ಜೀವ ವಿಮಾ ನಿಗಮದ (ಎಲ್‌ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಗಾಗಿ ಸಲ್ಲಿಕೆ ಮಾಡಿದ್ದ ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (ಡಿಆರ್‌ಎಚ್‌ಪಿ) ಗೆ ತಡೆ ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಅರ್ಜಿಯನ್ನು ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ಮಾಧವ್ ಜಾಮ್ದಾರ್ ಅವರಿದ್ದ ಪೀಠ ತಿರಸ್ಕರಿಸಿದೆ.
ಸಾರ್ವಜನಿಕ ಕೊಡುಗೆ ಮತ್ತು ಷೇರುಗಳ ವಿತರಣೆ ಪ್ರಶ್ನಿಸಿ ಮೂವರು ಪಾಲಿಸಿದಾರರು ಬಾಂಬೆ ಹೈಕೋರ್ಟ್‌ಗೆ ಮನವಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (ಡಿಆರ್‌ಎಚ್‌ಪಿ) ಗೆ ತಡೆ ನೀಡಲಾಗದು ಎಂದು ಹೇಳಿದೆ.
ಈ ಅರ್ಜಿಯಲ್ಲಿ ಎಲ್ಐಸಿ ಕಾಯಿದೆಗೆ ತಿದ್ದುಪಡಿ ಮಾಡಲು ಬಯಸಿದ ಹಣಕಾಸು ಕಾಯಿದೆಯ ಭಾಗವೊಂದನ್ನು ಪ್ರಶ್ನೆ ಮಾಡಲಾಗಿತ್ತು. ಎಲ್‌ಐಸಿಯ ಡಿಆರ್‌ಎಚ್‌ಪಿಗೆ ತಡೆ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಅರ್ಜಿಯಲ್ಲಿ ಬೇರೆ ಏನೇನಿದೆ?
ಹಣಕಾಸು ಕಾಯಿದೆ 2021ರ ಪೂರ್ವ ಸೂಚಕವಾಗಿರುವ ಹಣಕಾಸು ಮಸೂದೆಯನ್ನು ಸಂವಿಧಾನದ 110 ನೇ ವಿಧಿಯ ಅಡಿಯಲ್ಲಿ ಹಣದ ಮಸೂದೆಯಾಗಿ ಎಂದಿಗೂ ಅಂಗೀಕಾರ ಮಾಡಲಾಗುವುದಿಲ್ಲ. ಹಣಕಾಸು ಕಾಯಿದೆ ಮತ್ತು ನಿರ್ದಿಷ್ಟವಾಗಿ ಎಲ್‌ಐಸಿ ಕಾಯಿದೆಗೆ ಪರಿಚಯಿಸಿದ ತಿದ್ದುಪಡಿಗಳು ಸಂವಿಧಾನದ 300A ವಿಧಿಗೆ ತೀವ್ರ ರೀತಿಯಲ್ಲಿ ವ್ಯತಿರಿಕ್ತವಾಗಿವೆ ಎಂದು ಅರ್ಜಿಯಲ್ಲಿ ವಾದ ಮಾಡಲಾಗಿದೆ. ಐಪಿಒ ನೆಪದಲ್ಲಿ ಕೇಂದ್ರ ಸರ್ಕಾರವು ಕಂಪನಿಯಲ್ಲಿನ ತನ್ನ ಪಾಲನ್ನು ಶೇಕಡ 5ರಷ್ಟು ವಾಪಾಸ್ ಪಡೆಯುವ ಯೋಜನೆ ರೂಪಿಸಿದೆ ಎಂದು ಕೂಡಾ ಈ ಅರ್ಜಿಯಲ್ಲಿ ಆರೋಪ ಮಾಡಲಾಗಿದೆ.

ಎಲ್ಐಸಿ ಐಪಿಒ ಮೇ ತಿಂಗಳಲ್ಲಿ ಆರಂಭ ಸಾಧ್ಯತೆ
ಕೇಂದ್ರ ಸರ್ಕಾರವು ಜೀವ ವಿಮಾ ನಿಗಮದ (ಎಲ್‌ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಅನ್ನು ಮೇ ವೇಳೆಗೆ ಪ್ರಾರಂಭಿಸುವ ಸಾಧ್ಯತೆಯಿದೆ. ಸಾರ್ವಜನಿಕ ಕೊಡುಗೆಯ ಮೂಲಕ ಶೇಕಡಾ 5 ಕ್ಕಿಂತ ಹೆಚ್ಚಿನ ಪಾಲನ್ನು ಮಾರಾಟ ಮಾಡಲು ಕೇಂದ್ರವು ಮುಂದಾಗಬಹುದು ಎಂದು ವರದಿಯು ಉಲ್ಲೇಖ ಮಾಡಿದೆ.
ಐಪಿಒಗಾಗಿ ಕಂಪನಿಯ ಕರಡನ್ನು ಅಂತಿಮಗೊಳಿಸಲು ಕೇಂದ್ರ ಸರ್ಕಾರವು ಬ್ಯಾಂಕರ್‌ಗಳು ಮತ್ತು ಸಲಹೆಗಾರರೊಂದಿಗೆ ಸಂಪರ್ಕದಲ್ಲಿದೆ ಎಂದು ಎಲ್‌ಐಸಿ ಐಪಿಒ ಬೆಳವಣಿಗೆಯ ಬಗ್ಗೆ ಮಾಹಿತಿ ತಿಳಿದಿರುವ ನಿಕಟ ಮೂಲಗಳು ತಿಳಿಸಿದೆ.
ಎಲ್‌ಐಸಿ ಆರಂಭಿಕ ಷೇರು ಮಾರಾಟದ ಮೂಲಕ ಹಣವನ್ನು ಸಂಗ್ರಹಿಸಲು ಈಗಾಗಲೇ ಬಂಡವಾಳ ಮಾರುಕಟ್ಟೆಗಳ ನಿಯಂತ್ರಕ ಸೆಬಿಯ ಅನುಮೋದನೆಯನ್ನು ಸ್ವೀಕಾರ ಮಾಡಿದೆ. ಸೆಬಿಗೆ ಸಲ್ಲಿಸಿದ ಕರಡು ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (ಡಿಆರ್‌ಎಚ್‌ಪಿ) ಪ್ರಕಾರ, ಕೇಂದ್ರವು ಎಲ್‌ಐಸಿಯ 31 ಕೋಟಿ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡುತ್ತದೆ. ಅದರಲ್ಲಿ ಒಂದು ಭಾಗವನ್ನು ತನ್ನ ಹೂಡಿಕೆದಾರರಿಗೆ ಎಲ್‌ಐಸಿ ಕಾಯ್ದಿರಿಸಲಿದೆ.


Click it and Unblock the Notifications