ಬೆಂಗಳೂರು, ಏಪ್ರಿಲ್ 3: ಇದು ಆಧುನಿಕ ಜಮಾನ, ಇಲ್ಲಿ ಏನೇ ಇದ್ದರೂ ಆನ್‌ಲೈನ್ ಅನ್ನುವಂತೆ ಆಗಿದೆ. ಒಂದು ಸಣ್ಣ ಟೂತ್ ಬ್ರಷ್‌ನಿಂದ ಹಿಡಿದು ಜನ ದೊಡ್ಡ ದೊಡ್ಡ ಎಲೆಕ್ಟ್ರಾನಿಕ್ಸ್ ಗೂಡ್ಸ್ ತನಕವೂ ಆನ್‌ಲೈನ್ ಮೂಲಕ ಆರ್ಡರ್ ಮಾಡುತ್ತಾರೆ. ಅದರಲ್ಲೂ ಆನ್‌ಲೈನ್ ಮೂಲಕ ಆಹಾರ ಡೆಲಿವರಿ ಕೊಡುವ, ಫುಡ್ ಡೆಲಿವರಿ ಆ್ಯಪ್ ಜೊಮಾಟೊ ಆಗಾಗ ಸುದ್ದಿಯಲ್ಲಿ ಇರುತ್ತದೆ. ಆದರೆ ಇದೀಗ ಬರೋಬ್ಬರಿ ₹184 ಕೋಟಿ ರೂಪಾಯಿ ಪಾವತಿ ಮಾಡುವ ವಿಚಾರಕ್ಕೆ ಸುದ್ದಿ ಆಗಿ, ಸದ್ದು ಮಾಡುತ್ತಿದೆ.
ಭಾರತದಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಅಪ್ಲಿಕೇಷನ್ ಸಾಕಷ್ಟು ಪ್ರಮಾಣದಲ್ಲಿ ಇದ್ದು, ಈ ಅಪ್ಲಿಕೇಶನ್ ಮೂಲಕ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಯುತ್ತಿದೆ. ಜನಕ್ಕೂ ಈ ಫುಡ್ ಡೆಲಿವರಿ ಆ್ಯಪ್ ತುಂಬಾನೆ ಹತ್ತಿರವಾಗಿವೆ. ಅದರಲ್ಲೂ ಜೊಮಾಟೊ ಅಪ್ಲಿಕೇಶನ್ ತುಂಬಾನೆ ಫೇಮಸ್ ಆಗಿದೆ. ಆನ್‌ಲೈನ್‌ನಲ್ಲಿ ಆಹಾರ ವಿತರಿಸುವ ಸಂಸ್ಥೆಯಾದ ಜೊಮಾಟೊಗೆ ಸೇವಾ ತೆರಿಗೆ & ದಂಡ ಸೇರಿ ಒಟ್ಟು ₹184 ಕೋಟಿ ಪಾವತಿಸುವಂತೆ ನವದೆಹಲಿಯ ಕೇಂದ್ರ ತೆರಿಗೆ ಇಲಾಖೆ ಇದೀಗ ನೋಟಿಸ್ ಒಂದನ್ನು ಜಾರಿ ಮಾಡಿದೆ. ಹಾಗಾದರೆ ಹೀಗೆ ದಿಢೀರ್ ದಂಡದ ಕ್ರಮ ಜರುಗಿಸಲು ಕಾರಣ ಏನಿರಬಹದು.

ಈ ಕಾರಣಕ್ಕೆ ಭಾರಿ ದಂಡ!
ಜೊಮಾಟೊ ಸಂಸ್ಥೆ ಬಹುದೊಡ್ಡದಾಗಿ ಬೆಳೆದಿದೆ. ಭಾರತದ ಮೂಲೆ ಮೂಲೆಯಲ್ಲಿ ಕೂಡ ಜೊಮಾಟೊ ಸಂಸ್ಥೆ ಫುಡ್ ಡೆಲಿವರಿ ಮಾಡುತ್ತದೆ. ಹಳ್ಳಿಯಿಂದ ಹಿಡಿದು, ದಿಲ್ಲಿ ತನಕವೂ ಆಹಾರ ಪೂರೈಕೆ ಮಾಡುವಲ್ಲಿ ಜೊಮಾಟೊ ದೊಡ್ಡ ಹೆಸರನ್ನು ಗಳಿಸಿದೆ. ಆದರೆ ಇಂತಹ ಸಂಸ್ಥೆ, ವಿದೇಶದಲ್ಲಿ ಇರುವ ತನ್ನ ಅಂಗಸಂಸ್ಥೆ ಮತ್ತು ಶಾಖೆಗಳಿಂದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಿರುವುದಕ್ಕೆ ಸಂಬಂಧಿಸಿದ ಸೇವಾ ತೆರಿಗೆ ಇದು ಎಂದು ಹೇಳಲಾಗಿದೆ. 2014ರ ಅಕ್ಟೋಬರ್ ತಿಂಗಳಿಂದ ಹಿಡಿದು, 2017 ರ ಜೂನ್ ನಡುವಿನ ಅವಧಿಗೆ ಇಷ್ಟು ಮೊತ್ತದ ತೆರಿಗೆ ಪಾವತಿಸುವಂತೆ ಸೂಚಿಸಿದೆ ಎಂದು ಹೇಳಲಾಗಿದೆ.
ದೇಶಾದ್ಯಂತ ದಂಡದ ಸಂಚಲನ!
ಜೊಮಾಟೊ ಸಂಸ್ಥೆ ಲಕ್ಷಾಂತರ ಆರ್ಡರ್ ಡೆಲಿವರಿ ಮಾಡುವುದು ಮಾತ್ರವಲ್ಲ, ಸಾವಿರಾರು ಉದ್ಯೋಗಿಗಳಿಗೂ ಕೆಲಸ ಕೂಡ ಕೊಟ್ಟಿದೆ. ಹೀಗಾಗಿಯೇ ಜೊಮಾಟೊ ಸಂಸ್ಥೆಯ ಹೆಸರೀಗ ಬಹುದೊಡ್ಡದಾಗಿ ಬೆಳೆದಿದೆ. ಆದರೆ ತೆರಿಗೆ ಇಲಾಖೆ ನೀಡಿದ್ದ ಷೋಕಾಸ್ ನೋಟಿಸ್‌ಗೆ ಕಾನೂನು ಪ್ರಕಾರ ಸೂಕ್ತ ದಾಖಲೆ ಸಮೇತ ಉತ್ತರಿಸಲಾಗಿತ್ತು ಎಂದು ಜೊಮಾಟೊ ಸಂಸ್ಥೆ ತಿಳಿಸಿದೆ. ಈ ರೀತಿ ಸೂಕ್ತ ಉತ್ತರ ನೀಡಿದ್ದರೂ, ಇಲಾಖೆ ಒಪ್ಪಿಕೊಂಡಿಲ್ಲ. ಇದೇ ಕಾರಣಕ್ಕೆ ಈಗ ಆದೇಶ ಪ್ರಶ್ನಿಸಿ ಸಕ್ಷಮ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಲಾಗಿದೆ. ಈ ಮೂಲಕ, ಜೊಮಾಟೊ ಸಂಸ್ಥೆಗೆ ₹184 ಕೋಟಿ ರೂಪಾಯಿ ಪಾವತಿ ಮಾಡುವಂತೆ, ಸೂಚಿಸಿರುವುದು ದೇಶದ ಗಮನ ಸೆಳೆದಿದೆ.


Click it and Unblock the Notifications