ಬೆಂಗಳೂರು, ಅಕ್ಟೋಬರ್ 12: ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಜಾಲ ಮತ್ತೆ ಮೂರು ಕಿ. ಮೀ. ವಿಸ್ತರಣೆಯಾಗಲಿದೆ. ತುಮಕೂರು ರಸ್ತೆಯ ಹಸಿರು ಮಾರ್ಗದಲ್ಲಿ ಈ ತಿಂಗಳಿನಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಮೆಟ್ರೋ ರೈಲು ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ. ಉದ್ಘಾಟನಾ ದಿನಾಂಕವನ್ನು ಕರ್ನಾಟಕ ಸರ್ಕಾರ ನಿಗದಿ ಮಾಡಬೇಕಿದೆ.
ಬಿಎಂಆರ್‌ಸಿಎಲ್ ನಾಗಸಂದ್ರ-ಮಾದಾವರ ನಡುವೆ ನಮ್ಮ ಮೆಟ್ರೋ ರೈಲು ಸಂಚಾರ ಆರಂಭಕ್ಕೆ ತಯಾರಿ ನಡೆಸಿದೆ. ಈಗಾಗಲೇ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ರೇಷ್ಮೆ ಸಂಸ್ಥೆ ಮತ್ತು ನಾಗಸಂದ್ರ ನಡುವೆ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. ಈಗ ಈ ಮಾರ್ಗದದಲ್ಲಿ ವಿಸ್ತರಣೆಯಾಗಿರುವ 3.7 ಕಿ. ಮೀ. ಮಾರ್ಗ ಸಂಚಾರಕ್ಕೆ ಮುಕ್ತವಾಗುತ್ತಿದೆ.

ಎಲ್ಲಾ ಕಾಮಗಾರಿ ಪೂರ್ಣಗೊಳಿಸಿ, ಪ್ರಾಯೋಗಿಕ ಸಂಚಾರವನ್ನು ಸಹ ಯಶಸ್ವಿಯಾಗಿ ಪೂರ್ಣಗೊಳಿಸಿ, ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಸಹ ಮಾರ್ಗದ ಪರಿಶೀಲನೆ ನಡೆಸಿ ರೈಲುಗಳ ವಾಣಿಜ್ಯ ಸಂಚಾರಕ್ಕೆ ಅಂತಿಮ ಒಪ್ಪಿಗೆ ನೀಡಿದ್ದಾರೆ. ಆದ್ದರಿಂದ ಬಿಎಂಆರ್‌ಸಿಎಲ್ ರೈಲು ಸಂಚಾರ ಉದ್ಘಾಟನೆಗೆ ದಿನಾಂಕ ನಿಗದಿ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಪತ್ರವನ್ನು ಬರೆದಿದೆ.
ಈ ಕುರಿತು ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಗೆ ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಶನ್ ಲಿಮಿಟೆಡ್‌ನ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ಪತ್ರವನ್ನು ಬರೆದಿದ್ದಾರೆ. ಇಲಾಖೆಗೆ ಪತ್ರ ತಲುಪಿದೆ ಎಂದು ಮಾಧ್ಯಮಗಳಿಗೆ ಖಚಿತಪಡಿಸಿದ್ದು, ಪತ್ರವನ್ನು ಉಪ ಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಖಾತೆ ಸಚಿವರಾದ ಡಿ. ಕೆ. ಶಿವಕುಮಾರ್ ಕಛೇರಿಗೆ ಕಳಿಸಲಾಗಿದೆ.
ಕರ್ನಾಟಕ ಸರ್ಕಾರ ಕೇಂದ್ರ ಸಚಿವರ ಜೊತೆ ಚರ್ಚೆಯನ್ನು ನಡೆಸಿ, ನಾಗಸಂದ್ರ-ಮಾದಾವರ ನಡುವೆ ನಮ್ಮ ಮೆಟ್ರೋ ರೈಲು ಸಂಚಾರವನ್ನು ಆರಂಭಿಸುವ ದಿನಾಂಕವನ್ನು ನಿಗದಿಗೊಳಿಸಲಿದೆ. ಅಕ್ಟೋಬರ್ ಅಂತ್ಯದೊಳಗೆ ನಮ್ಮ ಮೆಟ್ರೋ ಹಸಿರು ವಿಸ್ತರಿತ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರ ಆರಂಭವಾಗಲಿದೆ.
ಬಿಎಂಆರ್‌ಸಿಎಲ್ ಎಲ್ಲಾ ಕಾಮಗಾರಿ ಮುಕ್ತಾಯಗೊಳಿಸಿ ಈ ಮಾರ್ಗದಲ್ಲಿ ಆಗಸ್ಟ್ 12 ರಿಂದ 17ರ ತನಕ ಸಿಗ್ನಲಿಂಗ್ ಸೇರಿದಂತೆ ವಿವಿಧ ಪರೀಕ್ಷೆ, ರೈಲುಗಳ ಪ್ರಾಯೋಗಿಕ ಸಂಚಾರ ನಡೆಸಿತ್ತು. ಬಳಿಕ ಅಕ್ಟೋಬರ್ 3ರಂದು ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿದ್ದರು. ಬಳಿಕ ಅಕ್ಟೋಬರ್ 4ರಂದು ಮಾರ್ಗದಲ್ಲಿ ರೈಲುಗಳ ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡಿದ್ದರು. ಈಗ ರೈಲು ಸಂಚಾರ ಉದ್ಘಾಟಿಸಲು ದಿನಾಂಕ ನಿಗದಿಯಾಗಬೇಕಿದೆ.
ಈ ವಿಸ್ತರಿತ ಮಾರ್ಗದ 3.7 ಕಿಲೋಮೀಟರ್ ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಜಿಂದಾಲ್ ನಗರ), ಮಾದವರ (ಬಿಐಇಸಿ) ಮೂರು ನಿಲ್ದಾಣಗಳಿವೆ. ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರೆ ತುಮಕೂರು ರಸ್ತೆಯಿಂದ ನಗರಕ್ಕೆ ಬರುವ ಜನರು ಟ್ರಾಫಿಕ್ ಕಿರಿಕಿರಿ ಇಲ್ಲದೇ ಮೆಟ್ರೋ ಹತ್ತಿ ಆಗಮಿಸಬಹುದು.
ಬಿಎಂಆರ್‌ಸಿಎಲ್ ಕೈಗೊಂಡ ಅತಿ ಕಡಿಮೆ ದೂರದ ಮತ್ತು ಅತಿ ಹೆಚ್ಚು ವರ್ಷಗಳನ್ನು ತೆಗೆದುಕೊಂಡ ಯೋಜನೆ ಇದಾಗಿದೆ. ನಾಗಸಂದ್ರ-ಮಾದಾವರ ನಡುವಿನ ನಮ್ಮ ಮೆಟ್ರೋ ಕಾಮಗಾರಿ ಆರಂಭವಾಗಿದ್ದು 2017ರಲ್ಲಿ. ಆದರೆ ವಿವಿಧ ಕಾರಣಕ್ಕೆ ಕಾಮಗಾರಿ ವಿಳಂಬವಾಗಿ ಅಂತಿಮವಾಗಿ ಸಂಚಾರಕ್ಕೆ ಮುಕ್ತವಾಗುತ್ತಿದೆ.
ಮೊದಲು ನೈಸ್ ರಸ್ತೆ ಮೇಲಿಂದ ಮೆಟ್ರೋ ಫ್ಲೈ ಓವರ್ ನಿರ್ಮಾಣಕ್ಕೆ ಅಡಚಣೆ ಉಂಟಾಯಿತು, ಬಳಿಕ ಮಂಜುನಾಥ ನಗರ ರೈಲು ನಿಲ್ದಾಣದ ನಿರ್ಮಾಣಕ್ಕೆ ಭೂ ಸ್ವಾಧೀನದ ವಿವಾದ ಪ್ರಾರಂಭವಾಯಿತು. ಬಳಿಕ ಕೋವಿಡ್ ಪರಿಸ್ಥಿತಿ ಕಾರಣದಿಂದಾಗಿ ಕಾಮಗಾರಿ ಭಾರೀ ವಿಳಂಬವಾಯಿತು. ಬಿಎಂಆರ್‌ಸಿಎಲ್ ಗುರಿಯಂತೆ 2019ರಲ್ಲಿ ರೈಲು ಸಂಚಾರ ಆರಂಭವಾಗಬೇಕಿತ್ತು. ಆದರೆ 2024ರ ಅಕ್ಟೋಬರ್‌ನಲ್ಲಿ ಮಾರ್ಗದಲ್ಲಿ ರೈಲು ಸಂಚಾರ ನಡೆಸಲಿದೆ.
ಇಷ್ಟು ದಿನ ಮಂಜುನಾಥ ನಗರ, ಚಿಕ್ಕಬಿದರಕಲ್ಲು, ಮಾದಾವರ, ತುಮಕೂರು ರಸ್ತೆ, ಅಂಚೆಪಾಳ್ಯ, ಜಿಂದಾಲ್ ನಗರದ ಜನರು ಮೆಟ್ರೋ ರೈಲು ಏರಲು ಸುಮಾರು 5 ಕಿ. ಮೀ. ಸಂಚಾರ ನಡೆಸಿ ನಾಗಸಂದ್ರ ತನಕ ಬರಬೇಕಿತ್ತು. ಅಲ್ಲದೇ ಈ ಮೆಟ್ರೋ ಸಂಚಾರದಿಂದ ನಗರದಿಂದ ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ)ಗೆ ತಲುಪಲು ಸಹಾಯಕವಾಗಲಿದೆ.


Click it and Unblock the Notifications