ನವದೆಹಲಿ, ಜುಲೈ 23: ಕೇಂದ್ರದಲ್ಲಿ ಹೊಸ ಸರ್ಕಾರ ಬಂದ ನಂತರ ಹೊಸ ಬಜೆಟ್ ಮಂಡನೆಯಾಗಿದೆ. ಹಾಗಿದ್ದರೆ ಈ ಬಜೆಟ್ ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ಏನು ಎನ್ನುವುದನ್ನು ತಿಳಿದುಕೊಳ್ಳಬೇಕು. ಕರ್ನಾಟಕದಿಂದಲೇ ರಾಜ್ಯಸಭೆ ಪ್ರತಿನಿಧಿಸುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಹೆಚ್ಚಿನ ಕೊಡುಗೆ ನೀಡಿಲ್ಲ. ಕರ್ನಾಟಕದ ನಿರೀಕ್ಷೆಗಳೆಲ್ಲ ಹುಸಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಸಹ ಹೇಳಿದ್ದಾರೆ.
ವಿಶೇಷವಾಗಿ ಕಳೆದ ಬಾರಿಯಂತೆ ಈ ಬಾರಿಯೂ ಕರ್ನಾಟಕದಿಂದ ಹೆಚ್ಚು ಸಂಸದರನ್ನು ನೀಡಿರುವ ಕರ್ನಾಟಕದ ಜನತೆ ಬಜೆಟ್ ಮೇಲೆ ಭಾರೀ ನಿರೀಕ್ಷೆಯನ್ನು ಹೊಂದಿದ್ದರು. ಆಂಧ್ರ ಪ್ರದೇಶ ಪೊಲವರಂ ನೀರಾವರಿಗೆ ಯೋಜನೆ ಭಾರೀ ಮೊತ್ತದಲ್ಲಿ ಹಣ ನೀಡಿರುವ ಕೇಂದ್ರ ಕರ್ನಾಟಕದ ವಿಚಾರ ಉಲ್ಲೇಖಿಸಿಲ್ಲ.

ನೀರಾವರಿ ಯೋಜನೆಗಳಿಗೆ ಹಣ ಸಿಗಲಿದೆ ಎಂದು ಕರ್ನಾಟಕ ಭಾವಿಸಿತ್ತು. ಬಜೆಟ್ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಕರ್ನಾಟಕ ಪ್ರತಿನಿಧಿಸಿದ್ದ ಕೃಷ್ಣ ಭೈರೇಗೌಡ ವಿವಿಧ ಬೇಡಿಕೆ ಇಟ್ಟಿದ್ದರು. ಮಹಾದಾಯಿ, ಭದ್ರಾ ಮೇಲ್ದಂಡೆಗೆ ಈ ಬಾರಿ ಅನುದಾನ ಸಿಗುವ ನಿರೀಕ್ಷೆ ಇತ್ತು. ಅಲ್ಲದೇ ನನೆಗುದಿಗೆ ಬಿದ್ದ ರೈಲ್ವೆ ಯೋಜನೆಗಳಿಗೆ ಅನುದಾನ ಸಿಗಲಿದೆ ಎಂದು ಭಾವಿಸಾಗಿತ್ತು. ಆದರೆ ಕರ್ನಾಟಕಕ್ಕೆ ಈ ಬಜೆಟ್ ನಲ್ಲಿ ಎನೂ ವಿಶೇಷ ಯೋಜನೆ ಸಿಕ್ಕಿಲ್ಲ.
ಎನ್ ಡಿಎ ಸರ್ಕಾರಕ್ಕೆ ಅನಿವಾರ್ಯವಾಗಿರುವ ಬಿಹಾರ ಹಾಗೂ ಆಂಧ್ರಪ್ರದೇಶ ಈ ಬಾರಿಯ ಬಜೆಟ್ನಲ್ಲಿ ದೊಡ್ಡ ಪಾಲು ಪಡೆದುಕೊಂಡಿವೆ. ವಿಶೇಷ ಪ್ಯಾಕೇಜ್ ಗಳನ್ನು ತಮ್ಮದಾಗಿಸಿಕೊಂಡಿವೆ. ಬಿಹಾರದಲ್ಲಿ ಅಧಿಕಾರದಲ್ಲಿರುವ ನಿತೀಶ್ ಕುಮಾರ್ ನೇತೃತ್ವದ ಜೆಡಿಯು - ಬಿಜೆಪಿ ಸರ್ಕಾರ ಹಾಗೂ ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಸರ್ಕಾರಗಳಿಗೆ ಉತ್ತೇಜನ ನೀಡುವಂಥ ಅನೇಕ ಯೋಜನೆಗಳನ್ನು ಆ ರಾಜ್ಯಗಳಿಗೆ ಪ್ರಕಟಿಸಲಾಗಿದೆ.
ಕೊನೆಗೂ ಸಿಕ್ಕಿದ್ದಿಷ್ಟು?
ಇಡೀ ಬಜೆಟ್ ನಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೆಸರು ಉಲ್ಲೇಖ ಮಾಡಲಾಗಿದ್ದು ಹೈದರಾಬಾದ್ ಹಾಗೂ ಬೆಂಗಳೂರು ನಡುವೆ ಇಂಡಸ್ಟ್ರಿಯಲ್ ಕಾರಿಡಾರ್ ಸ್ಥಾಪನೆಯ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಈ ಯೋಜನೆ ಸಹ ಕರ್ನಾಟಕದ ಲೆಕ್ಕದಲ್ಲಿ ಇಲ್ಲ!
ತೆರಿಗೆ ವಿವಾದ:
ದಕ್ಷಿಣ ಭಾರತದ ರಾಜ್ಯಗಳು ಅದರಲ್ಲಿಯೂ ಕರ್ನಾಟಕ ದೊಡ್ಡ ಮೊತ್ತದ ತೆರಿಗೆ ಸಂಗ್ರಹಣೆ ಮಾಡಿ ಕೇಂದ್ರಕ್ಕೆ ನೀಡುತ್ತದೆ. ಆದರೆ ಕೇಂದ್ರದಿಂದ ವಾಪಸ್ ಬರುವುದು ಮಾತ್ರ ಅತ್ಯಂತ ಕಡಿಮೆ. ಇದೇ ವಿಚಾರ ಇಟ್ಟುಕೊಂಡು ರಾಜ್ಯದ ಕಾಂಗ್ರೆಸ್ ನಾಯಕರು ಕೇಂದ್ರದ ವಿರುದ್ಧ ಹೋರಾಟಕ್ಕೆ ಇಳಿದಿದ್ದರು. ದೆಹಲಿಒಗೂ ಹೋರಾಟವನ್ನು ತೆಗೆದುಕೊಂಡು ಹೋಗಿದ್ದರು. ಜಿಎಸ್ ಟಿ ನಂತರದಲ್ಲಿ ಕೇಂದದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ಹಂಚಿಕೆ ವಿಧಾನ ಬದಲಾಗಿದೆ. ಕೇಂದ್ರ ಸರ್ಕಾರ ಉದ್ದೇಶ ಪೂರ್ವಕವಾಗಿಯೇ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳನ್ನು ಕಡೆಗಣಿಸುತ್ತಿವೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿಕೊಂಡೇ ಬಂದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿದಿದ್ದತು. ದೋಸ್ತಿಗಳು ಕರ್ನಾಟಕದಲ್ಲಿ 19 ಲೋಕಸಭಾ ಸ್ಥಾನ ಗಳಿಸಿಕೊಂಡಿದ್ದವು. ಎಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಅವರಿಗೆ ಸಚಿವ ಸ್ಥಾನವೂ ಲಭ್ಯವಾಗಿತ್ತು. ನಿರ್ಮಲಾ ಸೀತಾರಾಮನ್ ಸಹ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾದವರು. ಇಷ್ಟೆಲ್ಲ ಬಲ ಇದ್ದರೂ ಈ ಬಜೆಟ್ ನಲ್ಲಿ ಕರ್ನಾಟಕಕ್ಕೆ ಹೇಳಿಕೊಳ್ಳುವಂಥದ್ದು ಏನೂ ಸಿಗಲೇ ಇಲ್ಲ.


Click it and Unblock the Notifications