ಬೆಂಗಳೂರು ನಮ್ಮ ಮೆಟ್ರೋ (Namma Metro) ಜನರ ಅಗತ್ಯ ಸೌಕರ್ಯಗಳಲ್ಲಿ ಒಂದಾಗಿದೆ. ಸದ್ಯ ಬೆಂಗಳೂರಿನಾದ್ಯಂತ ವಿಸ್ತರಣೆಯಾಗುತ್ತಿರುವ ನಮ್ಮ ಮೆಟ್ರೋ, ದಿನಕ್ಕೆ ಲಕ್ಷಗಟ್ಟಲೆ ಆದಾಯ ಸಂಪಾದನೆ ಮಾಡುತ್ತಿದೆ. ಇನ್ನು ಸ್ವಚ್ಛತೆ, ಶಿಸ್ತಿಗೆ ಹೆಸರುವಾಸಿಯಾದ ನಮ್ಮ ಮೆಟ್ರೋ, ಸದ್ಯ ನಿಯಮ ಉಲ್ಲಂಘನೆಯಿಂದಲೇ ಭಾರೀ ವೈರಲ್ ಆಗುತ್ತಿದೆ.

ಹೌದು, ಇದೀಗ ಬೆಂಗಳೂರು ನಗರದ ಜೀವನಾಡಿ ಎಂದೆನಿಸಿರುವ ನಮ್ಮ ಮೆಟ್ರೋದಲ್ಲಿ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಪ್ರಯಾಣಿಕರಿಗೆ ಕಠಿಣ ನಿಯಮಗಳು ಮತ್ತು ದಂಡಗಳನ್ನು ಜಾರಿಗೆ ತರಲು ಪ್ಲಾನ್ ಮಾಡಿದೆ.
ರೀಲ್ಸ್ ನೋಡುವವರೇ ಹೆಚ್ಚು!
ವೇಗದ ಪ್ರಯಾಣದಿಂದ, ನಿರ್ದಿಷ್ಟ ಸಮಯದಲ್ಲಿ ತಲುಪುವಲ್ಲಿ ನಮ್ಮ ಮೆಟ್ರೋ ಬಹಳಷ್ಟು ಸಹಕಾರಿಯಾಗಿದೆ. ಆದ್ರೆ ಇತ್ತೀಚಿನ ತಿಂಗಳುಗಳಲ್ಲಿ ಮೊಬೈಲ್ ದುರ್ಬಳಕೆ ಕುರಿತು ದೂರುಗಳು ನಮ್ಮ ಮೆಟ್ರೋದಲ್ಲಿ ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೋರಾದ ಸೌಂಡ್‌ನೊಂದಿಗೆ ರೀಲ್ಸ್ ನೋಡುವುದು, ಜೋರಾಗಿ ಫೋನ್‌ನಲ್ಲಿ ಮಾತನಾಡುವುದು ಮತ್ತು ಮತ್ತೊಬ್ಬರಿಗೆ ಕಿರಿಕಿರಿ ಉಂಟುಮಾಡುವಂತಹ ಬ್ಲೂಟೂತ್ ಬಳಕೆ, ಹೀಗೆ ಹತ್ತು ಹಲವು ಸಮಸ್ಯೆಗಳು ಪ್ರಯಾಣಿಕರಿಗೆ ದಿನನಿತ್ಯ ಕಾಡುತ್ತಿದೆ.
ಮೊಬೈಲ್ ಬಳಕೆದಾರರೇ ಹುಷಾರ್..!
ಕಳೆದೊಂದು ವರ್ಷದಿಂದ ಎಚ್ಚರಿಕೆ ನೀಡುತ್ತಾ ಬಂದರೂ, ನಿಯಮ ಉಲ್ಲಂಘಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ ಎಂದು ಮೆಟ್ರೋ ಭದ್ರತಾ ಸಿಬ್ಬಂದಿ ಹೇಳಿದ್ದಾರೆ. ಕೇವಲ ಎಚ್ಚರಿಕೆ ನೀಡಿದ್ರೆ ಸಾಲದು ಎಂಬ ವಿಷಯವನ್ನು ಮನಗಂಡ ಬಿಎಂಆರ್‌ಸಿಎಲ್, ಇದೀಗ ಈ ಸಮಸ್ಯೆ ನಿಯಂತ್ರಿಸಲು ಕಠಿಣ ನಿಯಮಗಳು ಮತ್ತು ದಂಡಗಳನ್ನು ಹೇರಲು ಸಿದ್ಧವಾಗಿದೆ.
ಡಿಸೆಂಬರ್ 5 ರಿಂದ 25ರ ನಡುವೆ ಸಂಗ್ರಹಿಸಲಾದ ಅಧಿಕೃತ ದತ್ತಾಂಶಗಳ ಪ್ರಕಾರ, ಮೆಟ್ರೋ ನಿಲ್ದಾಣಗಳಲ್ಲಿ, ರೈಲುಗಳಲ್ಲಿ ಜೋರಾದ ಮೊಬೈಲ್ ಬಳಕೆ, ರೀಲ್ಸ್ ನೋಡುವುದು, ಫೋನ್‌ನಲ್ಲಿ ಮಾತನಾಡುವುದು ಮತ್ತು ಬ್ಲೂಟೂತ್ ಹೆಡ್‌ಸೆಟ್‌ಗಳ ಕಿರಿಕಿರಿಯಿಂದ ಒಟ್ಟು 6,520 ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ.
ಮೆಟ್ರೋದಲ್ಲೇ ಆಹಾರ ಸೇವನೆ!
ಮೊಬೈಲ್ ಬಳಕೆ, ಜೋರಾದ ಸೌಂಡ್‌ನೊಂದಿಗೆ ರೀಲ್ಸ್ ನೋಡುವುದು ಮಾತ್ರವಲ್ಲದೇ ಮೆಟ್ರೋ ರೈಲುಗಳಲ್ಲೇ ಆಹಾರ ಸೇವನೆಯ ಪ್ರಕರಣಗಳೂ ಕೂಡಾ ದಾಖಲಾಗಿದೆ. ಯಾವುದೇ ತಿಂಡಿ, ಜ್ಯೂಸ್, ಆಹಾರ ಸೇವಿಸಬಾರದೆಂಬ ನಿಯಮ ಮೆಟ್ರೋ ರೈಲಿನಲ್ಲಿ ಮೊದಲಿನಿಂದಲೂ ಜಾರಿಯಲ್ಲಿದ್ದರೂ, ಇದನ್ನು ಮೀರಿಯೂ ಆಹಾರ ಸೇವನೆ ಮಾಡುತ್ತಿದ್ದಾರೆ ಎಂದರೆ ವಿಷಾಧವೇ ಸರಿ. ಆದ್ದರಿಂದ ಮೆಟ್ರೋ ಬೋಗಿಗಳೊಳಗೆ ಆಹಾರ ಸೇವಿಸಿದ್ದಕ್ಕಾಗಿ 268 ಪ್ರಕರಣಗಳು ದಾಖಲಾಗಿವೆ.
ಜೊತೆಗೆ, ಸುರಕ್ಷತೆ ಮತ್ತು ಸ್ವಚ್ಛತಾ ನಿಯಮಗಳನ್ನು ಉಲ್ಲಂಘಿಸಿ ತಂಬಾಕು ಸೇವಿಸಿದಕ್ಕಾಗಿ 641 ಪ್ರಕರಣಗಳು ದಾಖಲಾಗಿದೆ.
ಗ್ರಾಹಕರ ವರ್ತನೆ, ಸಿಬ್ಬಂದಿಗಳು ಸುಸ್ತು!
ಸಿಬ್ಬಂದಿಗಳು ನಿಯಮ ಉಲ್ಲಂಘನೆ ಬಗ್ಗೆ ನಿರಂತರ ಮಾಹಿತಿ, ಎಚ್ಚರಿಕೆ ನೀಡುತ್ತಾ ಬಂದರೂ, ದಿನ ಹೋದಂತೆ ನಿಯಮ ಉಲ್ಲಂಘನೆ ವರದಿಗಳು ಹೆಚ್ಚಾಗುತ್ತಲೇ ಇದೆ ಹೊರತು ಕಡಿಮೆಯಾಗುತ್ತಿಲ್ಲ. ಆದ್ದರಿಂದ ಎಚ್ಚೆತ್ತ ಬಿಎಂಆರ್‌ಸಿಎಲ್ ಶೀಘ್ರದಲ್ಲೇ ಮೆಟ್ರೋ ಸೇವೆಯಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿಲಿದೆ. ಅಲ್ಲದೇ ತಪ್ಪು ಪುನರಾವರ್ತನೆಯಾದರೆ ಕಠಿಣ ದಂಡವನ್ನೂ ವಿಧಿಸುವುದಾಗಿ ಬಿಎಂಆರ್‌ಸಿಎಲ್ ತಿಳಿಸಿದೆ.


Click it and Unblock the Notifications