ಬೆಂಗಳೂರು ಮೆಟ್ರೋ (Bengaluru Metro) ಪ್ರಯಾಣಿಕರ ಜೀವನಾಡಿಯಾಗಿದೆ. ಯಾವುದೇ ಸ್ಥಳವನ್ನು ವೇಗದಲ್ಲಿ ತಲುಪಬೇಕಾದರೆ, ಟ್ರಾಫಿಕ್ ಸಮಸ್ಯೆಯಿಂದ ಪಾರಾಗಬೇಕೆಂದರೆ ಮೆಟ್ರೋ ಅಗತ್ಯ ಸೌಲಭ್ಯಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಮೆಟ್ರೋ ಪ್ರಯಾಣಿಕರಿಗೆ (Metro Passengers) ಪಾರ್ಕಿಂಗ್ ವ್ಯವಸ್ಥೆಯನ್ನೂ ನಿಲ್ದಾಣಗಳಲ್ಲಿ ನೀಡಲಾಗಿದೆ. ಆದ್ರೆ ಸ್ಥಳಾವಕಾಶದ ಕೊರತೆಯಿಂದ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಹಲವು ದೂರುಗಳು ಕೇಳಿಬರುತ್ತಿದೆ.

ಆದರೆ ಇದೀಗ ಬೆಂಗಳೂರಿನ ಮೆಟ್ರೋ ನಿಲ್ದಾಣಗಳ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಹೊಸ ಯೋಜನೆ ಜಾರಿಗೆ ತರಲು ಮುಂದಾಗಿದೆ. ಟ್ರಾಫಿಕ್ ದಟ್ಟಣೆ ಮತ್ತು ಸಾರ್ವಜನಿಕರಿಂದ ದೂರುಗಳನ್ನು ಆಲಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಿಲ್ದಾಣಗಳ ಸಮೀಪ ಭೂಮಿ ಸ್ವಾಧೀನಪಡಿಸಿಕೊಂಡು ವಾಣಿಜ್ಯ ಮಳಿಗೆಗಳೊಂದಿಗೆ ಬಹುಮಹಡಿ ಪಾರ್ಕಿಂಗ್ ಸ್ಥಳಗಳನ್ನು ನಿರ್ಮಾಣ ಮಾಡಲು BMRCL ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಪಾರ್ಕಿಂಗ್‌ನಲ್ಲಿ ಅವ್ಯವಸ್ಥೆ
ಪ್ರಸ್ತುತ, ಹಲವು ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆ. ಆದರೆ ಸಾಕಷ್ಟು ಇಲ್ಲ ಎಂಬುದೇ ಸದ್ಯದ ದೂರು. ಇದರಿಂದ ಪ್ರಯಾಣಿಕರು ತಮ್ಮ ವಾಹನಗಳನ್ನು ಫೂಟ್‌ಬಾತ್‌ಗಳಲ್ಲಿ ಮತ್ತು ಮನೆಗಳ ಮುಂದೆ ನಿಲ್ಲಿಸುವಂತಹ ಪರಿಸ್ಥಿತಿ ಎದುರಾಗಿದೆ. ಇದು ನಿಲ್ದಾಣಗಳ ಬಳಿ ಟ್ರಾಫಿಕ್ ದಟ್ಟಣೆ ಮತ್ತು ಸ್ಥಳೀಯ ನಿವಾಸಿಗಳಿಗೂ ತೀವ್ರ ತೊಂದರೆ ಉಂಟುಮಾಡಿದೆ. ಅಲ್ಲದೇ ಈ ಬಗ್ಗೆ ಪದೇ ಪದೇ ದೂರುಗಳು ಕೇಳಿಬರುತ್ತಿವೆ.
ಈ ಸಮಸ್ಯೆಯನ್ನು ನಿವಾರಿಸಲು, BMRCL ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದು, ಮೆಟ್ರೋ ನಿಲ್ದಾಣಗಳ ಬಳಿಯೇ ಭೂಮಿ ಖರೀದಿಸಲಿದೆ. ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ದ್ವಿಚಕ್ರ ವಾಹನ ಮತ್ತು ಕಾರುಗಳಿಗೆ ಸ್ಥಳಾವಕಾಶವಿರುವ ಬಹುಮಹಡಿ ಪಾರ್ಕಿಂಗ್ ಸ್ಥಳಗಳನ್ನು ನಿರ್ಮಿಸಲಾಗುವುದು. ಇದು ಪಾರ್ಕಿಂಗ್ ಕೊರತೆಯನ್ನು ದೂರ ಮಾಡಲಿದೆ ಎಂದು ಹೇಳಲಾಗಿದೆ.
ಪಾರ್ಕಿಂಗ್ ಜೊತೆಗೆ ವ್ಯವಹಾರ!
ಈ ಯೋಜನೆಯು ಕೇವಲ ಪಾರ್ಕಿಂಗ್‌ಗೆ ಮಾತ್ರ ಸೀಮಿತವಲ್ಲ, ಜೊತೆಗೆ BMRCL ಈ ಪಾರ್ಕಿಂಗ್ ಕಟ್ಟಡಗಳಲ್ಲಿ ವಾಣಿಜ್ಯ ಮಳಿಗೆಗಳನ್ನೂ ತೆರೆಯಲು ಮುಂದಾಗಿದೆ ಎಂದು ಹೇಳಲಾಗಿದೆ. ಇದರಿಂದ ಪ್ರಯಾಣಿಕರಿಗೂ ಅನುಕೂಲವಾಗುವ ಜೊತೆಗೆ, ಸಂಸ್ಥೆಗೆ ಹೆಚ್ಚುವರಿ ಆದಾಯವನ್ನೂ ತಂದುಕೊಡಲಿದೆ ಎಂದು ಅಧಿಕಾರಿಗಳು ನಿರೀಕ್ಷಿಸಿದ್ದಾರೆ.
ಡಿಕೆ ಶಿವಕುಮಾರ್ ಹೇಳಿದ್ದೇನು?
ಸೋಮವಾರ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು BMRCL ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ, ಅಗತ್ಯವಿರುವಲ್ಲಿ ಭೂಮಿ ಸ್ವಾಧೀನಪಡಿಸಿಕೊಂಡು, ಮೆಟ್ರೋ ನಿಲ್ದಾಣಗಳಲ್ಲಿ ಸೂಕ್ತ ಪಾರ್ಕಿಂಗ್ ಸೌಲಭ್ಯವನ್ನು ಪ್ರಯಾಣಿಕರಿಗಾಗಿ ಕಲ್ಪಿಸುವಂತೆ BMRCL ಗೆ ನಿರ್ದೇಶನ ನೀಡಿದರು.
ಯೋಜನೆಯ ಉದ್ದೇಶ:
ಬಹುಮಹಡಿ ಪಾರ್ಕಿಂಗ್ ನಿಲ್ದಾಣಗಳನ್ನು ನಿರ್ಮಿಸುವ ಸಲುವಾಗಿ ಈಗಾಗಲೇ ಹೆಚ್ಚು ಜಾಗ ಗುರುತಿಸಿ, ಸ್ವಾಧೀನಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಇದರಿಂದ ಮುಂದಿನ ದಿನಗಳಲ್ಲಿ ರಸ್ತೆ ಬದಿಯ ಪಾರ್ಕಿಂಗ್ ಕಡಿಮೆಯಾಗಲಿದೆ, ಸಂಚಾರದಲ್ಲಿ ಸುಗಮವಾಗಲಿದೆ ಮತ್ತು ಪ್ರಯಾಣಿಕರು, ಮೆಟ್ರೋ ನಿಲ್ದಾಣಗಳ ಸ್ಥಳೀಯ ನಿವಾಸಿಗಳ ಅಡಚಣೆಗೆ ಪರಿಹಾರವಾಗಲಿದೆ ಎಂಬುದು ಈ ಯೋಜನೆಯ ಮುಖ್ಯ ಉದ್ದೇಶ. ದಿನದಿಂದ ದಿನಕ್ಕೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕೂಡಾ ಹೆಚ್ಚಾಗುತ್ತಿದೆ. ಅಲ್ಲದೇ ಬಿಎಂಆರ್‌ಸಿಎಲ್ ಕೂಡಾ ಬೆಂಗಳೂರಿನಾದ್ಯಂತ ಮೆಟ್ರೋ ಸೇವೆಯನ್ನು ವಿಸ್ತರಿಸಲು ಮುಂದಾಗಿದೆ.


Click it and Unblock the Notifications