ಬೆಂಗಳೂರು, ಸೆಪ್ಟೆಂಬರ್ 22: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿ. (ಬಿಎಸ್‌ಎನ್‌ಎಲ್) ಮತ್ತೆ ತನ್ನ ಗ್ರಾಹಕರ ಸಂಖ್ಯೆಯನ್ನು ಅತಿವೇಗದಲ್ಲಿ ಹೆಚ್ಚಿಸಿಕೊಳ್ಳುತ್ತಾ ಸಾಗಿದ್ದು, ಇದೇ ವೇಳೆ ಖಾಸಗಿ ಟೆಲಿಕಾಂ ಆಪರೇಟರ್‌ಗಳಾದ ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾ ತನ್ನ ಬಳಕೆದಾರರನ್ನು ಕಳೆದುಕೊಂಡಿದೆ.
ಮೊಬೈಲ್ ಸೇವಾ ಶುಲ್ಕ ಏರಿಕೆ ಮಾಡಿದ್ದರಿಂದ ಜುಲೈನಲ್ಲಿ ರಿಲಯನ್ಸ್ ಜಿಯೊ, ಭಾರ್ತಿ ಏರ್‌ಟೆಲ್ ಹಾಗೂ ವೊಡಾಫೋನ್ ಐಡಿಯಾ ಕಂಪನಿಗಳ ಒಟ್ಟಾರೆ ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು. ಇದು ಬಿಎಸ್‌ಎನ್‌ಎಲ್‌ಗೆ ಪಾಲಿಗೆ ವರದಾನವಾಗಿದ್ದು, ಹೊಸದಾಗಿ 29.4 ಲಕ್ಷ ಹೊಸ ಗ್ರಾಹಕರನ್ನು ಪಡೆದುಕೊಂಡಿದೆ.

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ದತ್ತಾಂಶದ ಪ್ರಕಾರ, ಟೆಲಿಕಾಂ ಮಾರುಕಟ್ಟೆಯಲ್ಲಿ ನಾಯಕ ರಿಲಯನ್ಸ್ ಜಿಯೋ ಜುಲೈನಲ್ಲಿ 758,000 ಚಂದಾದಾರರನ್ನು ಕಳೆದುಕೊಂಡರೆ, ವೊಡಾಫೋನ್ ಐಡಿಯಾ 1.4 ಮಿಲಿಯನ್ ಕಳೆದುಕೊಂಡಿದೆ. ಭಾರ್ತಿ ಏರ್‌ಟೆಲ್ ಹೆಚ್ಚು ಗ್ರಾಹಕರನ್ನು ಕಳೆದು ಅಂದರೆ ಸುಮಾರು 1.7 ಮಿಲಿಯನ್ ಬಳಕೆದಾರರು ಈ ನೆಟ್‌ವರ್ಕ್ ತೊರೆದಿದ್ದಾರೆ.
ಜುಲೈ ವೇಳೆಗೆ, ಜಿಯೋ 475.7 ಮಿಲಿಯನ್ ಗ್ರಾಹಕರನ್ನು ಹೊಂದಿದ್ರೆ, ಏರ್‌ಟೆಲ್ 387.3 ಮಿಲಿಯನ್, ವೊಡಾಫೋನ್ ಐಡಿಯಾ 215.8 ಮಿಲಿಯನ್ ಮತ್ತು ಬಿಎಸ್‌ಎನ್‌ಎಲ್ 88.5 ಮಿಲಿಯನ್ ಹೊಂದಿದೆ. ಒಟ್ಟಾರೆ ಮೊಬೈಲ್ ಫೋನ್ ಬಳಕೆದಾರರು ಜೂನ್‌ನಲ್ಲಿದ್ದ 1.17 ಶತಕೋಟಿಯಿಂದ ಜುಲೈನಲ್ಲಿ 1.16 ಶತಕೋಟಿಗೆ ಇಳಿದಿದ್ದಾರೆ.

ಟಾರಿಫ್ ಏರಿಕೆ:
ಜುಲೈನಿಂದ ಜಾರಿಗೆ ಬರುವಂತೆ Jio, Airtel ಮತ್ತು Vodafone Idea ನ ಟಾರಿಫ್ ದರವನ್ನು ಶೇ. 10-25ರಷ್ಟು ಏರಿಕೆ ಮಾಡಿದ್ದವು. ಅಲ್ಲದೆ ಏರ್‌ಟೆಲ್ ಮತ್ತು ಜಿಯೋ ಅನ್‌ಲಿಮಿಟೆಡ್ 5ಜಿಯನ್ನು ದಿನಕ್ಕೆ 2ಜಿಬಿಗಿಂತ ಹೆಚ್ಚಿನ ಪ್ರಮಾಣದ ಪ್ಯಾಕ್‌ಗಳಿಗೆ ಮಾತ್ರ ಸೀಮಿತಗೊಳಿಸಿದ್ದವು. 5G ಯೋಜನೆಗಳಿಗೆ ಪ್ರವೇಶ ಮಟ್ಟದ ಟಾರಿಫ್ ಗಳನ್ನು ಎರಡೂ ಕಂಪನಿಗಳು 46% ಏರಿಸಿತ್ತು. ಏರ್‌ಟೆಲ್ ತನ್ನ ವಾಯ್ಸ್ ಓನ್ಲಿ ಪ್ಲ್ಯಾನ್ ದರವನ್ನು ಶೇ. 11ರಷ್ಟು ಏರಿಕೆ ಮಾಡಿ 199 ರೂ.ಗೆ ಹೆಚ್ಚಿಸಿತ್ತು. ಏರ್‌ಟೆಲ್ ಮತ್ತು ವೋಡಾಫೋನ್ ಐಡಿಯಾ ಪ್ಯಾಕ್ ದರವನ್ನು ಶೇ. 10-21ರಷ್ಟು ಹೆಚ್ಚಿಸಿದ್ದರೆ, ಜಿಯೋ ಶೇ. 12-25ರಷ್ಟು ದರ ಏರಿಕೆ ಮಾಡಿತ್ತು.
ರೀಚಾರ್ಜ್ ಸೈಕಲ್‌ನಲ್ಲಿ ಬದಲಾವಣೆಗಳೂ ಸಂಭಾವ್ಯ ಗ್ರಾಹಕರ ಚಿಂತೆಗೆ ಕಾರಣವಾಗಿ ಡೌನ್‌ಟ್ರೇಡಿಂಗ್ ಆಗಬಹುದು ಎಂದು ವಿಶ್ಲೇಷಕರು ನಿರೀಕ್ಷಿಸಿದ್ದರು. ಇದಲ್ಲದೇ ಸುಂಕದ ಹೆಚ್ಚಳವು ಗ್ರಾಹಕರು ಅವರು ಬಳಸುವ ಒಂದು ಅಥವಾ ಹೆಚ್ಚಿನ ಸಿಮ್‌ಗಳ ಬಳಕೆಯನ್ನು ತ್ಯಜಿಸುವ ಕಾರಣ ಸಿಮ್ ಬಲವರ್ಧನೆಗೆ ಕಾರಣವಾಗಿತ್ತು. ಒಟ್ಟಾರೆ ಗ್ರಾಹಕರ ನೆಲೆಯಲ್ಲಿ ಇಳಿಕೆಗೆ ಕಾರಣವಾಯಿತು. ಇದರ ಬಗ್ಗೆ ಖಚಿತತೆ ಬರಬೇಕು ಅಂದ್ರೆ , ಸುಂಕ ಹೆಚ್ಚಳದಿಂದ ನಿಜವಾದ ಪರಿಣಾಮವು ತ್ರೈಮಾಸಿಕದ ಅಂತ್ಯದ ವೇಳೆಗೆ ಮತ್ತು ಮುಂದಿನ ತ್ರೈಮಾಸಿಕದಲ್ಲಿ ಡಿಸೆಂಬರ್‌ನಲ್ಲಿ ಕೊನೆಗೊಳ್ಳುವ ವೇಳೆ ತಿಳಿಯಬಹುದು ಎಂದು ತಜ್ಞರು ಹೇಳಿದ್ದಾರೆ.ಟ್ರಾಯ್ ಡೇಟಾವು ಒಂದು ತಿಂಗಳ ತಡವಾಗಿ ಬರುತ್ತದೆ. ಹೀಗಾಗಿ, ಜುಲೈನ ಅಂಕಿಅಂಶಗಳು ಸೆಪ್ಟೆಂಬರ್‌ನಲ್ಲಿ ಲಭ್ಯವಿರುತ್ತವೆ.
ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆ
ಬಿಎಸ್‌ಎನ್‌ಎಲ್ ತನ್ನ ಬಳಕೆದಾರರಿಗೆ ಹಲವಾರು ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿತ್ತು. ಇವುಗಳು ದೀರ್ಘಾವಧಿಯ ಲಾಭದೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಅನಿಯಮಿತ ಧ್ವನಿ ಕರೆಗಳು ಮತ್ತು ಡೇಟಾದಂತಹ ಪ್ರಯೋಜನಗಳನ್ನು ನೀಡಿತ್ತು. ಜುಲೈನಲ್ಲಿ ಖಾಸಗಿ ಕಂಪನಿಗಳು ತಮ್ಮ ಪ್ರಿಪೇಯ್ಡ್ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿದ ಕಾರಣ ಅನೇಕ ಬಳಕೆದಾರರು ಬಿಎಸ್‌ಎನ್‌ಎಲ್‌ಗೆ ತಮ್ಮ ನಂಬರ್ ಗಳನ್ನು ಪೋರ್ಟ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
BSNL ಮಾತ್ರ ಸುಂಕವನ್ನು ಹೆಚ್ಚಿಸದ ಸೇವಾ ಪೂರೈಕೆದಾರ. ಆದರೆ ಇದು ಸೀಮಿತ ಪ್ರದೇಶದಲ್ಲಿ ಮಾತ್ರ 4G ಸೇವೆಗಳನ್ನು ನೀಡುತ್ತದೆ. ಜತೆಗೆ 5ಜಿ ಸೇವೆ ಇಲ್ಲ. ಇದು ಹೆಚ್ಚಿನ ಗ್ರಾಹಕರ ಸೇರ್ಪಡೆಗೆ ಹಿನ್ನಡೆಯಾಗಿದೆ. ಮುಂದಿನ ವರ್ಷದ ಮಧ್ಯಭಾಗದಿಂದ ದೇಶದ ಹೆಚ್ಚಿನ ಪ್ರದೇಶಗಳಲ್ಲಿ ಕಂಪನಿ 4ಜಿ ಸೇವೆ ಆರಂಭಿಸಲಿದ್ದು, ಈ ವೇಳೆ ಮತ್ತಷ್ಟು ಗ್ರಾಹಕರು ಬಿಎಸ್‌ಎನ್‌ಎಲ್ ನತ್ತ ವಾಲುವ ಸಾಧ್ಯತೆ ಇದೆ.
'ಗ್ರಾಹಕರು ವಾಪಾಸ್ ಬರುತ್ತಾರೆ'
ವೊಡಾಫೋನ್-ಐಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ್ ಮೂಂದ್ರಾ ಅವರು ಹೇಳುವ ಪ್ರಕಾರ, ಗ್ರಾಹಕರು ದರ ಹೆಚ್ಚಳ ಕಾರಣದಿಂದ ವೊಡಾಫೋನ್ ಬಿಟ್ಟು ಬಿಎಸ್‌ಎನ್‌ಎಲ್‌ಗೆ ಬದಲಾಗುತ್ತಿದ್ದಾರೆ. ಆದರೆ, ಒಮ್ಮೆ ಬದಲಾದ ಗ್ರಾಹಕರು ವಾಪಾಸ್ ಬರುತ್ತಿದ್ದಾರೆ. ಏಕೆಂದರೆ ಬಿಎಸ್‌ಎನ್‌ಎಲ್‌ನ 4ಜಿ ಸೇವೆಗಳ ನೆಟ್‌ವರ್ಕ್ ಎಲ್ಲೆಡೆ ಲಭ್ಯವಾಗುತ್ತಿಲ್ಲ. ಈ ಕಾರಣದಿಂದ ಒಮ್ಮೆ ನೆಟ್‌ವರ್ಕ್ ಬದಲಾಯಿಸಿದ ಗ್ರಾಹಕರು ಮರಳಿ ಬರುವ ಸಾಧ್ಯತೆಯಿದೆ ಎನ್ನುತ್ತಾರೆ.
ಇನ್ನು ಕೆಲವು ಪರಿಣತರು ಹೇಳುವ ಪ್ರಕಾರ, ಟೆಲಿಕಾಂ ಕಂಪೆನಿಗಳು ಮೊಬೈಲ್ ಶುಲ್ಕ ಪರಿಷ್ಕರಣೆ ಮಾಡಿರುವುದರಿಂದ ಆಯಾ ಕಂಪೆನಿಗಳಿಗೆ ಯಾವ ರೀತಿಯ ಹೊಡೆತ ಬಿದ್ದಿದೆ ಎನ್ನುವುದನ್ನು ಈಗಲೇ ಸ್ಪಷ್ಟವಾಗಿ ಹೇಳುವುದು ಸಾಧ್ಯವಿಲ್ಲ. ಹಲವರು ಒಂದಕ್ಕಿಂತ ಹೆಚ್ಚಿನ ಸಿಮ್‌ಗಳನ್ನು ಬಳಸುವ ಸಾಧ್ಯತೆಯಿದ್ದು, ದರ ಹೆಚ್ಚಳದ ಕಾರಣಕ್ಕೆ ಒಂದು ಸಂಪರ್ಕವನ್ನು ಸಹಜವಾಗಿಯೇ ಕಡಿತಗೊಳಿಸುವ ಸಾಧ್ಯತೆಯಿದೆ. ಹೀಗಿರುವಾಗ, ವಾಸ್ತವಾಗಿಯೂ ಬಳಕೆದಾರರ ಡೌನ್‌ಟ್ರೆಂಡಿಂಗ್ ಗೊತ್ತಾಗಬೇಕಾದರೆ ಡಿಸೆಂಬರ್‌ವರೆಗೆ ಕಾಯಬೇಕಾಗುತ್ತದೆ ಎನ್ನುತ್ತಾರೆ.


Click it and Unblock the Notifications