ಬೆಂಗಳೂರು: ನಮ್ಮ ಮೆಟ್ರೋ ಇಂದು ದೈನಂದಿನ ಅಗತ್ಯ ಸೇವೆಗಳಲ್ಲಿ ಒಂದಾಗಿದೆ. ಅತೀ ವೇಗ, ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ನೀಡುವ ನಮ್ಮ ಮೆಟ್ರೋ (Namma Metro) ಹಲವರಿಗೆ ಆದ್ಯತೆಯ ಸಾರಿಗೆ ವ್ಯವಸ್ಥೆಯಾಗಿದೆ. ಕಡಿಮೆ ಬೆಲೆ, ವೇಗದ ಪ್ರಯಾಣದಿಂದ ಜನಪ್ರಿಯತೆ ಪಡೆದಿದ್ದ ನಮ್ಮ ಮೆಟ್ರೋ, ಇತ್ತೀಚೆಗಷ್ಟೇ ಬೆಲೆ ಏರಿಕೆಯಿಂದಾಗಿ ಭಾರೀ ವಿವಾದಕ್ಕೆ ಗುರಿಯಾಗಿತ್ತು. ಆದ್ರೆ ಮೆಟ್ರೋ ಬೆಲೆ ಏರಿಕೆಯಾದರೂ, ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ. ಇದೀಗ ಬಿಎಂಆರ್‌ಸಿಎಲ್ (BMRCL) ತನ್ನ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ, ಹೊಸ ಮಾರ್ಗದ ಕಾರ್ಯಾರಂಭಕ್ಕೆ ಮುಹೂರ್ಯ ಇಟ್ಟಿದೆ.

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಇದೀಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಈಗಾಗಲೇ ಬೆಂಗಳೂರಿಗೆ ಯೆಲ್ಲೋ ಮೆಟ್ರೋ ಲೈನನ್ನು ಪರಿಚಯಿಸಿರುವ ಬಿಎಂಆರ್‌ಸಿಎಲ್, ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಪ್ಲಾನ್ ಮಾಡಿದೆ. ತುಮಕೂರು ಜನರಿಗೆ ಮೆಟ್ರೋದಿಂದ ಗುಡ್ ನ್ಯೂಸ್ ಸಿಕ್ಕಿದೆ.
ಬೆಂಗಳೂರು ಟು ತುಮಕೂರು ಮೆಟ್ರೋ!
ಬೆಂಗಳೂರಿನಿಂದ ತುಮಕೂರಿಗೆ (Bengaluru-Tumakuru) ಮಟ್ರೋ ಬೇಕು ಎಂಬುದು ಹಲವು ದಿನಗಳ ಕನಸು. ತುಮಕೂರಿನ ಜನರೂ ಕೂಡಾ ಹಲವು ದಿನಗಳಿಂದ ಈ ಯೋಜನೆಗೆ ಬೇಡಿಕೆಯಿಟ್ಟಿದ್ದರು. ಇದೀಗ ಬೆಂಗಳೂರಿನಿಂದ ಮೊದಲ ಅಂತರ್‌ಜಿಲ್ಲಾ ಮೆಟ್ರೋ ಕಾರ್ಯಕ್ಕೆ ಬಿಎಂಆರ್‌ಸಿಎಲ್ ಮುಂದಾಗಿದೆ.
59.6 ಕಿ.ಮೀ ಹಸಿರು ಮಾರ್ಗದ ವಿಸ್ತರಣೆಯ ವಿಸ್ತೃತ ಯೋಜನಾ ವರದಿ (DPR) ತಯಾರಿಸಲು ಅಂದರೆ ಆ ಮಾರ್ಗದಲ್ಲಿ ಯಾವೆಲ್ಲಾ ನಿಲ್ದಾಣಗಳು, ಎಷ್ಟು ನಿಲ್ದಾಣಗಳು ಇರಬೇಕು, ಏನೆಲ್ಲಾ ಇರಬೇಕು ಮತ್ತು ಎಷ್ಟು ಸಾವಿರ ಕೋಟಿ ರೂಪಾಯಿಗಳಲ್ಲಿ ಈ ಮೆಟ್ರೋ ಮಾರ್ಗ ನಿರ್ಮಾಣ ಆಗಬೇಕು ಎಂಬುದನ್ನು ಡೀಟೇಲ್ ಪ್ರಾಜೆಕ್ಟ್ ರಿಪೋರ್ಟ್ ಆಗಿದೆ. ಇದೀಗ ಇದರ ತಯಾರಿಗಾಗಿ ಬಿಎಂಆರ್‌ಸಿಎಲ್ ಬಿಡ್ ಕರೆದಿದೆ.
ಡಿಪಿಆರ್ ತಯಾರಿಗೆ ಬಿಡ್ ಕರೆದ BMRCL:
PPP (Public Private Partnership) ಮಾದರಿಯಲ್ಲಿ ಈ ಯೋಜನೆಯನ್ನು ಅಭಿವೃದ್ಧಿ ಪಡಿಸಲಿದ್ದು, ಆದ್ದರಿಂದ ಈ ಯೋಜನೆ ಬಿಡ್‌ಗೆ ಬರುವ ಕಂಪನಿಗಳು ಆರಂಭದಲ್ಲಿ 4.5 ಲಕ್ಷ ರೂ. ಡೆಪಾಸಿಟ್ ಇಡಬೇಕಾಗುತ್ತದೆ. ಬಿಡ್ ಸಲ್ಲಿಸಲು ನವೆಂಬರ್ 20 ಗಡುವು ನೀಡಲಾಗಿದ್ದು, ನವೆಂಬರ್ 21 ರಂದು ಟೆಂಡರ್ ತೆರೆಯಬಹುದು ಎಂದು ಹೇಳಳಾಗಿದೆ. ಇನ್ನು DPR ತಯಾರಿ ಮಾಡಲು 5 ತಿಂಗಳ ಗಡುವು ನೀಡಲಾಗಿದೆ. ಇನ್ನು ಈ ಯೋಜನೆಯ ಮೊದಲ ಹಂತಕ್ಕೆ 20 ಸಾವಿರಕ್ಕೂ ಅಧಿಕ ಕೋಟಿ ರೂ. ವೆಚ್ಚವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಸಿದ್ದರಾಮಯ್ಯ ಬಜೆಟ್‌ನ ಯೋಜನೆ!
2024-25 ರಲ್ಲಿ ಕರ್ನಾಟಕ ಬಜೆಟ್ ಮಂಡಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು-ತುಮಕೂರು ಮೆಟ್ರೋ ಯೋಜನೆ ಬಗ್ಗೆ ಘೋಷಣೆ ಮಾಡಿದ್ದರು. ಆದ್ದರಿಂದ ಒಂದು ವೇಳೆ ಬೆಂಗಳೂರಿನಿಂದ ತುಮಕೂರುವರೆಗೆ ಮೆಟ್ರೋ ಜಾರಿಗೆ ಬಂದರೆ, ಹಲವಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಮಾದಾವರದಿಂದ ಮೆಟ್ರೋ ಮಾರ್ಗವನ್ನು ವಿಸ್ತರಿಸುವ ಪ್ಲಾನ್ ಮಾಡಲಾಗಿದ್ದು, ಇದು ನೆಲಮಂಗಲ, ದಾಬಸ್‌ಪೇಟೆ ಮತ್ತು ಕ್ಯಾತಸಂದ್ರ ಮೂಲಕ ಹಾದು ಹೋಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇನ್ನು ಬಿಡ್ ನಂತರ ಡಿಪಿಆರ್ ತಯಾರಿ ಬಗ್ಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟರೆ, ಬೆಂಗಳೂರಿನಿಂದ ತುಮಕೂರಿಗೆ ಕೆಲವೇ ವರ್ಷಗಳಲ್ಲಿ ನಮ್ಮ ಮೆಟ್ರೋ ಬರಲಿದೆ.


Click it and Unblock the Notifications