ಬೆಂಗಳೂರು, ಅಕ್ಟೋಬರ್ 14: ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದೆ. ರೈಲುಗಳ ಕೊರತೆ, ಪಾರ್ಕಿಂಗ್ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳು ಇದರೊಟ್ಟಿಗೆ ಹೆಚ್ಚಾಗುತ್ತಿದೆ. ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಶನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಮೆಟ್ರೋ ಪ್ರಯಾಣಿಕರ ಸಮಸ್ಯೆ ಬಗೆಹರಿಸಲು ಹೊಸ ಪಾರ್ಕಿಂಗ್ ನೀತಿಯನ್ನು ಜಾರಿಗೆ ತರಲಿದೆ. ಈ ಕುರಿತು ಈಗಾಗಲೇ ಜನರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ನಮ್ಮ ಮೆಟ್ರೋ ಪ್ರಯಾಣಿಕರ ವಾಹನಗಳ ಪಾರ್ಕಿಂಗ್ ಈಗ ನಗರದ ಬಹುದೊಡ್ಡ ಸಮಸ್ಯೆಯಾಗುತ್ತಿದೆ. ಆದ್ದರಿಂದ ಇದನ್ನು ಬಗೆಹರಿಸಲು, ನಮ್ಮ ಮೆಟ್ರೋ ಪ್ರಯಾಣಿಕರಿಗೆ ಉಂಟಾಗುವ ಕಿರಿಕಿರಿ ತಪ್ಪಿಸಲು ಬಿಎಂಆರ್‌ಸಿಎಲ್ ನೂತನ ಪಾರ್ಕಿಂಗ್ ನೀತಿಯ ಕರಡು ತಯಾರಿಸಿದೆ. ಅಕ್ಟೋಬರ್ 18ರ ತನಕ ಜನರು ಇದಕ್ಕೆ ಆಕ್ಷೇಪಣೆಗಳನ್ನು ಸಲ್ಲಿಕೆ ಮಾಡಲು ಅವಕಾಶ ಮಾಡಿಕೊಡಲಾಗಿದೆ.

ನಮ್ಮ ಮೆಟ್ರೋ ನಿಲ್ದಾಣ ಸುತ್ತಮುತ್ತಲೂ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡುವ ಮೂಲಕ ಜನರು ಹೆಚ್ಚಾಗಿ ಸಾರ್ವಜನಿಕ ಸಾರಿಗೆ ಬಳಕೆ ಮಾಡುವಂತೆ ಪ್ರೋತ್ಸಾಹಿಸುವುದು ನೂತನ ನೀತಿಯಲ್ಲಿ ಸೇರಿದೆ. ವಾಹನದಲ್ಲಿ ನಿಲ್ದಾಣದ ತನಕ ಆಗಮಿಸಿ ಅಲ್ಲಿಂದ ಮೆಟ್ರೋ ಏರಿ ಜನರು ತಮ್ಮ ಕೆಲಸಕ್ಕೆ ಹೋಗಲು ಅನುಕೂಲ ಮಾಡಿಕೊಡಲಾಗುತ್ತದೆ.
ಪ್ರಯಾಣಿಕರು ಬಿಎಂಆರ್‌ಸಿಎಲ್‌ಗೆ ನಮ್ಮ ಮೆಟ್ರೋ ನಿಲ್ದಾಣದ ಸುತ್ತಲೂ ಇರುವ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಹಲವು ದೂರುಗಳನ್ನು ಸಲ್ಲಿಕೆ ಮಾಡಿದ್ದರು. ಇವುಗಳನ್ನು ಪರಿಗಣಿಸಿ ಹೊಸ ಪಾರ್ಕಿಂಗ್ ನೀತಿ ರೂಪಿಸಲಾಗಿದೆ. ನಮ್ಮ ಮೆಟ್ರೋ ಪ್ರಯಾಣಿಕರಲ್ಲದವರು ಮೆಟ್ರೋ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ವಾಹನಗಳನ್ನು ನಿಲ್ಲಿಸುವುದನ್ನು ತಡೆಯಲು ನೀತಿಯಲ್ಲಿ ಪ್ರಸ್ತಾವನೆ ಇದೆ.
ಮೊದಲ ಹಂತದಲ್ಲಿ ಯಾವ-ಯಾವ ಮೆಟ್ರೋ ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್‌ಗೆ ಭಾರೀ ಬೇಡಿಕೆ ಇದೆ ಎಂದು ಬಿಎಂಆರ್‌ಸಿಎಲ್ ವರದಿ ತಯಾರಿಸಿದೆ. ಇದರ ಆಧಾರದ ಮೇಲೆ ನಿಲ್ದಾಣದ ಸುತ್ತ ಪಾರ್ಕ್ ಎಂಡ್ ರೈಡ್ ಮಾದರಿಯಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲು ಮುಂದಾಗಿದೆ.
ಬೈಕ್ ಮತ್ತು ನಾಲ್ಕು ಚಕ್ರದ ವಾಹನಗಳ ಪಾರ್ಕಿಂಗ್‌ಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಿ, ಜನರು ಹೆಚ್ಚಾಗಿ ನಮ್ಮ ಮೆಟ್ರೋ ಬಳಕೆ ಮಾಡುವಂತೆ ಮಾಡುವುದು ಬಿಎಂಆರ್‌ಸಿಎಲ್‌ನ ಪಾರ್ಕಿಂಗ್ ನೀತಿಯಲ್ಲಿ ಸೇರಿದೆ. 24*7 ಕ್ಯಾಮರಾ ಕಣ್ಗಾವಲು, ತುರ್ತು ಸಂದರ್ಭದಲ್ಲಿ ಕರೆ ವ್ಯವಸ್ಥೆ, ಅಗ್ನಿ ಅವಘಢ ಆಗದಂತೆ ಎಚ್ಚರಿಕೆ ಮುಂತಾದವುಗಳು ಈ ಪಾರ್ಕಿಂಗ್ ನೀತಿಯಲ್ಲಿ ಸೇರಿವೆ.
ನಮ್ಮ ಮೆಟ್ರೋ ಪ್ರಯಾಣಿಕರಲ್ಲದವರು ಮೆಟ್ರೋ ನಿಲ್ದಾಣದ ಸುತ್ತಲೂ ವಾಹನ ನಿಲ್ಲಿಸುತ್ತಾರೆ. ಆದ್ದರಿಂದ ಮೆಟ್ರೋ ಪ್ರಯಾಣಿಕರಿಗೆ ಸ್ಥಳ ಸಿಗುವುದಿಲ್ಲ ಎಂಬುದು ಸಹ ಪ್ರಮುಖವಾದ ದೂರು. ಇದನ್ನು ಬಗೆಹರಿಸಲು ಸಹ ನೀತಿಯಲ್ಲಿ ನಿಯಮಗಳನ್ನು ರೂಪಿಸಲಾಗಿದೆ. ಸೈಕಲ್ ಬಳಕೆ ಮಾಡುವ ಜನರು ಸಹ ನಗರದಲ್ಲಿ ಹೆಚ್ಚಾಗುತ್ತಿದ್ದಾರೆ. ಆದ್ದರಿಂದ ಸೈಕಲ್‌ಗಳಿಗೆ ಸಹ ಸುರಕ್ಷಿತ ಪಾರ್ಕಿಂಗ್ ನೀಡಲು ಬಿಎಂಆರ್‌ಸಿಎಲ್ ಮುಂದಾಗಿದೆ.
ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಶುಲ್ಕ ಪಾವತಿ, ರಿಯಲ್ ಟೈಂ ಸ್ಥಳಾವಕಾಶದ ಬಗ್ಗೆ ಮಾಹಿತಿ ನೀಡುವುದು, ಅತಿ ಹೆಚ್ಚು ಹೊತ್ತು ವಾಹನ ನಿಲ್ಲಿಸುವವರಿಗೆ ರಿಯಾಯಿತಿ ನೀಡುವುದು ಸೇರಿದಂತೆ ಹಲವು ಕ್ರಮಗಳು ಕರಡು ಪಾರ್ಕಿಂಗ್ ನೀತಿಯಲ್ಲಿ ಸೇರಿವೆ. ಜನರು ಪಾರ್ಕಿಂಗ್ ಶುಲ್ಕದ ಬಗ್ಗೆ ಸಹ ಆಕ್ಷೇಪಣೆಗಳಿದ್ದರೆ ಬಿಎಂಆರ್‌ಸಿಎಲ್‌ಗೆ ಸಲ್ಲಿಕೆ ಮಾಡಬಹುದು.
ಸದ್ಯ ನಗರದಲ್ಲಿ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. 70ಕ್ಕೂ ಅಧಿಕ ಕಿ. ಮೀ. ಜಾಲವನ್ನು ಮೆಟ್ರೋ ಹೊಂದಿದ್ದು, ಪ್ರತಿದಿನ ಸುಮಾರು 6 ಲಕ್ಷ ಪ್ರಯಾಣಿಕರು ಮೆಟ್ರೋ ಬಳಕೆ ಮಾಡುತ್ತಿದ್ದಾರೆ. ಈ ವರ್ಷದ ಡಿಸೆಂಬರ್ ವೇಳೆಗೆ ಮೆಟ್ರೋ ಪ್ರಯಾಣಿಕರ ಸಂಖ್ಯೆ 9 ರಿಂದ 10 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಅಕ್ಟೋಬರ್ ಅಂತ್ಯದೊಳಗೆ ಹಸಿರು ಮಾರ್ಗದಲ್ಲಿ ನಾಗಸಂದ್ರ-ಮಾದಾವರ ನಡುವೆ ನಮ್ಮ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ನಮ್ಮ ಮೆಟ್ರೋ ಹಸಿರು ಮಾರ್ಗದ ವಿಸ್ತರಿತ ಯೋಜನೆಯಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಜಿಂದಾಲ್ ನಗರ), ಮಾದವರ (ಬಿಐಇಸಿ) ಮೂರು ನಿಲ್ದಾಣಗಳಿವೆ. ಇದರಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಅಲ್ಲದೇ ಆರ್. ವಿ. ರಸ್ತೆ-ಬೊಮ್ಮಸಂದ್ರ (ಹಳದಿ ಮಾರ್ಗ) ಡಿಸೆಂಬರ್ ವೇಳೆಗೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.


Click it and Unblock the Notifications