ರೈತರನ್ನು (Farmers) ಆರ್ಥಿಕವಾಗಿ ಸಬಲರನ್ನಾಗಿ ಮಾಡಲು, ಕೃಷಿಗಳ ಅಭಿವೃದ್ಧಿಗಾಗಿ ಮೋದಿ ಸರ್ಕಾರ ತಂದ ಅತ್ಯುನ್ನತ ಯೋಜನೆಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯೂ ಒಂದು. ಈಗಾಗಲೇ 2 ಸಾವಿರದಂತೆ 20 ಕಂತುಗಳನ್ನು ಪೂರೈಸಿರುವ ಈ ಯೋಜನೆ, ಇದೀಗ 21ನೇ ಕಂತಿಗಾಗಿ ಇಡೀ ದೇಶವೇ ಕಾದು ಕುಳಿತಿದೆ. ಹೌದು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 21ನೇ ಕಂತಿಗಾಗಿ ದೇಶಾದ್ಯಂತ ಲಕ್ಷಾಂತರ ರೈತರು ಕಾತರದಿಂದ ಕಾದು ಕುಳಿತಿದ್ದಾರೆ. ಶೀಘ್ರದಲ್ಲೇ ಕೇಂದ್ರ ಸರ್ಕಾರವು ರೈತರ ಖಾತೆಗಳಿಗೆ 2,000 ರೂಪಾಯಿಗಳನ್ನು ಜಮಾ ಮಾಡಲಿದೆ ಎಂದು ವರದಿಯಾಗಿದೆ.

ಈ ಯೋಜನೆಯಡಿ, ಪ್ರತಿ ಅರ್ಹ ರೈತರಿಗೆ ವಾರ್ಷಿಕ 6,000 ರೂಪಾಯಿಗಳನ್ನು ಮೂರು ಕಂತುಗಳಂತೆ (ತಲಾ 2,000 ರೂಪಾಯಿಗಳು) ಜಮಾ ಮಾಡುತ್ತದೆ. ಕೆಲವು ರಾಜ್ಯದ ರೈತರು ಈಗಾಗಲೇ ಪಿಎಂ ಕಿಸಾನ್ ಹಣವನ್ನು ಪಡೆದಿದ್ದು, ಇನ್ನೂ ಹಲವು ರಾಜ್ಯದ ರೈತರಿಗೆ ಇನ್ನೂ ಪಿಎಂ ಕಿಸಾನ್ ಹಣ ಬಂದಿಲ್ಲ.
ಮೂರು ರಾಜ್ಯಗಳಿಗೆ ಮಾತ್ರ ಪಿಎಂ ಕಿಸಾನ್ ಹಣ:
ಈ ವರ್ಷ, ಕೇಂದ್ರ ಸರ್ಕಾರ ಮೂರು ರಾಜ್ಯಗಳ ರೈತರಿಗೆ ಮೊದಲೇ 21ನೇ ಕಂತಿನ ಹಣ ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 26, 2025 ರಂದು, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡದಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಿಂದ ಅಲ್ಲಿನ ರೈತರು ಲಕ್ಷಗಟ್ಟಲೆ ನಷ್ಟ ಅನುಭಬಿಸಿದ್ದು, ಇದರಿಂದ ಪೀಡಿತ ರೈತರ ಅನುಕೂಲಕ್ಕಾಗಿ ಬೇಗನೆ 21ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಇನ್ನುಳಿದ ರಾಜ್ಯಗಳ ರೈತರು ಶೀಘ್ರದಲ್ಲೇ ತಮ್ಮ ಪಿಎಂ ಕಿಸಾನ್ ಹಣವನ್ನು ಪಡೆಯಲಿದ್ದಾರೆ ಎಂದು ವರದಿಯಾಗಿದೆ.
ರೈತರು ತಮ್ಮ ಪಿಎಂ ಕಿಸಾನ್ ಖಾತೆ ಮತ್ತು ಬ್ಯಾಂಕ್ ಖಾತೆಯ ಮಾಹಿತಿಯನ್ನು ನವೀಕೃತವಾಗಿಡಲು ಸೂಚಿಸಲಾಗಿದೆ, ಇದರಿಂದ ಹಣವು ಸಕಾಲದಲ್ಲಿ ತಲುಪುತ್ತದೆ. ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ಸಣ್ಣ ಮತ್ತು ಅತಿ ಸಣ್ಣ ರೈತರ ಕೃಷಿ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಅವರ ಆದಾಯವನ್ನು ಹೆಚ್ಚಿಸುವುದು.
ಯಾರು ಅರ್ಹರು?
ಕೇಂದ್ರದ ಈ ಯೋಜನೆಯ ಲಾಭ ಪಡೆಯಲು, ರೈತರು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು ಮತ್ತು ತಮ್ಮ ಭೂ ಮಾಲೀಕತ್ವದ ಅಧಿಕೃತ ಮಾಹಿತಿಯನ್ನು ಕೆವೈಸಿಯೊಂದಿಗೆ ಒದಗಿಸಬೇಖು. ಇನ್ನು ಕಳೆದ ಆಗಸ್ಟ್ 2025 ರಲ್ಲಿ 20ನೇ ಕಂತಿನ ಹಣವನ್ನು ಜಮಾ ಮಾಡಲಾಗಿತ್ತು. ಇದೀಗ 21ನೇ ಕಂತಿನ ಹಣಕ್ಕೆ ಕ್ಷಣಗಣನೆ ಶುರುವಾಗಿದೆ.
ರೈತರಿಗೆ ದೀಪಾವಳಿಯಲ್ಲಿ ಬಿಗ್ ಗಿಫ್ಟ್:
ಕಳೆದ ಕೆಲವು ವರ್ಷಗಳ ಮಾಹಿತಿ ಪ್ರಕಾರ, ಸರ್ಕಾರವು ಆಗಸ್ಟ್ ಮತ್ತು ನವೆಂಬರ್ ನಡುವೆ ರೈತರ ಖಾತೆಗಳಿಗೆ ಹಣವನ್ನು ವರ್ಗಾಯಿಸುತ್ತದೆ. ಈ ವರ್ಷ ದೀಪಾವಳಿ ಅಕ್ಟೋಬರ್ 20 ರಂದು ಬರುವುದರಿಂದ, ರೈತರಿಗೆ ಇದು ಮಹತ್ವದ ದೀಪಾವಳಿ ಉಡುಗೊರೆಯಾಗುವ ಸಾಧ್ಯತೆಯಿದೆ.
ಕಳೆದ ಕೆಲವು ವರ್ಷಗಳಿಂದ ಪ್ರಧಾನ ಮಂತ್ರಿ ಕಿಸಾನ್ ಯೋಜನೆಗಳ ಹಣ ಜಮಾದ ಬಗ್ಗೆ ನೋಡುವುದಾದ್ರೆ, ದೀಪಾವಳಿಗೂ ಮುನ್ನವೇ ಖಾತೆಗಳಿಗೆ ಹಣ ಬಂದಿತ್ತು ಎಂದು ವರದಿಯಾಗಿದೆ. 2023 ರಲ್ಲಿ, ಈ ಸಮಯದಲ್ಲಿ ಬಾಕಿ ಇರುವ ಕಂತು ನವೆಂಬರ್ 15 ರಂದು ಜಮಾ ಆದ್ರೆ, 2024 ರಲ್ಲಿ, ಕಿಸಾನ್ ಸಮ್ಮಾನ್ ಯೋಜನೆಯ ಕಂತು ಅಕ್ಟೋಬರ್ 5 ರಂದು ಬಿಡುಗಡೆಯಾಗಿತ್ತು. ಇದರರ್ಥ ಕೊನೆಯ ಬಾರಿ ದೀಪಾವಳಿಗೂ ಮುನ್ನ ರೈತರ ಖಾತೆಗಳಿಗೆ ಹಣ ಬಂದಿತ್ತು. ಆದ್ದರಿಂದ ಈ ಬಾರಿ ದೀಪಾವಳಿ ಮುಗಿಯುವ ಮುನ್ನ ರೈತರ ಖಾತೆಗಳಿಗೆ ಹಣ ಬರಬಹುದು ಎಂದು ಅಂದಾಜಿಸಲಾಗಿದೆ.


Click it and Unblock the Notifications