ಕೇಂದ್ರ ಬಜೆಟ್ ಅನ್ನು ಇಂದು ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಮಂಡಿಸಲಾಗುತ್ತಿದ್ದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 8ನೇ ಬಾರಿಗೆ ಬಜೆಟ್ ಭಾಷಣ ಮಾಡಲಿದ್ದಾರೆ. ಈ ಬಜೆಟ್ ಮೋದಿ ಸರ್ಕಾರ ಮೂರನೇ ಅವಧಿಯ ಮೊದಲ ಪೂರ್ಣ ಮುಂಗಡ ಪತ್ರ ಆಗಿದೆ. ವಿತ್ತ ಸಚಿವರು ಬಜೆಟ್ ದಾಖಲೆಗಳೊಂದಿಗೆ ಈಗಾಗಲೇ ಸಂಸತ್ ಭವನ ತಲುಪಿದ್ದಾರೆ.
ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸೀರೆಗಳೆಂದರೆ ಬಲು ಪ್ರೀತಿ. ಹೀಗಾಗಿ ಬಜೆಟ್ ಜತೆಗೆ ಹಣಕಾಸು ಸಚಿವರ ಸೀರೆಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಎಲ್ಲರ ಕಣ್ಣುಗಳು ಅವರ ಆರ್ಥಿಕ ನೀತಿಗಳು ಮತ್ತು ಸುಧಾರಣೆಗಳ ಮೇಲೆ ಇರುವಾಗ, ಬಜೆಟ್ ದಿನದಂದು ಅವರು ಆಯ್ಕೆ ಮಾಡಿದ ಸೀರೆಯೂ ಸಹ ಸುದ್ದಿಯಾಗುತ್ತದೆ. ಬಜೆಟ್ ದಿನದಂದು ಹೆಚ್ಚಾಗಿ ಕೈಯಿಂದ ನೇಯ್ದ ಸೀರೆಗಳ ಧರಿಸಿವುದರಿಂದ ವಿತ್ತ ಸಚಿವರ ಸೀರೆಗಳ ಮೇಲೆ ನೀರೆಯರ ಕಣ್ಣು ಇದ್ದೇ ಇರುತ್ತದೆ. ಅಲ್ಲದೇ ಕೈಮಗ್ಗದ ಸೀರೆಗಳು ಇದು ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾಗಿದೆ.

ತಾವು ಈ ಹಿಂದೆ ಮಂಡಿಸಿದ ಏಳು ಬಜೆಟ್‌ಗಳಲ್ಲಿ ಕೆಂಪು, ನೀಲಿ, ಹಳದಿ, ಕಂದು, ಮಜೆಂಟಾ ಬಾರ್ಡರ್ ಹೊಂದಿದ ಆಫ್ ವೈಟ್ ಸೀರೆ ತೊಟ್ಟು ಗಮನ ಸೆಳೆದಿದ್ದಾರೆ. ಈ ಬಾರಿ ಅವರು ಗೋಲ್ಡನ್ ಬಾರ್ಡರ್ ಹೊಂದಿರುವ ಕೆನೆ ಬಣ್ಣದ (ದಂತದ ಬಣ್ಣ) ಸೀರೆಯನ್ನು ಧರಿಸಿದ್ದಾರೆ.
ಈ ಬಾರಿಯ ಸೀರೆ ವಿಶೇಷವಾಗಿದೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿಶೇಷವಾದ ಹ್ಯಾಂಡ್ಲೂಮ್ ಸೀರೆಯನ್ನು ಉಟ್ಟಿದ್ದಾರೆ. ಪದ್ಮ ಪ್ರಶಸ್ತಿ ವಿಜೇತೆ ದುಲಾರಿ ದೇವಿಯವರು ತಯಾರಿಸಿದ, ಮೀನಿನ ಕಸೂತಿ ಮತ್ತು ಚಿನ್ನದ ಬಾರ್ಡರ್ ಹೊಂದಿರುವ ಕೆನೆ ಬಣ್ಣದ ಕೈಮಗ್ಗದ ರೇಷ್ಮೆ ಸೀರೆಯು ಮಧುಬನಿ ಕಲೆಗೆ ಗೌರವ ಸಲ್ಲಿಸುವಂತಿತ್ತು. ಇದಕ್ಕೆ ಮೆಚ್ಚುವಂತೆ ಅವರು ಕೆಂಪು ಬಣ್ಣದ ರವಿಕೆ ಧರಿಸಿದ್ದರು. ಅಂದಹಾಗೆ ದುಲಾರಿ ದೇವಿ ಅವರು 2021 ರ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಪ್ರತಿ ಬಾರಿ ಆಯವ್ಯಯ ಮಂಡಿಸುವಾಗ ವಿತ್ತ ಸಚಿವೆ ಸೀತಾರಾಮನ್ ಭಾರತೀಯ ಸಂಸ್ಕೃತಿ, ಪರಂಪರೆ ಪ್ರತಿಬಿಂಬಿಸುವ ಸೀರೆಯುಟ್ಟಿದ್ದಾರೆ. ಒಂದೊಂದು ಸೀರೆಯೂ ಭಾರತದ ವಿವಿಧ ಪ್ರದೇಶಗಳ ಸಾಸ್ಕೃತಿಕ ಕಥಾನಕ ಪರಿಚಯಿಸಿದೆ. ಜತೆಗೆ ಕೇಂದ್ರ ಜಾರಿಗೊಳಿಸಿದ ಕೆಲವೊಂದು ಯೋಜನೆಗಳ ಸೂಕ್ಷ್ಮ ಸುಳಿವು ನೀಡಿದ್ದಾರೆ.
ಕಳೆದ 5 ಬಜೆಟ್‌ಗಳಲ್ಲಿ ಹಣಕಾಸು ಸಚಿವರ ಧರಿಸಿದ್ದ ಸೀರೆಯ ವಿಶೇಷತೆ
ಹಣಕಾಸು ನಿರ್ಮಲಾ ಸೀತಾರಾಮನ್ 2024-25ರ ಬಜೆಟ್‌ನಲ್ಲಿ ಆಂಧ್ರಪ್ರದೇಶದ ಮಂಗಳಗಿರಿ ಸೀರೆಯನ್ನು ಧರಿಸಿದ್ದರು. ಗುಂಟೂರು ಜಿಲ್ಲೆಯಲ್ಲಿ ತಯಾರಾದ ಸೀರೆ ಆಂಧ್ರಪ್ರದೇಶದ ಸಂಸ್ಕೃತಿಯನ್ನು ಬಿಂಬಿಸಿದೆ. ಇದೇ ವೇಳೆ ಆಂಧ್ರಕ್ಕೆ ವಿಶೇಷ ಆರ್ಥಿಕ ನೆರವು ಘೋಷಣೆ ಮಾಡಿದ್ದು ವಿಶೇಷವಾಗಿತ್ತು.
ನಿರ್ಮಲಾ ಸೀತಾರಾಮನ್ ಅವರು 2024 ರ ಮಧ್ಯಂತರ ಬಜೆಟ್‌ನಲ್ಲಿ ಪಶ್ಚಿಮ ಬಂಗಾಳದ ನೀಲಿ ಬಣ್ಣದ ಸೀರೆ ಧರಿಸಿದ್ದರು. ಹೊಲಿದ ಸೀರೆಯನ್ನು ಉಟ್ಟಿದ್ದರು. ಪಶ್ಚಿಮ ಬಂಗಾಳದ ಕಾಂತಾ ಸ್ಟಿಚ್ ಎಂದು ಹೆಸರಾಗಿದ್ದ ನೀಲಿ ಸೀರೆಯುಟ್ಟಿದ್ದ ಸೀತಾರಾಮನ್ ಅವರು, ನೀಲಿ ಆರ್ಥಿಕ ಅಭಿವೃದ್ಧಿಗೆ ವಿಶೇಷ ಪೋತ್ಸಾಹ ನೀಡಿದ್ದರು.
2023ರಲ್ಲಿ ಸೀತಾರಾಮನ್ ಅವರು ಕೆಂಪು ಬಣ್ಣದ ಟೆಂಪಲ್ ಬಾರ್ಡರ್ ಸೀರೆ ಉಟ್ಟಿದ್ದರು. ಕರ್ನಾಟಕದ ಇಳಕಲ್‌ನ ಕೈಮಗ್ಗದಲ್ಲಿ ನೇಯ್ದ ಸೀರೆಯ ಮೂಲಕ ಕಸೂತಿ ಕಲೆಗೆ ಪ್ರೋತ್ಸಾಹ ನೀಡುವ ಸುಳಿವು ನೀಡಿದ್ದರು. ಸೀರೆಯಲ್ಲಿ ರಥ, ನವಿಲು, ಕಮಲಗಳ ಚಿತ್ರಗಳಿದ್ದವು.
2022 ರ ಬಜೆಟ್‌ನಲ್ಲಿ, ಹಣಕಾಸು ಸಚಿವರು ಕಂದು ಬಣ್ಣದ ಒಡಿಶಾದ ಬೊಮ್ಕೈ ಸೀರೆಯನ್ನು ಉಟ್ಟಿದ್ದರು. ಪೊಚಮಲ್ಲಿ ಇಕ್ಕತ್, ಸಾಂಪ್ರದಾಯಿಕ ತೆಲಂಗಾಣ ಸೀರೆಯನ್ನು 2021 ರ ಬಜೆಟ್ ಸಮಯದಲ್ಲಿ ಧರಿಸಿದ್ದರು.


Click it and Unblock the Notifications