್ಯದಿಂದಲೇ ಇತ್ತು.

ಹೀಗಿರುವಾಗ, ತಾನು ಭಾರತದ ಮುಂಚೂಣಿಯ ಯೂಟ್ಯೂಬರ್ ಆಗುತ್ತೇನೆ ಎಂಬುದನ್ನು ಭುವನ್ ಎಂದಿಗೂ ಯೋಚಿಸಿರಲಿಲ್ಲ. ತಮ್ಮಲ್ಲಿರುವ ಕಲಾ ಪ್ರತಿಭೆ ಹಾಗೂ ಹಾಡಿನ ಬಗೆಗಿನ ಒಲವನ್ನು ಹೇಗೆ ಮುಂದುವರಿಸಬೇಕೆಂದು ಗೊತ್ತಾಗದಿದ್ದಾಗ ಹವ್ಯಾಸದ ರೂಪದಲ್ಲಿ ಯೂಟ್ಯೂಬ್‌ನಲ್ಲಿ ಹಾಸ್ಯದ ವಿಡಿಯೋಗಳನ್ನು ಮಾಡಲು ಪ್ರಾರಂಭಿಸಿದ್ದರು. ಕಾಶ್ಮೀರ ಪ್ರವಾಹದಲ್ಲಿ ತನ್ನ ಮಗನ ಸಾವಿಗೆ ಸಂಬಂಧಿಸಿದಂತೆ ಮಹಿಳೆಯೊಬ್ಬರ ಜತೆಗೆ ವರದಿಗಾರರ ಸಂವೇದನಾಶೀಲ ಪ್ರಶ್ನೆಯನ್ನು ಅಣಕಿಸಿಕೊಂಡು ಭುವನ್ ಮೊದಲ ವಿಡಿಯೋವನ್ನು ಮಾಡಿದ್ದರು.
ಈ ವಿಡಿಯೋ ಪಾಕಿಸ್ಥಾನದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆ ಮೂಲಕ 2015ರ ಜೂನ್‌ನಲ್ಲಿ ಭುವನ್ ಅವರನ್ನು ಯೂಟ್ಯೂಬ್ ವಿಡಿಯೋ ಮಾಡುವತ್ತ ಪ್ರೇರೇಪಿಸಿತ್ತು. ಕೆಲವೇ ಸಮಯದಲ್ಲಿ ಭುವನ್ ವಿಡಿಯೋಗಳು ಬಹಳ ಜನಪ್ರಿಯತೆಯನ್ನು ಪಡೆದುಕೊಳ್ಳುವ ಮೂಲಕ ಯೂಟ್ಯೂಬ್‌ನಲ್ಲಿ ದೊಡ್ಡ ಸ್ಟಾರ್ ಆಗಿ ಗುರುತಿಸಿಕೊಂಡರು.
ಈ ರೀತಿ ಜನಪ್ರಿಯತೆಯನ್ನು ಪಡೆದುಕೊಂಡು ಹೋದ ಭುವನ್ ಅವರು 2018ರಲ್ಲಿ 10ಮಿಲಿಯನ್ ಚಂದಾದಾರರನ್ನು ಪಡೆದುಕೊಂಡ ಭಾರತದ ಮೊಲದ ಯೂಟ್ಯೂಬರ್ ಆಗಿ ಗಮನಸೆಳೆದರು. ನಿಮಗೆ ಆಶ್ಚರ್ಯವಾಗಬಹುದು; ಭುವನ್ ಅವರು ಪ್ರಸ್ತುತ 122 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ. ಇವುಗಳ ಪೈಕಿ ದುಬಾರಿ ಕಾರುಗಳ ಫ್ಲೀಟ್ ಕೂಡ ಇದೆ. ಭುವನ್ ಅವರು ಪ್ರಸ್ತುತ ಭಾರತದ ಅತ್ಯಂತ ಶ್ರೀಮಂತ ಯೂಟ್ಯೂಬರ್ ಆಗಿದ್ದಾರೆ. ಇದಕ್ಕೂ ಮೊದಲು ಭುವನ್ ಅವರು ಗಾಯಕರಾಗಿ ದೆಹಲಿಯ ಸಣ್ಣ ಕೆಫೆ ಹಾಗೂ ರೆಸ್ಟೊರೆಂಟ್‌ಗಳಲ್ಲಿ ಹಾಡುಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಆಗ ಅವರ ದಿನ ಗಳಿಕೆ ಕೇವಲ 150 ರೂ. ಆಗಿತ್ತು. ಅದು ತಿಂಗಳಿಗೆ ಅಂದರೆ ಸುಮಾರು 5000ರೂ.ವರೆಗೆ ಸಂಪಾದನೆ ಆಗುತ್ತಿತ್ತು.
ಆದರೆ ಮುಂದೆ ತಮ್ಮ ವೃತ್ತಿಯನ್ನು ಬದಲಿಸಿಕೊಂಡು ಯೂಟ್ಯೂಬ್ ಕಂಟೆಂಟ್ ಮೂಲಕ ಜನರನ್ನು ತಲುಪುವುದಕ್ಕೆ ಪ್ರಾರಂಭಿಸಿದಾಗ ಅವರ ಹಣೆಬರಹ ಸಂಪೂರ್ಣವಾಗಿ ಬದಲಾಗುತ್ತ ಹೋಗಿದೆ. ಯೂಟ್ಯೂಬರ್ ಆಗಿ ಜನಪ್ರಿಯತೆ ಪಡೆದುಕೊಂಡ ಬಳಿಕ ಅಂದರೆ 2016ರಲ್ಲಿ ಭುವನ್ ಅವರು ತೇರಿ ಮೇರಿ ಕಹಾನಿ ಎಂಬ ಸಂಗೀತ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಇದಾದ ಬಳಿಕ ಅವರು ಸಾಂಗ್ ಹೂನ್ ತೇರ್, ಸಫರ್, ರಹಗುಜಾರ್ ಮತ್ತು ಅಜ್ಞಾಬೀ ಸಾಂಗ್‌ಗಳನ್ನು ರಿಲೀಸ್ ಮಾಡಿದ್ದರು. ದಿವ್ಯಾ ಜತೆಗೆ ಅವರು ಪ್ಲಸ್ ಮೈನಸ್ ಎಂಬ ಕಿರುಚಿತ್ರದಲ್ಲಿಯೂ ನಟಿಸಿದ್ದು. ಅದು ಅವರಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ತಂದು ಕೊಡುವ ಮೂಲಕ ಮತ್ತಷ್ಟು ಸ್ಟಾರ್ ಆಗಿ ಗುರುತಿಸುವುದಕ್ಕೆ ವೇದಿಕೆಯಾಯಿತು.


Click it and Unblock the Notifications